ಎಡ್ವರ್ಡ್… ಅವನಿಗೆ ತಾನ್ಯಾರು ಅಂತ ಗೊತ್ತಿಲ್ಲ. ತಾನೊಂದು ಮಾನವ ಜಗತ್ತಿನ ಅತ್ಯುತ್ತಮ ಸೃಷ್ಟಿ ಎನ್ನುವುದೂ ಗೊತ್ತಿಲ್ಲ. ಆತನನ್ನು ಸೃಷ್ಟಿಸಿದ ವಿಜ್ಞಾನಿ ಎಡ್ವರ್ಡನಿಗೆ ಮಾನವರ ರೀತಿಯ ಕೈಗಳನ್ನು ಜೋಡಿಸುವ ಮೊದಲೇ ಮರಣ ಹೊಂದಿದುದರಿಂದ ಕೈಗಳ ಬದಲಿಗೆ ಚೂಪಾದ ಚಾಕುಗಳನ್ನು ಬೆರಳುಗಳನ್ನಾಗಿ ಹೊಂದಿರುತ್ತಾನೆ ಎಡ್ವರ್ಡ್. ಅದು ತಪ್ಪು… ತನಗೆ ಕೈಗಳಿರಬೇಕಿತ್ತು ಅಂತಲೂ ಗೊತ್ತಿಲ್ಲ ಆತನಿಗೆ.
ಏಕೆಂದರೆ ಆತನೊಬ್ಬ ರೋಬಾಟ್!!
ವಿಜ್ಞಾನಿ ಸತ್ತ ನಂತರ ವಿಜ್ಞಾನಿಯ ಆ ಪಾಳು ಮನೆಯೊಳಗೇ ವಾಸಿಸುತ್ತಿರುತ್ತಾನೆ. ಎಷ್ಟು ವರ್ಷಗಳಿಂದ ವಾಸಿಸುತ್ತಿದ್ದನೋ ಅವನಿಗೇ ಗೊತ್ತಿಲ್ಲ. ಒಮ್ಮೆ ನಾಗರೀಕ ಸಮಾಜದ ಒಬ್ಬ ಸಹೃದಯ ಹೆಣ್ಣುಮಗಳ ಕಣ್ಣಿಗೆ ಬಿದ್ದು ನಗರವನ್ನು ಪ್ರವೇಶಿಸುತ್ತಾನೆ.
ಇಲ್ಲಿಂದ ಸ್ವಲ್ಪ ತಮಾಷೆಯಾಗಿದೆ.
ವಾಟರ್ ಬೆಡ್ಡಿನಲ್ಲಿ ಮಲಗಲು ಬರುವ ಎಡ್ವರ್ಡ್ ತನ್ನ ಚಾಕು ಕೈಗಳಿಂದ ಹಾಸಿಗೆ ತೂತು ಮಾಡಿ ನೀರು ಸಿಡಿಸುತ್ತಾನೆ. ಊಟಕ್ಕೆ ಕುಳಿತಾಗ ತನ್ನ ಚೂಪಾದ ಚಾಕು ಕೈಗಳಿಂದ ಬಟಾಣಿಯನ್ನು ಹಿಡಿದುಕೊಳ್ಳಲಾಗದೇ ಪರದಾಡುತ್ತಾನೆ. ಆದರೆ ಅವನನ್ನು ಕರೆತಂದ ಹೆಣ್ಣುಮಗಳಿಗೆ ಅಡುಗೆ ಮನೆಯಲ್ಲಿ ತನ್ನ ಚಾಕು ಕೈಗಳಿಂದ ಸಹಾಯ ಮಾಡುತ್ತಿರುತ್ತಾನೆ.
ಅವನಿಗೊಂದು ಹವ್ಯಾಸ ಇರುತ್ತದೆ.
ಏನೆಂದರೆ ಯಾವುದೇ ಗಿಡ ಅಥವಾ ಪೊದೆಯನ್ನು ಪ್ರಾಣಿಯ ಆಕಾರದಲ್ಲಿ ಕತ್ತರಿಸಿ ಆಕರ್ಷಣೀಯವಾಗಿ ಮಾಡುವುದು. ಹಾಗೆ ಮಾಡುತ್ತಿದ್ದವನು ತನ್ನನ್ನು ಕರೆತಂದ ಹೆಂಗಸಿನ ಮಗಳನ್ನು ತನಗರಿವಿಲ್ಲದಂತೆ ಪ್ರೀತಿಸಲು ಶುರು ಮಾಡುತ್ತಾನೆ. ಅವಳಿಗಾಗಿ ಮಂಜಿನಲ್ಲಿ ಅವಳದೇ ಪ್ರತಿಮೆ ಕೊರೆಯುತ್ತಾನೆ. ಹಾಗೆ ಕೊರೆಯುವಾಗ ಉದುರುವ ಮಂಜಿನ ಕಣಗಳ ಕೆಳಗೆ ಆಕೆ ಸಂಭ್ರಮಿಸುತ್ತಾಳೆ.
ರೋಬಾಟಿಗೂ ಪ್ರೀತಿಯೇ ಅಂತ ಆಶ್ಚರ್ಯವಾಗಬಹುದು.
ಆದರೆ ಪ್ರೀತಿ ಅನ್ನುವುದು ಯಾರಿಗೆ, ಯಾವಾಗ, ಹೇಗೆ ಹುಟ್ಟುತ್ತದೆ ಅಂತ ಹೇಳಲು ಬರುವುದಿಲ್ಲ. ಆ ಹುಡುಗಿಗೂ ಸಹ ಎಡ್ವರ್ಡ್ ತನ್ನನ್ನು ಪ್ರೀತಿಯಿಂದ ನೋಡುವ ವಿಷಯ ಗೊತ್ತಾಗುತ್ತದೆ. ನಾಗರೀಕ ಪ್ರಪಂಚದ ಸುಳ್ಳನ್ನು ನೋಡಿರುವ ಆಕೆ ಕಲ್ಮಶವಿಲ್ಲದ ರೋಬಾಟಿನ ಪ್ರೀತಿಗೆ ಮನಸೋಲುತ್ತಾಳೆ.
ಆದರೆ ಈ ಪ್ರೀತಿಯನ್ನು ನಾಗರೀಕ ಸಮಾಜ ಒಪ್ಪುತ್ತದೆಯೇ? ಖಂಡಿತಾ ಇಲ್ಲ. ಎಡ್ವರ್ಡನ ಮೇಲೆ ಏನೇನೋ ಆರೋಪ ಹೊರೆಸಿ ಮತ್ತೆ ಆತ ವಿಜ್ಞಾನಿಯ ಹಳೆ ಬಂಗಲೆ ಸೇರುವಂತೆ ಮಾಡುತ್ತದೆ.
ಆತನನ್ನು ಪ್ರೀತಿಸಿದ್ದ ಆ ಯುವತಿ ಇಂದು ಅಜ್ಜಿಯಾಗಿದ್ದಾಳೆ. ತನ್ನ ಮೊಮ್ಮಗಳಿಗೆ ಎಡ್ವರ್ಡನ ಕಥೆ ಹೇಳುತ್ತಾಳೆ. ಆ ಹಳೆ ಬಂಗಲೆ ಕಡೆಯಿಂದ ಆಗಾಗ ಬೀಸಿ ಬರುವ ಮಂಜಿನ ಕಣಗಳನ್ನು ಕಂಡು, ಎಡ್ವರ್ಡ್ ಇನ್ನೂ ಬದುಕಿದ್ದಾನೆ, ಮಂಜಿನ ಗೊಂಬೆಗಳನ್ನು ನಿರ್ಮಿಸುತ್ತಿದ್ದಾನೆ ಅಂತ ನಂಬಿದ್ದಾಳೆ. ಆ ನಂಬಿಕೆಯಲ್ಲಿಯೇ ತನ್ನ ರಾತ್ರಿಯ ಕನಸಿನಲ್ಲಿ ಮಂಜಿನ ನಡುವೆ ಚಿರಯುವತಿಯಂತೆ ಸಂಭ್ರಮಿಸುತ್ತಾಳೆ.
ಮನುಷ್ಯರಲ್ಲಿಯೇ ಮನುಷ್ಯತ್ವ ನಾಶವಾಗುತ್ತಿರುವಾಗ, ಒಂದು ರೋಬಾಟಿಗೆ ಪ್ರೇಮಾಂಕುರವಾಗುವ ಕಥೆಯಿದು. ಮನಸ್ಸನ್ನು ಆರ್ದ್ರಗೊಳಿಸುತ್ತದೆ.