“Ninnu Kori”

"Ninnu Kori"

ಗಂಡ-ಹೆಂಡಿರ ಜಗಳ ಉಂಡು ಮಲಗೋ ತನಕ ಅಂತ ಗಾದೆ ಮಾಡಿದವರು ಯಾರು ಅಂತ ಗೊತ್ತಿಲ್ಲ. ಆದರೆ ಇದು ಅಕ್ಷರಶಃ ಸತ್ಯ. ಅವರಿಬ್ಬರೂ ಜಗಳವಾಡುತ್ತಿದ್ದಾರೆ ಅಂತ ನಾವೇನಾದರೂ ಮೂಗು ತೂರಿಸಲು ಹೋದೆವೋ…?? ನಾವು ಬೆಪ್ಪುತಕ್ಕಡಿಗಳಾದೆವು ಅಂತಲೇ ಅರ್ಥ.

ಪಲ್ಲವಿ ಮತ್ತು ಅರುಣ್ ಯಶಸ್ವೀ ದಂಪತಿಗಳು.

ಆದರೆ ಪಲ್ಲವಿಯ ಹಳೆಯ ಪ್ರೇಮಿಗೆ ಇದು ತೋರಿಕೆಯ ಪ್ರೀತಿ ಅಂತ ಅನುಮಾನ.‌ ಪಲ್ಲವಿ ನಿಜವಾದ ಪ್ರೀತಿಯಿಂದ ಗಂಡನ ಜೊತೆಯಲ್ಲಿ ಇಲ್ಲ, ಬದಲಿಗೆ ಮನೆತನದ ಮಾನ ಉಳಿಸಲು ಅಪ್ಪ ತೋರಿಸಿದ ಗಂಡಿಗೆ ಕುತ್ತಿಗೆಯೊಡ್ಡಿ ತಾಳಿ ಕಟ್ಟಿಸಿಕೊಂಡಿದ್ದಾಳೆ, ಹಾಗಾಗಿ ಅವಳನ್ನು ಆ ದುಃಖದಿಂದ ಪಾರು ಮಾಡಬೇಕು ಅಂತ ಹಳೆಯ ಪ್ರೇಮಿಯ ಮಹದಾಸೆ. ಈಗಲೂ ಆಕೆ ತನ್ನನ್ನೇ ಪ್ರೀತಿಸುತ್ತಿದ್ದಾಳೆ ಎಂಬ ಕನವರಿಕೆ ಅವನದ್ದು.

ಹಿಂದೊಮ್ಮೆ ಕಾಲೇಜಿನಲ್ಲಿ ಓದುತ್ತಿದ್ದಾಗ ಪಲ್ಲವಿ ಆತನನ್ನು ಮನಸಾರೆ ಪ್ರೀತಿಸುತ್ತಿದ್ದುದು ನಿಜ. ಆತನಿಲ್ಲದೇ ಬಾಳೋಲ್ಲ ಅಂತ ಹೇಳುತ್ತಿದುದೂ ನಿಜ. ತನ್ನ ಭವಿಷ್ಯದ ಕಲ್ಪನೆಗಳೆಲ್ಲವನ್ನೂ ಆತನೊಂದಿಗೇ ಸೇರಿ ಹೆಣೆದಿದ್ದಳು. ಆದರೆ ಆತ ಪಿಎಚ್ಡಿ ಮಾಡಿ ತನ್ನದೇ ಸಾಧನೆಯ ಹಾದಿಯಲ್ಲಿರುವಾಗ, ಅವನ ಕೆರಿಯರ್ ಗೆ ತಾನು ಅಡ್ಡ ಬರಬಾರದು ಅಂತ ಯೋಚಿಸಿ, ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅರುಣನನ್ನು ಮದುವೆಯಾಗಿ ಬಂದಿದ್ದಳು. ಅವಳಲ್ಲಿ ಅವನಿಗೆ ಮೋಸ ಮಾಡುವ ಉದ್ದೇಶ ಇರಲಿಲ್ಲ. ಬದಲಿಗೆ ಆ ಪ್ರೇಮಿಯ ಕೆರಿಯರ್ ತನ್ನಿಂದ ನಿಂತು ಹೋಗಬಾರದು ಎಂಬ ಕಾಳಜಿಯೇ ಇತ್ತು.

ಆದರೆ ಮದುವೆಯಾಗಿ ಬಂದ ನಂತರ ಗಂಡನಾದ ಅರುಣನ‌ ಪ್ರೀತಿಯಲ್ಲಿ ಹಳೆಯದನ್ನೆಲ್ಲಾ ಮರೆತು ಹೊಸ ಜೀವನ ಶುರು ಮಾಡಿದ್ದಳು. ಈಗವಳು ಅರುಣನನ್ನು ಪ್ರೀತಿಸುತ್ತಿದ್ದಳು. ಗಂಡ‌ನನ್ನು ಅಗಲಿ ಇರಲಾರದಷ್ಟು ಹಚ್ಚಿಕೊಂಡಿದ್ದಳು. ಗಂಡನೂ ಆಕೆಯನ್ನು ಅಷ್ಟೇ ಪ್ರೀತಿಸುತ್ತಿದ್ದ.

ಆದರೆ ಹಳೆಯ ಪ್ರೇಮಿ ಇದನ್ನು ನಂಬೋಲ್ಲ.

ಆಕೆ ಸಮಾಜಕ್ಕೆ ಹೆದರಿ, ಕುಟುಂಬದ ಮಾನಕ್ಕಾಗಿ ಅವನ ಜೊತೆ ಇದ್ದಾಳೆ ಅಂತ ಅವನ ವಾದ. ಈಗಲೂ ಆಕೆ ತನ್ನನ್ನೇ ಪ್ರೀತಿಸುತ್ತಿದ್ದಾಳೆ ಅಂತ ಅವನ ಅಭಿಪ್ರಾಯ. ಅದಕ್ಕಾಗಿ ಈ ಮದುವೆಗೆ ತಿಲಾಂಜಲಿ‌ ಇಟ್ಟು ತನ್ನ ಜೊತೆ ಬರಲಿ ಎಂದು ಆಶಿಸುತ್ತಾನೆ ಪ್ರೇಮಿ.‌ ಆದರೆ ಮಾಂಗಲ್ಯದ ಬಂಧನ ಕಳೆದುಕೊಳ್ಳುವುದು ಅಷ್ಟು ಸುಲಭವೇ?

ಅದಕ್ಕಾಗಿ ಪಲ್ಲವಿ ಒಂದು ಪ್ಲಾನ್ ಮಾಡುತ್ತಾಳೆ. ತಮ್ಮಿಬ್ಬರ ಅನ್ಯೋನ್ಯತೆಯನ್ನು ನೋಡಿ ತನ್ನ ಅಭಿಪ್ರಾಯ ಬದಲಿಸಿಕೊಳ್ಳಲು ಹಳೆಯ ಪ್ರೇಮಿಯನ್ನು ತನ್ನ ಮನೆಗೇ ಕರೆಸುತ್ತಾಳೆ. ಆ ಪ್ರೇಮಿಯೋ….. ಅನ್ಯೋನ್ಯವಾಗಿರುವ ದಂಪತಿಗಳನ್ನು ಬೇರೆ ಮಾಡಲು ಶತಪ್ರಯತ್ನ ಮಾಡುತ್ತಾನೆ.

ಅದರಲ್ಲಿ ಆತ ಸಫಲನಾಗುವನೇ?

ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ. ಭಾರತೀಯ ಮಹಿಳೆಯಾಗಿ ಸಿನೆಮಾದ ಅಂತ್ಯ ನನಗೆ ಬಹಳ ಹಿಡಿಸಿತು. ಮೊದಲ ಪ್ರೀತಿ ಮತ್ತು ಮದುವೆಯ ನಂತರದ ಪ್ರೀತಿಯನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇನ್ನೇನು ಎಲ್ಲ ಮುಗಿದುಹೋಯ್ತು ಎಂದುಕೊಳ್ಳುವಾಗ ಪಲ್ಲವಿ ಒಂದು ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಆ ಮೂಲಕ ನಮಗೂ ಒಂದು ಸಂದೇಶ ರವಾನಿಸುತ್ತಾಳೆ.

ಅದನ್ನು ಪಾಲಿಸುವುದು ಬಿಡುವುದು ನಮಗೆ ಸೇರಿದ್ದು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

2 thoughts on ““Ninnu Kori”

Leave a Reply