“Thiruttu payale 2” (ತಮಿಳು)

ಆನ್ಲೈನ್ ಮೋಹ ಮತ್ತು ಸ್ನೇಹ ಎಷ್ಟಿರಬೇಕೋ ಅಷ್ಟಿದ್ದರೆ ಚಂದ ಅಂತ ತಿಳಿಸುವ ಸಿನೆಮಾ ಇದು. ಸಾಮಾಜಿಕ‌ ಜಾಲತಾಣದಲ್ಲಿ ಸಿಗುವ ಎಲ್ಲರೂ ನಮಗೆ ಅಪರಿಚಿತರೇ. ಅಂಥವರ ಬಳಿ ಮಾತನಾಡುವಾಗ ಎಷ್ಟು ಹುಷಾರಾಗಿದ್ದರೂ ಸಾಲದು. ಆದರೆ ಅಲ್ಲಿ ಸಿಕ್ಕ ಸ್ನೇಹಿತನೊಬ್ಬನ ಬಳಿ ಸಲುಗೆಯಿಂದ ಮಾತನಾಡಿದ ಕಾರಣಕ್ಕೆ ಆತನ ಜಾಲಕ್ಕೆ ಸಿಕ್ಕು ನರಳುವ ಹೆಣ್ಮಗಳ ಕಥೆ ಇದು.

ನಾಯಕಿಗೆ ಸದಾ ಫೇಸ್‌ಬುಕ್‌ ಚಿಂತೆ.

ಫೇಸ್ಬುಕ್ಕಿನಲ್ಲಿ ಫೋಟೋ ಅಪ್ಲೋಡ್ ಮಾಡುವುದು, ಎಷ್ಟು ಲೈಕ್ಸ್ ಬಂದಿದೆ ಅಂತ ಎಣಿಸುವುದು ಇದೇ ಕೆಲಸ ಅವಳಿಗೆ. ತನ್ನ ಫೋಟೋಗೆ ಬರುವ ಕಾಮೆಂಟ್ಸ್ ಓದಿ ಖುಷಿ ಪಡುತ್ತಿರುತ್ತಾಳೆ. ಯಾಕೋ ಇವಳ ಫೇಸ್‌ಬುಕ್‌ ಹುಚ್ಚು ಸ್ವಲ್ಪ ಜಾಸ್ತಿಯೇ ಆಯ್ತು ಅಂದುಕೊಳ್ಳುವಷ್ಟರಲ್ಲಿ ಅವನೊಬ್ಬ ಸಿಕ್ತಾನೆ.. ಸ್ನೇಹಿತ!!!

ಅವನು ಯಾರು? ಎಲ್ಲಿಯವನು? ಏನು ಕೆಲಸ? ಉಹುಂ ನಾಯಕಿಗೆ ಅದ್ಯಾವುದೂ ಗೊತ್ತಿಲ್ಲ. ತನ್ನ ಗಂಡ ತನ್ನಲ್ಲಿ ಗಮನಿಸದ ವ್ಯಕ್ತಿತ್ವ ಮತ್ತು ಚೆಲುವು, ಹವ್ಯಾಸಗಳನ್ನು ಅವನ್ಯಾರೋ ಗುರುತಿಸಿದ ಅನ್ನುವ ಕಾರಣಕ್ಕೆ ಆ ಅಪರಿಚಿತನ ಸ್ನೇಹ ಮುಂದುವರೆಸುತ್ತಾಳೆ.

ಆತ ಆಕೆಯ ಉಳಿದ ಫೇಸ್‌ಬುಕ್‌ ಪೋಸ್ಟುಗಳನ್ನು ಅಧ್ಯಯನ ಮಾಡಿ ಆಕೆಗೆ ಏನಿಷ್ಟ, ಏನಿಷ್ಟವಿಲ್ಲ ಎಂಬುದನ್ನು ತಿಳಿದುಕೊಂಡು ಆಕೆಗೆ ಇಷ್ಟವಾಗುವಂತೆ ನಡೆದುಕೊಳ್ಳುತ್ತಿರುತ್ತಾನೆ. ಅರೆ‌…!! ಮದುವೆಯಾಗಿರುವ ಒಬ್ಬ ಗೃಹಿಣಿಗೆ ಇಷ್ಟವಾಗುವ ಹಾಗೆ ಅವನ್ಯಾರೋ ಅಪರಿಚಿತ ಯಾಕೆ ನಡ್ಕೊಳ್ತಾ ಇದ್ದಾನೆ ಅಂತ ಆಶ್ಚರ್ಯವಾಯ್ತಾ? ನಿಮ್ಮ ಊಹೆ ನಿಜ..

ಅವನೊಬ್ಬ ಬ್ಲಾಕ್ ಮೇಯ್ಲರ್!!

ಸಾಮಾಜಿಕ ಜಾಲತಾಣದಲ್ಲಿ ಗೃಹಿಣಿಯರ ಸ್ನೇಹ ಮಾಡಿ, ಅವರುಗಳ ಜೊತೆ ಸ್ನೇಹದ ನೆಪದಲ್ಲಿ ಸಲುಗೆಯಿಂದ ಮಾತನಾಡಿ, ಅವರ ಕುಟುಂಬದ ಗುಟ್ಟುಗಳನ್ನು ತಿಳಿದುಕೊಂಡು, ನಂತರ ಅದೇ ವಿಷಯಕ್ಕೆ ಬ್ಲಾಕ್ಮೇಲ್ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾನೆ. ಅವನಿಗೆ ಇದೇ ಕೆಲಸ!!

ನಾಯಕಿಯೂ ಅವನ ಈ ರೀತಿಯ ಹಲವಾರು ಪ್ರೇಯಸಿಯರಲ್ಲಿ ಒಬ್ಬಳು.

ಆಕೆಯ ಗಂಡನೇ ಪೊಲೀಸ್ ಅಧಿಕಾರಿ. ಆದರೆ ಆ ಅಪರಿಚಿತ ತನಗೆ ಬ್ಲಾಕ್ಮೇಲ್ ಮಾಡುತ್ತಿರವುದನ್ನು ಹೇಳಲಾರಳು‌. ಯಾಕೆಂದರೆ… ಅವನ್ಯಾರೋ ಅಪರಿಚಿತನನ್ನು ನಂಬಿದ್ದು ಅವಳದ್ದೇ ತಪ್ಪು. ಅಲ್ಲದೇ ಆ ಅಪರಿಚಿತ ಒಮ್ಮೆ ಕಳುಹಿಸಿ ಕೊಟ್ಟಿದ್ದ ರೂಮ್ ಫ್ರೆಶನರ್ ಅನ್ನು ಬಾಥ್ರೂಮಿನಲ್ಲಿ ಇಟ್ಟಿದುದರಿಂದ, ಆಕೆ ಸ್ನಾನ ಮಾಡುತ್ತಿರುವ ದೃಶ್ಯ ಸಹ ರೆಕಾರ್ಡ್ ಆಗಿಬಿಟ್ಟಿರುತ್ತದೆ. ಗಂಡನಿಗೆ ಈ ವಿಷಯ ಹೇಳಿ, ಗಂಡ ಆ ಅಪರಿಚಿತನಿಗೆ ಏನಾದರೂ ತೊಂದರೆ ಮಾಡಲು ಹೋದಾಗ ಈ ದೃಶ್ಯ ಹೊರಗೆಲ್ಲಾದರೂ ಲೀಕ್ ಆದರೆ ಎಂಬ ಭಯ ಆಕೆಯನ್ನು ಕಟ್ಟಿ ಹಾಕಿರುತ್ತದೆ.

ಆದರೂ ಪೊಲೀಸ್ ಅಧಿಕಾರಿಯಾದ ಆತನ ಗಂಡನಿಗೆ ಈ ವಿಷಯಗಳೆಲ್ಲ ಗೊತ್ತಿರುತ್ತದೆ. ಅಲ್ಲದೇ ಅಮಾಯಕಿಯಾದ ತನ್ನ ಹೆಂಡತಿ ಹೇಗೆ ಈ‌ ಜಾಲಕ್ಕೆ ಬಿದ್ದಳು ಅಂತಲೂ ಗೊತ್ತಿರುತ್ತದೆ. ಆತ ಹೆಂಡತಿಗೆ ಗೊತ್ತಾಗದಂತೆ ಆ ಅಪರಿಚಿತನನ್ನು ಮುಗಿಸಬೇಕು ಅಂತ ಪ್ಲಾನ್ ಮಾಡುತ್ತಾನೆ.

ಆ ಪ್ಲಾನ್ ಏನು? ಆತ ಯಶಸ್ವಿಯಾದನೇ? ತಿಳಿಯಲು ಸಿನೆಮಾ ನೋಡಬೇಕಿದೆ.

ಹಿಂದಿ ವರ್ಷನ್ “ಡಿಜಿಟಲ್ ಥೀಫ್” ಯೂ ಟ್ಯೂಬಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply