ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್

ಜಿ.ಕೆ.ವೆಂಕಟೇಶ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕರು ಮಾತ್ರವಲ್ಲದೆ ತಮ್ಮ ಖ್ಯಾತಿಗೆ ತಕ್ಕಂತೆ ಪ್ರಯೋಗಶೀಲರು ಆಗಿದ್ದರು. ಚಿತ್ರ ನಿರ್ಮಾಣ ಮಾತ್ರವಲ್ಲದೆ ಕನ್ನಡ ಚಿತ್ರರಂಗಕ್ಕೆ ಕವಿಗಳ ರಚನೆಯನ್ನು ಪರಿಚಯಿಸಿದ ಕೀರ್ತಿ ಕೂಡ ಇವರಿಗೆ ಸಂದಿದೆ. ಮತ್ತು ಕವನಗಳನ್ನು ಚಿತ್ರಗೀತೆಗಳಾಗಿ ಅಳವಡಿಸುವ ಮೂಲಕ ಹೊಸ ಪರಂಪರೆಯ ನಾಂದಿಗೆ ಕಾರಣವಾಯಿತು.


      ಸೆಪ್ಟೆಂಬರ್ ೨೧, ೧೯೨೭ ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಪೂರ್ಣ ಹೆಸರು ಗುರ್ಜದ ಕೃಷ್ಣದಾಸ್ ವೆಂಕಟೇಶ್. ತಮ್ಮ ಸಹೋದರನ ಹತ್ತಿರ ಸಂಗೀತ ಅಭ್ಯಾಸವನ್ನು ಮಾಡಿದ್ದರಲ್ಲದೆ ಖ್ಯಾತ ಸಂಗೀತ ನಿರ್ದೇಶಕರಾದ ಎಸ್.ವೆಂಕಟ್ ರಾಮನ್ ಮತ್ತು ವಿಶ್ವನಾಥನ್ ಬಳಿ ಸಹಾಯಕರಾಗಿ ಕೆಲಸವನ್ನು ನಿರ್ವಹಿಸಿದ್ದರು. ಅಲ್ಲದೇ ಬೆಂಗಳೂರು ಆಕಾಶವಾಣಿಯಲ್ಲಿ ಎ ಗ್ರೇಡ್ ಗಾಯಕರು ಆಗಿದ್ದರು.


  ಪದ್ಮನಾಭ ಶಾಸ್ತ್ರೀಯವರೊಡನೆ  ಸಿಂಗ್ ಠಾಕೂರ್ ರವರ ಸೋದರಿ ಚಿತ್ರಕ್ಕೆ  ಸಂಗೀತ ನೀಡುವ ಮೂಲಕ ಸಂಗೀತ ನಿರ್ದೇಶಕರಾದ ಇವರು ನಂತರ ಹಲವಾರು ಚಿತ್ರಗಳಿಗೆ ಸಂಗೀತವನ್ನು ನೀಡಿದ್ದರು. ೧೯೬೨ ರಲ್ಲಿ ತೆರೆ ಕಂಡ ಕನ್ನಡದ ಮೊಟ್ಟಮೊದಲ ಕಾದಂಬರಿಯಾಧಾರಿತ ಕರುಣೆಯೇ ಕುಟುಂಬದ ಕಣ್ಣು ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಬರುವ ನಿಜವೋ ಸುಳ್ಳೋ ನಿರ್ಧರಿಸಿ ಗೀತೆಯ ಸಂಗೀತ ಸಂಯೋಜನೆಗೆ ಎಂಬತ್ತು ವಾದ್ಯಗಾರರನ್ನು ಬಳಸಿಕೊಂಡಿದ್ದು ಇಂದಿಗೂ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.ಮತ್ತು ಕನ್ನಡ ಚಿತ್ರರಂಗಕ್ಕೆ ಕವಿಗಳ ರಚನೆಯನ್ನು ಪರಿಚಯಿಸಿದ ಖ್ಯಾತಿಯು ಕೂಡ ಇವರದ್ದಾಗಿದೆ.


   ೧೯೬೩ ರಲ್ಲಿ ತೆರೆ ಕಂಡ ಎಸ್.ಕೆ.ಎ.ಚಾರಿ ನಿರ್ದೇಶನದಲ್ಲಿ ಮೂಡಿ ಬಂದ ಗೌರಿ ಚಿತ್ರದಲ್ಲಿ ಕುವೆಂಪುರವರ ಯಾವ ಜನ್ಮದ ಮೈತ್ರಿ? ಮತ್ತು ಕೆ.ಎಸ್.ನರಸಿಂಹಸ್ವಾಮಿ ರಚಿಸಿದ ಇವಳು ಯಾರು ಬಲ್ಲೆಯೇನು? ಕವಿತೆಗಳನ್ನು ಅಳವಡಿಸಿದ್ದರು. ಈ ಒಂದು ವಿಶಿಷ್ಟ ರೀತಿಯ ಪ್ರಯೋಗವೇ ಚಿತ್ರ ರಂಗದಲ್ಲಿ ಕವನಗಳನ್ನು ಚಿತ್ರ ಗೀತೆಗೆ ಬಳಸಿಕೊಳ್ಳುವ ಹೊಸ ಪರಂಪರೆಯ ನಾಂದಿಗೆ ಕಾರಣವಾಯಿತು.


   ಬಿ.ಕೆ.ಸುಮಿತ್ರ, ಬೆಂಗಳೂರು ಲತಾ, ಸಿ.ಅಶ್ವಥ್, ಸುಲೋಚನಾ ಸೇರಿ ಅನೇಕ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದ್ದರಲ್ಲದೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಇಳಿಯರಾಜ, ಎಲ್.ವೈದ್ಯನಾಥನ್, ಶಂಕರ್ ಗಣೇಶ್ ಇವರ ಅನುಯಾಯಿಗಳು ಕೂಡ ಆಗಿದ್ದಾರೆ.


   ೧೯೬೪ ರಲ್ಲಿ ತುಂಬಿದ ಕೊಡ ಎಂಬ ಚಿತ್ರವನ್ನು ನಿರ್ಮಿಸಿ ತಮ್ಮ ಖ್ಯಾತಿಗೆ ತಕ್ಕಂತೆ ಪ್ರಯೋಗಾರ್ಥವಾಗಿ ಈ ಚಿತ್ರದಲ್ಲಿ ಅನಕೃ ಅವರನ್ನು ಬೆಳ್ಳಿತೆರೆಯ ಮೇಲೆ ತಂದಿದ್ದರು. ಅಲ್ಲದೇ ಇದೇ ಚಿತ್ರದಲ್ಲಿ ಶ್ರೇಷ್ಠ ಹಿನ್ನೆಲೆ ಗಾಯಕರು ಆಗಿದ್ದ ಪಿ.ಕಾಳಿಂಗರಾಯರಿಂದ ಅಂತಿಂತ ಹೆಣ್ಣು ನೀನಲ್ಲ ಎಂಬ ಗೀತೆಯನ್ನು ಹಾಡಿಸಿದ್ದಲ್ಲದೆ ಅವರು ಹಾಡುತ್ತಿರುವ ದೃಶ್ಯವನ್ನು ಬೆಳ್ಳಿ ತೆರೆಯ ಮೇಲೆ ತೋರಿಸಿದ್ದರು.


          ಮೂರು ವರ್ಷಗಳ ನಂತರ ೧೯೬೭ ರಲ್ಲಿ ನಟ ಸಾರ್ವಭೌಮ ಡಾ.ರಾಜಕುಮಾರ್ ಪ್ರಮುಖ ಪಾತ್ರದಲ್ಲಿ   ನಟಿಸಿದ್ದ ಇಮ್ಮಡಿ ಪುಲಿಕೇಶಿ  ಎಂಬ ಐತಿಹಾಸಿಕ ಚಿತ್ರವನ್ನು ನಿರ್ಮಿಸಿದ್ದರು. ೧೯೭೦ ರಲ್ಲಿ ತೆರೆ ಕಂಡ ಇವರ ಸಂಗೀತ ನಿರ್ದೇಶನದ ನಗುವ ಹೂವು ಚಿತ್ರಕ್ಕೆ  ರಾಷ್ಟ್ರ ಪ್ರಶಸ್ತಿ ಲಭಿಸಿತಲ್ಲದೆ  ಈ  ಚಿತ್ರದಲ್ಲಿ ಆರ್.ಎನ್.ಸುದರ್ಶನ್ ಹಾಡಿರುವ  ಇರಬೇಕು ಇರಬೇಕು ಅರಿಯದ ಕಂದನ ತರಹ ಈ ಹಾಡಿನ ಮಾಧುರ್ಯಕ್ಕೆ ಕನ್ನಡದ ಬೇರೆ ಯಾವ ಹಾಡು ಸಾಟಿಯೇ ಇಲ್ಲವೆಂದು ಇವರ ಶಿಷ್ಯ ಸಂಗೀತ ನಿರ್ದೇಶಕರಾದ ಇಳಿಯರಾಜ ಒಂದು ಸಂದರ್ಶನದಲ್ಲಿ ಹೇಳಿದ್ದರು. ಅಂದ ಹಾಗೆ ಬರೆಯುತ್ತ ಬರೆಯುತ್ತ ಇವರ ಒಂದು ಮುಖ್ಯ ಸಾಧನೆಯ ಕುರಿತು ಹೇಳುವುದನ್ನು ಮರೆತಿದ್ದೆ. ನಮ್ಮ ಕನ್ನಡ ಚಿತ್ರರಂಗದ ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ಡಾ.ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಮಹಿಷಾಸುರ ಮರ್ದಿನಿ ಎಂಬ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಚಿತ್ರದ ಕುರಿತು ತಿಳಿಯದ ಕನ್ನಡಿಗರೇ ಇಲ್ಲ. ಈ ಚಿತ್ರದಲ್ಲಿ ಬರುವ ಯುಗಳ ಗೀತೆಯನ್ನು ಪ್ರಥಮ ಬಾರಿಗೆ ನಮ್ಮ ಅಣ್ಣಾವ್ರ  ಕಡೆಯಿಂದ ಹಾಡಿಸುವ ಮೂಲಕ ಅವರನ್ನು ಗಾಯಕರಾಗಿ ಪರಿಚಯಿಸಿದ್ದರು. ನಂತರ ನಮ್ಮ ಅಣ್ಣಾವ್ರು ನಟಿಸಿದ್ದ ಸಂಪತ್ತಿಗೆ ಸವಾಲ್ ಎಂಬ ಮತ್ತೊಂದು ಸೂಪರ್ ಹಿಟ್ ಚಿತ್ರದಲ್ಲಿ ಬರುವ ಯಾರೇ ಕೂಗಾಡಲಿ ಎಂಬ ಜನಪ್ರಿಯ ಗೀತೆಯನ್ನು ಪುನಃ ಇವರಿಂದಲೇ ಹಾಡಿಸುವುದರ ಮೂಲಕ ಪೂರ್ಣ ಪ್ರಮಾಣದ ಗಾಯಕರಾಗಲು ಪ್ರಮುಖ ಕಾರಣಕರ್ತರು ಕೂಡ ಆಗಿದ್ದರು. ಸಂಧ್ಯಾರಾಗ, ಭಕ್ತ ಕುಂಬಾರ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ಸೇರಿ ಸುಮಾರು ೧೨೦ ಕ್ಕೂ ಹೆಚ್ಚು ಕನ್ನಡ ಚಿತ್ರಗಳ ೬೦೦ ಗೀತೆಗಳಿಗೆ ಸಂಗೀತ ನೀಡಿದ್ದ ಇವರು ಭಕ್ತ ಕುಂಬಾರ ಮತ್ತು ಹೊಸ ನೀರು ಚಿತ್ರಗಳ ಉತ್ತಮ ಸಂಗೀತಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು. 


   ಆದರೆ ನವೆಂಬರ್ ೧೯೯೩ ನೇ ಇಸ್ವಿಯಲ್ಲಿ ತಮ್ಮ ೬೭ ನೇ ವಯಸ್ಸಿನಲ್ಲಿ ನಿಧನ ಹೊಂದಿದ ಪರಿಣಾಮ ಕನ್ನಡ ಚಿತ್ರರಂಗದ ಹಿರಿಯ ಪ್ರಮುಖ ಕೊಂಡಿಯೊಂದು ಕಳಿಚಿ ಬಿದ್ದಿತು. ಇವರ ಸ್ವ ಇಚ್ಛೆಯಂತೆ ನಿಧನದ ನಂತರ ಇವರ ಕಣ್ಣುಗಳನ್ನು ಮರಣೋತ್ತರವಾಗಿ ದಾನ ಮಾಡಲಾಯಿತು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply