“Sahasam” (ತೆಲುಗು)

sahasam telugu movie

ಅದೃಷ್ಟ ಎನ್ನುವುದು ಯಾರಿಗೆ ಹೇಗೆ ಎದುರಾಗುತ್ತದೆ ಅಂತ ಯಾರಿಗೂ ಗೊತ್ತಾಗುವುದಿಲ್ಲ.‌ ಕಾಣದ ನಿಧಿಯೊಂದಕ್ಕಾಗಿ ಹಲವರು ಪ್ರಾಣವನ್ನೇ ಪಣವಾಗಿಟ್ಟು ಹುಡುಕಾಟ ನಡೆಸುತ್ತಿರುವಾಗ, ಆ ನಿಧಿ ಅನಾಯಾಸವಾಗಿ ಒಬ್ಬ ಅಮಾಯಕನಿಗೆ ದೊರೆತರೆ ಹೇಗಿರುತ್ತದೆ? ಆ ನಿಧಿಯನ್ನು ನೋಡಿ ಅವನು ಮೂರ್ಚೆ ಹೋಗಬಹುದಾ? ಇದೆಲ್ಲ ನನ್ನದೇ ಅಂತ ಖುಷಿ ಪಡಬಹುದಾ? ಅಥವಾ ತನ್ನದಲ್ಲದ ವಸ್ತು ಇದು ಅಂತ ತಿರಸ್ಕರಿಸಬಹುದಾ? ನಾವಾಗಿದ್ದರೆ ಏನು ಮಾಡುತ್ತಿದ್ದೆವು?

ಅದು 2003…..

ಮೊದಲು ಭಾರತದ್ದೇ ಆಗಿದ್ದ, ಈಗ ಸ್ವಾತಂತ್ರಾ ನಂತರ ಪಾಕಿಸ್ತಾನಕ್ಕೆ ಸೇರಿರುವ ಒಂದು ಭೂಭಾಗದೊಳಗೆ ಡಾ. ಅಲಂ ಸಿದ್ದಿಕಿ ಎಂಬ ಪಾಕಿಸ್ತಾನದ ಪ್ರಾಚ್ಯಶಾಸ್ತ್ರಜ್ಞನೊಬ್ಬ ಕಾನಿಷ್ಕ ದೊರೆಯ ಕಾಲದಲ್ಲಿ ಅವಿತಿಟ್ಟಿರುವ ಸಂಪತ್ತನ್ನು ಅರಸುತ್ತಿರುತ್ತಾನೆ. ಆ ಸಂಪತ್ತಿನ ನಕಾಶೆಯು ಒಂದು ಪೆಟ್ಟಿಗೆಯೊಳಗೆ ಬಂಧಿಯಾಗಿದ್ದು, ಆ ಪೆಟ್ಟಿಗೆ ತೆರೆಯಲು ಬೀಗದ ಕೀ ಅವಶ್ಯಕತೆ ಎದುರಾಗುತ್ತದೆ. ಆದರೆ ಪ್ರಾಚ್ಯಶಾಸ್ತ್ರಜ್ಞನ ಬಳಿ ಬೀಗದ ಕೀ ಇರುವುದಿಲ್ಲ.

ಈ ವಿಷಯ ಭಯೋತ್ಪಾದಕನಾದ “ಸುಲ್ತಾನ್” ಎಂಬ ವ್ಯಕ್ತಿಗೆ ಗೊತ್ತಾಗಿ, ಅವನು ಆ ನಿಧಿಯ ನಕಾಶೆ ಇರುವ ಪೆಟ್ಟಿಗೆಯನ್ನು ತನ್ನೊಂದಿಗೆ ಹೊತ್ತೊಯ್ಯುತ್ತಾನೆ.‌ ಬರೀ ಪೆಟ್ಟಿಗೆ ಇಟ್ಕೊಂಡು ಪ್ರಯೋಜನವೇನು? ಆತ ಪ್ರಾಚ್ಯಶಾಸ್ತ್ರಜ್ಞನಿಗೇ ಕೀ ಹುಡುಕುವ ಜವಾಬ್ದಾರಿ ಕೊಡುತ್ತಾನೆ.

ಪ್ರಸ್ತುತ ಸಮಯ 2013….

ಗೋಪಿಚಂದ್ ಒಬ್ಬ ಮಹತ್ವಾಕಾಂಕ್ಷೆ ಉಳ್ಳ ಯುವಕ. ಆತ ಕಾಣುವ ಕನಸುಗಳೆಲ್ಲಾ ಬಹಳ ದೊಡ್ಡವು. ಅವನಿಗೆ ಸುಲಭವಾಗಿ ಹಣ ಸಂಪಾದಿಸುವ ಕೆಲಸ ಬೇಕಿರುತ್ತದೆ. ಆದರೆ ಸಿಗುವ ಕೆಲಸವೋ ಬರೀ ಸೆಕ್ಯುರಿಟಿ ಗಾರ್ಡಿನದ್ದು. ಹಾಗಾಗಿ ಲಾಟರಿ ಟಿಕೆಟ್ ಕೊಂಡುಕೊಳ್ಳುವುದೋ ಮತ್ತೊಂದೋ ಮಾಡುತ್ತಾ ತನ್ನ ಅದೃಷ್ಟದ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರುತ್ತಾನೆ.

ಆದರೆ ಅದೃಷ್ಟ ಒಲಿದಿರುವುದಿಲ್ಲ.

ಒಂದು ಮಳೆಗಾಲದ ರಾತ್ರಿ ಮಳೆಯ ತೀವ್ರತೆಗೆ ಅವನ ರೂಮಿನ ಅಟ್ಟ ಕುಸಿಯುತ್ತದೆ. ಅದೇ ಅವನ ಜೀವನದ ಟರ್ನಿಂಗ್ ಪಾಯಿಂಟ್. ಆ ಅಟ್ಟದಲ್ಲಿ ಅವನ ತಾತನ ಡೈರಿ, ಒಂದು ಲಾಕೆಟ್, ಭೂತಕನ್ನಡಿಗಳು ಸಿಗುತ್ತವೆ. ತಾತನ ಡೈರಿಯಿಂದ ತಿಳಿಯುವುದೇನೆಂದರೆ:

ಆತನ ತಾತ ಸ್ವಾತಂತ್ರ್ಯ ಪೂರ್ವದಲ್ಲಿ ಪಾಕಿಸ್ತಾನದ ಪೇಶಾವರದಲ್ಲಿ ಚಿನ್ನದ ವ್ಯಾಪಾರಿಯಾಗಿದ್ದರು. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಸಿರಿವಂತರನ್ನು ಜನ ಲೂಟಿ ಮಾಡುತ್ತಿದ್ದಾಗ, ಈತ ತನ್ನೆಲ್ಲಾ ಸಂಪತ್ತನ್ನು ಎತ್ತಿಕೊಂಡು ಒಂದು ಗುಹೆಯೊಳಗೆ ನುಗ್ಗುತ್ತಾರೆ‌. ಆಗ ಸಂಪತ್ತಿನ ಮೂಟೆಯನ್ನು ಒಂದು ಕಡೆ ಇಟ್ಟು ವಿಶ್ರಮಿಸುತ್ತಿರುವಾಗ, ಅಚಾನಕ್ಕಾಗಿ ಒಂದು ಗುಪ್ತದ್ವಾರ ತೆರೆಯಲ್ಪಟ್ಟು, ಇವರ ಸಂಪತ್ತೆಲ್ಲವೂ ನಿಗೂಢ ಸ್ಥಳದೊಳಗೆ ಬಿದ್ದುಬಿಡುತ್ತದೆ.

ಈಗ ಗೋಪಿಚಂದನಿಗೆ ಕಳೆದು ಹೋದ ತನ್ನ ತಾತನ ಸಂಪತ್ತನ್ನು ಮತ್ತೆ ಪಡೆಯುವ ಆಸೆಯಾಗುತ್ತದೆ. ಅದಕ್ಕಾಗಿ ನಾಯಕಿಯೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುತ್ತಾನೆ. ಆಗ ಗೋಪಿಚಂದನ ಬಳಿ ಆ ಲಾಕೆಟ್ ಇರುವುದು ಗೊತ್ತಾಗಿ ಭಯೋತ್ಪಾದಕನಾದ ಸುಲ್ತಾನ್ ಈತನ ಬೆನ್ನು ಬೀಳುತ್ತಾನೆ. ಏಕೆಂದರೆ ಆ ಲಾಕೆಟ್ ನಿಧಿಯ ಮಾಹಿತಿ ಇರುವ ಪೆಟ್ಟಿಗೆ ತೆರೆಯುವ ಬೀಗದ ಕೀ ಆಗಿರುತ್ತದೆ. ಒಂದು ನಿಧಿಯ ಹಿಂದೆ ಹಲವರು ಆಕಾಂಕ್ಷಿಗಳು….

ಆ ನಿಧಿ ಇವರಿಗೆ ಸುಲಭವಾಗಿ ಸಿಗುತ್ತದೆಯಾ?

ಉಹುಂ ಇಲ್ಲ… ಲಾಕೆಟ್ಟಿನಿಂದ ಆ ಪೆಟ್ಟಿಗೆಯನ್ನು ತೆರೆದು ನಿಧಿಯ ನಕಾಶೆಯನ್ನು ಪಡೆಯುತ್ತಾರೆ ಹೊರತೂ, ನಿಧಿ ಪಡೆಯುವ ಜಾಗದಲ್ಲಿ, ಹಂತಹಂತದಲ್ಲಿಯೂ ಪರೀಕ್ಷೆಗಳಿದ್ದು ಹಲವರು ಪ್ರಾಣ ಕಳೆದುಕೊಳ್ಳುತ್ತಾರೆ. ಹೌದು ಮತ್ತೆ…? ನಿಧಿ ಎಂದಿಗೂ ಸುಲಭವಾಗಿ ದೊರೆಯಲಾರದು.. ಏಕೆಂದರೆ ಅಪಾರವಾದ ನಿಧಿ ಪಡೆಯುವವನು, ನಂತರ ಅದನ್ನು ವಿನಿಯೋಗಿಸುವುದರಲ್ಲಿಯೂ ನಿಪುಣ ಮತ್ತು ಚಾಣಾಕ್ಷನಿರಬೇಕಾಗುತ್ತದೆ. ಹಾಗಾಗಿ ನಿಧಿ ಪಡೆಯುವ ಹಂತದಲ್ಲಿ ಹಲವಾರು ಪರೀಕ್ಷೆಗಳಿರುತ್ತವೆ.

ಆ ಪರೀಕ್ಷೆಗಳೇನು? ಅದನ್ನೆಲ್ಲಾ ನಾಯಕ ಪಾಸ್ ಮಾಡಿದನೇ? ಅಂತಿಮವಾಗಿ ನಿಧಿ ಸಿಕ್ಕಿತೇ? ರಿಯಲ್ ಜಾಕ್ ಪಾಟ್ ಹೊಡೆದದ್ದು ಯಾರಿಗೆ? ನಾಯಕನಿಗಾ ಅಥವಾ ಭಯೋತ್ಪಾದಕನಿಗಾ? ತಿಳಿಯಲು ಸಿನೆಮಾ ನೋಡಿ.

ನಿಧಿ ಪಡೆಯಲು ಇರುವ ವಿವಿಧ ಹಂತಗಳನ್ನು ಕಣ್ಣಾರೆ ಕಂಡು ಆನಂದಿಸಬೇಕು. ಒಂದು ಹಂತದ ನಂತರ ಮತ್ತೊಂದು ಹಂತವನ್ನು ತಲುಪಲು ನಾಯಕ ತನಗೆ ಸಿಕ್ಕ ಸುಳಿವನ್ನು ಆಧರಿಸಿ ಮುಂದುವರೆಯುತ್ತಾನೆ. ಆ ಸಾಹಸ ದೃಶ್ಯಗಳು ಬಹಳ ಚೆನ್ನಾಗಿವೆ. ಮತ್ತೆ ಮತ್ತೆ ನೋಡುವಂತಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply