ನೀನು ಭೂತ-ಪ್ರೇತಗಳಿಗೆ ನಿಜಕ್ಕೂ ಹೆದರುವುದಿಲ್ಲವಾದರೆ ಒಂಟಿಯಾಗಿ ಈ ಸಿನೆಮಾ ನೋಡು ಅಂತ ನನ್ನ ಸ್ನೇಹಿತೆ ಚಾಲೆಂಜ್ ಮಾಡಿದ್ದಳು. ಆ ಚಾಲೆಂಜ್ ಸ್ವೀಕರಿಸಿ ಒಬ್ಬಳೇ ಸಿನೆಮಾ ನೋಡುತ್ತಾ ಕುಳಿತವಳು, ನೋಡುನೋಡುತ್ತಾ ಯಾಕೋ ಭಯ-ತಳಮಳ ಶುರುವಾಗಿ ರಿಮೋಟ್ ಹಿಡಿದುಕೊಂಡು ಮ್ಯೂಟ್ ಮಾಡಿ ಕಣ್ಣು ಮುಚ್ಚಿಕೊಳ್ಳುತ್ತಾ, ಮತ್ತೆ ಕಣ್ಣು ತೆರೆಯುತ್ತಾ ಹೆದರು-ಹೆದರುತ್ತಲೇ ಸಿನೆಮಾ ನೋಡಿದ್ದೆ.
ಅಷ್ಟು ಭಯಾನಕವಾಗಿದೆ ಸಿನೆಮಾ!!!!
ರೋಜರ್ ಮತ್ತು ಆತನ ಕುಟುಂಬದವರು ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಂತೆ ಮನೆಯೊಳಗೆ ವಿಲಕ್ಷಣ ಸಂಗತಿಗಳು ನಡೆಯತೊಡಗುತ್ತವೆ. ಶುರುವಿನಲ್ಲಿ ಯಾರೂ ಗಮನಿಸದೇ ಇದ್ದರೂ, ದಿನ ಕಳೆದಂತೆ ಅದರ ಆರ್ಭಟ ಜೋರಾಗುತ್ತದೆ.
ಇಡೀ ಮನೆಯ ಗಡಿಯಾರಗಳು ಪ್ರತೀ ರಾತ್ರಿ 3.07 ಕ್ಕೆ ನಿಂತು ಹೋಗುತ್ತಿರುತ್ತವೆ. ಒಂದು ಗಡಿಯಾರವಾದರೆ ನಿಂತು ಹೋಗಿದೆ ಎಂದುಕೊಳ್ಳಬಹುದು. ಆದರೆ ಪ್ರತಿ ಗಡಿಯಾರವೂ ಅದೇ ಸಮಯಕ್ಕೆ ಕೆಟ್ಟು ಹೋಗಲು ಸಾಧ್ಯವೇ? ಇಲ್ಲೇನೋ ಅಸಹಜತೆ ಇದೆ ಎನ್ನಿಸೋಲ್ಲವೇ?
ಹೌದು.. ಆ ಕುಟುಂಬದವರಿಗೂ ಹಾಗೇ ಅನ್ನಿಸಲು ಶುರುವಾಗುತ್ತದೆ. ಅದಕ್ಕಾಗಿ ಭೂತೋಚ್ಛಾಟನೆ ಮಾಡುವ ಎಡ್ ಮತ್ತು ಲಾರೆನ್ ಅನ್ನು ಮನೆಗೆ ಆಹ್ವಾನಿಸುತ್ತಾರೆ. ಆಗ ಗೊತ್ತಾಗುತ್ತದೆ…. ಹಿಂದೊಮ್ಮೆ ಆ ಮನೆಯಲ್ಲಿ ಒಬ್ಬ ಮಾಟಗಾತಿ ವಾಸಿಸುತ್ತಿದ್ದಳು. ಆಕೆ ತನ್ನ ವಾರದ ಮಗುವನ್ನು ತನ್ನ ಮಾಟಕ್ಕಾಗಿ ಬಲಿಕೊಟ್ಟು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಸಮಯವೇ ಮಧ್ಯರಾತ್ರಿ 3.07.
ಈಗ ಆಕೆ ದೆವ್ವವಾಗಿ ರೋಜರ್ ಕುಟುಂಬದವರನ್ನು ಕಾಡುತ್ತಿರುತ್ತಾಳೆ. ರೋಜರನ ಹೆಂಡತಿಗೆ ಸದಾಕಾಲವೂ ಮಕ್ಕಳನ್ನು ಕೊಲ್ಲುವಂತೆ ಪ್ರೇರೇಪಿಸುತ್ತಿರುತ್ತಾಳೆ. ಆದರೆ ಆ ತಾಯಿಯ ಮನಸ್ಸಿನಲ್ಲಿ ಅಪಾರವಾದ ಮಾತೃಪ್ರೇಮವಿದ್ದುದರಿಂದ ಆಕೆ ಪ್ರೇತದ ಮಾತು ಕೇಳುತ್ತಿರುವುದಿಲ್ಲ.
ಎಡ್ ಮತ್ತು ಲಾರೆನ್ ಇಬ್ಬರೂ ಆ ಮನೆಯಲ್ಲಿ ಭೂತೋಚ್ಛಾಟನೆ ಮಾಡಬೇಕೆಂದು ನಿರ್ಧರಿಸುತ್ತಾರೆ. ಅದೇ ಸಮಯದಲ್ಲಿ ಆ ಮನೆಯಾಕೆಯ ಮೈಮೇಲೆ ಆ ಮಾಟಗಾತಿಯ ಭೂತ ಬಂದುಬಿಡುತ್ತದೆ. ಎಲ್ಲರ ಮೇಲೂ ಧಾಳಿ ಮಾಡುತ್ತಾ ಮೆರೆದಾಡತೊಡಗುತ್ತದೆ. ಅಲ್ಲದೇ ತನ್ನದೇ ಮಗುವನ್ನು ಕೊಲ್ಲಲು ಹೊರಡುತ್ತಾಳೆ ಮನೆಯಾಕೆ. (ಮೈಮೇಲಿನ ದೆವ್ವದ ಪ್ರೇರಣೆಯಿಂದ)
ಆಗ ಭೂತೋಚ್ಛಾಟನೆ ಮಾಡಲು ಬಂದವರು ಆಕೆಯನ್ನು ಭಾವನಾತ್ಮಕವಾಗಿ ಸೆಳೆದು ಆ ಮಗುವನ್ನು ಕಾಪಾಡುವ ಪ್ರಯತ್ನ ಮಾಡುತ್ತಾರೆ. ಹೇಗೆಂದರೆ…. ಭೂತ ಆ ಮಗುವನ್ನು ಕೊಲ್ಲುವ ಪ್ರೇರಣೆ ಕೊಡುತ್ತಿದ್ದರೂ ತಾಯಿಯಾಗಿ ಆಕೆ ಮಕ್ಕಳ ಜೊತೆ ಕಳೆದ ರಸ ನಿಮಿಷಗಳನ್ನು ನೆನಪಿಸಿ ಆಕೆಯ ಮನಸ್ಸನ್ನು ಮಾತೃಪ್ರೇಮದೆಡೆಗೆ ತಿರುಗಿಸಲು ಶತಪ್ರಯತ್ನ ಮಾಡುತ್ತಾರೆ.
ಅದರಲ್ಲಿ ಅವರು ಯಶಸ್ವಿಯಾಗುತ್ತಾರಾ? ಆ ಮಗು ಬಚಾವಾಗುತ್ತದೆಯಾ? ಆ ಕುಟುಂಬ ಭೂತದ ಕಾಟದಿಂದ ಮುಕ್ತವಾಗುತ್ತದೆಯಾ? ತಿಳಿಯಲು ಸಿನೆಮಾ ನೋಡಬೇಕಿದೆ.
ಕಥೆ ಹೇಳುವುದೇನೂ ಇಲ್ಲ. ಏಕೆಂದರೆ ದೆವ್ವದ ಸಿನೆಮಾ ನಿಂತಿರುವುದೇ ನಿರೂಪಣೆಯ ಮೇಲೆ…. ಆಗಾಗ ಅನಿರೀಕ್ಷಿತವಾಗಿ ಕೇಳಿ ಬರುವ ಭಯಾನಕ ಮ್ಯೂಸಿಕ್ ಮೇಲೆ…. ಮೈ ನಡುಗಿ ಬೆಚ್ಚಿ ಬೆದರುವ ಅನುಭವವನ್ನು ಸಿನೆಮಾ ನೋಡುತ್ತಲೇ ಪಡೆಯಬೇಕಿದೆ.