“Ustad hotel” (ಮಲಯಾಳಂ)

ಈ ಸಿನೆಮಾದ ಪ್ರಕಾರವೇ ಹೇಳಬೇಕೆಂದರೆ….

“ಹೇಗೆ ಅಡುಗೆ ಮಾಡುವುದು ಅಂತ ತಿಳಿಯುವುದಕ್ಕೆ ಈ ಸಿನೆಮಾ ನೋಡಬೇಕಿಲ್ಲ. ಯಾರಿಗಾಗಿ ಅಡುಗೆ ಮಾಡಬೇಕು ಎಂದು ತಿಳಿಯಲು ಈ ಸಿನೆಮಾ ನೋಡಲೇಬೇಕು”

ಸಿನೆಮಾ ಮುಗಿಯುವಷ್ಟರಲ್ಲಿ ನಮ್ಮಲ್ಲಿಯೂ ಒಂದು ಪಶ್ಚಾತ್ತಾಪದ ಅಲೆ ಎದ್ದಿರುತ್ತದೆ. ಕಣ್ಣಂಚು ಒದ್ದೆಯಾಗಿರುತ್ತದೆ. ಒಂದೆರೆಡು ಹನಿ ಕಣ್ಣೀರು ಜಾರಿರುತ್ತದೆ. ಹೃದಯ ಭಾರವಾಗಿರುತ್ತದೆ… ನಾಯಕನ ಜೊತೆ ನಾವೂ ಸಹ ಯಾರಿಗಾಗಿ ಅಡುಗೆ ಮಾಡಬೇಕು ಅಂತ ಕಲಿಯುತ್ತೇವೆ‌.

ಅಷ್ಟರಮಟ್ಟಿಗೆ ಈ ಸಿನೆಮಾ ಗೆದ್ದಿದೆ.

ಇಡೀ ಸಿನೆಮಾದಲ್ಲಿ ನಮ್ಮನ್ನು ಆಕರ್ಷಿಸುವುದು ನಾಯಕನಲ್ಲ, ನಾಯಕಿಯೂ ಅಲ್ಲ. ಬದಲಿಗೆ ನಾಯಕನ ತಾತ ಕರೀಂ ಅವರು. ಅವರ ಆಕ್ಟಿಂಗಿಗೆ ಫಿದಾ ಆಗಲೇಬೇಕು. ಮಂದ ಚಲನೆಯ ತಾಳ್ಮೆಯೇ ಮೈವೆತ್ತಂತಿರುವ ಕರೀಂ ಚಾಚಾ, ಪಾತ್ರದೊಳಗೆ ಆವರಿಸಿರುವ ಪರಿ ನನಗಂತೂ ಇಷ್ಟವಾಯ್ತು.

‘ಉಸ್ತಾದ್ ಹೋಟೆಲ್’ ಅಡುಗೆಯವರ ಕಥೆ.

ಅಪ್ಪನಿಗೆ ಫೈವ್ ಸ್ಟಾರ್ ಹೋಟೆಲ್ ಮಾಡುವ ಆಸೆಯಾದರೆ, ಮಗನಿಗೆ ಅಡುಗೆಯವನಾಗುವ ಆಸೆ. ಇಬ್ಬರ ಆಸೆಗಳೂ ವಿರುದ್ಧವಾದ ಕಾರಣ ಅಪ್ಪ-ಮಗ ದೂರವಾಗುತ್ತಾರೆ. ಆದರೆ ಯಾವ ಕೆಲಸವೂ ಕೀಳಲ್ಲ. ಫೈವ್ ಸ್ಟಾರ್ ಹೋಟೆಲ್ ಓನರ್ ಆಗಬೇಕಾದವನು ಅಡುಗೆಯವನಾದ ಮಾತ್ರಕ್ಕೆ ಅವನ ಗೌರವಕ್ಕೆ ಕುಂದು ಬರುವುದಿಲ್ಲ. ಏಕೆಂದರೆ… ಎಲ್ಲ ಕೆಲಸಕ್ಕೂ ತನ್ನದೇ ಆದ ವೃತ್ತಿಗೌರವ ಇದ್ದೇ ಇರುತ್ತದೆ.

ಅಲ್ಲದೇ… ಮನಸ್ಸು ಬಯಸಿದ ಕೆಲಸ ಮಾಡುವುದರಲ್ಲಿನ ಖುಷಿ ಯಾವುದೋ ಭ್ರಮೆಯ ಹಿಂದೆ ಬಿದ್ದಾಗ ಇರುವುದಿಲ್ಲ. ಯಾರದ್ದೋ ಇಷ್ಟದಂತೆ ನಾವು ನಮ್ಮತನವನ್ನು ಕೊಂದುಕೊಂಡು, ಅವರು ಹೇಳಿದಂತೆ ಕೇಳಿದಾಗ ದುಡ್ಡು, ಆಸ್ತಿ, ಸಮಾಜದಲ್ಲಿ ಸ್ಟೇಟಸ್ ಎಲ್ಲವೂ ಸಿಗಬಹುದು. ಆದರೆ ಆತ್ಮತೃಪ್ತಿ ಇರುವುದಿಲ್ಲ.

ಹಾಗಾಗಿ ನಾಯಕ ಅಪ್ಪನ ಮಾತಿನಂತೆ ನಡೆಯದೇ ತನ್ನ ಹೃದಯ ತೋರಿಸಿದ ದಾರಿಯಲ್ಲಿ ನಡೆಯುತ್ತಾನೆ. ಅದರಲ್ಲಿ ಯಶಸ್ವಿಯೂ ಆಗುತ್ತಾನೆ. ಆ ನಡುವೆಯೇ ಅವನಿಗೆ ಸಣ್ಣ ಜ್ಞಾನೋದಯವೂ ಆಗುತ್ತದೆ. ಆ ಜ್ಞಾನೋದಯ ನಮಗೂ ಆಗುತ್ತದೆ ಅನ್ನುವುದು ವಿಶೇಷ.

ಆಹಾರವನ್ನು ಬೇಜವಾಬ್ದಾರಿಯಿಂದ ಚೆಲ್ಲುವವರು ಈ ಸಿನೆಮಾ ನೋಡಿದ ಮೇಲೆ ಸಣ್ಣ ಮಟ್ಟದ ಬದಲಾವಣೆ ಉಂಟಾದರೆ ಸಿನೆಮಾ ಗೆದ್ದಂತೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply