ಗೊತ್ತಿದ್ದೂ ಮಾಡುವುದು ತಪ್ಪೋ ಅಥವಾ ಗೊತ್ತಿಲ್ಲದೇ ಮಾಡುವುದು ತಪ್ಪೋ? ಈ ಪ್ರಶ್ನೆ ಯಾಕೆಂದರೆ ಅಹಲ್ಯೆ ಗೊತ್ತಿಲ್ಲದೇ ಮಾಡಿದ ತಪ್ಪಿಗಾಗಿ ಗೌತಮ ಮಹರ್ಷಿಗಳು ಆಕೆಗೆ ಕಲ್ಲಾಗುವ ಶಾಪ ಕೊಟ್ಟರು. ಅದೇ ತಪ್ಪು ಮಾಡಿದ್ದ ಇಂದ್ರನಿಗೆ ಮಾತ್ರ ಯಾವ ಶಾಪವೂ ಇಲ್ಲ. ಇದ್ಯಾಕೆ ಹೀಗೆ? ಇಂದ್ರನಿಗೂ ಶಿಕ್ಷೆ ಆಗಬೇಕಿತ್ತಲ್ವಾ? ನಿಜ ಹೇಳಬೇಕೆಂದರೆ ಮುಗ್ಧೆ ಅಹಲ್ಯೆಗೆ ಮೋಸ ಮಾಡಿದ್ದಕ್ಕಾಗಿ ಇಂದ್ರ ಕಲ್ಲಾಗಬೇಕಿತ್ತು. ಆದರೆ ಅಹಲ್ಯೆ ಕಲ್ಲಾದಳು. ಇದಕ್ಕೆ ಕಲಿಯುಗದಲ್ಲಾದರೂ ನ್ಯಾಯ ದೊರೆಯುವುದೇ?
ಶಾರ್ಟ್ ಮೂವಿ ಕಥೆ ಹೀಗಿದೆ.
ಅರ್ಜುನ್ ಎಂಬ ವ್ಯಕ್ತಿ ಕಾಣೆಯಾಗಿರುವ ಸಂಬಂಧವಾಗಿ, ವಿಚಾರಣೆಗೆಂದು ಪೊಲೀಸ್ ಆಫೀಸರ್ ಇಂದ್ರನು ವಯೋವೃದ್ಧ ಕಲಾವಿದನಾದ ಗೌತಮ್ ಸಾಧುರವರ ಮನೆಗೆ ಬರುತ್ತಾನೆ. ಅಲ್ಲಿ ಗೌತಮ್ ಸಾಧುರವರ ಪ್ರಾಯದ ಹೆಂಡತಿ ಅಹಲ್ಯಾ ಪೊಲೀಸನನ್ನು ಸ್ವಾಗತಿಸುತ್ತಾಳೆ.
ಹೆಸರುಗಳನ್ನು ಗಮನಿಸಿ.
ವಯಸ್ಸಾದ ಗಂಡನ ಹೆಸರು ಗೌತಮ ಹಾಗೂ ವಿಚಾರಣೆಗೆ ಬಂದ ಅಧಿಕಾರಿ ಇಂದ್ರ. ಗೌತಮನ ಪ್ರಾಯದ ಹೆಂಡತಿಯ ಹೆಸರು ಅಹಲ್ಯಾ…. !!! ಮೇಲೆ ಹೇಳಿದ ಪೌರಾಣಿಕ ಕಥಾವಸ್ತುವಿಂತೆ ಇದೆಯಲ್ವಾ..?? ಹೌದು… ಇದೂ ಅದೇ ಥರ.
ಪೊಲೀಸ್ ಇಂದ್ರನಿಗೆ ಅಲ್ಲೊಂದು ವಿಶೇಷ ಕಾಣುತ್ತದೆ. ಏನೆಂದರೆ…. ಆ ಮನೆಯಲ್ಲಿ ನಿಜವಾದ ಮನುಷ್ಯರನ್ನು ಹೋಲುವಂತಹ ಗೊಂಬೆಗಳು ಕಾಣಸಿಗುತ್ತವೆ. ಒಂದು ಗೊಂಬೆ ಅಂತೂ ಈಗ ಕಳೆದುಹೋಗಿರುವ ಅರ್ಜುನನನ್ನೇ ಹೋಲುತ್ತಿರುತ್ತದೆ.
ಅಷ್ಟರಲ್ಲಿ ಅಹಲ್ಯೆ ಟೀ ತರುತ್ತಾಳೆ. ಗಂಡ ಮತ್ತು ಪೊಲೀಸ್ ಆಫೀಸರೊಂದಿಗೆ ಟೀ ಕುಡಿಯುತ್ತಾ ಇಂದ್ರನ ಬಳಿ ಸಲುಗೆಯಿಂದ ವರ್ತಿಸುತ್ತಾಳೆ. ನಂತರ ಮಹಡಿ ಹತ್ತಿ ತನ್ನ ರೂಮಿಗೆ ಹೊರಟು ಹೋಗುತ್ತಾಳೆ. ಆದರೆ ಅವಳ ಮೊಬೈಲ್ ಫೋನ್ ಇಲ್ಲಿಯೇ ಬಿಟ್ಟು ಹೋಗಿರುತ್ತಾಳೆ.
ಇತ್ತ ಪೊಲೀಸ್ ಅಧಿಕಾರಿ ಇಂದ್ರ ಕಾಣೆಯಾಗಿರುವ ಅರ್ಜುನನ ಬಗ್ಗೆ ವಿಚಾರಿಸಲಾಗಿ, ಗೌತಮ್ ಸಾಧು ಬೇರೆಯದೇ ಒಂದು ಗುಟ್ಟಿನ ವಿಷಯ ಹೇಳತೊಡಗುತ್ತಾನೆ. ಏನೆಂದರೆ ಗೌತಮನ ಬಳಿ ಒಂದು ಮ್ಯಾಜಿಕ್ ಕಲ್ಲಿದೆ. ಅದನ್ನು ಹಿಡಿದುಕೊಂಡು ಯಾರ ರೂಪವನ್ನು ಬೇಕಾದರೂ ಧರಿಸಬಹುದು, ಈ ವಿಷಯ ಅರ್ಜುನನಿಗೆ ಗೊತ್ತಾಗಿತ್ತು ಅಂತ ಹೇಳುತ್ತಾನೆ ಗೌತಮ.
ಪೊಲೀಸ್ ಅಧಿಕಾರಿ ಈ ಚಮತ್ಕಾರವನ್ನು ನಂಬೋಲ್ಲ.
ಅಷ್ಟರಲ್ಲಿ ಮೇಲಿನಿಂದ ಅಹಲ್ಯೆ ತನ್ನ ಮೊಬೈಲ್ ತಂದುಕೊಡಲು ಗಂಡನಲ್ಲಿ ಕೂಗಿ ಕರೆಯುತ್ತಾಳೆ. ಗೌತಮ್ ಸಾಧು ಆ ಕಲ್ಲನ್ನು ಇಂದ್ರನಿಗೆ ಕೊಟ್ಟು, ತನ್ನ ವೇಷ ಧರಿಸಿ ಅಹಲ್ಯೆ ಬಳಿ ಹೋಗಲು ಹೇಳುತ್ತಾನೆ.
ಏನದ್ಭುತ…. ಇಂದ್ರ ಗೌತಮರಂತೆಯೇ ಬದಲಾಗಿರುತ್ತಾನೆ. ಇಂದ್ರ ಮೊಬೈಲ್ ತೆಗೆದುಕೊಂಡು ಹೋದಾಗ ಅಹಲ್ಯೆ ಆತನನ್ನು ತನ್ನ ಗಂಡ ಅಂತಲೇ ತಿಳಿಯುತ್ತಾಳೆ. ಇಂದ್ರನ ಬಾಹ್ಯಶರೀರ ಮಾತ್ರ ಬದಲಾದದ್ದು. ಅಂತರಂಗ ಇಂದ್ರನದ್ದೇ ಅಲ್ಲವೇ? ಆತ ನೋಡಲು ಗೌತಮರಂತಿದ್ದರೂ, ಇಂದ್ರನಿಗೆ ಅಹಲ್ಯೆಯ ಮೇಲೆ ಯಾವುದೂ ಹಕ್ಕಿಲ್ಲ ಅಲ್ಲವೇ?
ಊಹೂಂ… ನೈತಿಕತೆಯನ್ನು ಗಾಳಿಗೆ ತೂರಿ ಇಂದ್ರ ಗೌತಮರಂತೆಯೇ ಅಹಲ್ಯೆಯ ಜೊತೆ ನಡೆದುಕೊಳ್ಳುತ್ತಾನೆ. ಕೂಡಲೇ ದೃಶ್ಯ ಬದಲಾಗಿ ಇಂದ್ರ ಒಂದು ಚಿಕ್ಕ ಜಾಗದಲ್ಲಿ ಇರುತ್ತಾನೆ. ಆತ ಎಷ್ಟು ಕೂಗಿದರೂ ಯಾರಿಗೂ ಕೇಳಿಸುತ್ತ ಇರೋಲ್ಲ..
ಅತ್ತ ಗೌತಮ ಸಾಧುವಿನ ಮನೆಯ ಷೋ ಕೇಸೊನಲ್ಲಿ ಇದೀಗ ತಾನೇ ಬಂದಿದ್ದ ಇಂದ್ರ ಎಂಬ ಪೊಲೀಸ್ ಅಧಿಕಾರಿಯನ್ನು ಹೋಲುವ ಹೊಸದೊಂದು ಗೊಂಬೆ ಬಂದು ಕುಳಿತಿರುತ್ತದೆ.
ಏನಿದು ಗೊಂಬೆಯ ಮಿಸ್ಟರಿ?
ತಿಳಿಯಲು ಶಾರ್ಟ್ ಮೂವಿ ನೋಡಬೇಕು.