ಸುರಸುಂದರಾಂಗ ಹೀರೋ ಮತ್ತು ಮನಮೋಹಕ ಹೀರೋಯಿನ್… ಇವರಿಬ್ಬರಿದ್ದರೆ ಮತ್ತೇನು ಬೇಕು ಒಂದು ಸಿನೆಮಾಗೆ?? ಲಾಜಿಕ್-ಗೀಜಿಕ್ಕಿಗೆ ಮಣ್ಣು ಸುರಿಯ… ಇಬ್ಬರನ್ನೂ ನೋಡುತ್ತಾ ಕಣ್ತುಂಬಿಸಿಕೊಳ್ಳುತ್ತಿದ್ದರಾಯ್ತು…
ಹೌದು… ಇದು ಉತ್ಪ್ರೇಕ್ಷೆಯಲ್ಲ!!
ಸಿನೆಮಾದೊಳಗೆ ಏನು ನಡೆಯುತ್ತಿದೆ ಅಂತ ಶೀರ್ಷಾಸನ ಹಾಕಿ ಯೋಚಿಸಿದರೂ ಗೊತ್ತಾಗುವುದಿಲ್ಲ. ಆದರೂ ನಮ್ಮ ಕಣ್ಣುಗಳು ಪರದೆ ಬಿಟ್ಟು ಆಚೆ-ಈಚೆ ಅಲ್ಲಾಡುವುದಿಲ್ಲ. ಇದಕ್ಕೆ ಕಾರಣ ಬಿಗಿಯಾದ ನಿರೂಪಣೆ ಮತ್ತು ಹದವಾದ ಹಾಸ್ಯ. ಸಿನೆಮಾ ಶುರುವಾದ ಕೂಡಲೇ ಮುಗಿಯುವವರೆಗೂ ಅದೇ ವೇಗದಲ್ಲಿಯೇ ನೋಡಿಸಿಕೊಳ್ಳುತ್ತದೆ.
ನಾಯಕಿ ಪೆದ್ದು. ಅಲ್ಲಲ್ಲ.. ಪೆದ್ದು ಅಂತ ಹೇಗೆ ಹೇಳುವುದು? ಅವಳು ನಮ್ಮನಿಮ್ಮೆಲ್ಲರಂತೆ ಸಾಮಾನ್ಯಳು. ನಾಯಕ ಹೇಳುವ ಮಾತುಗಳು ಯಾವುವೂ ಅವಳಿಗೆ ಅರ್ಥವಾಗೋಲ್ಲ. ಅದಕ್ಕೆ ನಾಯಕ ಹೇಳುವುದನ್ನೆಲ್ಲಾ ಕೇಳಿಸಿಕೊಂಡು, ಕೊನೆಗೆ ತನಗನ್ನಿಸಿದ್ದನ್ನು ಮಾಡುತ್ತಾಳೆ.
ಮೊದಲೇ ಹೇಳಿದೆನಲ್ಲ ಅವಳು ಮುಗ್ಧಳು!!!
ಆದರೆ ನಾಯಕ ಆಕೆಯನ್ನು, ಆಕೆಯ ಒಂದೊಂದು ನಡೆಯನ್ನೂ, ಆಕೆಯ ಡ್ರೆಸ್, ಆಕೆಯ ಸೌಂದರ್ಯ ಎಲ್ಲವನ್ನೂ ಹೊಗಳುತ್ತಾನೆ. ಆಕೆ ತನ್ನೆದುರು ನಡೆಯುತ್ತಿರುವ ಘಟನೆಗಳಿಂದ ವಿಚಲಿತಳಾಗಿ ಉಲ್ಟಾ-ಸೀದಾ ಮಾತನಾಡಿದಾಗ ಆತ ಅರ್ಥ ಮಾಡಿಕೊಳ್ಳುತ್ತಾನೆ. ಏಕೆಂದರೆ ಆತ ಅಸಾಮಾನ್ಯ. ಆಕೆ ಸಾಮಾನ್ಯಳು.
ಸಿನೆಮಾದ ಮೊದಲಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ವಿಮಾನದಲ್ಲಿ ಒಂದೆಡೆ ಹೊರಟಿರುತ್ತಾರೆ. ನಾಯಕನ ಸೀಟ್ ಕನ್ಫರ್ಮ್ ಆಗುತ್ತದೆ. ನಾಯಕಿಗೆ ಸೀಟ್ ಸಿಗುವುದಿಲ್ಲ. ಆಗ ನಾಯಕ ನಾಯಕಿಯ ಕಿವಿಯಲ್ಲಿ “ಆಗುವುದೆಲ್ಲಾ ಒಳ್ಳೆಯದಕ್ಕೆ” ಅಂತ ಹೇಳಿ ಹೋಗುತ್ತಾನೆ. ಇದರ ಅರ್ಥ ಆಕೆಗೆ ಆ ವಿಮಾನ ತಪ್ಪಿದ್ದು ಒಳ್ಳೆಯದು ಅಂತರ್ಥ. ಆದರೆ ವಿಧಿಯಾಟವೋ ಎನ್ನುವಂತೆ ಯಾರ ಚಿತಾವಣೆಯಿಂದಲೋ ಆಕೆಯೂ ಅದೇ ವಿಮಾನ ಏರುತ್ತಾಳೆ. ಅಲ್ಲಿಂದ ಆಕೆಯ ಬ್ಯಾಡ್ ಲಕ್ ಶುರುವಾಗುತ್ತದೆ.
ಯಾವುದೋ ಗುಂಪು ನಾಯಕನಿಂದ ಏನನ್ನೋ ಪಡೆಯಲು ಬಯಸಿದ್ದು, ಈಕೆಯನ್ನು ನಾಯಕನ ಸ್ನೇಹಿತೆ ಅಂತ ತಪ್ಪು ತಿಳಿದು ಆಕೆಯನ್ನೂ ಅಪಹರಿಸುವ, ಸಾಯಿಸುವ ಪ್ರಯತ್ನಗಳಾಗುತ್ತವೆ. ತನ್ನದಲ್ಲದ ತಪ್ಪಿಗೆ ಆಕೆ ಇಲ್ಲಿ ಸಿಕ್ಕಿಕೊಂಡಿರುವುದರಿಂದ ಪ್ರತೀಬಾರಿಯೂ ನಾಯಕ ಆಕೆಯನ್ನು ಕಾಪಾಡುತ್ತಾನೆ.
ತನ್ನ ಪಾಡಿಗೆ ತಾನಿದ್ದ ಒಬ್ಬ ಸರ್ವೇಸಾಮಾನ್ಯ ಹುಡುಗಿಯೊಬ್ಬಳು, ವಿನಾಕಾರಣ ಯಾರದ್ದೋ ತಪ್ಪು ಆಲೋಚನೆಯಿಂದ ಇದನ್ನೆಲ್ಲ ಅನುಭವಿಸಬೇಕಾಯ್ತು. ಮನೆ, ಆಫೀಸು, ಪಾರ್ಟಿ ಅಂತ ಬಿಟ್ಟು ಬೇರೆ ನೋಡದಿದ್ದ ಆ ಹೆಣ್ಮಗಳು ಫೈರಿಂಗ್, ಬಾಂಬ್ ಬ್ಲಾಸ್ಟ್, ಹೆಣಗಳನ್ನೆಲ್ಲ ನೋಡಬೇಕಾಯ್ತು.
ಆದರೂ ಆಕೆ ಹೆದರದೇ ಪರಿಸ್ಥಿತಿಯ ಜೊತೆ ರಾಜಿ ಮಾಡಿಕೊಳ್ಳುತ್ತಾಳೆ. ತನಗೆ ಎದುರಾಗುವ ಸನ್ನಿವೇಶಗಳನ್ನು ಧೈರ್ಯವಾಗಿಯೇ ಎದುರಿಸುತ್ತಾಳೆ. ಬಹುಶಃ ನಾಯಕ ಹೊಗಳಿದ್ದು ಅದಕ್ಕೇ ಇರಬೇಕು.
ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ.