Dr. Vishnuvardhan Birthday special

vishnuvardhan

  1972 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರರಂಗದಲ್ಲಿ ಚರಿತ್ರೆಯನ್ನು ಸೃಷ್ಟಿಸಿದ ನಾಗರಹಾವು ಚಿತ್ರದ ಕುರಿತು ತಿಳಿಯದವರು ಯಾರಾದರೂ ಇದ್ದಾರೆಯೇ? ಇಲ್ಲ. ಈ ಚಿತ್ರದ ಮೂಲಕ ರಾಮಾಚಾರಿಯಾಗಿ ಕನ್ನಡಿಗರಿಗೆ ಪರಿಚಯವಾದ ವಿಷ್ಣುವರ್ಧನ್ ಮುಂಬರುವ ದಶಕಗಳಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಸಜ್ಜನಿಕೆಯ ಪ್ರತಿಬಿಂಬವಾಗಿ ಜನರ ಹೃದಯ ಮತ್ತು ಮನಸ್ಸಿನಲ್ಲಿ ಕಲಾ ಸಾಮ್ರಾಟನಾಗಿ ನೆಲೆಸುತ್ತಾರೆ. ಅಲ್ಲದೇ ಈ ಚಿತ್ರವು ಇಂದಿಗೆ ಬಿಡುಗಡೆಯಾಗಿ 50 ವರ್ಷಗಳನ್ನು ಪೂರೈಸಿದ್ದು ಎಂದಿಗೂ ಮಾಸದ ಮರೆಯದ ಮಾಣಿಕ್ಯ ವಾಗಿದೆ.
    ನಿಜ ಹೇಳಬೇಕೆಂದರೆ ವಿಷ್ಣುವರ್ಧನ್ ಎನ್ನುವ ಹೆಸರಿನಲ್ಲಿ ಒಂದು ಗತ್ತು, ಅದರದೇ ಆದ ಗಾಂಭೀರ್ಯವಿದ್ದು ಇವರಿಗೆ ಅತೀ ದೊಡ್ಡ ಶಕ್ತಿ ಅಂದರೆ ಅಭಿಮಾನಿಗಳ ಪ್ರೀತಿ, ಅದು ಕೂಡ ಸಾವಿರ, ಲಕ್ಷಗಳಲ್ಲ, ಕೋಟ್ಯಂತರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ. ಇವರ ಹುಟ್ಟು ಹಬ್ಬವಾಗಲಿ, ಚಿತ್ರದ ಗೆಲುವನ್ನಾಗಲಿ, ಸಾಧನೆಯ ಸಂಭ್ರಮದ ಆಚರಣೆಯಲ್ಲಿ ಇವರಿಗೆ ಸರಿ ಸಾಟಿಯಯಾದವರು  ಯಾರು ಇಲ್ಲ ಎನ್ನುವುದನ್ನು ಹಲವಾರು ಬಾರಿ ನಿರೂಪಿಸಿದ್ದಾರೆ. ಇದೇ ಸೆಪ್ಟೆಂಬರ್ 18 ನಮ್ಮ ವಿಷ್ಣುವರ್ಧನ್ ರವರ 72 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಜೊತೆಯಲ್ಲಿ ಚಿತ್ರರಂಗವನ್ನು   ಸಿನಿಪಣಯದ 50 ನೇ ವರ್ಷದ ಸುವರ್ಣ ಮಹೋತ್ಸವವನ್ನು ಅತೀ ವಿಭಿನ್ನವಾಗಿ ವಿಜೃಂಭಣೆಯಿಂದ ಆಚರಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ.
  ಭಾರತ ಚಿತ್ರರಂಗ ಕಂಡಂತಹ ಸರ್ವ ಸಮರ್ಥ ನಟ  ಡಾ.ವಿಷ್ಣುವರ್ಧನ್ ಎಂದು ಹೇಳಿದರೆ ತಪ್ಪಾಗಲಾರದು. ಅದಕ್ಕೆ ಜನರು ಇವರಿಗೆ ಪ್ರೀತಿಯಿಂದ ಅಭಿನವ ಭಾರ್ಗವ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. ಇವರ ಅಭಿನಯಕ್ಕೆ ಇವರೇ ಸಾಟಿ ಎನ್ನುವುದಕ್ಕೆ ಇವರು ನಿರ್ವಹಿಸಿದ್ದ ಪಾತ್ರಗಳು ಒಂದಕ್ಕೊಂದು ವಿಭಿನ್ನವಾಗಿದ್ದು ಪೈಪೋಟಿಯನ್ನು ನೀಡುತ್ತಿದ್ದವು ಎನ್ನುವುದು ಕೂಡ ಅಕ್ಷರಶಃ ಸತ್ಯ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವಿಷ್ಣುವರ್ಧನ್ ಎಂದರೆಯೇ ವಿಶೇಷ.
  ಆದರೆ ಈ ಬಾರಿ ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬವನ್ನು ಯಜಮಾನೋತ್ಸವ ಎಂದು ಕರೆಯಲಾಗಿದ್ದರೂ ಇದೊಂದು ಅಭಿಮಾನದ ಜಾತ್ರೆ ಕೂಡ ಆಗಿದೆ. ನಾಗರಹಾವು ಚಿತ್ರದಿಂದ ಆಪ್ತ ರಕ್ಷಕ ಚಿತ್ರದವರೆಗೂ 50 ಕ್ಕೂ ಹೆಚ್ಚು ಭಾವಚಿತ್ರವನ್ನು ಹೊಂದಿರುವ ಇವರ ಬೃಹತ್ ಕಟ್ ಔಟ್ ಗಳು ಅಭಿಮಾನ ಸ್ಟುಡಿಯೋದಲ್ಲಿ ಅನಾವರಣಗೊಳ್ಳಲಿದ್ದು ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಪ್ರತಿ ಮೂಲೆಯಲ್ಲಿನ ಅಭಿಮಾನಿಗಳ ಸಂಘವು ಈ ಸುಸಂಸ್ಕೃತ ಸಂದರ್ಭದಲ್ಲಿ ಭಾಗಿಯಾಗಿ ಪ್ರತಿ ಕಟ್ ಔಟ್ ನ ಉಸ್ತುವಾರಿಯನ್ನು ವಹಿಸಿಕೊಂಡಿರುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಕಟ್ ಔಟ್ ಗಳಿಗೆ ತಗಲುವ ವೆಚ್ಚವನ್ನು ಅಭಿಮಾನಿಗಳೇ ವಹಿಸಿಕೊಂಡಿದ್ದು ಉತ್ತಮ ಕಾರ್ಯಕ್ಕೆ ಮುಡುಪಾಗಿಟ್ಟಿದ್ದಾರೆ. ಆದರೆ ಈ ಒಂದು ಉತ್ತಮ ಕಾರ್ಯಕ್ಕೆ ಯಾವುದೇ ಪ್ರಾಯೋಜಕರಾಗಲಿ, ಸಂಘ ಸಂಸ್ಥೆಗಳಾಗಲಿ, ಚಿತ್ರದ ನಿರ್ಮಾಪಕರಾಗಲಿ ಯಾವುದೇ ರೀತಿಯ ಧನ ಮಾಡಿಲ್ಲ ಎಂಬುದು ಕೂಡ ಬೇಸರದ ಸಂಗತಿಯಾಗಿದೆ. ಇದು ಸಂಪೂರ್ಣವಾಗಿ ವಿಷ್ಣುವರ್ಧನ್ ಅಭಿಮಾನಿಗಳ ಕಾರ್ಯಕ್ರಮವಾಗಿದ್ದು ಸೋ ಇದನ್ನು ಕೇವಲ ಯಜಮಾನೋತ್ಸವ ಎಂದರೆ ತಪ್ಪಾಗುತ್ತೆ, ಇದೊಂದು ಅಭಿಮಾನೋತ್ಸವ ಎಂದು ಹೇಳಬಹುದು.
ಪ್ರಮುಖ ವಿಷಯವೇನೆಂದರೆ ವಿಷ್ಣುವರ್ಧನ್ ರವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದರೂ ಅದರಲ್ಲೂ ಹೆಚ್ಚಾಗಿ ಮಹಿಳಾ ಅಭಿಮಾನಿಗಳೇ ಹೆಚ್ಚಾಗಿದ್ದಾರೆ. ಮಹಿಳಾ ಅಭಿಮಾನಿ ಸಂಘದ ವತಿಯಿಂದ ಮೂರು ಕಟ್ ಔಟ್ ಗಳನ್ನು ನೀಡುತ್ತಿದ್ದು ಇವು ಹೇಗೆ ಯಾವ ಪೋಸ್ ನಲ್ಲಿವೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇನ್ನೂ ಕಟ್ ಔಟ್ ನ್ನು ಅಲಂಕಾರ ಮಾಡಿಸಲು ನಮಗೆ ಬಂದ ಮಾಹಿತಿ ಪ್ರಕಾರ 200 ಕ್ಕೂ ಅಧಿಕ ಬೃಹತ್ ಹಾರಗಳು ತಯಾರಾಗಿದ್ದು ಸುಗಂಧ ರಾಜ, ಸೇವಂತಿಗೆ ಮತ್ತು ಮಲ್ಲಿಗೆ ಹೂವಿನ ಹಾರಗಳು ಕೂಡ ತಯಾರಾಗುತ್ತಿವೆ. ಅಭಿಮಾನ ಸ್ಟುಡಿಯೋದಲ್ಲಿ ಭಾರಿ ಗಾತ್ರದ ಹಾರಗಳು, ಅಭಿಮಾನಿಗಳ ಹೂವಿನಂತೆ ಅದೊಂದು ಹೂವಿನ ತೋಟವೇ ಆಗಿರುತ್ತದೆ. ವಿಷ್ಣು ಅಭಿಮಾನಿಗಳೆಂದರೆ ಅದೊಂದು ಜೇನು ಗೂಡು, ಜೇನಿನ ಸವಿಯಂತ ಈ ಘಟನೆಗೆ ವೇದಿಕೆ ನಿದರ್ಶನವಾಗಿ ರುತ್ತದೆ. ಅದೆಷ್ಟು ಬೃಹದಾಕಾರವಾಗಿರುತ್ತದೆ ಎಂಬುದನ್ನು ನಮ್ಮ ಕಣ್ಣುಗಳಿಂದ ನೋಡಿದ ನಂತರವೇ ತಿಳಿಯುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಒಬ್ಬ ನಟನಿಗಾಗಲಿ, ಅಥವಾ ವಿಶ್ವದಲ್ಲಿ, ಭಾರತೀಯ ಚಿತ್ರರಂಗದಲ್ಲಿ ಒಬ್ಬ ನಟನ 50 ನೇ ವರ್ಷದ ಸಿನಿ ಪಯಣವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ವೇದಿಕೆಯನ್ನು ಹಾಕಿಸಿ ಆಚರಣೆಯನ್ನು ಮಾಡುವುದು ಇತಿಹಾಸದಲ್ಲಿಯೇ ಇಲ್ಲ. ಇಲ್ಲಿ ನಾವು ಏನೇ ವಿಷಯಗಳನ್ನು ತಿಳಿದುಕೊಂಡಿದ್ದರೂ ಇದು ಒಂದು ಟ್ರೇಲರ್ ಆಗಿದ್ದು ಸೆಪ್ಟೆಂಬರ್ 18 ರಂದು ಸಂಭ್ರಮಾಚರಣೆಯನ್ನು ಕಣ್ಣು ತುಂಬಾ ನೋಡಬಹುದು. ಇಲ್ಲಿ ಒಂದು ವಿಷಯವನ್ನು ಜ್ಞಾಪಿಸಿಕೊಳ್ಳಬೇಕಾಗಿದ್ದೇನೆಂದರೆ ಈಗ ನಾವು ಮಾತನಿಡುತ್ತಿರುವ ನಾಗರಹಾವು ಚಿತ್ರದಲ್ಲಿ ಒಂದು ಸಾಲು ಬರುತ್ತದೆ. ವಿಷ್ಣು ವರ್ಧನ್ ರವರು ಚಾಮಯ್ಯ ಮೇಷ್ಟ್ರರಿಗೆ ನನ್ನ ಹಿಂದೆ ಒಂದು ಗ್ಯಾಂಗ್ ಇದ್ದು ಚಿಟಿಕೆ ಹೊಡೆಯುವಷ್ಟರಲ್ಲಿ ನಾನು ಹೇಳಿದ ಕೆಲಸವನ್ನು ಮಾಡುತ್ತೆ ಎಂದು ಹೇಳ್ತಾರೆ,ಈ ಡೈಲಾಗ್ ಮೊದಲನೆಯ ಚಿತ್ರದಲ್ಲಿ ಅದರಲ್ಲೂ 50 ವರ್ಷದ ಹಿಂದೆ ಹೇಳಿದ್ದು ಆ ಗ್ಯಾಂಗ್ ಅಂತಿಂಥದ್ದಲ್ಲ, ಅಭಿಮಾನಿಗಳಿಂದಲೇ ತುಂಬಿರುವ ಅಭಿಮಾನದ ಗ್ಯಾಂಗ್ ಈ ದಿನ ಇವರ ಗೆಲುವಿನ ಸಂಭ್ರಮವನ್ನು ಆಚರಿಸುತ್ತಿದೆ. ಆಗ ಸುಮ್ಮನೇ ಹೇಳಿದ ಒಂದು ಡೈಲಾಗ್ ಈಗ ನಿಜವಾಗಿದೆಯೆಂದರೆ ಆ ಅಭಿಮಾನ ಯಾವ ಮಟ್ಟದ ಉತ್ತುಂಗದಲ್ಲಿದೆ ಎಂಬುದಕ್ಕೆ ಈ ಉತ್ಸವವೇ ಸಾಕ್ಷಿಯಾಗಿದೆ. ಕಡೆಯದಾಗಿ ಹೇಳುವುದೇನೆಂದರೆ ವಿಷ್ಣು ಅಂದರೆ ವಿಶೇಷ, ಅದರಲ್ಲೂ ವಿಷ್ಣು ಅಭಿಮಾನಿಗಳೆಂದರೆ ಇನ್ನೂ ವಿಶಿಷ್ಟ.

ವಿಷ್ಣು ಸೇನಾ ಸಮಿತಿ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಅಭಿಮಾನಿಗಳನ್ನು ಸೇನಾನಿ ಎಂದೇ ಕರೆಯುತ್ತಾರೆ.ಕಾರಣ ಸೇನೆಯಲ್ಲಿನ ಒಬ್ಬ ಯೋಧನಿಗೆ ದೇಶ ಸೇವೆಯೇ ಸರ್ವಸ್ವ ಎಂಬಂತೆ ಪ್ರತಿಯೊಬ್ಬ ಅಭಿಮಾನಿಯು ಸೇನೆಯೇ ಆಗಿದ್ದಾರೆ. ಅಭಿಮಾನಿಗಳು ವಿಷ್ಣು ವರ್ಧನ್ ರವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ತಮ್ಮ ಸಮಯವನ್ನು ಮುಡುಪಾಗಿಟ್ಟಿದ್ದರೆ. ಅಂದರೆ ಅಭಿಮಾನ ಅನ್ನುವ ವಿಷಯವನ್ನು ಅಷ್ಟರ ಮಟ್ಟಿಗೆ ಆರಾಧಿಸುತ್ತಿದ್ದು ಕಲೆ ಎಂಬುದನ್ನು ಪಸರಿಸುವುದಕ್ಕೆ ಶ್ರಮಿಸುತ್ತಿದ್ದಾರೆ. ಇವರು ಸೇನಾನಿಗಳು ಹೌದು, ಕಲಾ ಆರಾಧಕರು ಹೌದು.
ಇವತ್ತು ಅಮಿತಾಬ್ ಬಚ್ಚನ್ ನ ಶೋಲೆ ಆಗಿರಬಹುದು, ರಾಜಕಪೂರ್ ರವರ ಮೇರಾ ನಾಮ್ ಜೋಕರ್ ಆಗಿರಬಹುದು, ಅಥವಾ ತಮಿಳಿನ ಶಿವಾಜಿ ಗಣೇಶನ್ ಆಗಿರಬಹುದು, ಈ ರೀತಿ ಎಷ್ಟೋ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡಿ 50 ವರ್ಷಗಳನ್ನು ಪೂರೈಸಿದ್ದು ಅವರದೇ ಆದ ಅಭಿಮಾನಿ ಬಳಗವೇ ಇದ್ದರೂ ವಿಷ್ಣುವರ್ಧನ್ ಅಭಿಮಾನಿಗಳು ಆಚರಿಸುತ್ತಿರುವ ರೀತಿಯಲ್ಲಿ ಕೊಂಡಾಡುತ್ತಿಲ್ಲ. 50 ನೇ ವರ್ಷದ ಸಿನಿ ಪಯಣವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ರೀತಿಯ ಅದ್ದೂರಿ ಆಚರಣೆ ಬಹುಶಃ ಯಾವ ನಟನಿಗೂ ಎಲ್ಲಿಯೂ ಆಗಿಲ್ಲ. ಆದ ಕಾರಣವೇ ಈ ಆಚರಣೆಯನ್ನು ನಭಾತನ ಭವಿಷ್ಯತಿ ಎಂದು ಕರೆಯುತ್ತಾರೆ. ಡಾ.ವಿಷ್ಣುವರ್ಧನ್ ರವರು ಎಲ್ಲ ವೇದಿಕೆಗಳಲ್ಲಿ ಹೇಳುವುದು ಒಂದೇ ಮಾತು, ನನ್ನ ಉಸಿರಿನಲ್ಲಿ ಸದಾ ಹಸಿರಾಗಿರುವ ನನ್ನ ಅಭಿಮಾನಿಗಳೇ, ಈ ಮಾತನ್ನು ಅಭಿಮಾನಿಗಳು ನಡೆಸಿಕೊಡುತ್ತಿದ್ದು ಇದು ಕೂಡ 50 ವರ್ಷಗಳ ಹಿಂದೆ ಹೇಳಿದ ಮಾತು ಇವತ್ತಿಗೂ ಅಷ್ಟೇ ಸತ್ಯವಾಗಿದೆ. ಇವರು ದೈಹಿಕವಾಗಿ ಇಲ್ಲದೇ ಹೋದರೂ ಅಭಿಮಾನಿಗಳು ಇಂದಿಗೂ ತಮ್ಮ ಮನಸ್ಸಿನಲ್ಲಿ ಇವರನ್ನು ಜೀವಂತವಾಗಿಟ್ಟುಕೊಂಡಿದ್ದಾರೆಂದರೆ ಅವರ ಅಭಿಮಾನವೇ ಹಾಗಿದೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply