ಯಾರೋ ದೊಡ್ಡ ದೊಡ್ಡ ನಟರಿಲ್ಲ ಇಲ್ಲಿ. ಆದರೆ ಇವರುಗಳನ್ನು ಎಲ್ಲೋ ನೋಡಿದ್ದೀನಲ್ಲ ಅನ್ನುವ ಗುಂಗು ಕಾಡುತ್ತದೆ. ಹೆಚ್ಚು ಕಡಿಮೆ ಎಲ್ಲರೂ ಸೀನಿಯರ್ ಸಿಟಿಜನ್ಸ್… ‘ಓ ಇವರು ನಮ್ ಕಾಲದವರು..’ ಅಂತ ಆತ್ಮೀಯತೆ ಮೂಡುತ್ತದೆ. ಈಗಿನ ಕಾಲದವರ ಮೇಲೆ ಪ್ರೀತಿ ಮೂಡುತ್ತದೆ. ಉಳಿದವರ ಮೇಲೆ ಕರುಣೆ….
ಯಾಕೆಂದರೆ ಇದು ಕೋವಿಡ್-19 ಕುರಿತಾದದ್ದು.
ದೇಶದಲ್ಲಿ ಮೊದಲಿಗೆ ಲಾಕ್ಡೌನ್ ಮಾಡಲಾಯ್ತು. ಆಗ ಎಲ್ಲರೂ ಮನೆ ಸೇರಿಕೊಂಡೆವು. ಹೊರ ಜಗತ್ತನ್ನು ಸಂಪೂರ್ಣ ಬಂದ್ ಮಾಡಿಕೊಂಡು ಬಿಲವಾಸಿಗಳಾದೆವು. ಆಗ ನಮ್ಮ ಕಷ್ಟವೇ ನಮಗೆ ದೊಡ್ಡದು ಎನಿಸುತ್ತಿತ್ತು.
ಆದರೆ ವಿವಿಧ ಸ್ತರದ, ವಿವಿಧ ವಯೋಮಾನದ, ವಿವಿಧ ಮನೋಭಾವದ ಜನರು ಈ ಲಾಕ್ಡೌನ್ ಇಂದಾಗಿ ಏನೇನು ಕಷ್ಟ ಅನುಭವಿಸಿದ್ದಾರೆ ಅಂತ ನಮಗೆ ಗೊತ್ತಾಗಲಿಲ್ಲ. ಏಕೆಂದರೆ ನಾವು ನಮ್ಮ ನಮ್ಮ ಮನೆಯಲ್ಲಿ ಇದ್ದೆವಲ್ಲ.
ಈ ಸಿನೆಮಾ ಅವೆಲ್ಲವನ್ನೂ ಕಟ್ಟಿಕೊಡುತ್ತದೆ.
ಐದು ಬೇರೆ ಬೇರೆ ಕಥೆಗಳಿವೆ ಇದರಲ್ಲಿ. ಐದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ಒಂದೊಂದು ಕಥೆಯೂ ಕೊರೋನಾದ ಭಯಾನಕ ಇತಿಹಾಸ ಹೇಳುತ್ತದೆ. ಮನುಕುಲದ ಮೇಲೆ ಅದರ ಪರಿಣಾಮ ಹೇಳುತ್ತದೆ.
ದುಡ್ಡು ಇರುವವರದ್ದು ಒಂದು ಗೋಳಾದರೆ, ದುಡ್ಡು ಇಲ್ಲದವರದ್ದು ಮತ್ತೊಂದು. ಏನೂ ಇಲ್ಲದವರು ಬದುಕಿಗಾಗಿ ಹೋರಾಟ ಮಾಡಿದರೆ, ಎಲ್ಲಾ ಇದ್ದವರು ಆತ್ಮಹತ್ಯೆಗೆ ಪ್ರಯತ್ನ ಪಡುತ್ತಾರೆ. ಕೆಲವರು ಇರುವುದರಲ್ಲಿಯೇ ಖುಷಿ ಕಾಣುತ್ತಾರೆ. ತಮಗೇ ಇಲ್ಲದಿದ್ದರೂ ಮತ್ತೊಬ್ಬರಿಗೆ ಹಂಚಿ ಖುಷಿ ಕಾಣುತ್ತಾರೆ. ಕಷ್ಟ ಎಂದರೆ ಏನು ಅಂತ ಬಡವ-ಶ್ರೀಮಂತ ಬೇಧವಿಲ್ಲದೇ ಈ ಕೊರೋನಾ ಅರ್ಥ ಮಾಡಿಸಿದೆ.
ಎಲ್ಲವನ್ನೂ ತೋರಿಸಲು ಆಗದಿದ್ದರೂ ಆಯ್ದ ಐದು ಬವಣೆಯನ್ನು ತೆರೆಯ ಮೇಲೆ ತಂದಿದ್ದಾರೆ. ಮೊದಲನೆಯದು ಅಲ್ಟ್ರಾಟೆಕ್ ಯುಗ. ಆದರೂ ಅಲ್ಲಿನ ಜನ ಕೊರೋನಾಗೆ ಹೆದರುವುದು ನೋಡಿದರೆ ನಾವೇ ವಾಸಿ ಎನಿಸಿ ನಗು ಬರುತ್ತದೆ. ನಂತರದ ಕತೆಗಳು ನಮ್ಮಂಥಹ ಮಧ್ಯಮ ವರ್ಗದವು. ಹಾಗಾಗಿ ಬಹಳ ಬೇಗ ಮನಸ್ಸಿಗೆ ತಟ್ಟುತ್ತದೆ.
ಸಂಭಾಷಣೆ ಹೇಗೆ ಬರೆಯಬೇಕು ಎಂದು ಇದರಲ್ಲಿ ಅಧ್ಯಯನ ನಡೆಸಬಹುದು. ಅಷ್ಟು ಸೊಗಸಾಗಿದೆ. ಒಂದೂ ಅನಾವಶ್ಯಕ ಮಾತಿಲ್ಲದ ಹಾಗೆ ಅದ್ಭುತವಾದ ಸಂಭಾಷಣೆ ಹೆಣೆಯಲಾಗಿದೆ. ನಿರ್ದೇಶಕರು ಹೇಳಿಕೊಟ್ಟರೋ ಅಥವಾ ನಟರೇ ಹಾಗೆ ನಟಿಸಿದರೋ..ಪರ್ಫಾಮೆನ್ಸ್ ಸಹ ಅತ್ಯುತ್ತಮವಾಗಿದೆ.
ಅಮೆಜಾನ್ ಪ್ರೈಮಿನಲ್ಲಿದೆ. ಆಸಕ್ತರು ನೋಡಬಹುದು.