ಮನುಷ್ಯ ಭೂಮಿಯ ಮೇಲೆ ಹುಟ್ಟುವುದೇ ಸಾಯುವುದಕ್ಕಾಗಿ. ಆದರೆ ಸಾಯುವ ಮೊದಲಿನ ತನ್ನ ಜೀವನಕ್ಕಾಗಿ ಬಹಳಷ್ಟು ಹೋರಾಟ ಮಾಡುತ್ತಾನೆ. ಕಣ್ಣೆದುರಿಗೆ ಸಾವಿನ ನರ್ತನವನ್ನೇ ಕಂಡರೂ, ತಾನು ಮಾತ್ರ ಬದುಕುತ್ತೇನೆ ಎಂಬ ಆಶಾಭಾವದಿಂದ ಇರುತ್ತಾನೆ. ಆ ಹೋರಾಟ ಯಾವ ಮಟ್ಟದಲ್ಲಿರುತ್ತದೆ ಅಂತ ತಿಳಿಯಬೇಕೆಂದರೆ ಈ ಸಿನೆಮಾ ನೋಡಬೇಕು.
ಸುತ್ತಲೂ ರಾಶಿ-ರಾಶಿ ಹೆಣಗಳು….!!!
ಹೆಣಗಳು..? ಅವು ಸತ್ತರೂ ಸಾಯುತ್ತಿಲ್ಲ. ಆದರೂ ಸತ್ತಿವೆ.. ಆದರೂ ಸಹ ಓಡಾಡುತ್ತಿವೆ.. ಓಹ್ ಗಾಡ್!! ನಾನೇನು ಹೇಳ್ತಾ ಇದ್ದೀನಿ ಅಂತ ಅರ್ಥ ಆಗಲಿಲ್ವಾ? ಸಿನೆಮಾ ನೋಡಿದರೆ ಅರ್ಥವಾಗುತ್ತದೆ. ಏಕೆಂದರೆ ಇದು ಹಾರರ್ ಸಿನೆಮಾ.
ಹಾರರ್ ಎಂದರೆ ದೆವ್ವ ಅಲ್ಲ.. ಆದರೆ ಹೆದರಿಸಿ, ಬೆಚ್ಚಿ ಬೀಳಿಸುವುದರಲ್ಲಿ ಯಾವ ದೆವ್ವದ ಸಿನೆಮಾಗೂ ಕಡಿಮೆಯಿಲ್ಲ. ಸಿನೆಮಾ ನೋಡುತ್ತಾ ನೋಡುತ್ತಾ ಸೀಟಿನ ತುದಿಗೆ ಬಂದು ಬೀಳುವುದೊಂದು ಬಾಕಿ… ಅಷ್ಟು ಕಾತುರತೆ, ಗಾಬರಿ ಹುಟ್ಟಿಸುತ್ತದೆ ಈ ಸಿನೆಮಾ.
ಅವರು ಯಾರೋ ನಮಗೆ ಗೊತ್ತಿಲ್ಲ. ನಮ್ಮ ದೇಶದವರೂ ಅಲ್ಲ. ಆದರೂ ಅವರೆಲ್ಲರೂ ಪ್ರಾಣದಿಂದ ಉಳಿಯಲಿ ದೇವರೇ ಅಂತ ನಾವೂ ಬೇಡಿಕೊಳ್ಳುವಂತಾಗುತ್ತದೆ. ಆದರೆ ಅವರು ಉಳಿಯುವುದು ನಿರ್ದೇಶಕರಿಗೆ ಇಷ್ಟವಿಲ್ಲವಲ್ಲ. ಹಾಗಾಗಿ ನಮ್ಮ ಪ್ರಾರ್ಥನೆ ದೇವರವರೆಗೂ ತಲುಪುವುದೇ ಇಲ್ಲ.
ಅದೆಲ್ಲಾ ಸರಿ…
ಯಾರು ಯಾಕೆ ಸಾಯ್ತಿದ್ದಾರೆ… ಯಾರೋ ಯಾಕೆ ಬದುಕಬೇಕು… ಅಂತ ಕನ್ಫ್ಯೂಸ್ ಆಯ್ತಾ?
ದೇಶದಲ್ಲಿ ದಿಢೀರನೆ ಒಂದು ಭಯಾನಕ ಘಟನೆ ನಡೆಯಲು ಶುರುವಾಗುತ್ತದೆ. ಮೈಯೆಲ್ಲಾ ಗಾಯವಾಗಿರುವ, ವಿಚಿತ್ರ ವರ್ತನೆಯ, ಗಾಜಿನ ಕಣ್ಣುಗಳುಳ್ಳ ಮನುಷ್ಯರು ಮತ್ತೊಬ್ಬರಿಗೆ ಕಚ್ಚಿದ ಕೂಡಲೇ ಅವರೂ ಆ ಭಯಾನಕ ರೂಪವಾಗಿ ಮಾರ್ಪಾಡಾಗುತ್ತಿರುತ್ತಾರೆ. ಕೇವಲ ಹತ್ತಾರು ಸೆಕೆಂಡುಗಳಲ್ಲಿ ಈ ಮಾರ್ಪಾಡು ಆಗುತ್ತಿರುತ್ತದೆ. ನಂತರ ಹಾಗೆ ಮಾರ್ಪಾಟಾದವರು ಉಳಿದವರನ್ನು ಕಚ್ಚಲು ಶುರು ಮಾಡುತ್ತಾರೆ.
ಅವರುಗಳು ಯಾಕೆ ಹಾಗಿದ್ದಾರೆ? ಅವರು ಕಚ್ಚಿದರೆ ಕಚ್ಚಿಸಿಕೊಂಡವರು ಯಾಕೆ ಅದೇ ಥರ ಆಗುತ್ತಾರೆ? ಊಹೂಂ… ಯಾರಿಗೂ ಗೊತ್ತಿಲ್ಲ. ಆದರೆ ಇದನ್ನೆಲ್ಲಾ ನೋಡುತ್ತಿರುವ ಜನರ ಮನಸ್ಸಿನಲ್ಲಿ ಇರುವುದೊಂದೇ… ಹೇಗಾದರೂ ಇವರಿಂದ ತಾನು ತಪ್ಪಿಸಿಕೊಳ್ಳಬೇಕು…
ಹೀಗೆ ತಪ್ಪಿಸಿಕೊಳ್ಳಬೇಕಾದ ಈ ಜನರ ನಡುವೆ ವಾತ್ಸಲ್ಯಮಯಿ ತಂದೆ ಇದ್ದಾನೆ, ಏನೂ ಅರಿಯದ ಪುಟಾಣಿ ಮಗುವಿದೆ, ಗರ್ಭಿಣಿ ಹೆಂಗಸಿದ್ದಾಳೆ, ಎಲ್ಲರಿಗೂ ಸಹಾಯ ಮಾಡುವ ಆಕೆಯ ಗಂಡನಿದ್ದಾನೆ, ಸ್ನೇಹಿತರ ಗುಂಪಿದೆ. ಹಾಗೆಯೇ ತನಗೆ ಸಹಾಯ ಮಾಡಲು ಬಂದವರನ್ನೇ ಮೃತ್ಯುಕೂಪಕ್ಕೆ ತಳ್ಳುವ ಸ್ವಾರ್ಥಿಯೂ ಸಹ ಇದ್ದಾನೆ…
ಇವರೆಲ್ಲಾ ಬಚಾವಾದರೇ….??
ಸಿನೆಮಾ ನೋಡಿಯೇ ತಿಳಿಯಬೇಕು. ಕ್ಷಣಕ್ಷಣಕ್ಕೂ ಟೆನ್ಷನ್ ಏರುತ್ತಾ ಕೊನೆಗೆ ಉಸಿರಾಡುವುದನ್ನೇ ಮರೆತು ನೋಡುತ್ತಿರುತ್ತೇವೆ…. ಅಂತಹಾ ಬಿಗಿ ನಿರೂಪಣೆ ಇದೆ. ಇಂತಹಾ ಸಬ್ಜೆಕ್ಟ್ ಅನ್ನು ಎಲ್ಲಿಯೂ ಬೋರ್ ಆಗದಂತೆ ನಿರೂಪಿಸಿದ್ದಕ್ಕಾಗಿ ನಿರ್ದೇಶಕರಿಗೆ ಹ್ಯಾಟ್ಸಾಫ್. ಹಿಂದಿ ವರ್ಷನ್ ಅಮೆಜಾನ್ ಪ್ರೈಮಿನಲ್ಲಿದೆ.
ಮತ್ತೇಕೆ ತಡ… ಹತ್ತಿಬಿಡಿ ಟ್ರೈನ್ ಟು ಬೂಸಾನ್..