The mist” English science fiction horror movie

ಮಿಸ್ಟ್ ಎಂದರೆ ಹೊಗೆ‌.. 

ಅದೂ ಎಂತಹಾ ಹೊಗೆ? ಎದುರಿಗಿರುವ ಯಾರೂ ಕಾಣದಂತಹಾ ಹೊಗೆ… ಕೈಯಲ್ಲಿ ಸರಿಸಿ ನೋಡಿದರೂ ಕಾಣದಂತಹಾ ದಟ್ಟ ಹೊಗೆ.. ಅಂತಹ ಪರಿಸ್ಥಿತಿಯಲ್ಲಿ ನಮ್ಮ ನಾಯಕ ತನ್ನ ಎಂಟು ವರ್ಷದ ಮಗನೊಡನೆ ಒಂದು ಸೂಪರ್ ಮಾರ್ಕೆಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುತ್ತಾನೆ. ಅವನಷ್ಟೇ ಅಲ್ಲದೇ ಬಹಳ ಜನ ಆ ಸೂಪರ್ ಮಾರ್ಕೆಟ್ಟಿನಲ್ಲಿ ಇರುತ್ತಾರೆ. ಆ ದೈತ್ಯ ಹೊಗೆ ಕರಗದೇ ಯಾರೂ ಕಟ್ಟಡದಿಂದ ಹೊರಗೆ ಕಾಲಿಡುವಂತಿರುವುದಿಲ್ಲ. ಏಕೆಂದರೆ ಅದು ಬರೀ ಹೊಗೆಯಲ್ಲ….

ಹಾಗಿದ್ದರೆ ಅದೇನು?

ಗೊತ್ತಿಲ್ಲ…. ನಮಗ್ಯಾರಿಗೂ ಗೊತ್ತಾಗೋಲ್ಲ ಅದೇನು ಅಂತ? ಏನು ನಡೀತಾ ಇದೆ ಇಲ್ಲಿ ಅಂತ… ನಾವೂ ಕೂತಲ್ಲೇ ಚಡಪಡಿಸುವುದಷ್ಟೇ ಕೆಲಸ… ಆಗೊಮ್ಮೆ ಈಗೊಮ್ಮೆ ಹರಿದಾಡುವ ರಕ್ಕಸನಂತಹಾ ಪ್ರಾಣಿಯ ಒಂದು ಭಾಗ ತೋರಿಸಿ ಮತ್ತೆ ಮಾಯ ಮಾಡುತ್ತಾರೆ ನಿರ್ದೇಶಕರು. ಅದು ಎಷ್ಟು ಗಾತ್ರ ಇರಬಹುದು ಅಂತ ಊಹಿಸಲೂ ಸಹ ಆಗುವುದಿಲ್ಲ. 

ನಮಗಂತೂ ಅದು ಡೈನೋಸಾರಸ್ಸಿನಷ್ಟು ದೊಡ್ಡದೇನೋ ಎಂಬ ಊಹೆ ಉಂಟಾಗುತ್ತದೆ. ಕೊನೆಯವರೆಗೂ ಆ ಹೊಗೆಯಲ್ಲಿ ಏನು ಅಡಗಿದೆ ಅಂತಲೇ ತೋರಿಸದೇ ನಮ್ಮನ್ನು ನಡುಗಿಸುವ ತಂತ್ರ ನಿರ್ದೇಶಕರದ್ದು. ಅಲ್ಲದೇ ಆ ಕಟ್ಟಡದಿಂದಾಚೆ ಕಾಲಿಟ್ಟವರು ಅಥವಾ ಕಾಲಿಡಲು ಪ್ರಯತ್ನಿಸಿದವರೆಲ್ಲಾ ನಿಗೂಢವಾಗಿ ಸಾವನ್ನಪ್ಪುತ್ತಾರೆ. 

ಒಳಗಿರುವವರು ಭಯದಿಂದಲೇ ಸತ್ತಿರುತ್ತಾರೆ. 

ಇದು ಕೇವಲ ಭಯಾನಕ ಸಿನೆಮಾ ಅಲ್ಲ. ಭಾವನಾತ್ಮಕ ದೃಶ್ಯವೂ ಇದೆ. ಕಟ್ಟಡದೊಳಗೆ ಒಬ್ಬ ತಾಯಿ “ನನ್ನ ಮಕ್ಕಳು ಮನೆಯಲ್ಲಿದ್ದಾರೆ. ಅವರಿಗೇನಾದರೂ ತೊಂದರೆಯಾದರೆ?” ಅಂತ ಮನಕರಗುವಂತೆ ಅಳುತ್ತಿರುತ್ತಾಳೆ. ಅದನ್ನು ಕಂಡ ಮತ್ತೊಬ್ಬ ಹೆಂಗಸು “ಇದುವರೆಗೂ ನನಗೆ ಮಕ್ಕಳಾಗಲಿಲ್ಲ ಅಂತ ಬೇಸರ ಪಟ್ಟುಕೊಳ್ಳುತ್ತಿದ್ದೆ. ಆದರೆ ಇವತ್ತು ನನಗೆ ಮಕ್ಕಳಾಗದೇ ಇರುವುದೇ ಒಳ್ಳೆಯದು ಅನ್ನಿಸುತ್ತಿದೆ” ಎನ್ನುತ್ತಾಳೆ. 

ಇಬ್ಬರದೂ ವಿಭಿನ್ನ ಮನಸ್ಥಿತಿಯ ಸಂಗಮ….

ಕಡೆಗೆ ಆ ತಾಯಿ ತಡೆಯಲಾರದೇ ತನ್ನ ಮಕ್ಕಳನ್ನು ನೋಡಲು ಕಟ್ಟಡದಿಂದಾಚೆ ಓಡಿಯೇ ಬಿಡುತ್ತಾಳೆ. ತಾಯಿ ಕರುಳು ಆಕೆಯನ್ನು ಹೊರಗೆ ಸೆಳೆಯುತ್ತದೆ. ನಂತರ ನಾಯಕ ಒಂದು ಪುಟ್ಟ ತಂಡದೊಡನೆ ಹೊರ ಬರುವ ಪ್ರಯತ್ನ ಮಾಡುತ್ತಾನೆ. ಆದರೆ ಮುಂದೆ ಏನಿದೆ ಅಂತಲೇ ಕಾಣದಷ್ಟು ಹೊಗೆ ತುಂಬಿರುವಾಗ, ಆ ರಾಕ್ಷಸ ಜೀವಿ ಎಲ್ಲಿಂದ ಅಟ್ಯಾಕ್ ಮಾಡುತ್ತದೆ ಅಂತಲೇ ತಿಳಿಯದಿರುವಾಗ ತನ್ನ ಮತ್ತು ಮಗನ ಪ್ರಾಣವನ್ನಲ್ಲದೇ, ತನ್ನನ್ನು ನಂಬಿ ಹೊರಗಡಿಯಿಟ್ಟ ಜನರ ಪ್ರಾಣ ಉಳಿಸುತ್ತಾನೆಯೇ? ಅದರಲ್ಲಿ ಆತ ಯಶಸ್ವಿಯಾಗುತ್ತಾನೆಯೇ? ಆ ಹೊಗೆಯಾಚೆ ಏನಿದೆ ಅಂತ ಕಡೆಗೂ ಗೊತ್ತಾಗುತ್ತದೆಯೇ? ಈ ಎಲ್ಲವನ್ನೂ ಕಡೆವರೆಗೂ ಗುಟ್ಟು ಬಿಟ್ಟು ಕೊಡುವುದಿಲ್ಲ… ಅಲ್ಲದೇ ಕಡೆಗೊಂದು ದೊಡ್ಡ ಆಘಾತ ಕೂಡ ಇದೆ.

ಅದ್ಭುತ ಹಾರರ್ ಸಿನೆಮಾ…. 

ಅಸಹಾಯಕ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಾಗ ಮಾತ್ರವೇ ಮನುಷ್ಯನ ನಿಜವಾದ ವ್ಯಕ್ತಿತ್ವದ ಪರಿಚಯವಾಗುತ್ತದೆ ಅಂತ ಈ ಸಿನೆಮಾ ನೋಡಿ ತಿಳಿಯಬಹುದು. 

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply