ಲೇಖಕರು: ಮೃಣಾಲಿನಿ ಅಗರಖೇಡ್
ಯಾವದೋ ದೇಶದ ಅನಾಹುತಗಳ ಬಗ್ಗೆ ಡೀಟೇಲಾಗಿ ತಿಳ್ಕೊಂಡು ಮರಗುವ ನಮಗೆಲ್ಲ, ಬ್ಲಾಕ್ ಡೇ ಎಂದು ಸ್ಟೇಟಸ್ ಇಡುವ ನಮಗೆ ನಮ್ಮ ದೇಶದಲ್ಲಿ ನಡೆದ ಎಷ್ಟೋ ದುರಂತದ ಸೂಕ್ಷ್ಮ ಚಿತ್ರಣವಿರುವುದೇ ಇಲ್ಲ. ದುರಂತಗಳ ಹಿಂದೆ ಇರುವ ಸೂತ್ರಧಾರಿಗಳು, ಅದರಿಂದ ಅಮಾಯಕರ ಜೀವ ಉಳಿಸಿದ ದೇವಮಾನವರ ಕಥೆ ಗೊತ್ತೆ ಇರಲ್ಲ, ನಮ್ಮ ಮಧ್ಯ ಅವರುಗಳು ತೀರಾ ಸಾಮಾನ್ಯರಂತೆ ಬದುಕುತ್ತಿದ್ದಾರೆ, ಕೆಲವರು ಸತ್ತು ಹೋಗಿದ್ದಾರೆ, ಕೆಲವರು ಊನ ಅಪಂಗರಾಗಿದ್ದಾರೆ.
ಇಂತಹ ಒಂದು ದುರಂತವನ್ನು ಮನ ಛಿದ್ರ ಗೊಳ್ಳುವಂತೆ, ತೋರಿಸಿದೆ The Railway Men ಎಂಬ ನೆಟ್ಟಫ್ಲಿಕ್ಸ್ ವೆಬ್ ಸೀರೀಸ್. ಇದು 1984 ರಲ್ಲಿ ನಡೆದ ಭೋಪಾಲ ಅನಿಲ ದುರಂತದ ಮೇಲೆ ಆಧಾರಿತ ನಾಲ್ಕು ಕಂತಿನ ಧಾರಾವಾಹಿ. ಅನಿಲ ದುರಂತಕ್ಕೂ, ಭಾರತೀಯ ರೈಲ್ವೆ ಇಲಾಖೆಗೂ ಎನು ಸಂಬಂಧ ಎಂದು ಸೀರೀಸ್ ಅನ್ನು ಪೂರ್ತಿಯಾಗ ನೋಡುವವರೆಗೂ ಅರ್ಥವಾಗಲಿಕ್ಕಿಲ್ಲ…
ಕಥೆ ಭೋಪಾಲ ಜಂಕ್ಷನ್ ಸುತ್ತ ಮುತ್ತ ಹಬ್ಬಿದೆ. ಭೋಪಾಲ ಸ್ಟೇಷನ್ ಸಿಬ್ಬಂದಿಯ ಪರಿಶ್ರಮ, ಕರ್ತವ್ಯ ಪ್ರಜ್ಞೆ, ತ್ಯಾಗದಿಂದ 15000 ಜನರ ಪ್ರಾಣ ಹಾನಿ ತಪ್ಪಿತು. ಭೂಪಾಲ್ ನಿವಾಸಿಗಳನ್ನು, ಗೋರ್ಖಪುರ, ದಿಲ್ಲಿ ಮುಂತಾದ ಬೇರೆ ಸ್ಥಳಗಳಿಂದ ಬರುತ್ತಿರುವ ಪ್ರಯಾಣಿಕರ ಜೀವ ಉಳಿಸಿದ ಶ್ರೇಯ ಈ ರೈಲ್ವೆ ಮೆನ್ ಗಳಿಗೆ ಸಂದುತ್ತದೆ.
Union Carbide, ಕೀಟನಾಶಕ ಉತ್ಪಾದಿಸುವ ಕಾರ್ಖಾನೆಯಾಗಿತ್ತು, ಅದರ ಮಾಲೀಕ್ತವ ಪಾಶ್ಚಿಮಾತ್ಯರದಾಗಿತ್ತು, ಈ ದುರಂತ ಘಟಿಸಬಹುದಾದ ಮುನ್ಸೂಚನೆ ಇದ್ದರೂ ಕೂಡ, ಅದನ್ನು ಅಲಕ್ಷಿಸಿ, ಯಾವುದೇ ಸುರಕ್ಷಿತ ಆಕ್ರಮವನ್ನು ಕೈಕೊಳ್ಳದೆ ಭೂಪಾಲ್ ನಗರದ ಮಧ್ಯ ಭಾಗದಲ್ಲಿ ಇದ್ದ ಕಾರ್ಖಾನೆಯ ವಿಷಾನೀಲಸೋರುವಿಕೆಯಿಂದ, ಸುತ್ತಲಿರುವ ಜನವಸತಿಯನ್ನು ತಾಸೆರಡುತಾಸಿನಲ್ಲಿ ತಿಗಣೆಗಳಂತೆ ಸಾಯಿಸಿಬಿಟ್ಟಿತು. ಜನ ಜೀವನ ಅಸ್ತವ್ಯಸ್ತಗೊಂಡಿತು.ಈ ಎಲ್ಲ ಹೃದಯ ವಿದ್ರಾವಕ ಘಟನೆಗಳನ್ನು ಅತ್ಯುತ್ತಮವಾಗಿ ದೃಶ್ಯ ಮಾಧ್ಯಮದಲ್ಲಿ ಹಿಡಿದು ತೋರಿಸಿದ್ದಾರೆ. ಕೊನೆಯವರೆಗೂ ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತದೆ. ಒಂದೇ ದುರಂತ ತೋರಿಸುವಾಗ, ಅದಕ್ಕೆ ಸಂಬಂಧಪಟ್ಟ ಬೇರೆ ಬೇರೆ ಜಾಗಗಳಲ್ಲಿ ಏನೆಲ್ಲಾ ನಡೆಯುತ್ತದೆ. ರಾಜಕೀಯ ಅಧಿಕಾರಿಗಳ ಪಾಖಂಡಿತನ , ಕಾರ್ಖಾನೆಯ ಮಾಲೀಕರ ಸ್ವಾರ್ಥ, ಕೆಳ ದರ್ಜೆ ಸಿಬ್ಬಂದಿಗಳ ಮೈಗಳ್ಳತನ, ದಡ್ಡತನ ಎಲ್ಲವೂ ಸೇರಿ ಈ ದುರಂತವನ್ನು ಹೇಗೆ ತೀವ್ರತರ ಪರಿಣಾಮಕ್ಕೆ ತಳ್ಳಿತು ಎಂದು ಎಳೆ ಎಳೆಯಾಗಿ ತೋರಿಸಿದ್ದಾರೆ.
ಬಾಬಿಲ್ ಖಾನ್, ತನ್ನ ತಂದೆ ಇರ್ಫಾನ್ ಖಾನ್ರಂತೆ ಅದ್ಭುತ ನಟ ಎಂದು ಸಾಬೀತು ಪಡೆಸಿದ್ದಾನೆ. ತುಂಬಾ ದಿನದ ಮೇಲೆ ಪರದೆಯ ಮೇಲೆ ಕಾಣಿಸಿಕೊಂಡ ಕ್. ಕೆ ಮೆನನ್ ಕೂಡಾ ತಮ್ಮ ಅಭಿನಯದಿಂದ ನೋಡುಗರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಭೋಪಾಲ ಸ್ಟೇಷನ್ ಮಾಸ್ಟರ್ ಆಗಿ ಅಸಹಾಯಕ ಕ್ಷಣಗಳಲ್ಲಿಯೂ, ತನ್ನ ಜೀವವನ್ನು ಒತ್ತೆ ಇಟ್ಟು, ಯಾತ್ರಿಗಳ ಪ್ರಾಣ ಉಳಿಸಲು ಹೋರಾಡುವ ಅಭಿನಯ, ಅವರ ಆಂಗಿಕ ಭಾಷೆ, ಮುಖದ ಭಾವಾಭಿನಯ ತುಂಬಾ ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದಾರೆ.
ಇಂತಹ ಕ್ಲಿಷ್ಟ ಕಥೆ, ಮತ್ತು ಸುತ್ತ ಮುತ್ತ ನಡದೆ ಘಟನೆಗಳನ್ನು ಪೋಣಿಸಿ, ಸ್ವಲ್ಪ ಕೂಡಾ ಬೇಸರ ಬರದ ಹಾಗೆ ಮುಂದೆ ಏನಾಯ್ತು, ಮುಂದೆ ಏನಾಗುತ್ತದೆ ಎಂದು ನೋಡುಗರ ಕಾತುರತೆಯನ್ನು ಹಿಡಿದಿಡುವ ಸ್ಕ್ರೀನ್ ಪ್ಲೇ ಹಾಗು ನಿರ್ದೇಶನಕ್ಕೆ ನನ್ನ ಕಡೆಯಿಂದ ಪೂರ್ಣ ಅಂಕಗಳು.
ಸೀರೀಸ್ ಕ್ಲೈಮಾಕ್ಸ್ ಹಂತಕ್ಕೆ ಬಂದಾಗ ‘ಮಾಧವನ್’ ಎಂಟ್ರಿ ಅಂತು ಕಥೆಗೆ ಇನಷ್ಟು ತೂಕ ತಂದುಕೊಡುತ್ತದೆ. ಮಾಧವನ್ನ ಪಾತ್ರ ಇನ್ನಷ್ಟು ಹೊತ್ತು ಪರದೆಯ ಮೇಲೆ ಇರಬೇಕಿತ್ತು ಎಂದಿನಿಸಿತು.
ಮಂದಿರಾ ಬೇಡಿಗೆ ತುಂಬಾನೇ ಕಿರಿದಾದ ಪಾತ್ರ ಕೊಟ್ಟಿದ್ದಾರೆ. ಜೂಹಿ ಚಾವ್ಲಾ ತಮ್ಮ ನೈಜ ನಟನೆಯಿಂದ ಪುಟ್ಟದಾದ ಅತಿಥಿಪಾತ್ರದಲ್ಲಿ ಮಿಂಚಿದ್ದಾರೆ.
ಪೊಲೀಸ್ ಪೇದೆ ಉರ್ಫ್ ಕಳ್ಳನ ಪಾತ್ರದಲ್ಲಿ ‘ದಿವ್ಯೆಂದು ಶರ್ಮ’ ತಮ್ಮ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಿದ್ದಾರೆ.
ಕೊನೆಗೆ, ದುರಂತದ ನಿಜವಾದ ಫೋಟೋಗಳು , ವ್ಯಕ್ತಿಗಳು, ಅವರುಗಳ ಈಗಿನ ಸ್ಥಿತಿ, ಮಾಹಿತಿ ಒದಗಿಸಿ, ಇನ್ನಷ್ಟು ರಿಯಲಿಸ್ಟಿಕ್ ಟಚ್ ಕೊಟ್ಟಿದ್ದಾರೆ. ಈ ನಾಲ್ಕು ಗಂಟೆಗಳ ಸೀರೀಸ್ ಭೋಪಾಲದ ಆ ಒಂದು ರಾತ್ರಿ ಯಾರದೋ ತಪ್ಪಿಗೆ ಏನೆಲ್ಲಾ ಅವಘಡ ಘಟಿಸಿತು ಎಂಬ ಅವ್ಯಕ್ತ ಭಯ ಮನದಲ್ಲಿ ಮೂಡಿಸುತ್ತದೆ. ಇದು ಮಕ್ಕಳು ಸಹಿತ ಎಲ್ಲ ವಯೋಮಾನದವರು ನೋಡಲೇಬೇಕಾದ ಸೀರೀಸ್.
ಮೃಣಾಲಿನಿ ❤❤