Inception

Inception ಅಂದರೆ ಪ್ರಾರಂಭ….. ಯಾವುದರ ಪ್ರಾರಂಭ? ನಮ್ಮ ಯೋಚನೆಯ ಪ್ರಾರಂಭ.. ಹೌದು.. ಸಿನೆಮಾ ಮುಗಿಯುತ್ತದೆ… ಆದರೆ ನಮ್ಮ ಯೋಚನೆ ಶುರುವಾಗುತ್ತದೆ..

ಹೀಗೂ ಇರಬಹುದಾ………?
ಇರಬಹುದೇನೋ………………..?
ಯಾಕಿರಬಾರದು……………………….?
ಒಂದು ವೇಳೆ ಇದು ನಿಜವಾಗಿದ್ದರೆ ನಮ್ಮ ಜೀವನದ ಅರ್ಥವೇ ಬದಲಾಗುತ್ತದೆಯಲ್ಲವೇ…….?

ಹೀಗೆ ನಮ್ಮ ಯೋಚನಾ ಸರಣಿ ಸಾಗುತ್ತದೆ‌.

ಎಲ್ಲಿಯವರೆಗೆ ಯೋಚಿಸುತ್ತೇವೆ ಎಂದರೆ ಬಹುಶಃ ನಮ್ಮ ಜೀವ-ಜೀವನ ಇರುವವರೆಗೂ‌ ಈ ಬಗ್ಗೆ ಯೋಚಿಸುತ್ತಲೇ ಇರುತ್ತೇವೆ…. ಇದು ಆ ನಿರ್ದೇಶಕನ‌ ತಾಕತ್ತು. ಒಂದು ಆಲೋಚನೆಯನ್ನು ಯಶಸ್ವಿಯಾಗಿ ನಮ್ಮೆಲ್ಲರ ತಲೆಗೆ ದಾಟಿಸಿ ಅದನ್ನು ನಮ್ಮೊಳಗೇ ಬೇರೂರಿಸುವಲ್ಲಿ ಸಫಲರಾಗಿದ್ದಾರೆ. ಈಗ ನಿರ್ದೇಶಕರ ಆಲೋಚನೆ ನಮ್ಮ ತಲೆಗೆ ಬಂದು ನಮ್ಮದೇ ಯೋಚನೆ ಎನಿಸುವಷ್ಟು ಆಪ್ತವಾಗಿದೆ.

ಇದನ್ನೇ ಕಥಾನಾಯಕನೂ ಮಾಡುವುದು.

ಮೂಲತಃ ಕಥಾನಾಯಕ ಕನಸಿನ ಮೂಲಕ ಮತ್ತೊಬ್ಬರ ಆಲೋಚನೆಗಳಲ್ಲಿ ಅಡಗಿರಬಹುದಾದ ರಹಸ್ಯಗಳನ್ನು ಕಂಡುಹಿಡಿಯುವವನಾದರೂ, ಅದೇ ಮಾರ್ಗದಲ್ಲಿ ತನ್ನ ಆಲೋಚನೆಯನ್ನು ಮತ್ತೊಬ್ಬರ ಸುಪ್ತ ಮನಸ್ಸಿನಲ್ಲಿ ಬಿತ್ತುವ ಕಾರ್ಯವನ್ನೂ ಸಹ ಮಾಡುತ್ತಾನೆ. ಒಂದ್ನಿಮಿಷ…..

ಮೇಲಿನ ಪ್ಯಾರಾ ಅರ್ಥ ಆಗಲಿಲ್ಲ ಅನ್ಸುತ್ತೆ.

ನಮ್ಮ ಕಥಾನಾಯಕನ ಪ್ರೊಫೆಷನ್ ಅದು.

ಒಬ್ಬರ ಕನಸಿನೊಳಗೆ ಪ್ರವೇಶಿಸಿ, (ಅದಕ್ಕಾಗಿ ತಾಂತ್ರಿಕ ಸಹಾಯ ಪಡೆಯುತ್ತಾನೆ) ಅವರ ಮನದಾಳದೊಳಗೆ ಹುದುಗಿರುವ, ಯಾರಿಗೂ ಹೇಳಲಾರದ ಸತ್ಯಗಳನ್ನು ಅರಿತು, ಅದನ್ನು ಅವರ ವಿರೋಧಿಗಳಿಗೆ ತಿಳಿಸುವುದೇ ಅವನ ಕೆಲಸ. ಇದು ಕೆಲವೊಮ್ಮೆ ನಿಜ… ನಾವು ನಿಜ ಜೀವನದಲ್ಲಿ ಆಡಲಾಗದ ಮಾತುಗಳನ್ನೇ ಅಲ್ವೇ ರಾತ್ರಿಯಲ್ಲಿ ಕನವರಿಸುವುದು? ಅಲ್ಲದೇ ಮಾನಸಿಕ ಒತ್ತಡ ತಡೆಯಲಾರದೇ ನಮಗಾಗದವರನ್ನು ನಾವು ಕನಸಿನಲ್ಲಿಯೇ ಮುಕ್ತವಾಗಿ ಬೈಯ್ಯುವುದು.. ಹಾಗಾಗಿ ಒಬ್ಬರ ಕನಸಿಗೆ ಪ್ರವೇಶಿಸಿದರೆ ಅವರ ಅನೇಕ ಖಾಸಗಿ ವಿಚಾರಗಳನ್ನು ನಾವು ತಿಳಿದುಕೊಳ್ಳಬಹುದು. ಕಥಾನಾಯಕ ಇದನ್ನೇ ಬ್ಯುಸಿನೆಸ್ಸಾಗಿ ಮಾಡಿಕೊಂಡಿರುತ್ತಾನೆ‌. ಇದಕ್ಕಾಗಿ ಸಂಭಾವನೆಯನ್ನೂ ಪಡೆಯುತ್ತಿರುತ್ತಾನೆ‌.‌ ಜೊತೆಗೆ ಅವನ ಒಂದು ಟೀಮ್ ಸಹ ಇರುತ್ತದೆ.‌

ಅಷ್ಟರಲ್ಲಿ ಅವನಿಗೊಂದು ಹೊಸ ಚಾಲೆಂಜ್ ಎದುರಾಗುತ್ತದೆ.

ಏನೆಂದರೆ…..

ಒಬ್ಬರ ಕನಸಿನೊಳಗೆ ಪ್ರವೇಶಿಸಿ ಮಾಹಿತಿ ಕದಿಯಬಹುದಾದರೆ, ಅದೇ ರೀತಿ ಕನಸಿನೊಳಗೆ ಪ್ರವೇಶಿಸಿ ನಮಗೆ ಬೇಕಾದ ಮಾಹಿತಿಯನ್ನು ಅವರ ಮನಸ್ಸಿನೊಳಗೆ ಬಿತ್ತಲಾರೆವೇ…..???

ಸಾಮಾನ್ಯವಾಗಿ ಕನಸಿನಲ್ಲಿ ಬಂದದ್ದೆಲ್ಲ ನಿಜ ಅಂತ ನಾವು ತಿಳಿಯುತ್ತೇವೆ. ಹಾಗಾಗಿ ಒಬ್ಬರ ಕನಸಿನೊಳಗೆ ಅವರಿ್ಗೆಗೆ ತಿಳಿಯದಂತೆ ನುಸುಳಿ, ನಮಗೆ ಬೇಕಾದ ಹಾಗೆ ಅವರ ಮನಸ್ಸನ್ನು ಬದಲಾಯಿಸಿ ಹೊರಬಂದರೆ, ಅವರು ಬದಲಾದ ಮನಸ್ಸನ್ನು ತಮ್ಮದೇ ಸ್ವಭಾವ ಎಂದುಕೊಳ್ಳುತ್ತಾರೆ ಮತ್ತು ನಮ್ಮ ಆಲೋಚನೆಯನ್ನು ತಮ್ಮದೇ ಆಲೋಚನೆ ಎಂಬಂತೆ ಯೋಚಿಸಲು ಶುರು ಮಾಡುತ್ತಾರೆ‌. ಅಲ್ಲಿಗೆ ನಾಯಕನ ಉದ್ದೇಶ ಸಫಲ.

ಈ ಹೊಸ ಚಾಲೆಂಜ್ ಅನ್ನು ಸ್ವೀಕರಿಸಿ ನಾಯಕ ಮತ್ತು ಅವನ‌ ಟೀಮ್ ಹೊರಡುತ್ತದೆ‌.

ಚಾಲೆಂಜ್ ಏನೆಂದರೆ…..

ಒಬ್ಬ ದೊಡ್ಡ ಬ್ಯುಸಿನೆಸ್ಮನ್ ಮಗನನ್ನು ಅವನ ತಂದೆಯ ವ್ಯವಹಾರದಿಂದ ವಿಮುಖನನ್ನಾಗಿಸಬೇಕಾಗಿರುತ್ತದೆ. ಆದರೆ ಅದಕ್ಕಾಗಿ ಹೊರಗಿನಿಂದ ಒತ್ತಡ ಕೊಡದೇ, ಅವನು ತಾನೇ ತಾನಾಗಿ ತನ್ನ ತಂದೆಯ ಆಸ್ತಿಯನ್ನು ಬೇರೆಯವರಿಗೆ ಮಾರುವಂತೆ ಮಾಡಬೇಕಾಗಿರುತ್ತದೆ. ಅದಕ್ಕಾಗಿ ನಾಯಕ‌ ಆತನ ಕನಸಿನೊಳಗೆ ಪ್ರವೇಶಿಸಿ ಅವನ ಮನಸ್ಸನ್ನು ಆ ರೀತಿ ಬದಲಾಯಿಸಬೇಕಾಗಿರುತ್ತದೆ‌. ಈ ಕಾರ್ಯ ಸಾಧಿಸಲು ಅವರುಗಳು ಮೂರು ಹಂತದ ಕನಸಿನೊಳಗೆ ಪ್ರವೇಶಿಸಬೇಕಾಗಿರುತ್ತದೆ. ಕನಸಿನ ಹಂತ ಹೆಚ್ಚಾದಷ್ಟೂ ಸುಪ್ತ ಮನಸ್ಸಿನ ಆಳಕ್ಕೆ ಇಳಿಯಬಹುದು ಅಂತ ಲೆಕ್ಕಾಚಾರ.

ಮೂರು ಹಂತದ ಕನಸು ಎಂದರೆ:

1) ನಾವು ಮಲಗಿದಾಗ ಕಾಣುವ ಕನಸು
(ಮೊದಲನೇ ಹಂತ)
|
|
\/

2) ಆ ಕನಸಿನೊಳಗೆ ಒಂದು ಕನಸು
( ಎರಡನೇ ಹಂತ)
|
|
\/

3) ಆ ಕನಸಿನ ಕನಸಿನೊಳಗೆ ಮತ್ತೊಂದು ಕನಸು
( ಮೂರನೇ ಹಂತ)

ಮೂರನೇ ಹಂತದ ಕನಸಿನಿಂದ ಎಚ್ಚರವಾದಾಗ ಎರಡನೇ ಹಂತದ ಕನಸಿಗೆ ಬರುತ್ತಾರೆ. ಎರಡನೇ ಹಂತದ ಕನಸಿನಿಂದ ಎಚ್ಚರವಾದಾಗ ಮೊದಲನೇ ಹಂತದ ಕನಸಿಗೆ ಬರುತ್ತಾರೆ. ಮೊದಲನೇ ಹಂತದಿಂದಲೂ ಎಚ್ಚರವಾದಾಗಲಷ್ಟೇ ನಿಜ ಜೀವನದಲ್ಲಿಯೂ ಎಚ್ಚರವಾಗುತ್ತಾರೆ.

ಆದರೆ ಕನಸಿನಿಂದ ಎಚ್ಚರಗೊಳ್ಳುವುದಕ್ಕೆ ಇರುವ ಮಾರ್ಗ ಒಂದೇ…. ಸಾವು!!!

ಕನಸಿನಲ್ಲಿ ಸತ್ತಾಗ ನಾವು ನಿಜ ಜೀವನದಲ್ಲಿ ಎಚ್ಚರಗೊಳ್ಳುತ್ತೇವೆ. ಆದರೆ ಸಾವಲ್ಲದೇ ಬೇರೆ ರೀತಿಯ ನೋವು ಎದುರಾದರೆ ಕನಸಿನಲ್ಲಿಯೂ ಸಹ ಆ ನೋವು ಅನುಭವಿಸಲೇಬೇಕಾಗುತ್ತದೆ. ಅಂದರೆ ಮೈಕೈ ಮುರಿತ, ಬಿದ್ದು ಪೆಟ್ಟಾಗುವುದು ಮುಂತಾದವುಗಳಿಗೆ ಕನಸಿನಲ್ಲಿಯೂ ನೋವಿನ ಅನುಭವವಾಗುತ್ತದೆ. ಹಾಗಾದರೆ ಅದು ಕನಸು, ಇದು ವಾಸ್ತವ ಎಂದು ಗುರುತಿಸುವುದು ಹೇಗೆ ಅಂತ ತಲೆ ಕೆಡುತ್ತಿರಬೇಕಲ್ವಾ?

ಈ ವಿಷಯದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ನಿರ್ದಿಷ್ಟ ವಸ್ತುಗಳಿರುತ್ತವೆ. ನಾಯಕನ ಬಳಿ ಒಂದು ಸ್ಪಿನ್ನರ್ (ಗಿರಗಿಟ್ಲೆ) ಇರುತ್ತದೆ. ಅದನ್ನು ಸುತ್ತಿ ನೆಲಕ್ಕೆ ಬಿಟ್ಟಾಗ ಅದು ತಿರುಗಿ ಸಾಕಾಗಿ ಬಿದ್ದರೆ ಅದು ನಿಜ ಜೀವನ ಅಂತಲೂ, ತಿರುಗುತ್ತಲೇ ಇದ್ದರೆ ಕನಸೆಂತಲೂ ತಿಳಿಯಬಹುದಾಗಿರುತ್ತದೆ. ಕನಸಿನಲ್ಲಿ ಇದರ ಅವಶ್ಯಕತೆ ಬಹಳ ಇರುತ್ತದೆ. ಏಕೆಂದರೆ ಹಂತ-ಹಂತಗಳ ಕನಸನ್ನು ಪ್ರವೇಶಿಸಿದಾಗ ಅದು ಕನಸೋ ಅಥವಾ ವಾಸ್ತವವೋ ಎಂಬ ಅರಿವು ಮೂಡುವುದೇ ಇಲ್ಲ. ಅಲ್ಲದೇ ಎಲ್ಲಾ ಹಂತದ ಕನಸುಗಳಲ್ಲಿಯೂ ನಮ್ಮ ಸುತ್ತಲಿನ ಪರಿಸರ, ಜನರು, ನಡೆಯುವ ಘಟನೆಗಳು ಎಲ್ಲವೂ ಬಹಳ ನೈಜವಾಗಿಯೇ ಕಾಣುತ್ತಿರುತ್ತದೆ.

ಅದರಲ್ಲಿಯೂ ಈ ಮೂರು ಹಂತದ ಕನಸುಗಳಲ್ಲಿ ಕಾಲದ ವ್ಯತ್ಯಾಸ ಅಗಾಧವಾಗಿರುತ್ತದೆ. ಮೊದಲನೇ ಹಂತದಲ್ಲಿ ಕೆಲವು ನಿಮಿಷಗಳಲ್ಲಿ ಮುಗಿಯಬಹುದಾದ ಕನಸು, ಎರಡನೇ ಹಂತದಲ್ಲಿ ಕೆಲವು ತಿಂಗಳು ಹಿಡಿದರೆ, ಮೂರನೇ ಹಂತದಲ್ಲಿ ಬರೋಬ್ಬರಿ ಹತ್ತು ವರ್ಷಗಳನ್ನೇ ತೆಗೆದುಕೊಳ್ಳಬಹುದು. ಇಲ್ಲಿ ಬಹಳ ಮುಖ್ಯವಾದ ವಿಷಯ ಎಂದರೆ ಮೂರೂ ಹಂತಗಳಲ್ಲಿಯೂ ಅದು ನಮಗೆ ನಿಜ ಜೀವನವೇ ಅಂತನ್ನಿಸುತ್ತದೆ. ಇದು ಕನಸೋ ನಿಜವೋ ಅಂತ ತಿಳಿಯಲಾರದಷ್ಟು ಕನಸಿನಲ್ಲಿ ನೈಜತೆ ತುಂಬಿರುತ್ತದೆ.

ಈಗ ಕಥೆಗೆ ಒಂದು ಸ್ವಲ್ಪ ಬ್ರೇಕ್ ಹಾಕೋಣ…

ಇಲ್ಲಿ ಕಥಾನಾಯಕನ ಹೆಂಡತಿ ಎದುರಿಗೆ ನಿಂತುಬಿಟ್ಟಿದ್ದಾಳೆ.. ಅವಳು ಸತ್ತು ಬಹಳ ಕಾಲಗಳೇ ಕಳೆದಿವೆ. ಆದರೆ ಕಥಾನಾಯಕನ ಮನಸ್ಸಿನಿಂದ ಆಕೆ ಮರೆಯಾಗಿಲ್ಲ. ಹಾಗಾಗಿ ಅವನು ತನ್ನ ಪ್ರೊಫೆಷನ್ಗಾಗಿ ಒಬ್ಬರ ಮನಸ್ಸಿನೊಳಗೆ ನುಗ್ಗಿದಾಗಲೆ್ಲ್ಲ್ಲಲ್ಲ ಈಕೆಯೂ ನುಸುಳಿ, ಇವನ ಪ್ರಯತ್ನಕ್ಕೆ ತಣ್ಣೀರು ಎರಚುತ್ತಿರುತ್ತಾಳೆ. ಇವರೆಲ್ಲರೂ ಏನೋ ಪ್ಲಾನ್ ಮಾಡಿಕೊಂಡಿದ್ದರೆ ಆಕೆ ಬಂದು ತನ್ನ ಮನಸ್ಸಿಗೆ ಬಂದಂತೆ ವರ್ತಿಸಿ ಎಲ್ಲವನ್ನೂ ತಾರಾಮಾರಾ ಮಾಡಿ ಹೋಗುತ್ತಿರುತ್ತಾಳೆ. ನಾಯಕನ ಕೈಲಿ ಅವಳಿಗೇನೂ ಮಾಡಲು ಸಾಧ್ಯ ಆಗುತ್ತಿರುವುದಿಲ್ಲ. ಕಾರಣವೇನೆಂದರೆ ಅವಳೇ ಅವನ ಬಲಹೀನತೆ ಆಗಿರುತ್ತಾಳೆ.‌ ಜೀವವೇ ಇಲ್ಲದ ಹೆಂಡತಿಯಾದರೂ ಅವಳ ನೆ‌ನಪುಗಳು ಜೀವಂತ ಇರುತ್ತವಲ್ಲ… ಅಲ್ಲದೇ ಅವಳ ಸಾವಿಗೆ ಅವನೂ ಪರೋಕ್ಷವಾಗಿ ಕಾರಣನಾಗಿರುತ್ತಾನೆ. ಹಾಗಾಗಿ ಆ ಪಾಪಪ್ರಜ್ಞೆಯೂ ಅವನಿಗೆ ಇರುತ್ತದೆ.

ಏಕೆಂದರೆ ಈಗ ಈತ ಒಪ್ಪಿಕೊಂಡಿರುವ ಛಾಲೆಂಜ್ ಅನ್ನು ಆತ ಮೊಟ್ಟಮೊದಲ ಬಾರಿಗೆ ತನ್ನ ಹೆಂಡತಿಯ ಮೇಲೆಯೇ ಪ್ರಯೋಗಿಸಿರುತ್ತಾನೆ. ಅಯ್ಯೋ….!!! ಗಾಬರಿಯಾಯ್ತಾ? ಹೌದು…. ಇದು ನಿಜ!!

ಹಿಂದೊಮ್ಮೆ ಅವನೂ, ಅವನ ಹೆಂಡತಿಯೂ ಸ್ವಪ್ನ ಲೋಕದಲ್ಲಿ ಐವತ್ತು ವರ್ಷಗಳ ಕಾಲ ವಿಹರಿಸಿರುತ್ತಾರೆ (ಮೊದಲೇ ಹೇಳಿದಂತೆ ಸ್ವಪ್ನದ ಕಾಲಮಾನ ಬಹಳ ಹೆಚ್ಚು. ಇದೇ ಸಮಯದಲ್ಲಿ ನಿಜ ಜೀವನದಲ್ಲಿ ಅವರು ನಿದ್ರಿಸುತ್ತಾ ಕೇವಲ ಐದು ಗಂಟೆ ಕಳೆದಿರುತ್ತಾರಷ್ಟೇ)

ಈಗವರು ಸ್ವಪ್ನ ಲೋಕದಿಂದ ಆಚೆ ಬರಬೇಕು ಎಂದರೆ ಒಂದೇ ದಾರಿ… ಕನಸಿನಲ್ಲಿ ಸಾಯಬೇಕು.. ಕನಸಿನಲ್ಲಿ ಸತ್ತಾಗ ನಿಜ ಜೀವನದಲ್ಲಿ ಎಚ್ಚರವಾಗುತ್ತದೆ.‌. ಆದರೆ ಹೆಂಡತಿಯನ್ನು ಸಾಯಲು ಒಪ್ಪಿಸುವುದು ಹೇಗೆ?

ಆಗ ಅವನೊಂದು ಐಡಿಯಾ ಮಾಡ್ತಾನೆ…

ಇದು ಕನಸು, ಕನಸಿನಿಂದ ನಿಜ ಜೀವನಕ್ಕೆ ಹೋಗಲು ಸಾಯಬೇಕು ಎನ್ನುವ ಭಾವನೆಯನ್ನು ಆಕೆಯ ಮನದೊಳಗೆ ಬಿತ್ತುವುದು. ಜೊತೆಗೆ ತನ್ನ ಟೆಕ್ನಿಕ್ ಅನ್ನೇ ಅವಳ ಮೇಲೆಯೂ ಬಳಸ್ತಾನೆ. ತನ್ನ ಗಿರಗಿಟ್ಲೆಯನ್ನು ತಿರುಗಿಸಿ ಅದು ತಿರುಗಿ ತಿರುಗಿ ಬಿದ್ದರೆ ಅದು ನಿಜ ಜೀವನ ಎಂದೂ, ತಿರುಗುತ್ತಲೇ ಇದ್ದರೆ ಕನಸು ಎಂದು ಹೆಂಡತಿಯ ಮನದಲ್ಲಿ ಬಿತ್ತುತ್ತಾನೆ. ಆಕೆ ಅದನ್ನು ತಿರುಗಿಸಿದಾಗ ಅದು ಸತತವಾಗಿ ತಿರುಗತೊಡಗುತ್ತದೆ. ಆಗ ಅವನ ಹೆಂಡತಿ ಅದು ಕನಸು ಎಂದು ಅರಿತು ಸಾಯಲು ಒಪ್ಪುತ್ತಾಳೆ. ಇಲ್ಲಿ ಸತ್ತರೆ ನಿಜ ಜೀವನಕ್ಕೆ ಮರಳುತ್ತೇವೆ ಎಂಬ ವಿಶ್ವಾಸ ಇರುತ್ತದಲ್ಲ. ಹಾಗಾಗಿ ರೈಲಿಗೆ ತಲೆಕೊಟ್ಟು ಇಬ್ಬರೂ ಸಾಯುತ್ತಾರೆ. ಕೂಡಲೇ ನಿಜ ಜೀವನದಲ್ಲಿ ಎಚ್ಚರಗೊಳ್ಳುತ್ತಾರೆ.

ಆದರೆ ನಿಜವಾದ ಇಲ್ಲಿಂದ ತೊಂದರೆ ಶುರುವಾಗುತ್ತದೆ.

ಏನೆಂದರೆ ಅವನು ತನ್ನ ಹೆಂಡತಿಯ ಮೇಲೆ ಮಾಡಿರುವ ಪ್ರಯೋಗ ಭಯಂಕರ ಪರಿಣಾಮ ಬೀರಲು ತೊಡಗುತ್ತದೆ. ನಿಜ ಜೀವನದಲ್ಲಿ ಎಚ್ಚರವಾದ ಮೇಲೆಯೂ ಆಕೆ ಇದನ್ನೂ ಸಹ ಮತ್ತೊಂದು ಕನಸೆಂದು ತಿಳಿಯತೊಡಗುತ್ತಾಳೆ. ಇಲ್ಲಿಂದ ಸತ್ತರೆ ಮತ್ತೆಲ್ಲೋ ಎಚ್ಚರವಾಗುತ್ತೇವೆ ಅಂತ ಬಡಬಡಿಸತೊಡಗುತ್ತಾಳೆ. ಅವನು ಆಕೆಯ ಮೇಲೆ ಮಾಡಿದ್ದ ಪ್ರಯೋಗ ಅವಳ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ. ಹಾಗಾಗಿ ಇದೇ ನಿಜ ಜೀವನ ಅಂತ ಅವನೆಷ್ಟು ಹೇಳಿದರೂ ಕೇಳದೇ “ನೀನೂ ಬಾ ಇಬ್ಬರೂ ಸಾಯೋಣ” ಎನ್ನುತ್ತಾ ಆಕೆ ಬಿಲ್ಡಿಂಗಿನಿಂದ ಬಿದ್ದು ಸಾಯುತ್ತಾಳೆ. ನಾಯಕ ಆಕೆಯ ಹಿಂದೆ ಬಿದ್ದು ಸಾಯುವುದಿಲ್ಲ. ಏಕೆಂದರೆ ಇದೇ ನಿಜ ಜೀವನವಾಗಿರುತ್ತದಲ್ಲ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಆಕೆ ಎಡವಿರುತ್ತಾಳೆ.

ಆಗ ಆ ಅಪವಾದ ನಾಯಕನ ಮೇಲೆ ಬರುತ್ತದೆ. ಅದಕ್ಕಾಗಿ ಆತ ದೇಶವನ್ನೂ ಬಿಡಬೇಕಾಗಿ ಬಂದಿರುತ್ತದೆ. ತನ್ನ ಎಳೇ ಮಕ್ಕಳನ್ನು ನೋಡಲು ಸಹ ಹೋಗಲಾಗುತ್ತಿರುವುದಿಲ್ಲ. ಹಾಗಾಗಿ ಈ ಪ್ರಾಜೆಕ್ಟ್ ಮುಗಿಸಿದರೆ ಮಕ್ಕಳನ್ನು ನೋಡಲು ಕಳಿಸುವುದಾಗಿ ಮಾತು ಸಿಕ್ಕಿರುತ್ತದೆ. ಅಟ್ ಎನಿ ಕಾಸ್ಟ್ ಈ ಪ್ರಾಜೆಕ್ಟ್ ಯಶಸ್ವಿಯಾಗಲೇಬೇಕಿರುತ್ತದೆ.

ಅಂದುಕೊಂಡಂತೆ ಅವನ ಟೀಮ್ ಬಹಳ ಕಷ್ಟದಿಂದ ಮೂರು ಹಂತದ ಕನಸಿ್ಗೆಗೆ ಪ್ರವೇಶಿಸಿ, ಆ ಬಿಸ್ನೆಸ್ಮನ್ ಮಗನ ಸುಪ್ತ ಮನಸ್ಸಿನಲ್ಲಿ ಆತನ ತಂದೆಗೆ ಮಗ ಬಿಸ್ನೆಸ್ ಮುಂದುವರೆಸುವುದು ಇಷ್ಟವಿರಲಿಲ್ಲ ಎಂಬ ಅಂಶ ಬಿತ್ತುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಾಜೆಕ್ಟ್ ಯಶಸ್ವಿಯಾದ ಕಾರಣ ನಾಯಕ ತನ್ನ ದೇಶ ತಲುಪುವಲ್ಲಿ ಸಫಲನಾಗುತ್ತಾನೆ. ಮನೆಗೆ ಹೋದ ಕೂಡಲೇ ಟೇಬಲ್ ಮೇಲೆ ಗಿರಗಿಟ್ಲೆ ತಿರುಗಿಸುತ್ತಾನೆ. ಅದು ಕನಸೋ… ನಿಜವೋ… ಅಂತ ತಿಳಿಯಲು.. ಆದರೆ ಅಷ್ಟರಲ್ಲಿ ಆತನ ಮಕ್ಕಳು ಓಡಿ ಬಂದು ತಂದೆಯನ್ನು ತಬ್ಬುತ್ತಾರೆ. ಅಬ್ಬ ಸುಖಾಂತ್ಯ ಅಂತ ನಾವು ನೆಮ್ಮದಿಯ ನಿಟ್ಟುಸಿರು ಬಿಡುತ್ತೇವೆ.

ಆದರೆ……….

ಆ ಗಿರಗಿಟ್ಲೆ ತಿರುಗುತ್ತಿತ್ತೋ ಅಥವಾ ಬಿ್ದ್ದಿದ್ದಿತೋ ಅನ್ನುವುದನ್ನು ಸಹ ತೋರಿಸದೇ ನಿರ್ದೇಶಕರು ಸಿನೆಮಾ ಮುಗಿಸುತ್ತಾರೆ….

ಈಗ ನಮ್ಮ ತಲೆಗೆ ಹುಳ ಹೊಕ್ಕುತ್ತದೆ…

ನಾಯಕ-ಮಕ್ಕಳ ಮಿಲನ ಕನಸೋ ನಿಜವೋ…? ಇಷ್ಟು ಹೊತ್ತೂ ನಾಯಕ ಕನಸಿನ ಲೋಕದಲ್ಲಿದ್ದನೋ ಅಥವಾ ನಿಜ ಜೀವನದಲ್ಲಿದ್ದನೋ….? ನಾಯಕ ತನ್ನ ಕನಸಿನಲ್ಲಿ ಮಕ್ಕಳನ್ನು ಭೇಟಿ ಮಾಡಿದನಾ….? ಹಾಗಾದರೆ ಅವನ ಹೆಂಡತಿ ಹೇಳುತ್ತಿದ್ದುದು ನಿಜ ಇರಬಹುದಾ..? ಅವಳು ಇಲ್ಲಿಂದ ಸತ್ತು ಮತ್ತೆಲ್ಲೋ ಜೀವಂತ ಇದ್ದಾಳಾ…? ನಾಯಕನೇ ಕನಸಿನೊಳಗೆ ಸಿಕ್ಕಿಕೊಂಡಿದ್ದಾನಾ…?

ಈ ಪ್ರಶ್ನೆಗಳಿಗೆ ಉತ್ತರ ನೋಡುಗರೇ ಕಂಡುಕೊಳ್ಳಬೇಕು… ಏಕೆಂದರೆ ಸಿನೆಮಾ ಲೋಕಾರ್ಪಣೆಯಾಗಿದೆ. ಈಗದು ನಮ್ಮ ಸಿನೆಮಾ.. ಈಗ ಸುಖಾಂತ್ಯವೋ ದುಃಖಾಂತ್ಯವೋ ಯೋಚಿಸುವ ಸರದಿ ನಮ್ಮದು…

ಈಗ ಯೋಚಿಸುತ್ತಾ ಯೋಚಿಸುತ್ತಾ ನಮ್ಮ ಜೀವನವೂ ನಿಜವೋ ಅಥವಾ ಕನಸೋ ಎನ್ನುವ ಆಲೋಚನೆ ಬಂತಾ…?

ಯೆಸ್… ನಿರ್ದೇಶಕರು ಗೆದ್ದಿದ್ದಾರೆ 👍

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply