“ಊಜಾ”

ಹೆಸರೇ ಹೇಳುವಂತೆ ಇದೊಂದು ದೆವ್ವದ ಸಿನೆಮಾ.

ಯೆಸ್… ನಾವಂದುಕೊಂಡಂತೆಯೇ ಸಿನೆಮಾ ಶುರುವಾಗುತ್ತದೆ. ಮೂವರು ಮುದ್ದಾದ ಹೆಣ್ಣುಮಕ್ಕಳಿಗೆ ಭೂತದ ಸಿನೆಮಾ ಮಾಡಬೇಕೆಂಬ ಆಸೆ. ಅವರಿಗೊಬ್ಬ ನಟನೆಯಿಂದ ಅವಕಾಶ ವಂಚಿತ ಯುವಕನೊಬ್ಬ ಜೊತೆಗೂಡುತ್ತಾನೆ. ನಾಲ್ವರೂ ಸೇರಿ ಸಿನೆಮಾ ಶುರು ಮಾಡುತ್ತಾರೆ. ಆದರೆ ಸಿನೆಮಾ ಜೊತೆಜೊತೆಗೆ ಅವೆಲ್ಲವೂ ಅವರ ಜೀವನದಲ್ಲಿಯೂ ನಡೆಯಲು ಶುರುವಾಗುತ್ತದೆ. ಅವರಿಗೆ ಅರ್ಥವಾಗುತ್ತದೆ…. ಯಾವುದೋ ಆತ್ಮ ತಮಗೆ ತೊಂದರೆ ಕೊಡುತ್ತಿದೆ ಅಂತ. ಅಷ್ಟರಲ್ಲೇ ಆ ನಾಲ್ವರಲ್ಲಿ ಒಬ್ವಳು ಆ ಆತ್ಮಕ್ಕೆ ಬಲಿಯೂ ಆಗುತ್ತಾಳೆ.

ಹಾಗಾದರೆ ಆ ಆತ್ಮ ಯಾರದ್ದು..?
ಆ ಆತ್ಮಕ್ಕೆ ಇವರೇನು ಮೋಸ ಮಾಡಿದ್ದರು..?
ಯಾವ ಆತ್ಮ ಯಾರನ್ನು ಬೇಕಿದ್ದರೂ ಸಾಯಿಸಬಹುದೇ ಅಥವಾ ಅದರ ಹಿಂದೆ ಕಾರಣವೇನಾದರೂ ಇರುತ್ತದೆಯೇ..?

ದೆವ್ವದ ಸಿನೆಮಾ ಅಂದ ಕೂಡಲೇ ನಮಗೆ ಒಂದಿಷ್ಟು ನಿರೀಕ್ಷೆಗಳು ಹುಟ್ಟಿ ಬಿಡುತ್ತವೆ. ಆಗ ಸಿನೆಮಾ ನಿರೂಪಣೆ ಹೇಗೇ ಇದ್ದರೂ ನಮಗೆ ನೀರಸ ಎನಿಸಲು ಶುರುವಾಗುತ್ತದೆ. ಹಾಗೆಯೇ “ಊಜಾ” ಸಿನೆಮಾ ಮೇಲೆಯೂ ನನಗೂ ಕೆಲವು ನಿರೀಕ್ಷೆಗಳಿದ್ದವು. ಆದರೆ “ಊಜಾ” ಅದೆಲ್ಲವನ್ನೂ ತಲೆಕೆಳಗು ಮಾಡಿದೆ.

ಮೊದಲನೆಯದಾಗಿ ಈ ಸಿನೆಮಾದಲ್ಲಿ ನಾಯಕ-ನಾಯಕಿಯೇ ಇಲ್ಲ. ಅಂದರೆ ಸಿದ್ಧ ಸೂತ್ರಗಳನ್ನು ದಾಟಿದ ಸಿನೆಮಾ ಆಗಿದೆ ಇದು. ಆದರೂ ಇದರಲ್ಲಿ ಹಾಡುಗಳಿವೆ. ಸುಂದರವಾದ ಮೂವರು ಹೆಣ್ಮಕ್ಕಳಿದ್ದಾರೆ. ಅವರಿಗಿಂತಲೂ ಸುಂದರವಾದ ಮತ್ತೊಬ್ಬ ಹೆಣ್ಣುಮಗಳಿದ್ದಾಳೆ. ಅವಳೇ ಮಾಯಾ… ಈ ಚಿತ್ರದ ಹೀರೋ ಮತ್ತು ಹೀರೋಯಿನ್ ಈಕೆಯೇ… ಇವಳ ನಟನೆಯೇ ಚಿತ್ರದ ಶಕ್ತಿ..

ದುಡ್ಡಿಗಾಗಿ ಸಿರಿವಂತನೊಬ್ಬನನ್ನು ಮದುವೆಯಾಗುವ ಮಾಯಾ, ಆಸ್ತಿಗಾಗಿ ಗಂಡನನ್ನೇ ಕೊಲ್ಲುತ್ತಾಳೆ. ಆದರೆ ಅವನು ತನ್ನ ವಿಲ್ ಅನ್ನು ಎಲ್ಲಿಯೋ ಬಚ್ಚಿಟ್ಟಿದ್ದಾನೆ ಅಂತ ಅವನು ಸತ್ತ ನಂತರ ಗೊತ್ತಾಗುತ್ತದೆ. ಇನ್ನೇನು ಗಂಡ ಸತ್ತಾಯ್ತು, ವಿಲ್ ಸಿಕ್ತಿಲ್ಲ, ವಿಲ್ ಸಿಗದಿದ್ರೆ ಆಸ್ತಿಯೆಲ್ಲಾ ಅನಾಥಾಶ್ರಮಕ್ಕೆ ಹೋಗಿ ಬಿಡುತ್ತದೆ ಅಂತ ಮಾಯಾ ಆತಂಕ ಪಡುತ್ತಾಳೆ. ಆದರೆ ವಿಲ್ ಎಲ್ಲಿ ಎಂದು ಕೇಳಲು ಗಂಡ ಬದುಕಿಯೇ ಇಲ್ವಲ್ಲ….? ಆಗ ಅವಳಿಗೆ ಹೊಳೆಯುವ ದಾರಿಯೇ ಊಜಾ!!

ಹೌದು. ಪ್ರೇತಾತ್ಮದೊಂದಿಗೆ ಮಾತನಾಡುವ ಟೆಕ್ನಿಕ್ ಈ ಊಜಾ…..

ಸತ್ತ ಒಂದು ವಾರದೊಳಗೆ ಸತ್ತ ವ್ಯಕ್ತಿಯ ಪ್ರೇತಾತ್ಮ ಭೂಮಿಯಲ್ಲಿಯೇ ಅಲೆಯುತ್ತಾ ಇರುತ್ತದೆ ಅಂತ ಜನರ ನಂಬಿಕೆ. ಹಾಗಾಗಿ ಮಾಯಾ ಪ್ರತೀದಿನ ಊಜಾ ಬೋರ್ಡ್ ಇಟ್ಟುಕೊಂಡು ಗಂಡನನ್ನು ಕರೆಯುತ್ತಿರುತ್ತಾಳೆ. ಆದರೆ ಆತ ಬರುತ್ತಿರುವುದಿಲ್ಲ. ಕಡೆಯ ದಿನ ಅವಳ ಕಾತರತೆ ಹೆಚ್ಚಿರುತ್ತದೆ. ಅಂದು ಗಂಡನ ಆತ್ಮ ಬರದಿದ್ದರೆ ಇನ್ನೆಂದೂ ಬರುವುದಿಲ್ಲ ಅಂತ ಅಳುಕಿನಿಂದಲೇ ಕರೆಯುತ್ತಾಳೆ. ಏನು ಪುಣ್ಯವೋ ಆತ್ಮ ಬಂದುಬಿಡುತ್ತದೆ. ಆದರೆ ಅದರ ಜೊತೆ ಮಾತನಾಡಬೇಕು ಎನ್ನುವಷ್ಟರಲ್ಲಿ ದೆವ್ವದ ಸಿನೆಮಾ ತೆಗೆಯುತ್ತಿರುವ ಈ ನಾಲ್ವರು ಈಕೆಯ ಧ್ಯಾನಕ್ಕೆ ಭಂಗ ತರುತ್ತಾರೆ. ಊಜಾ ಬೋರ್ಡನ್ನು ಮಾಯಾಳಿಗೆ ಸಿಗದಂತೆ ಒಬ್ಬರಿಗೊಬ್ಬರು ಎಸೆದುಕೊಂಡು ಆಟವಾಡುತ್ತಾರೆ. ಅಷ್ಟರಲ್ಲಿ ಗಂಡನ ಆತ್ಮ ಭೂಮಿಯಿಂದಾಚೆ ಇನ್ನೆಂದೂ ಸಿಗದ ಹಾಗೆ ಹೋಗಿ ಬಿಡುತ್ತದೆ. ಮಾಯಾಳಿಗೆ ಸಿಟ್ಟು ಉಕ್ಕೇರುತ್ತದೆ. ಕೊನೆಯ ದಿನ ಬಂದು ಗಲಾಟೆ ಮಾಡಿ ತನ್ನಾಸೆ-ಕನಸುಗಳಿಗೆ ಭಂಗ ತಂದ ಆ ನಾಲ್ವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂತ ನಿರ್ಧರಿಸುತ್ತಾಳೆ.

ಅದಕ್ಕಾಗಿ ತಾನೇ ಸತ್ತು ದೆವ್ವ ಆಗುತ್ತಾಳೆ…

ಹೌದು. ಇದು ಮೊದಲೇ ದೆವ್ವದ ಸಿನೆಮಾ. ಇದರಲ್ಲಿ ಲಾಜಿಕ್ ಹುಡುಕಬಾರದು. ಸಾಯಿಸುವುದೇ ಅಂತಿಮ ಶಿಕ್ಷೆ ಆದ್ಮೇಲೆ ಸತ್ತವರೆಲ್ಲರೂ ದೆವ್ವ ಆಗಬೇಕಿತ್ತು. ಆದರೆ ಸಿನೆಮಾದಲ್ಲಿ ಮಾಯಾ ಮಾತ್ರವೇ ದೆವ್ವ ಆಗುತ್ತಾಳೆ. ತನಗೆ ಆಗದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ. ಅದರಿಂದ ಉಳಿದ ಆ ಮೂವರು ಹೇಗೆ ಬಚಾವಾಗುತ್ತಾರೆ ಎನ್ನುವುದೇ ಸಿನೆಮಾದ ಪ್ರಧಾನ ಅಂಶ.

ಮಾಯಾ ದೆವ್ವ ಆಗಿರಬಹುದು. ಆದರೆ ಆಕೆಯ ಪ್ರವೇಶವಾದೊಡನೆ ಚಿತ್ರಕ್ಕೆ ಒಂದು ಎನರ್ಜಿ ದಕ್ಕಿಬಿಡುತ್ತದೆ. ಆಕೆಯ ಗತ್ತು, ಠೀವಿ ನೋಡಲೇ ಚಂದ. ಲಾಜಿಕ್ಕೇ ಇರದ ದೆವ್ವದ ಕತೆಗಳ ನಡುವೆ ತನಗೆ ತೊಂದರೆ ಕೊಟ್ಟವರನ್ನು ಮಾತ್ರವೇ ದೆವ್ವವು ಹುಡುಕಿ ಕೊಲ್ಲುವ ಈ ಕಥೆ ಇಷ್ಟವಾಗುತ್ತದೆ. ಚಿತ್ರದಲ್ಲಿ ಬಹಳಷ್ಟು ಭಯಾನಕ ದೃಶ್ಯಗಳಿವೆ. ದುರ್ಬಲ ಮನಸ್ಸಿನವರು ಹೆದರಬಹುದು.

ಸಿನೆಮಾ ಮುಗಿದ ನಂತರ ನಮಗೆ ನೆನಪಿರುವುದೊಂದೇ “ಮಾಯಾ…..”

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply