Parasite ಎಂದರೆ ಪರಾವಲಂಬಿ ಜೀವಿಗಳು.
ಅಂದರೆ ಮತ್ತೊಬ್ಬರನ್ನ ತಮ್ಮ ಆಸರೆಯನ್ನಾಗಿ ಮಾಡಿಕೊಂಡು ಬದುಕುತ್ತಿರುವ ಜೀವಿಗಳು ಅಂತರ್ಥ. ಕಡೆಗೆ ತಮಗೆ ಆಸರೆ ಕೊಟ್ಟವರನ್ನೇ ಕಬಳಿಸುತ್ತವೆ ಈ ಪರಾವಲಂಬಿ ಜೀವಿಗಳು. ಹಾಗಾಗಿ ಹೆಸರು ಕೇಳಿಯೇ ಸಿನೆಮಾ ನೋಡಲು ಸ್ವಲ್ಪ ಭಯವಾಯ್ತು…. ಅಂತ್ಯ ದುರಂತವಾಗಿರಬಹುದು ಎಂಬ ಊಹೆಯಿಂದ!!
ಅಲ್ಲದೇ ಕೊರಿಯನ್ ಸಿನೆಮಾ ಬೇರೆ.
ಭಾಷೆ-ಸಂಸ್ಕೃತಿ ಏನೂ ಗೊತ್ತಿಲ್ಲದೇ ಹೇಗೆ ನೋಡುವುದು ಅಂತ ಇಷ್ಟು ದಿನ ನೋಡಿರಲಿಲ್ಲ. ಆದರೆ ಕಲೆಗೆ ದೇಶ-ಭಾಷೆಗಳ ಗಡಿಯಿಲ್ಲ. ಮನುಷ್ಯನೊಳಗಿನ ಪ್ರೇಮ-ದ್ವೇಷ-ಅಸೂಯೆಗಳು ಪ್ರಪಂಚದೆಲ್ಲೆಡೆ ಒಂದೇ ರೀತಿಯಾಗಿರುತ್ತದೆ. ಮನುಷ್ಯ ಯಾವುದರಲ್ಲಿ ವಿಭಿನ್ನತೆ ತೋರಿದರೂ ತನ್ನ ಸ್ವಭಾವದಲ್ಲಿ ನಾವೆಲ್ಲರೂ ಒಂದೇ ಎನ್ನುವುದನ್ನು ಈ ಸಿನೆಮಾ ತೋರಿಸಿಕೊಟ್ಟಿತು. ಹಿಂದಿ ಡಬ್ ಇರುವುದರಿಂದ ನಮ್ಮದೇ ಸಿನೆಮಾ ನೋಡಿದಷ್ಟು ಆಪ್ತತೆಯಿತ್ತು.
ಸಿನೆಮಾ ಹೇಗೇ ಇರಲಿ.. ಎಷ್ಟೇ ಚೆನ್ನಾಗಿರಲಿ… ಅದನ್ನು ಪೂರ್ತಿ ನೋಡುವ ಹಾಗೆ ಮಾಡಬೇಕೆಂದರೆ ಶುರುವಿನ ಹತ್ತು-ಹದಿನೈದು ನಿಮಿಷ ಬಹಳ ಪ್ರಮುಖವಾಗಿರುತ್ತದೆ. ಆ ವಿಷಯದಲ್ಲಿ ಈ ಚಿತ್ರದ ನಿರ್ದೇಶಕರು ಗೆದ್ದಿದ್ದಾರೆ. ಒಮ್ಮೆ ನೋಡಲು ಶುರು ಹಚ್ಚಿಕೊಂಡವರು ಯಾವುದೇ ಕಾರಣಕ್ಕೂ ನಿಲ್ಲಿಸಲಾರರು. ಅಂತಹಾ ಬಿಗಿ ಕಥಾಹಂದರ ಇದರಲ್ಲಿದೆ.
ಹಾಗಾದರೆ ಕಥೆಯೇನು?
ನಮ್ಮ ನಿಮ್ಮೆಲ್ಲರ ಕಥೆಯೇ ಇದು. ನಮ್ಮ ಸುತ್ತಲೂ ಎಷ್ಟು ಸಿಕ್ಕರೂ ಸದಾ ಅತೃಪ್ತಿಯಿಂದಿರುವ, ಕೈಗೆ ಸಿಗುವುದರಲ್ಲಿ ತೃಪ್ತರಾಗದೇ, ತಮಗಿಂತಲೂ ಮೇಲಿನ ಸ್ಥಾನದಲ್ಲಿರುವವರನ್ನು ನೋಡಿ ಕರಬುವ ಲಕ್ಷಾಂತರ ಜನರಿದ್ದಾರೆ. ಹಾಗೆಯೇ ಈ ಕುಟುಂಬದಲ್ಲಿಯೂ ನಾಲ್ಕು ಜನರಿದ್ದಾರೆ. ಅವರಿಗೂ ಹೀಗೆಯೇ… ಏನೇನೂ ಕಷ್ಟಪಡದೇ ಎಲ್ಲವೂ ಬೇಕು.
ಮೊದಲಿಗೆ ಅವರು ತಮ್ಮ ಮೊಬೈಲಿಗೆ ಫ್ರೀ ವೈಫೈ ಕನೆಕ್ಷನ್ನಿಗಾಗಿ ಪರದಾಡುವುದನ್ನು ತೋರಿಸಿ ಅವರೆಲ್ಲರ ವ್ಯಕ್ತಿತ್ವದ ಪರಿಚಯ ಮಾಡಿಸಲಾಗಿದೆ. ಆ ಕುಟುಂಬದವರು ಪಿಜ್ಜಾ ಪ್ಯಾಕ್ ಮಡಿಕೆ ಮಾಡಿ ಕೊಟ್ಟು ಕೊಂಚ ಹಣ ಸಂಪಾದಿಸುತ್ತಾರಾದರೂ, ಇರುವ ನಾಲ್ವರಿಗೆ ಆ “ಹಣ” ಹೊಟ್ಟೆ ತುಂಬಾ ಊಟ ಸಹ ಕೊಡಿಸದು. ಇರಲು ಸರಿಯಾದ ಸ್ಥಳವಿಲ್ಲದ, ಸದಾ ಅತೃಪ್ತಿ ತಾಂಡವವಾಡುವ ಆ ಮನೆಗೆ ಒಂದು ದಿನ ಮಗನ ಸ್ನೇಹಿತ ಬರುತ್ತಾನೆ.
ಸುಮ್ಮನೆ ಬರುವುದಿಲ್ಲ. ಒಂದು ಗಿಫ್ಟ್ ತಂದಿರುತ್ತಾನೆ. ಸದಾ ಹಸಿವಿನಿಂದ ಕಂಗಾಲಾಗಿರುವ ಆ ಕುಟುಂಬ ಆ ಗಿಫ್ಟಿನಲ್ಲಿ ತಿನ್ನಲು ಏನಾದರೂ ಇರುತ್ತದೆ ಅಂತ ಊಹಿಸುತ್ತದೆ. ಆದರೆ ಒಳಗೊಂದು ಶಿಲೆ ಇರುತ್ತದೆ. ಎಲ್ಲರ ನಿರೀಕ್ಷೆ ‘ಟುಸ್’ ಆಗುತ್ತದೆ. ಆದರೆ ಆ ಸ್ನೇಹಿತ ಅದನ್ನು ಅದೃಷ್ಟದ ಶಿಲೆ ಎನ್ನುತ್ತಾನೆ. ಆ ಅದೃಷ್ಟದ ಶಿಲೆ ಇರುವವರ ಮನೆ ಶ್ರೀಮಂತವಾಗುತ್ತದೆ ಎಂದು ಹೇಳುತ್ತಾನೆ. ಆದರೆ ಶ್ರೀಮಂತಿಕೆ ಸುಮ್ಮನೆ ಬರುವುದಿಲ್ಲ. ತನ್ನೊಂದಿಗೆ ದೌರ್ಭಾಗ್ಯವನ್ನೂ ಹೊತ್ತು ತರುತ್ತದೆ ಅನ್ನುವುದನ್ನು ಮನೆಯವರು ಮರೆತು ಬಿಡುತ್ತಾರೆ.
ಸ್ನೇಹಿತ ಹೋಗುವ ಮುನ್ನ, ಆ ಮನೆಯ ಮಗ ಕಷ್ಟ ಪಡುವುದನ್ನು ನೋಡಲಾಗದೇ, ತನಗೆ ಗೊತ್ತಿರುವ ಒಂದು ಮನೆಯ ಹುಡುಗಿಯೊಬ್ಬಳಿಗೆ ಇಂಗ್ಲೀಷ್ ಪಾಠ ಹೇಳಿಕೊಡಲು ಇವನನ್ನು ಕಳಿಸಿಕೊಡುತ್ತಾನೆ. ಸ್ನೇಹಿತನ ಶಿಫಾರಸ್ಸಿನ ಮೇರೆಗೆ ಅವನಿಗೆ ಆ ಕೆಲಸ ಸಿಗುತ್ತದೆ. ನಂತರ ಆ ಮನೆಯಲ್ಲಿ ಮತ್ತೊಂದು ತುಂಟ ಮಗುವಿದೆ, ತಾಯಿಯ ಕೈಲಿ ಅದನ್ನು ಸಂಭಾಳಿಸಲಾಗೋಲ್ಲ ಅಂತ ಗೊತ್ತಾಗುತ್ತದೆ.
ಅದಕ್ಕಾಗಿ ತನ್ನ ತಂಗಿಯನ್ನೇ ಜೆಸ್ಸಿಕಾ ಹೆಸರಿನಲ್ಲಿ ಮಗುವಿನ ಟ್ಯೂಟರ್ ಆಗಿ ತೆಗೆದುಕೊಳ್ಳಲು ಶಿಫಾರಸ್ಸು ಮಾಡುತ್ತಾನೆ. ಈಗ ಅಣ್ಣ-ತಂಗಿ ಇಬ್ಬರೂ ಅಪರಿಚಿತರಂತೆ ಒಂದೇ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ. ಈಗ ಇಬ್ಬರಿಗೂ ಸಂಬಳ ಬರುತ್ತಿದೆ… ಅದೂ ನಿರೀಕ್ಷೆ ಮೀರಿದ ಮೊತ್ತ!!
ಆದರೂ ಅವರಿಗೆ ತೃಪ್ತಿ ಇಲ್ಲ.
ಮಗಳು ಆ ಮನೆಯ ಕಾರ್ ಡ್ರೈವರನ್ನು ಏನೋ ವಿತಾವಣೆ ಮಾಡಿ ಓಡಿಸಿ, ತನ್ನ ತಂದೆಯನ್ನು ಆ ಮನೆಗೆ ಡ್ರೈವರ್ ಆಗಿಸುತ್ತಾಳೆ. ತಂದೆ ತನ್ನ ವಿನಮ್ರತೆಯಿಂದ ಎಲ್ಲರ ವಿಶ್ವಾಸ ಗಳಿಸುತ್ತಾನೆ. ನಂತರ ಅವರ ಟಾರ್ಗೆಟ್ ಮನೆಕೆಲಸದವಳು. ಆಕೆಗೆ ಪೀಚ್ ಎಂದರೆ ಅಲರ್ಜಿ ಎಂಬ ವಿಷಯ ಗೊತ್ತು ಮಾಡಿಕೊಂಡು, ಆಕೆಗೆ ಪೀಚಿನಿಂದ ಅಲರ್ಜಿ ಆಗುವಂತೆ ಮಾಡಿ ಕೆಲಸದಿಂದ ಓಡಿಸುತ್ತಾರೆ. ಆ ಜಾಗಕ್ಕೆ ತಾಯಿ ಬರುತ್ತಾಳೆ.
ಈಗ ಇಡೀ ಕುಟುಂಬ ಈ ಮನೆಯಲ್ಲಿ ಕೆಲಸಕ್ಕಿದೆ.
ಆದರೆ ನಾಲ್ವರೂ ಸಂಪೂರ್ಣ ಅಪರಿಚಿತರಂತಿದ್ದಾರೆ. ಅಣ್ಣ-ತಂಗಿ ಟ್ಯೂಟರ್ಸ್, ತಂದೆ ಡ್ರೈವರ್ ಮತ್ತು ತಾಯಿ ಮನೆಕೆಲಸದಾಕೆ. ಆ ಅದೃಷ್ಟದ ಕಲ್ಲಿನ ವಿಷಯ ನಿಜವಾಯ್ತು. ನಾಲ್ವರಿಗೂ ಕೆಲಸ ಸಿಕ್ಕಿರುವ ಕಾರಣ ಅವರ ಬಡತನ ದೂರವಾಯ್ತು. ಸಿರಿತನ ಬರುವ ಹಾದಿಯಲ್ಲಿದೆ……
ಅಷ್ಟರಲ್ಲಿ ಒಂದು ಪ್ರಮಾದವಾಗಿಬಿಡುತ್ತದೆ.
ಹಳೇ ಕೆಲಸದಾಕೆಯ ಗಂಡ ಆ ಮನೆಯ ಕೆಳಗಿನ ಸೀಕ್ರೆಟ್ ಬಂಕರಿನಲ್ಲಿ ಅಡಗಿಕೊಂಡಿರುತ್ತಾನೆ. ಅದೂ ಬರೋಬ್ಬರಿ ನಾಲ್ಕು ವರ್ಷಗಳಿಂದ. ಯಾರಿಗೂ ಅನುಮಾನ ಬರದ ಹಾಗೆ ಕೆಲಸದಾಕೆ ಆತನಿಗೂ ಊಟ ಕೊಡುತ್ತಾ ಕಾಪಾಡಿಕೊಂಡು ಬರುತ್ತಿರುತ್ತಾಳೆ. ಈ ವಿಷಯ ಈ ಕುಟುಂಬದವರಿಗೆ ಗೊತ್ತಾಗಿ ಇಬ್ಬರಿಗೂ ಮಾರಾಮಾರಿ ಫೈಟ್ ಆಗುತ್ತದೆ.
ತನ್ನ ಗಂಡನನ್ನು ಬಂಕರಿನಲ್ಲಿ ಕಾಪಾಡಿಕೊಂಡು ಬರುತ್ತಿರುವ ಮನೆಕೆಲಸದಾಕೆಗೂ ಹೊರ ಜಗತ್ತಿನಲ್ಲಿ ಇರಲು ಸ್ಥಳವಿರದೇ ಈ ಬಂಕರಿನ ಆಸರೆಯು ಅತ್ಯಾವಶ್ಯಕವಾಗಿರುತ್ತದೆ. ಈ ಕುಟುಂಬದವರ ದೆಸೆಯಿಂದ ಆ ಆಸರೆ ತಪ್ಪಿಹೋದರೆ ಎಂಬ ಆತಂಕದಿಂದ ಆಕೆ ಆಕ್ರಮಣಕಾರಿಯಾಗುತ್ತಾಳೆ.
ಈ ಕುಟುಂಬದವರಿಗೂ ಸಹ ‘ಈಗ ತಾನೇ ಒಳ್ಳೆಯ ದಿನಗಳನ್ನು ಕಾಣುತ್ತಿದ್ದೇವೆ, ಈ ಮನೆಕೆಲದಾಕೆ ಮತ್ತು ಗಂಡನಿಂದ ಅನ್ಯಾಯವಾಗಿ ಮತ್ತದೇ ಹಸಿವಿನ ದಿನಗಳಿಗೆ ಮರಳಬೇಕಲ್ಲ?’ ಎಂಬ ಅಸಹನೆ-ಆಕ್ರೋಶ ಉಂಟಾಗಿ ಅವರೂ ಪ್ರತಿ ಹಲ್ಲೆ ನಡೆಸುತ್ತಾರೆ. ಇಬ್ಬರಿಗೂ ಆ ಮನೆ ಅವಶ್ಯಕ… ಹಾಗಾಗಿ ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಡುತ್ತಾರೆ. ಪಾಪ ಇಬ್ಬರಿಗೂ ಬದುಕುವ ತವಕ….
ಆದರೆ…..
ಮನೆಯೇ ಯಾರದ್ದೋ…?
ಹೊಡೆದಾಟ ನಡೆಸುತ್ತಿರುವವರೇ ಮತ್ಯಾರೋ..?
ಕಡೆಗೆ ಬಲಿಯಾಗುವವರೇ ಇನ್ಯಾರೋ..?
ಯಾರು, ಯಾರನ್ನು, ಯಾಕೆ ಕೊಂದರು ಅಂತ ಬೇರೆಯವರಿಗೆ ಇರಲಿ… ಪೊಲೀಸರಿಗೂ ಅದು ಗೊತ್ತಾಗುವುದಿಲ್ಲ. ಕಡೆಗೂ ಅದು ಬಗೆಹರಿಯದ ಕೇಸ್ ಆಗಿಯೇ ಉಳಿಯುತ್ತದೆ. ಅರಿವಿಲ್ಲದೇ ಒಂದು ಕುಟುಂಬಕ್ಕೆ ಆಸರೆ ಕೊಟ್ಟಿದ್ದಕ್ಕಾಗಿ ಆ ಶ್ರೀಮಂತ ಕುಟುಂಬ ತನ್ನ ಒಡೆಯನನ್ನೇ ಕಳೆದುಕೊಳ್ಳುತ್ತದೆ. ಈ ಕುಟುಂಬವೂ ತಂದೆ-ತಂಗಿ ಇಬ್ಬರನ್ನೂ ಕಳೆದುಕೊಂಡು, ಬೀದಿಪಾಲಾಗಿ ಮತ್ತದೇ ಹಳೆಯ ಮನೆಗೆ ವಾಪಸ್ ಬರುತ್ತದೆ.
ಆದರೆ ಮನೆಯ ಮಗನಿಗೇನೋ ಆಸೆ!!!
ತಾನು ಚೆನ್ನಾಗಿ ದುಡಿದು ಆ ಮನೆಯನ್ನು ಕೊಂಡುಕೊಳ್ಳುವಷ್ಟು ಶ್ರೀಮಂತನಾಗಬೇಕು. ನಂತರ ಆ ಮನೆಯಲ್ಲಿ ಜೀವನ ಮಾಡಬೇಕು ಅಂತ. ಏಕೆಂದರೆ ಆತನ ತಂದೆ ಆ ಮನೆಯ ನೆಲಮಾಳಿಗೆಯಲ್ಲಿರುವ ಸೀಕ್ರೆಟ್ ಬಂಕರಿನಲ್ಲಿ ಪೊಲೀಸರಿಗೆ ಹೆದರಿ ಅವಿತುಕೊಂಡಿರುತ್ತಾನೆ. ಅಂದು ನಡೆದ ಕೊಲೆಗಳಲ್ಲಿ ಆತನ ಕೈವಾಡವೂ ಇರುತ್ತದೆಯಲ್ಲ. ಹಾಗಾಗಿ…. ತನ್ನ ತಂದೆಯನ್ನು ರಾಜಾರೋಷವಾಗಿ ಆತ ಹೊರಕರೆತರುವಂತಿಲ್ಲ. ಬದಲಿಗೆ ಆ ಮನೆಯನ್ನೇ ಖರೀದಿಸಿ ತಂದೆಗೆ ಜೀವನ ಕೊಡಬೇಕಿರುತ್ತದೆ.
ಆತ ಆ “ಕನಸು” ಕಾಣುತ್ತಿರುವಾಗ ಸಿನೆಮಾ ಮುಗಿಯುತ್ತದೆ.
ಇದರಲ್ಲಿ ಯಾರದ್ದು ತಪ್ಪು ಅಂತ ಹೇಗೆ ಹೇಳುವುದು? ಎಲ್ಲ ಪಾತ್ರಗಳ ಜಾಗದಲ್ಲಿ ನಾವೇ ನಿಂತು ನೋಡಿದಾಗ ಎಲ್ಲಾ ಪಾತ್ರಗಳೂ ನ್ಯಾಯಯುತವಾಗಿವೆ ಅಂತಲೇ ಎನಿಸುತ್ತದೆ. ಅದೇ ವಿರುದ್ಧ ಜಾಗದಲ್ಲಿ ನಿಂತರೆ ಎದುರಿನ ಎಲ್ಲರೂ ತಪ್ಪು ಮಾಡಿದಂತೆಯೇ ಅನ್ನಿಸುತ್ತದೆ.
This is the beauty of this film.