50 ವರ್ಷಗಳ ಹಿಂದಿನ ಚಿತ್ರ. ಪಂಢರಿಬಾಯಿ ಅಶ್ವತ್ಥ್ ಅವರ ಪುತ್ರ ಶ್ರೀಧರ್. ಶ್ರೀಧರನನ್ನು ಸತ್ತು ಹುಟ್ಟಿದ ಮಗುವಿನ ತಾಯಿ ರಾಜಮ್ಮನಿಗೆ ಅವಳಿಗೆ ತಿಳಿಯದಂತೆ ಒಪ್ಪಿಸುತ್ತಾಳೆ ಪಂಢರಿಬಾಯಿ. ರಾಜಮ್ಮನ ಪತಿ ಪಂತುಲು ಈ ವಿಷಯವನ್ನು ಗುಟ್ಟಾಗಿ ಇಟ್ಟಿರುತ್ತಾನೆ.
ಅಶ್ವತ್ಥ್‍ಗೆ ಪಂಢರಿಬಾಯಿ ಬದುಕಿರುವ ವಿಷಯ ತಿಳಿಯದು. ಆತನ ತಂಗಿಯ ಮಕ್ಕಳು ಭಾರತಿ, ನರಸಿಂಹರಾಜು.
ದಿನೇಶ್ ಮತ್ತು ಶ್ರೀಧರ ಹಾಸ್ಟೆಲ್ ಮೇಟ್ಸ್. ಶ್ರೀಧರನೊಂದಿಗೆ ಜಗಳವಾಡುತ್ತಾ ಆಡುತ್ತಾ ಪ್ರೀತಿಸುತ್ತಾಳೆ ಭಾರತಿ. ದಿನೇಶ್ ಕೂಡ ಭಾರತಿಯನ್ನು ಮದುವೆಯಾಗಲಿಚ್ಛಿಸುತ್ತಾನೆ.
ಶ್ರೀಧರ ತಾನೂ ತಂದೆ ಪಂತುಲುವಿನಂತೆ ನಾಟಕದ ನಟನಾಗಲು ಬಯಸುತ್ತಾನೆ. ತಂದೆಯನ್ನು ಶ್ರೀರಾಮನಂತೆ ಎಂದುಕೊಂಡವನಿಗೆ ಪಂಢರೀಬಾಯಿ ಮತ್ತು ತಂದೆಯ ಬಗೆಗಿನ ಮಾತುಗಳು, ಮರೆಯಿಂದ ತಾನು ಕೇಳಿದ ಸಂಭಾಷಣೆಗಳು ತಂದೆ ಶ್ರೀರಾಮ ಅಲ್ಲ, ರಾಜಮ್ಮನಿಗೆ ಮೋಸ ಮಾಡುತ್ತಿದ್ದಾನೆ ಎನಿಸುತ್ತದೆ. ಪಂಢರೀಬಾಯಿಯನ್ನು ಮನೆ ಬಿಟ್ಟು ಹೋಗುವಂತೆ ಮಾಡುತ್ತಾನೆ. ಆಕೆ ದಿನೇಶ್‍ನ ಕಾರಿಗೆ ಸಿಕ್ಕಿಕೊಂಡಾಗ ಪಂಢರಿಬಾಯಿ ಶ್ರೀಧರನ ತಾಯಿ ಎಂದು ಕದ್ದು ತಿಳಿದುಕೊಂಡ ದಿನೇಶ ಆಕೆಯನ್ನು ಮುಚ್ಚಿಡುತ್ತಾನೆ. ಅವನ ಬಾಯಿ ಬಿಡಿಸಲು ಭಾರತಿ ಅವನೆದುರಿಗೆ ಡ್ಯಾನ್ಸ್ ಮಾಡುತ್ತಾಳೆ. ಕೊನೆಗೆ ಎಲ್ಲವೂ ಶುಭಂ.
ಬಾಲಮುರುಳಿಕೃಷ್ಣ ಹಾಡಿದ ದಾಸರ ಧರ್ಮವೆ ಜಯವೆಂಬ ದಿವ್ಯ ಮಂತ್ರ, ಶ್ರೀಧರ (ರಾಜ್‍ಕುಮಾರ್) ಭಾರತಿಯನ್ನು ರೇಗಿಸುತ್ತಾ ಕನ್ನಡ, ತೆಲುಗು, ಇಂಗ್ಲಿಷ್, ಹಿಂದಿಯಲ್ಲಿ ಹಾಡುವ ನಿನ ಕಂಡು ನಾ ಬಂದೆ ನನ್ಮೇಲೆ ಕೋಪವೆ ಕೋಮಲಾಂಗಿ, ರಾಜ್ ಭಾರತಿ ಡ್ಯೂಯೆಟ್ ಬಂಗಾರವಾಗಲಿ, ಮೈನಾವತಿ-ನರಸಿಂಹರಾಜು ಯುಗಳ ಗೀತೆ ರಾತ್ರಿಯಲಿ ಮಳೆ ಬಂದು ನಿನ್ನ ನೆನಪಾ, ಭಾರತಿ ದಿನೇಶನ ಮುಂದೆ ನಿನ್ನ ಲಗ್ನಪತ್ರಿಕೆ ನನ್ನ ಕೂಗಿ ಕರೆದಿದೆ ಇವು ಹಾಡುಗಳು.
ದುಷ್ಯಂತ ಶಕುಂತಲೆಯರ ಒಂದು ನಾಟಕದ ಹಾಡು ಇದೆ. ರಾಜ್ ಮತ್ತು ಪಂತುಲು ಅವರ ಅರ್ಜುನ ಬಬ್ರುವಾಹನ ಸಂಭಾಷಣೆಯ ನಾಟಕದ ದೃಶ್ಯವಿದೆ. ರೋಮಿಯೋ ಜ್ಯೂಲಿಯೆಟ್ ಪಾತ್ರಗಳಲ್ಲಿ ರಾಜ್ ಭಾರತಿ ಶೇಕ್ಸ್‍ಪಿಯರ್‍ನ ಇಂಗ್ಲಿಷ್ ಡಯಲಾಗ್ಸ್ ಹೇಳುತ್ತಾರೆ.
ಸುಮಾರು 171 ನಿಮಿಷಗಳ ಚಿತ್ರ. ಫೈಟಿಂಗ್ಸ್, ಸಾಂಗ್ಸ್, ಸೆಂಟಿಮೆಂಟ್ಸ್ ಎಲ್ಲವೂ ಇದೆ. ಭಾರತಿ ನೋಡಲು ಸೊಗಸು. ರಾಜ್ ಎಂದಿನ ಲೀಲಾಜಾಲ ಅಭಿನಯ. ತನ್ನ ತಂದೆಯಿಂದ ಆತನ ಗೆಳತಿಯನ್ನು ದೂರ ಓಡಿಸುವ ದೃಶ್ಯದಲ್ಲಿ ಅಮೋಘ ನಟನೆ. ನಂತರದ ಪಶ್ಚಾತ್ತಾಪ ಕೂಡ ಚಂದ.