HIT The first case (ತೆಲುಗು)

ಒಂದು ಅದ್ಭುತ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾಗಾಗಿ ಹುಡುಕುತ್ತಿರುವಿರಾದರೆ “HIT” ಅತ್ಯುತ್ತಮ ಆಯ್ಕೆ. ಸಮಯದ ಬಗ್ಗೆ ಗಮನ ಕೊಡದಂತೆ, ನಮ್ಮ ಸುತ್ತಮುತ್ತಲಿನ ಪರಿವೆಯೇ ಇರದಂತೆ ನಮ್ಮನ್ನು ಒಳಗೆಳೆದುಕೊಳ್ಳುತ್ತದೆ ಈ ಸಿನೆಮಾ. ಅಷ್ಟೇ ಅಲ್ಲ… ಕೊನೆಯ ಕ್ಷಣದವರೆಗೂ ಗುಟ್ಟು ಬಿಟ್ಟುಕೊಡದೇ ನಮ್ಮನ್ನು ಕಾತರದಿಂದ ಕಾಯುವಂತೆ ಮಾಡುತ್ತದೆ.

ಒಂದು ಕೊಲೆ ನಡೆದಾಗ ಸಾಮಾನ್ಯವಾಗಿ ಏನು ಯೋಚಿಸುತ್ತೇವೆ…?

ಈ ಕೊಲೆ ನಡೆದಿರುವುದು ದುಡ್ಡಿಗಾಗಿ ಅಥವಾ ಆಸ್ತಿಗಾಗಿ ಅಥವಾ ಅನೈತಿಕ ಸಂಬಂಧದ ಕಾರಣ ನಡೆದಿರಬಹುದು ಅಥವಾ ಯಾವುದೋ ಹಳೆಯ ದ್ವೇಷ ಇರಬಹುದು, ಆಕಸ್ಮಿಕ ಇರಬಹುದು, ಅದಿರಬಹುದು, ಇದಿರಬಹುದು ಅಂತ ಏನೇನೋ ಯೋಚಿಸುತ್ತೇವೆ.

ಆದರೆ ಪ್ರತಿಯೊಂದು ಕೊಲೆಗೂ ತನ್ನದೇ ಆದ ಆಯಾಮ ಮತ್ತು ಕಾರಣ ಇರುತ್ತದೆ. ಎಲ್ಲ ಕೊಲೆಗಳನ್ನೂ ಒಂದೇ ರೀತಿ ಒಂದೇ ಫಾರ್ಮುಲಾದಡಿಯಲ್ಲಿ ನೋಡಲಾಗೋಲ್ಲ. ಕೊಲೆಯಾದ ಸ್ಥಳದಡಿ ಸಿಕ್ಕ ಸಾಕ್ಷಿಗಳೂ ಸಹ ಅರ್ಧ ಸತ್ಯ ಮಾತ್ರ ಹೇಳಬಲ್ಲವು ಹೊರತೂ ಪೂರ್ತಿ ಸತ್ಯ ಏನೆಂಬುದು ಕೊಲೆ ಮಾಡಿದವರಿಗೆ ಮಾತ್ರವೇ ಗೊತ್ತಿರುತ್ತದೆ.

ಈ ಸಿನೆಮಾದಲ್ಲಿ ಕೊಲೆಯ ಹಿಂದಿರುವ ಕಾರಣ ತಿಳಿದರೆ ಬೆಚ್ಚಿಬೀಳುತ್ತೀರ….!!!

ಜಗತ್ತು ಇಷ್ಟೊಂದು ಕ್ರೂರವಾಗಿದೆಯೇ..? ಹೌದು.. ಜನರು ಬಹಳ ಸ್ವಾರ್ಥಿಗಳಾಗುತ್ತಿದ್ದಾರೆ. ತಮಗೆ ಸಿಗದ ವಸ್ತು ಬೇರೆಯವರಿಗೆ ಸಿಕ್ಕಾಗ ಖುಷಿಪಡುವ ಬದಲು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಪರಿಣಾಮ ಕ್ರೈಮ್ ರೇಟ್ ಜಾಸ್ತಿಯಾಗಿ ಪೊಲೀಸರಿಗೆ ಕೆಲಸ ಜಾಸ್ತಿ ಆಗುತ್ತಿದೆ.

ನಾಯಕ ಪೊಲೀಸ್ ಅಧಿಕಾರಿ. ನಾಯಕಿಯೂ ಪೊಲೀಸ್ ಡಿಪಾರ್ಟ್ಮೆಂಟಿನವಳೇ. ಅಷ್ಟರಲ್ಲಿ ಒಬ್ಬ ಯುವತಿಯ ಕಿಡ್ನಾಪ್ ಕೇಸಿನ ತನಿಖೆಯಲ್ಲಿ ನಿರತಳಾಗಿದ್ದ ನಾಯಕಿಯೂ ಕಣ್ಮರೆಯಾಗುತ್ತಾಳೆ. ಈಗ ನಾಯಕನಿಗೆ ಇಬ್ಬಂದಿ ಸಂಕಟ…!!! ಆ ಯುವತಿಯನ್ನು ಪತ್ತೆ ಹಚ್ಚುವುದೋ ಅಥವಾ ನಾಯಕಿಯನ್ನು ಕಂಡುಹಿಡಿಯುವುದೋ?

ಈ ಮಧ್ಯೆ ನಾಯಕನಿಗೆ ಆಗಾಗ ತನ್ನ ಗತ ಜೀವನದ ವೈಯುಕ್ತಿಕ ನೋವಿನ ಅಧ್ಯಾಯಗಳು ನೆನಪಾಗಿ ತನಿಖೆಗೆ ತಡೆಯಾಗುತ್ತಿರುತ್ತದೆ. ಆದರೂ ಆತ ಅದನ್ನು ನಿರ್ಲಕ್ಷಿಸಿ ತನಿಖೆಯಲ್ಲಿ ಮುಂದುವರೆಯುತ್ತಾನೆ.

ಒಂದು ಕಡೆ ತನ್ನ ಗತ ಜೀವನದ ನೋವು ಆಗಾಗ ನೆನಪಾಗುತ್ತಾ ಕಾಟ ಕೊಡುತ್ತಿರುತ್ತದೆ… ಮತ್ತೊಂದು ಕಡೆ ಈ ಕಿಡ್ನಾಪ್ ಕೇಸಿನಲ್ಲಿ ಒಂದೆಂದರೆ ಒಂದು ಸುಳಿವೂ ಸಹ ಸಿಗದೇ ಪದೇ ಪದೇ ಭ್ರಮನಿರಸನವಾಗುತ್ತಿರುತ್ತದೆ…

ನಾಯಕ ಈ ಕೇಸ್ ಸಾಲ್ವ್ ಮಾಡಿದನೇ…?

ಊಹುಂ… ಬಹುಶಃ ಇದರ ಕೊನೆ ಅಥವಾ ಕಿಡ್ನಾಪರ್ ಯಾರು ಎಂಬ ವಿಷಯವನ್ನು ಯಾರಿಂದಲೂ ಊಹಿಸಲಾಗೋಲ್ಲ.. ಆಗಾಗ ಕೆಲವರೊಬ್ಬರ ಮೇಲೆ ಅನುಮಾನ ಪಟ್ಟರೂ ಅವರು ಯಾರೂ ಅಪರಾಧಿಗಳಲ್ಲ.. ಕಡೆಕಡೆಗೆ ನಾಯಕನ ಜೊತೆ ನಮಗೂ ಹುಚ್ಚು ಹಿಡಿಯುವುದು ಬಾಕಿ..

ಒಂದೇ ಉಸಿರಲ್ಲಿ ನೋಡಿಸಿಕೊಳ್ಳುವ ಚಿತ್ರ…
ಅಮೆಜಾನ್ ಪ್ರೈಮಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply