ಭರತ ಭೂಮಿ ಕಂಡಂತಹ ಸರ್ವ ಶ್ರೇಷ್ಠ ಕಲಾ ಯೋಗಿಯಾದ “ಅಭಿನವ ಭಾರ್ಗವ ಡಾ. ವಿಷ್ಣುವರ್ಧನ” ರವರ ಕಲಾ ಸಾಧನೆಯ ಕೀರ್ತಿ ಮತ್ತು ಸೇವೆಯ ಸಾರ್ಥಕತೆಯನ್ನ ಕಂಡು ಇಡೀ ಕನ್ನಡ ಕುಲವೇ ಮೊದಲಿಗೆ ಕೈ ತಟ್ಟಿದ್ದು, ನಂತರ ಆದೇ ಕೈಗಳನ್ನ ಜೋಡಿಸಿ ಪ್ರಣಾಮಗಳನ್ನ ಅರ್ಪಿಸಿದ್ದಾರೆ. ದೈಹಿಕವಾಗಿ ನಮ್ಮನ್ನು ಅಗಲಿ ದಶಕವೇ ಕಳೆದಿದ್ದರೂ, ನಮ್ಮೆಲ್ಲರ ಹೃನ್ಮನಗಳಲ್ಲಿ ದಾದಾ ಇಂದಿಗೂ ಎಂದೆಂದಿಗೂ ಚಿರಸ್ಥಾಯಿ. ನಮ್ಮ ಆಭಿಮಾನದ ಸಾಮ್ರಾಜ್ಯಕ್ಕೆ ಅವರೇ ಸಾಮ್ರಾಟ, ಹೃದಯ ಸಿಂಹಾಸನದ ಏಕಚಕ್ರಾದೀಶ.
ಕೋಟ್ಯಾಂತರ ಮನಸ್ಸುಗಳಿಗೆ ಮಾನಸ ಗುರುವಾಗಿ,ಹೆಣ್ತನದ ಪಾವನತ್ವ, ಸಮಾಜದ ಆರೋಗ್ಯ ಮತ್ತು ಹಿತಾಸಕ್ತಿಯನ್ನ ಸದಾ ಎತ್ತಿ ಹಿಡಿಯುವಂತ ಪಾತ್ರದ ರುವಾರಿಯನ್ನ ವೃತ್ತಿ ಹಾಗೂ ವಯ್ಯಕ್ತಿಕ ಬದುಕಿನಲ್ಲಿ ನಿಷ್ಠೆಯಿಂದ ಪಾಲಿಸಿದ್ದರು.
ಅಂತಹ ಮಹನೀಯನ ಗುಣಧಾಮವ ಕಂಡು ಯಾರು ತಾನೇ ಶರಣು ಶರಣಾರ್ಥಿ ಎನ್ನದಿರುವರು? ಅವರನ್ನು ಪ್ರೀತಿಸುವ ಅಭಿಮಾನಿಗಳು ಕ್ರಮೇಣ ಭಕ್ತರಾದರು, ಇದು ವ್ಯಕ್ತಿ ಪೂಜೆಯಲ್ಲ- ವ್ಯಕ್ತಿತ್ವದ ಆರಾಧನೆ… ಅದು ಕೆಲವರಿಗೆ 50 ಅಡಿ ಕಟ್ ಔಟ್ಟಿಗೆ ಹಾರ ಹಾಕುವ ರೂಪದಲ್ಲಿ, ಇನ್ನು ಕೆಲವರಿಗೆ ಮೈ- ಕೈ ಮೇಲೆ ದಾದಾ ಹೆಸರು ಅಥವಾ ಭಾವಚಿತ್ರವನ್ನ ಹಚ್ಚೇ ಹಾಕಿಸಿಕೊಳ್ಳುವದು ಒಂದು ಬಗೆಯಾದ್ರೆ, ಸರ್ಕಾರ ಮತ್ತು ನಗರಪಾಲಿಕೆಯ ಅನುಮತಿ ಪಡೆದು ಮುಖ್ಯ ರಸ್ತೆ, ರಾಜ ಬೀದಿಗಳಲ್ಲಿ ಪುತ್ಥಳಿಗಳನ್ನ(ಪ್ರಮುಖವಾಗಿ ಕಂಚಿನ ಶಿಲೆ) ಸ್ಥಾಪಿಸುವುದು.
ನೆಚ್ಚಿನ ಕಲಾವಿದನಿಗೆ ಪರದೆಯ ಮೇಲೆ ಯಾರಾದರೂ ಸ್ವಲ್ಪ ಗಟ್ಟಿಯಾಗಿ ಗದರಿದರೆ ಅದನ್ನು ಸಹಿಸದ ಅಭಿಮಾನಿಗಳು; ಇನ್ನೇನಾದರೂ ಅವರ ಅಭಿಮಾನಕ್ಕೆ ಅಥವಾ ಆರಾಧ್ಯ ದೇವರಿಗೆ ಕುಂದು ತರುವ ಹೇಯ ಕೃತ್ಯ ಮಾಡಿದರೆ ಸುಮ್ಮನೆ ಬಿಡುವರೆ?
ಬೆಂಗಳೂರಿನ ವಿಜಯನಗರದ ಟೋಲ್ ಗೇಟಿನ ಬಳಿ ವರ್ಷದ ಕೆಳಗೆ ಸ್ಥಾಪಿಸಲ್ಪಟ್ಟಿದ್ದ ದಾದಾ ಅವರ ಪುತ್ಥಳಿಯನ್ನ ಕೆಲವು ದುಷ್ಕರ್ಮಿಗಳು, ಶುಕ್ರವಾರದ ಅರ್ಧ ರಾತ್ರಿಯಂದು ಅಕ್ರಮವಾಗಿ ಕಳಚಿಕೊಂಡು ಕದ್ದೊಯ್ಯುವುದರ ಜೊತೆಗೆ ಆ ಜಾಗವನ್ನ ಸಹ ಧ್ವಂಸ ಮಾಡಿದ್ದಾರೆ. ಈಗಾಗಲೇ ಕೇಳಿಬಂದಂತೆ ಇದರ ಸುತ್ತ ಕೆಲವು ದೊಡ್ಡ ರಾಜಕಾರಣಿಗಳ ಪಿತೂರಿ ಅಡಗಿದೆ, ಕೆಲವು ಅಸೂಯೆ ಭರಿತ ಕೊಳಚೆ ಮನಸ್ಸುಗಳ ಹುನ್ನಾರವೂ ಇದೆ.
ಅದೇನೇ ಆಗಲಿ ಡಾ. ವಿಷ್ಣುವರ್ಧನ್ ಅಭಿಮಾನಿಗಳು ಒಂದು ರೀತಿಯಲ್ಲಿ ಅಕ್ಷರಶಃ ಸೇನಾನಿಗಳೇ, ಯಾವುದಕ್ಕೂ “ಕುಗ್ಗದ ಹಿಗ್ಗದ ಜಗ ಜಟ್ಟಿ ಮಲ್ಲರು”. ಒಗ್ಗಟ್ಟಿಗೆ ಮತ್ತೊಂದು ಹೆಸರು. ಭಾವಶಿಲ್ಪಯ ಶಿಲೆಯನ್ನ ಅಪಹರಿಸಿದ ಕೈಗಳಿಗಿಂತ, ಅಪಹರಿಸಲು ಕುಮ್ಮಕ್ಕು ಕೊಟ್ಟ ಕೊರಳಿಗೆ ತಕ್ಕ ಪ್ರತ್ಯುತ್ತರ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕೆಂಬ ಸಿದ್ದಾಂತವನ್ನ ಪಾಲಿಸಿದ್ದಾರೆ.
“ವಿಷ್ಣು ಸೇನಾ ಸಮಿತಿಯ” ಅಧ್ಯಕ್ಷರು ಮತ್ತು ಅಸಂಖ್ಯಾತ ಸೇನಾನಿಗಳು(ಸದಸ್ಯರು) ಶ್ರೀ ನಿರ್ಮಲಾನಂದ ಸ್ವಾಮಿಜಿ ಅವರನ್ನ ಹಾಗೂ ಸಚಿವ ಶ್ರೀ ಸೋಮಣ್ಣನವರನ್ನು ಭೇಟಿ ಮಾಡಿ, ಅಗತ್ಯ ನಿರ್ಣಯಗಳನ್ನ ತೆಗೆದುಕೊಂಡು ಈ ರಗಳೆಗೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಇಂದು ಸೋಮವಾರ ಬೆಳಗ್ಗಿನ ಶುಭ ಮುಹೂರ್ತದಲ್ಲಿ ಮತ್ತದೇ ಸ್ಥಳದಲ್ಲಿ ವಿಷ್ಣುವರ್ಧನ ಅವರ ಪುತ್ಥಳಿಯೊಂದನ್ನ ಸ್ಥಾಪಿಸಲು ನಿಶ್ಚಯಿಸಿದ್ದು, ಅದರ ಶಂಖು ಸ್ಥಾಪನೆ ಕಾರ್ಯಕ್ರಮ ಜರುಗಲಿದೆ. ಇದರ ನಡುವೆ ಸ್ಯಾಂಡಲ್ವುಡ್ ನ ಎಲ್ಲಾ ಸ್ಟಾರ್ ನಟರು,ಗಣ್ಯರು ಈ ಘಟನೆಯನ್ನ ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಬಿದ್ದಲ್ಲೇ ಎದ್ದು ಗೆದ್ದು ನಡೆವೆ ಎಂಬ ವಿಷ್ಣುವರ್ಧನ್ ಅವರ ಗುಣವನ್ನ ಅವರ ಅಭಿಮಾನಿಗಳು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
We seport you sir 🙏