Thumbbad (ಹಿಂದಿ)

(Thumbbad ಎಂಬುದು ಒಂದು ಊರಿನ ಹೆಸರು)

ಹೆಸರು ಮತ್ತು ಪೋಸ್ಟರ್ ನೋಡಿಯೇ ಇದ್ಯಾವುದೋ ಭಯಾನಕ (Horror) ಸಿನೆಮಾ ಅಂತ ಅರ್ಥವಾಗಿತ್ತು. ಈ ಸಿನೆಮಾ ನೋಡಲು ಶುರು ಮಾಡಿದಾಗಲೇ ರಾತ್ರಿ… ಮುಗಿದಾಗ ಮಧ್ಯರಾತ್ರಿ. ಮನಸ್ಸಿನಲ್ಲಿಯೇ ಸಿನೆಮಾ ಅನ್ನು ವಿಮರ್ಶಿಸುತ್ತಾ ಮಲಗಿದವಳಿಗೆ ಎಚ್ಚರವಾದದ್ದು ಬೆಳಗಿನ ಝಾವ. ಎದ್ದ ಕೂಡಲೇ ಅನ್ನಿಸಿದ್ದು ‘ನಾನು ಸಿನೆಮಾ ನೋಡಿದೆನೋ? ಅಥವಾ ಕನಸು ಕಂಡೆನೋ?’ ಅಂತ.

ನಿಜಕ್ಕೂ ಕನಸಿನಂತೆಯೇ ಇದೆ ಸಿನೆಮಾ.

ಯಾರಾದರೂ ಊಹೆ ಸಹ ಮಾಡಿರಲಿಕ್ಕಿಲ್ಲ ಈ ರೀತಿ ಆಗಬಹುದು ಅಂತ. ಥೇಟ್ ನಮ್ಮ ಕನಸಿನ ಹಾಗೆಯೇ ಸಿನೆಮಾದಲ್ಲಿಯೂ ಫ್ಯಾಂಟಸಿ ನಡೆಯುತ್ತದೆ. “ಕನಸು” ಅಂತಲೇ ಯಾಕೆ ಹೇಳಿದೆ ಎಂದರೆ, ನಾವು ನಮ್ಮ ಕನಸಿನಲ್ಲಿ ಏನು ನಡೆದರೂ ನಂಬುತ್ತೇವೆ. ಇಲ್ಲೂ ಹಾಗೆಯೇ…. ಯೋಚನೆಗೆ ಆಸ್ಪದವೇ ಇಲ್ಲ.. ಘಟನೆಗಳು ಸುಮ್ಮನೆ ನಡೆಯುತ್ತಾ ಹೋಗುತ್ತವೆ… ನಾವು ‘ಮುಂದೇನು?’ ಎಂಬ ಕಾತುರದಲ್ಲಿ ಕಾಯುವುದೊಂದೇ ಮಾರ್ಗ..

ಸಿಂಪಲ್ ಆಗಿ ಹೇಳಬೇಕಂದ್ರೆ ಇದೊಂದು ನಿಧಿಯ ಹುಡುಕಾಟದ ಕಥೆ.

ಶುರುವಿನಲ್ಲಿಯೇ ನಮಗೆ ಈ ಬಗ್ಗೆ ಮಾಹಿತಿ ಸಿಗುತ್ತದೆ. ಜೊತೆಗೆ ಆ ನಿಧಿ ಇನ್ನೂ ಯಾರಿಗೂ ಸಿಕ್ಕಿಲ್ಲ ಅನ್ನುವುದೂ ಸಹ ಗೊತ್ತಾಗುತ್ತದೆ. ಯಾರಿಗೂ ದಕ್ಕಿರದ ಆ ನಿಧಿಯನ್ನು ಕಾಣಲು, ಅದೆಲ್ಲಿದೆ ಅಂತ ತಿಳಿಯಲು ನಾವೂ ಸಹ ಆಸೆ ಪಡುತ್ತೇವಲ್ಲ… ಅಲ್ಲಿ ನಿರ್ದೇಶಕರು ಗೆದ್ದಿದ್ದಾರೆ ❤

ವಿನಾಯಕ… ಈ ಸಿನೆಮಾದ ಕಥಾನಾಯಕ. ತನ್ನ ತಾಯಿ, ಸಹೋದರ ಮತ್ತು ಅಜ್ಜಿಯೊಂದಿಗೆ ವಾಸ ಇರುತ್ತಾನೆ. ಅವರ ಮನೆಯಲ್ಲಿ ಅಜ್ಜಿಯನ್ನು ಒಂದು ರೂಮನಲ್ಲಿ ಕೂಡಿಹಾಕಿರಲಾಗಿರುತ್ತದೆ. ಅವನ ತಾಯಿ ಪ್ರತಿನಿತ್ಯ ಅಜ್ಜಿಗೆ ಊಟ ಕೊಡುತ್ತಿರುತ್ತಾಳೆ. ಹಾಗಾಗಿ ಮಕ್ಕಳಿಗೆ ‘ಅಜ್ಜಿ ನೋಡಲು ಹೇಗಿದ್ದಾಳೆ’ ಅಂತ ಕೂಡ ಗೊತ್ತಿರುವುದಿಲ್ಲ. ಆದರೆ ‘ಅಜ್ಜಿಗೆ ಯಾವುದೋ ಗುಪ್ತ ನಿಧಿಯ ಬಗ್ಗೆ ಗೊತ್ತಿದೆ, ಅದನ್ನು ತಿಳಿದುಕೊಳ್ಳಲು ಅಜ್ಜಿಯನ್ನು ಕೂಡಿ ಹಾಕಲಾಗಿದೆ’ ಅಂತ ಮಾತ್ರ ಗೊತ್ತಿರುತ್ತದೆ.

ಒಮ್ಮೆ ವಿನಾಯಕನ ಸಹೋದರ ಮರದ ಮೇಲಿನಿಂದ ಬಿದ್ದು ಪೆಟ್ಟು ಮಾಡಿಕೊಂಡಾಗ ಅವನಮ್ಮ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲೇಬೇಕಾಗುತ್ತದೆ. ಹಾಗಾಗಿ ಅಜ್ಜಿಗೆ ಅಂದಿನ ಊಟ ಕೊಡುವ ಪಾಳಿ ವಿನಾಯಕನ ಹೆಗಲೇರುತ್ತದೆ. ಮೊಟ್ಟಮೊದಲ ಬಾರಿ ವಿನಾಯಕ ಅಜ್ಜಿಯ ರೂಮಿಗೆ ಹೋಗ್ತಾನೆ. ಆದರೆ ಚಿಲುಕ ತೆಗೆಯಲು ಭಯವಾಗಿ ಸುಮ್ಮನೆ ನಿಂತಿರ್ತಾನೆ. ಅವನಿಗಷ್ಟೇ ಅಲ್ಲ… ನಮಗೂ ಸಣ್ಣದಾಗಿ ಭಯವಾಗುತ್ತಿರುತ್ತದೆಯಲ್ಲ.. ಹಾಗಾಗಿ ನಾವೂ ಸಹ ಚಿಲುಕ ತೆಗೆಯುವುದು ಬೇಡ ಅಂತಲೇ ಅಂದುಕೊಳ್ಳುತ್ತಿರುತ್ತೇವೆ. ಆದರೆ ಒಳಗಿನಿಂದ ಅಜ್ಜಿ ‘ಚಿಲುಕ ತೆಗಿ, ನಿಧಿ ಬಗ್ಗೆ ಹೇಳ್ತೀನಿ’ ಅಂದಾಗ ವಿನಾಯಕಾ ನಿಧಿಯಾಸೆಗೆ ಚಿಲುಕ ತೆಗೆದೇ ಬಿಡ್ತಾನೆ.

ಒಳ ಹೋಗಿ ನೋಡಿದರೆ…….

ಅಬ್ಬ… ಅಂತಹ ವಿಕಾರರೂಪಿಯನ್ನು ನಾವು ಇದುವರೆಗೂ ನೋಡಿರುವುದಿಲ್ಲ. ಆಕೆಯ ಕಣ್ಣು ನೋಡಿದ ಕೂಡಲೇ ಆಕೆ ಮನುಷ್ಯಳಲ್ಲ ಅಂತ ಗೊತ್ತಾಗಿ ಬಿಡುತ್ತದೆ. ಆಕೆಯೋ ಹಾರಿ ಜಿಗಿದು ವಿನಾಯಕನನ್ನೇ ಹಿಡಿದು ತಿನ್ನಲು ಹೊರಡುತ್ತಾಳೆ. ಆಗ ವಿನಾಯಕ ತನ್ನ ತಾಯಿ ಹೇಳಿಕೊಟ್ಟಿದ್ದನ್ನು ಬಡಬಡಿಸುತ್ತಾನೆ.

“ಸೋ ಜಾ ದಾದಿ ಮಾ… ವರ್ನಾ ಹಸ್ತರ್ ಆಜಾಯೇಗಾ… (ಮಲಗು ಅಜ್ಜಿ.. ಇಲ್ಲದಿದ್ದರೆ ಹಸ್ತರ್ ಬರ್ತಾನೆ)…”

ಕೂಡಲೇ ಅಜ್ಜಿ ನಿದ್ದೆ ಮಾಡಲು ತೊಡಗುತ್ತದೆ.

ಯಾರು ಈ ಹಸ್ತರ್….? ಇವನಿಗೆ ಆ ಅಜ್ಜಿ ಅಷ್ಟು ಹೆದರುವುದ್ಯಾಕೆ….? ಅವನ ಹೆಸರು ಹೇಳಿದ ಕೂಡಲೇ ತಿನ್ನುವುದನ್ನೂ ಬಿಟ್ಟು ಅಜ್ಜಿ ದಿಢೀರನೆ ಗೊರಕೆ ಹೊಡೆದಿದ್ಯಾಕೆ….? ಭೂತಗಳನ್ನೂ ಹೆದರಿಸುವ ಹಸ್ತರ್ ಅದ್ಯಾರು ಇರಬಹುದು…?

ಅತ್ತ ವಿನಾಯಕನ ಸಹೋದರ ದಾರಿಮಧ್ಯದಲ್ಲಿ ವೈದ್ಯರ ಬಳಿ ತಲುಪುವ ಮೊದಲೇ ತೀರಿಕೊಂಡಿರುತ್ತಾನೆ. ಅವನ ತಾಯಿ ದುಃಖದಲ್ಲಿ ತುಂಬಡ್ ಬಿಟ್ಟು ವಿನಾಯಕನ ಜೊತೆ ಪುಣೆಗೆ ಹೊರಡುತ್ತಾಳೆ. ಆದರೆ ವಿಧಿಯ ವೈಪರೀತ್ಯ ನೋಡಿ. ಹದಿನಾಲ್ಕು ವರ್ಷದ ಪುಟ್ಟ ಬಾಲಕನಾದ ವಿನಾಯಕನಲ್ಲಿ ನಿಧಿಯಾಸೆ ತುಂಬಿರುತ್ತದೆ. ನಾವ್ಯಾರಾದರೂ ಆಗಿದ್ದರೆ ಆ ಅಜ್ಜಿಯಿಂದ ತಪ್ಪಿಸಿಕೊಂಡಿದ್ದೇ ತಡ ಅಲ್ಲಿಂದ ಪರಾರಿಯಾಗುತ್ತಿದ್ದೆವು. ಮತ್ತೆಂದೂ ಅತ್ತ ಬರುವ ಕನಸೂ ಕಾಣುತ್ತಿರಲಿಲ್ಲ. ಆದರೆ ಆ ಹದಿನಾಲ್ಕರ ಪೋರ ವಿನಾಯಕಾ ತಾಯಿಯ ಬಳಿ ವಾಪಸ್ ಹೋಗಿ ಅಜ್ಜಿಯ ಬಾಯಿ ಬಿಡಿಸಿ ನಿಧಿ ಪಡ್ಕೊಳ್ಳೋಣ ಅಂತ ಹಠ ಮಾಡುತ್ತಾನೆ… ಅವನ ಅತಿಯಾಸೆ ನೋಡಿ ಆತನ ತಾಯಿಗೆ ಗಾಬರಿಯಾಗಿ ಅವನ ಬಳಿ ‘ಮತ್ತೆಂದೂ ತುಂಬಡ್ ಗೆ ಕಾಲಿಡೋಲ್ಲ’ ಅಂತ ಮಾತು ತೆಗೆದುಕೊಳ್ತಾಳೆ.

ಕೊಟ್ಟ ಮಾತಿನಂತೆಯೇ ವಿನಾಯಕ ತನ್ನ ತಾಯಿ ತೀರಿಕೊಳ್ಳುವವರೆಗೂ ತುಂಬಡ್ ಗೆ ಬರುವುದಿಲ್ಲ. ಹದಿನಾರು ವರ್ಷದ ನಂತರ ಬಂದು ನೋಡಿದಾಗ ಆತನ ಅಜ್ಜಿ ಅದೇ ಮನೆಯ ಅದೇ ಕೋಣೆಯಲ್ಲಿ ಇನ್ನೂ ಬದುಕಿರುತ್ತಾಳೆ. ಆಕೆಯ ಮೈ ಒಳಗಿನಿಂದಲೇ ಮರವೂ ಬೆಳೆದುಬಿಟ್ಟಿರುತ್ತದೆ. ಆಕೆಗೆ ಈ ಜೀವನವೇ ಬೇಸರವಾಗಿರುತ್ತದೆ. ಆದರೆ ಆಕೆ ಸಾಯುವಂತಿಲ್ಲ. ಏಕೆಂದರೆ ಶಾಪ… ಆ ನಿಧಿ ಬಯಸಿ ಹೋದವರಿಗೆಲ್ಲಾ ಈ ಶಾಪ ಕಟ್ಟಿಟ್ಟ ಬುತ್ತಿ.

ಆ ಶಾಪ ಏನೆಂದರೆ ಶಾಶ್ವತ ಜೀವ…!!!

ಅಂದರೆ ಅವರು ಸಾಯುವ ಅಗತ್ಯವೇ ಇಲ್ಲದೇ ಸೃಷ್ಟಿಯ ಕೊನೆಯವರೆಗೂ ಬದುಕಿರಬಹುದು. ಆ ಅಜ್ಜಿಯೂ ಹಾಗೆಯೇ ಬದುಕಿರುವುದು. ಅರೆ!! ಇದು ವರ ತಾನೇ? ಶಾಪ ಹೇಗಾಗುತ್ತದೆ ಅಂದ್ರಾ??

ನಿಜ ಹೇಳಬೇಕೆಂದರೆ ಈ ಬದುಕೇ ಒಂದು ಶಾಪ.. ಸಾವೇ ನಮಗಿರುವ ವರ.. ಬದುಕಲಿಕ್ಕಾಗಿ ಏನೇನೆಲ್ಲಾ ಪಾಪ ಮಾಡಬೇಕಾಗಿ ಬರುತ್ತದೆ. ಸಾವು ಅದಕ್ಕೆಲ್ಲ ಒಂದು ಅಂತ್ಯ ಹಾಡುತ್ತದೆ. ಆದರೆ ಸಾವೇ ಇಲ್ಲದಿದ್ದರೆ…. ??? ಬದುಕು ಘನಘೋರವಾಗಿರುತ್ತದೆ.. ಅದಕ್ಕಾಗಿ ತನ್ನ ದೇಹಕ್ಕೆ ಬೆಂಕಿಯಿಟ್ಟು ಮುಕ್ತಿ ನೀಡುವುದಾದರೆ ನಿಧಿಯ ವಿವರ ತಿಳಿಸುವುದಾಗಿ ಹೇಳ್ತಾಳೆ ಅಜ್ಜಿ. ವಿನಾಯಕ ಆಕೆಯಿಂದ ವಿವರ ಪಡೆದು ಆಕೆಗೆ ಬೆಂಕಿಯಿಟ್ಟು ಮುಕ್ತಿ ಕೊಡುತ್ತಾನೆ.

ಈಗ ಮೂಲಕಥೆಗೆ ಬರೋಣ.

ದೇವಿ ಈ ಪ್ರಪಂಚ ಸೃಷ್ಟಿಸಿದ ನಂತರ ತನ್ನ ಹದಿನಾರು ಲಕ್ಷ ಮಕ್ಕಳನ್ನು ಹುಟ್ಟಿಸುತ್ತಾಳೆ. ಅದರಲ್ಲಿ ಮೊದಲನೆಯವನೇ ಹಸ್ತರ್. ಆದರೆ ಅವನು ಭಯಂಕರ ಲೋಭಿ. ಆತ ದೇವಿಯ ಬಳಿಯಿರುವ ಚಿನ್ನವನ್ನೆಲ್ಲಾ ಕದ್ದು ಆಹಾರವನ್ನೂ ಕದಿಯುವಷ್ಟರಲ್ಲಿ ತನ್ನ ಸಹೋದರರಿಂದ ಸಿಕ್ಕಿ ಬೀಳುತ್ತಾನೆ. ಆಗ ದೇವಿ ಅವನನ್ನ ಉಳಿದವರಿಂದ ಕಾಪಾಡಲು ಮತ್ತೆ ತನ್ನ ಗರ್ಭದೊಳಗೇ ಬಚ್ಚಿಟ್ಟುಕೊಳ್ಳುತ್ತಾಳೆ. ಹೀಗೆ ಹಸ್ತರ್ ಕೂಡ ದೇವರಾದರೂ ಅವನ ಲೋಭದಿಂದಾಗಿ ಅವನಿಗೆ ಪೂಜೆ ಇರುವುದಿಲ್ಲ. ದೇವಿಯ ಗರ್ಭದೊಳಗೇ ಶತಶತಮಾನಗಳಿಂದ ಇರುತ್ತಾನೆ. ಆದರೆ ಅವನ ಬಳಿ ಆತ ಕದ್ದ ಚಿನ್ನ ಮಾತ್ರ ಇರುತ್ತದೆ ಹೊರತೂ ಆಹಾರ ಇರುವುದಿಲ್ಲ. ಹಾಗಾಗಿ ಆತ ಭಯಂಕರ ಹಸಿದಿರುತ್ತಾನೆ. ಅವನನ್ನು ಒಲಿಸಿಕೊಳ್ಳಲು ಆತನಿಗೆ ಹಿಟ್ಟಿನ ಗೊಂಬೆ ಮಾಡಿ ಕೊಡಬೇಕಿರುತ್ತದೆ. ಏಕೆಂದರೆ ಹಸಿ ಹಿಟ್ಟು ಮುಟ್ಟಿದರೆ ಆತ ನಾಶವಾಗುವ ಶಾಪ ಇರುತ್ತದೆ.

ವಿನಾಯಕ ಹಿಟ್ಟಿನ ಗೊಂಬೆ ಮಾಡಿಕೊಂಡು ದೇವಿಯ ಗರ್ಭಗುಡಿಗೆ ಪ್ರವೇಶಿಸುತ್ತಾನೆ. ರಕ್ಷಣೆಗಾಗಿ ತನ್ನ ಸುತ್ತಲೂ ಹಸಿಹಿಟ್ಟಿನ ವೃತ್ತ ಮಾಡಿಕೊಂಡು ಗೊಂಬೆ ತೆರೆಯುತ್ತಾನೆ. ಕೂಡಲೇ ವಾಸನೆ ಹಿಡಿದು ಬರುತ್ತದೆ ನೋಡಿ….. ಹಸ್ತರ್!!!!

ನೋಡಿದ ಕೂಡಲೇ ನಮ್ಮ ಮೈ ನಡುಗುತ್ತದೆ.

ಅಂತಹಾ ಭಯಂಕರ ತೋಳದಂತಹಾ ಪ್ರಾಣಿ.. ಬಂದದ್ದೇ ಗೊಂಬೆ ಕಿತ್ತುಕೊಂಡು ತಿನ್ನಲು ತೊಡಗುತ್ತದೆ… ತಡ ಮಾಡುವಂತಿಲ್ಲ. ಅದು ಗೊಂಬೆ ಮುಗಿಸುವಷ್ಟರಲ್ಲಿ ಚಿನ್ನ ಪಡೆಯಬೇಕು… ವಿನಾಯಕಾ ಅದರ ಸೊಂಟಕ್ಕೊಂದು ಪೆಟ್ಟು ಕೊಟ್ಟಾಗ ಚಿನ್ನದ ನಾಣ್ಯಗಳು ಉರುಳುರುಳಿ ಬೀಳುತ್ತವೆ. ಆಹ್!!! ಈ ಕ್ಷಣಕ್ಕಾಗಿಯೇ ನಾವೂ ಕಾದದ್ದು ಅಲ್ಲವೇ?

ಚಿನ್ನ… ಚಿನ್ನ.. ಚಿನ್ನ…

ಉಹುಂ ಕನವರಿಸುವಂತಿಲ್ಲ.. ಮೈ ಮರೆಯುವಂತಿಲ್ಲ… ಸಿಕ್ಕಷ್ಟು ಬಾಚಿಕೊಂಡು ಹೊರಡಬೇಕು.. ಈ ಕ್ಷಣದಲ್ಲಿ ವಿನಾಯಕನಿಗಿಂತಲೂ ನಾವೇ ಲೋಭಿಗಳಾಗಿ ಹೋಗುತ್ತೇವೆ.. ಆತ ಇನ್ನಷ್ಟು ಮತ್ತಷ್ಟು ಚಿನ್ನ ಬಾಚಿಕೊಳ್ಳಲಿ ಅಂತ ಬಯಸುತ್ತೇವೆ.. ಆದರೆ ಆತನೇ ಸಿಕ್ಕಷ್ಟು ಪಡೆದು ಗರ್ಭಗುಡಿಯಿಂದಾಚೆ ಬರುತ್ತಾನೆ..

ಅಲ್ಲಿಂದ ವಿನಾಯಕನ ಹೊಸ ಅಧ್ಯಾಯ ಶುರುವಾಗುತ್ತದೆ. ಹಳೆಯ ಸಾಲ ತೀರಿಸುತ್ತಾನೆ. ದುಡ್ಡು-ಕಾಸು ಮಾಡಿಕೊಳ್ಳುತ್ತಾನೆ. ಐಷಾರಾಮಿ ಜೀವನ ನಡೆಸತೊಡಗುತ್ತಾನೆ. ಇದು ಅವನ ಸ್ನೇಹಿತ ರಘುವಿನ ಕಣ್ಣು ಕುಕ್ಕುತ್ತದೆ. ರಘು ಒಮ್ಮೆ ಗುಟ್ಟಾಗಿ ವಿನಾಯಕನನ್ನು ಹಿಂಬಾಲಿಸಿ ಆತ ನಿಧಿ ಪಡೆಯುವುದನ್ನು ನೋಡಿ, ತಾನೂ ಅದೇ ರೀತಿ ಪಡೆಯಲು ಹೋಗಿ, ವಿನಾಯಕನಷ್ಟು ಚತುರತೆ ಅವನಲ್ಲಿ ಇಲ್ಲದ ಕಾರಣ ಹಸ್ತರ್ ಕೈಯಲ್ಲಿ ಸಿಕ್ಕಿಹಾಕಿಕೊಂಡು ಶಾಶ್ವತ ಜೀವದ ವರ/ಶಾಪ ಪಡೆಯುತ್ತಾನೆ. ಇದು ಗೊತ್ತಾಗಿ ವಿನಾಯಕ ಅವನಿಗೆ ಬೆಂಕಿ ನೀಡಿ ಮುಕ್ತಿ ಕಲ್ಪಿಸುತ್ತಾನೆ.

ಇದು ಹೀಗೇ ಮುಂದುವರೆಯುತ್ತಿರುತ್ತದೆ.

ಆದರೆ ವಯಸ್ಸಾದಂತೆ ವಿನಾಯಕನಿಗೆ ಚಿಂತೆ ಶುರುವಾಗುತ್ತದೆ. ಅದಕ್ಕಾಗಿ ತನ್ನ ಮಗ ಪಾಂಡುರಂಗನಿಗೆ ಈ ವಿದ್ಯೆ ಕಲಿಸಲು ನಿರ್ಣಯಿಸುತ್ತಾನೆ. ಮೊದಲ ಬಾರಿ ಮಗನನ್ನು ಕರೆದೊಯ್ಯುವಾಗ ಮಗನಿಗಿಂತಲೂ ನಾವೇ ಹೆದರಿರುತ್ತೇವೆ. ಆದರೆ ಪಾಂಡುರಂಗ ಹಸ್ತರ್ ಅನ್ನು ನೋಡಿ ಕನಿಷ್ಟ ಬೆಚ್ಚುವುದೂ ಇಲ್ಲ. ಬದಲಿಗೆ ಒಂದು ಹಿಟ್ಟಿನ ಗೊಂಬೆ ಕೊಟ್ಟಾಗ ಅದು ತಿನ್ನುವ ಸಮಯದಲ್ಲಿ ಕೆಲವೇ ನಾಣ್ಯ ಬಾಚಿಕೊಳ್ಳಬೇಕು, ಬದಲಿಗೆ ಹತ್ತಾರು ಗೊಂಬೆ ಮಾಡಿಕೊಟ್ಟರೆ ಅದು ತಿನ್ನುತ್ತಿರುವಾಗ ಬಹಳಷ್ಟು ನಾಣ್ಯ ಬಾಚಿಕೊಳ್ಳಬಹುದು ಅಂತ ತಂದೆಗೇ ಸಲಹೆ ಕೊಡುತ್ತಾನೆ.

ವಿನಾಯಕನಿಗೂ ಇದು ಸರಿ ಎನಿಸುತ್ತದೆ.

ಇಬ್ಬರೂ ಸೇರಿ ಹತ್ತಾರು ಗೊಂಬೆ ಮಾಡಿಕೊಂಡು ಗರ್ಭಗುಡಿಯೊಳಗೆ ಇಳಿಯುತ್ತಾರೆ. ಮೊದಲಿಗೆ ವಿನಾಯಕ ಒಂದೊಂದು ಕೈಯಲ್ಲಿ ಒಂದೊಂದು ಗೊಂಬೆ ಹಿಡಿದು ಹಸ್ತರಿಗಾಗಿ ಎದುರು ನೋಡುತ್ತಾನೆ. ಹಸ್ತರ್ ಬರುತ್ತದೆ. ಹತ್ತಿರ ಬಂದಾಗ ಗೊತ್ತಾಗುತ್ತದೆ….. ಅದು ಎರಡಿವೆ!!!!

ಅಂದರೆ ಒಂದೊಂದು ಗೊಂಬೆಗೆ ಒಂದೊಂದು ಹಸ್ತರ್!!!!!!

ಮರುಕ್ಷಣವೇ ಸುತ್ತಲೂ ಹತ್ತಾರು ಹಸ್ತರ್ ಗಳು ಪ್ರತ್ಯಕ್ಷವಾಗುತ್ತವೆ. ದುರಾಸೆಯ ಫಲ ಯಾವಾಗಲೂ ಕಹಿಯಾಗಿಯೇ ಇರುತ್ತದಲ್ಲವೇ…? ಈಗವರಿಗೆ ಚಿನ್ನಕ್ಕಿಂತಲೂ ಪ್ರಾಣ ಉಳಿಸಿಕೊಳ್ಳುವುದೇ ಮುಖ್ಯವಾಗುತ್ತದೆ.‌ ಗರ್ಭಗುಡಿಯೊಳಗೆ ಮಗನೊಂದಿಗೆ ಬಂಧಿಯಾದ ವಿನಾಯಕ ಉಳಿದನೇ….? ಮಗನನ್ನು ಕಾಪಾಡಿದನೇ….? ಅಥವಾ ಮಗನ ಯೋಜನೆಯಂತೆ ಅತಿ ಹೆಚ್ಚು ಚಿನ್ನ ಬಾಚಿದನೇ…?

ಇದಕ್ಕೆ ಉತ್ತರವೇ ಕ್ಲೈಮ್ಯಾಕ್ಸ್…

ಮೊದಲಿಗೆ ಅಯ್ಯೋ ಹಳೇಕಥೆ, ಇದನ್ನೇನು ನೋಡುವುದು ಅಂತನ್ನಿಸಿದರೂ ಸ್ವಲ್ಪ ತಾಳ್ಮೆಯಿಂದ ಇದ್ದರೆ ಕಥೆಯೇ ನಮ್ಮನ್ನು ಒಳಗೆಳೆದುಕೊಳ್ಳುವುದು. ಇದು ಮಾನವನ ದುರಾಸೆಯ ಕಥೆ ಆದುದರಿಂದ ದೇಶ-ಭಾಷೆಯ ಹಂಗಿಲ್ಲದೆ ನೋಡಬಹುದಾಗಿದೆ. ನಿಜ ಹೇಳಬೇಕೆಂದರೆ ಇಲ್ಲಿ ಪಿಶಾಚಿಗಳು ಭಯ ಹುಟ್ಟಿಸುವುದಕ್ಕಿಂತಲೂ ಮಾನವನ ದುರಾಸೆ ಭಯ ಹುಟ್ಟಿಸುವುದೇ ಹೆಚ್ಚು. ನಮ್ಮ ಮನಸ್ಸಿನ ದುರಾಸೆಯೇ ಹಸ್ತರ್ ಎಂದು ಅರಿತಾಗ ಅತಿಯಾಸೆ ಪಡದೇ ಬದುಕಲು ಸಾಧ್ಯ ಆಗುವುದು.

ಹೇಗಂತೀರಾ?

ಹಸ್ತರ್ ತಾಯಿಯ ಬಳಿ ಚಿನ್ನವನ್ನೇನೋ ಕದಿಯಿತು.‌ ಆದರೆ ಜೀವನಪರ್ಯಂತ ಹಸಿದುಕೊಂಡೇ ಇರಬೇಕಾಯ್ತು. ಅದು ದೇವರಾದ್ದರಿಂದ ಮರಣವೂ ಇಲ್ಲ ಅದಕ್ಕೆ. ಆದರೆ ಹಸಿವಿಗೆ ಬದಲಾಗಿ ಅದು ಚಿನ್ನ ವಾಪಸ್ಸು ಕೊಡಲಿಲ್ಲ. ಚಿನ್ನದ ಮೋಹದಿಂದ ಹಸಿದುಕೊಂಡಿರುವ ಹಸ್ತರಿಗೆ ಚಿನ್ನವೇ ಒಂದು ಶಾಪ ಅಂತಲೂ ಅರಿವಾಗಲಿಲ್ಲ. ತನ್ನ ಬಳಿ ಚಿನ್ನದ ಖಜಾನೆಯೇ ಇದ್ದರೂ ಹೊಟ್ಟೆಗಿಲ್ಲದೇ ನರಳುವಂತಾಯ್ತು.

ನಿಧಿಯಾಸೆ ಪಡುವ ಮನುಷ್ಯರಿಗೆ ಏನೋ ಹೇಳಿದಂತಾಯ್ತು ಅಂದ್ರಾ….?

ಹೌದು….

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply