
ಅದು ೧೯೯೬ ಇರಬಹುದು. ನಾನು ಮೈಸೂರು ರಸ್ತೆಯಲ್ಲಿದ್ದ ನನ್ನ ಆಫೀಸಿನಿಂದ ಸಂಜೆ ಮನೆಗೆ ಹೊರಟಿದ್ದೆ. ಬಜಾಜ್ ಸನ್ನಿ ಮೊಪೆಡ್‌ನಲ್ಲಿ ಆವನಿ ಶಂಕರಮಠದ ಬಳಿಯ ನನ್ನ ಮನೆಗೆ ಹೊರಟಿದ್ದೆ. ಬಂಟ್ಸ್ ಸಂಘದ ಕಲ್ಯಾಣಛತ್ರದ ಬಳಿ ಶ್ವೇತ ವಸ್ತ್ರಧಾರಿಯೊಬ್ಬರು ಮಾರುತಿ ೮೦೦ ಕಾರು ಹತ್ತಿದರು.ಆಗ ಅವರಾರೆಂಬ ವಿಷಯ ಪಕ್ಕದವರಿಂದ ತಿಳಿಯಿತು. ಶುರುವಾಯಿತು ಮಾರುತಿಯನ್ನು ಹಿಡಿಯುವ ಸಾಹಸ.

ಸನ್ನಿ ಮಾರುತಿಗೆ ಸಾಟಿಯೇ? ಆದರೆ ನನ್ನ ಮನೋವೇಗ ಸಮುದ್ರಲಂಘನ ಮಾಡಿದ ಮಾರುತಿಯ ವೇಗವನ್ನು ದಾಟಿತ್ತು. ನಾನು ಮಾರುತಿ ಮಂದಿರ ದಾಟಿದೆ. ಮಾರುತಿ ಕಾರು ಇನ್ನೂ ಮುಂದೋಡಿತ್ತು. ವಿಜಯನಗರ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಇನ್ನೇನು ಆ ಕಾರು ನನ್ನನ್ನು ದಾಟಬೇಕು, ಆಗ ಕಾರಿನ ಬಳಿ ತಲೆ ತಿರುಗಿಸಿ ‘ನಮಸ್ಕಾರ ಸಾರ್’ ಎಂದೆ. ಮುಂದೆ ಕುಳಿತಿದ್ದಾತ ತನಗೇ ಈ ನಮಸ್ಕಾರ ಎಂದು ತಿಳಿದು ನನ್ನತ್ತ ಕೈಯಾಡಿಸಿದ. ನನಗೆ ಅಗಾಧ ನಿರಾಸೆ. ಅಯ್ಯೋ ಎಂದುಕೊಂಡೆ ಈ ರೇಸ್ ವ್ಯರ್ಥವಾಯಿತಲ್ಲಾ ಎಂದು.
ಆಗ ಹಿಂದಿನ ಕಿಟಕಿ ತೆರೆದುಕೊಂಡು ಅದರಿಂದ ನಗುಮುಖವನ್ನು ಹೊರ ತೋರುತ್ತಾ ‘ಟಾಟಾ’ ಮಾಡಿದ್ದರು ಕನ್ನಡ ನಾಡಿನ ಪ್ರೇಮದ ಕುವರ – ಡಾ. ರಾಜ್‌ಕುಮಾರ್!!
–ಯತಿರಾಜ್ ವೀರಾಂಬುಧಿ