Escape from Taliban” (ಹಿಂದಿ)

ಹೆಣ್ಣಿನ ಶೋಷಣೆಯ ಅತ್ಯಂತ ಕರಾಳ ಮುಖವಿರುವ ಸಿನೆಮಾ ಇದು. ಅದಷ್ಟೇ ಅಲ್ಲದೇ ಇದು “ಸುಷ್ಮಿತಾ ಬ್ಯಾನರ್ಜಿ” ಎನ್ನುವವರ ಆತ್ಮಕಥೆಯೂ ಸಹ ಆಗಿದೆ. ಅವರು ಬರೆದಿರುವ ತಮ್ಮದೇ ಜೀವನದ ಕಥೆಯನ್ನು ಇಲ್ಲಿ ಸಿನೆಮಾವನ್ನಾಗಿಸಲಾಗಿದೆ. ವಿಪರ್ಯಾಸ ಎಂದರೆ ಇದರ ಲೇಖಕಿಯನ್ನು 2013 ರಲ್ಲಿ ಹತ್ಯೆಗೈಯ್ಯಲಾಗಿದೆ. ಇದಕ್ಕೆ ಕಾರಣಗಳು ಹಲವಾರು ಇದ್ದರೂ, ಮುಖ್ಯವಾದ ಕಾರಣ ಆಕೆ ಸಂಪ್ರದಾಯದ ಪ್ರಕಾರ ಬುರ್ಖಾ ತೊಡುತ್ತಿರಲಿಲ್ಲ ಎನ್ನುವುದು.

1989 ರಲ್ಲಿ ಸುಷ್ಮಿತಾ ಬ್ಯಾನರ್ಜಿ ಎಂಬ ಸಂಪ್ರದಾಯಸ್ಥ ಮನೆತನದ ಯುವತಿ, ಆಫ್ಘಾನಿಸ್ತಾನದ ವ್ಯಾಪಾರಿ ಜಾನಬಾಜ ಖಾನ್ ಎಂಬುವವರನ್ನು ಮದುವೆಯಾಗಿ ಆತನ ಜೊತೆ ಆಫ್ಘಾನಿಗೆ ಕಾಲಿಟ್ಟ ನಂತರ ಆಕೆಯ ಜೀವನದ ದುರಂತದ ಸರಮಾಲೆಗಳು ಬಿಚ್ಚಿಕೊಳ್ಳುತ್ತವೆ. ಆಕೆ ಅಲ್ಲಿನ ರೀತಿ-ಕಟ್ಟಲೆಗಳನ್ನು ಸಹಿಸಿಕೊಂಡು ಹೇಗೋ ಬದುಕುತ್ತಿದ್ದಳೇನೋ? ಆದರೆ ಅಷ್ಟರಲ್ಲಿಯೇ ಒಂದು ಆಘಾತಕರ ವಿಷಯ ಅವಳಿಗೆ ಗೊತ್ತಾಗುತ್ತದೆ.

ಏನೆಂದರೆ…..

ಆಕೆಯ ಪತಿ ಜಾನಬಾಜ ಖಾನನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಒಂದು ಮಗುವೂ ಇರುತ್ತದೆ.‌ ಇದನ್ನು ತಿಳಿದು ಅವಳ ಜಂಘಾಬಲವೇ ಉಡುಗಿ ಹೋಗುತ್ತದೆ. ಆದರೆ ಆಕೆಯ ಪತಿಯಾಗಲಿ ಅಥವಾ ಆ ಮನೆಯವರಿಗಾಗಲಿ ಇದೊಂದು ದೊಡ್ಡ ವಿಷಯವೇ ಆಗಿರುವುದಿಲ್ಲ. ಇವಳು ಈ ವಿಷಯವಾಗಿ ಮಾಡುವ ಗಲಾಟೆ ಅವರಿಗೆ ಕ್ಷುಲ್ಲಕವಾಗಿ ಕಾಣುತ್ತದೆ.‌

ಆಫ್ಘನ್ ಮಹಿಳೆಯರಿಗೆ ಆ ದೇಶದಲ್ಲಿ ಯಾವ ರೀತಿಯಾದ ಸ್ವಾತಂತ್ರವೂ ಇರುವುದಿಲ್ಲ. ವಿದ್ಯೆ ಕಲಿಯುವಂತಿಲ್ಲ, ತನಗೆ ಬೇಕಾದ್ದು ಪಡೆಯುವಂತಿಲ್ಲ, ಹಿರಿಯರು ಹೇಳಿದಂತೆಯೇ ಕೇಳಬೇಕು ಅಂತಲ್ಲದೇ ಹೊರಗೆ ಒಬ್ಬರೇ ಓಡಾಡುವಂತೆಯೂ ಇರಲಿಲ್ಲ. ಆ ಮಹಿಳೆಯರ ಜೊತೆ ಒಬ್ಬ ಪುರುಷ ಕಡ್ಡಾಯವಾಗಿ ಇರಲೇಬೇಕಿರುತ್ತದೆ.

ಇಂತಹಾ ಕಟ್ಟುನಿಟ್ಟಿನ ಸಂದರ್ಭದಲ್ಲಿ ಸುಷ್ಮಿತಾ ಬ್ಯಾನರ್ಜಿ ಆಫ್ಘಾನಿಸ್ತಾನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ!!!!!!

ಒಂದಲ್ಲ ಎರಡಲ್ಲ ಹಲವು ಬಾರಿ ಪ್ರಯತ್ನಿಸಿ ವಿಫಲಳಾಗುತ್ತಾಳೆ. ಆದರೆ ಆಕೆಯ ಮನೋಸ್ಥೈರ್ಯಕ್ಕೆ ಎಣೆಯೇ ಇರುವುದಿಲ್ಲ. ಎಷ್ಟೆಲ್ಲಾ ಹೊಡೆತ ತಿಂದರೂ ಆಕೆ ಜಾಣತನದಿಂದ ಚಾಕಚಕ್ಯತೆಯಿಂದ ಮತ್ತೊಂದು ತಪ್ಪಿಸಿಕೊಳ್ಳುವ ಪ್ಲಾನ್ ಹೆಣೆಯುತ್ತಲೇ ಇರುತ್ತಾಳೆ.

ಇದರ ಮಧ್ಯೆ ಆಫ್ಘಾನಿನ ಹಿರಿಯರೆಲ್ಲ ಸೇರಿ ಆಕೆಗೆ ಮೃತ್ಯುದಂಡ ವಿಧಿಸುತ್ತಾರೆ. ಆದರೆ ಆಕೆ ಅಲ್ಲಿಂದಲೂ ಪಾರಾಗಿ ನಮ್ಮ ದೇಶಕ್ಕೆ ಬಂದು ಬಿಡುತ್ತಾಳೆ. ಆಕೆಯ ಧೈರ್ಯ, ಯಾವುದಕ್ಕೂ ಹೆದರದ ಆಕೆಯ ಧೃತಿ, ಮಾನಸಿಕ ಸಂತುಲನ, ಸಮಯೋಚಿತ ಕಾರ್ಯಸಾಧನೆ ಎಲ್ಲವನ್ನೂ ನಾವು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಬೇಕು. ಇದು ಆತ್ಮಕಥೆಯಾಗಿರುವುದರಿಂದ, ಇವೆಲ್ಲವೂ ನಿಜವಾಗಿ ನಡೆದಿರುವುದು ಅಂತ ತಿಳಿದು ನಮ್ಮ ಆಶ್ಚರ್ಯ ದುಪ್ಪಟ್ಟಾಗುವುದು ಖಚಿತ.

ಸುಷ್ಮಿತಾ ಬ್ಯಾನರ್ಜಿಯ ಪಾತ್ರದಲ್ಲಿ ಮೊನಿಷಾ ಕೊಯಿರಾಲಾ ಅದ್ಭುತವಾಗಿ ನಟಿಸಿದ್ದಾರೆ. ನಮ್ಮ ಯುವಜನತೆ ಹಿಂದೆ-ಮುಂದೆ ಆಲೋಚಿಸದೇ ಪ್ರೀತಿಯ ಹಿಂದೆ ಬಿದ್ದರೆ ಏನಾಗುತ್ತದೆ ಅಂತ ತಿಳಿಯಲು ಈ ಸಿನೆಮಾ ನೋಡಲೇಬೇಕು.

************

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply