ಕನ್ನಡ ರಂಗಭೂಮಿಯ ಪ್ರಸಿದ್ಧ ಕಲಾವಿದೆ ಆರ್.ನಾಗರತ್ನಮ್ಮ

ಕನ್ನಡ ರಂಗಭೂಮಿಯ ಪ್ರಸಿದ್ಧ ಕಲಾವಿದೆ ಆರ್.ನಾಗರತ್ನಮ್ಮ

ಕನ್ನಡದ ವೃತ್ತಿ ರಂಗಭೂಮಿಯಲ್ಲಿ ಅತೀ ಎತ್ತರದಲ್ಲಿ ಮಿಂಚಿನಂತಹ ಸಂಚಲನವನ್ನು ಸೃಷ್ಟಿಸಿದ ಹೆಸರು ಆರ್. ನಾಗರತ್ನಮ್ಮ. ಇವರು ನಿರ್ವಹಿಸದ ಪಾತ್ರಗಳಿಲ್ಲ, ಸಾಧನೆ ಅಪಾರವಾದರೆ ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಹೊಸ ಪರಿಕಲ್ಪನೆ ಮೂಲಕ ಕನ್ನಡ ರಂಗಭೂಮಿಯಲ್ಲಿ ಹೊಸ ದಾಖಲೆಯನ್ನು ಬರೆದಿದ್ದರು. ಅಲ್ಲದೇ ಇವರು ಒಂದು ವಿಶಿಷ್ಟತೆಯನ್ನು ಹೊಂದಿದ್ದರು. ಸಾಮಾನ್ಯವಾಗಿ ಕಲಾವಿದರು ಮಾಡಿದರೆ, ಇವರ ಪಾತ್ರದ ನಿರ್ವಹಣೆಯನ್ನು ನೋಡುತ್ತಿದ್ದವರು ಇವರು ಪಾತ್ರವನ್ನು ಮಾಡುತ್ತಿಲ್ಲ, ಬದಲಾಗಿ ಪಾತ್ರವೇ ಇವರಿಂದ ಮಾಡಿಸುತ್ತಿದೆ ಎಂದು ಹೇಳುತ್ತಿದ್ದರೆಂದರೆ ಇವರಲ್ಲಿನ ಕಲೆಯ ಸಾಮರ್ಥ್ಯ ಎಂತವರಿಗಾದರೂ ಆಶ್ಚರ್ಯವನ್ನುಂಟು ಮಾಡುತ್ತದೆ. ಇಂತಹ ಅನನ್ಯ ಸಾಧನೆಯನ್ನು ಮಾಡಿರುವ ಈ ಶ್ರೇಷ್ಠ ಕಲಾವಿದೆಯ ಕುರಿತು ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಅಧ್ಯಯನ ಮಾಡಿ ಈ ಲೇಖನವನ್ನು ರಚಿಸಿದ್ದೇನೆ.

       1926, ಜೂನ್ 21 ರಂದು ಕೃಷ್ಣ ಭಟ್ಟ ಮತ್ತು ರುಕ್ಮಿಣಿ ದಂಪತಿಯ ಮಗಳಾಗಿ ಜನಿಸಿದ ಇವರದು ಮೂಲತಃ ಬ್ರಾಹ್ಮಣ ಕುಟುಂಬ. ಆದರೆ ಚಿಕ್ಕ ವಯಸ್ಸಿನಲ್ಲಿ ಇವರಿಗೆ  ತಮ್ಮ ಶಿಕ್ಷಣದ ಕಡೆ ಗಮನವನ್ನು ಕೊಡಲು ಸಾಧ್ಯವಾಗಲಿಲ್ಲ.ಬದಲಾಗಿ  ಮನಸ್ಸು ರಂಗಭೂಮಿಯ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿದ್ದರಿಂದ ಕಲಾ ಸೇವಾ ಮಂಡಳಿಯ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ಇವರು ಹಲವಾರು ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು. ನಂತರ ಮಂಜುನಾಥ ಕೃಪಾ ಪೋಷಿತ ನಾಟಕ ಸಂಸ್ಥೆ, ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರ ಮಂಡಳಿ ಮತ್ತು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿ ಸೇರಿ ಹಲವಾರು ಕಂಪನಿಗಳಿಗಾಗಿ ರಾಜ್ಯಾದ್ಯಂತ ಸಂಚರಿಸಿ ನಾಟಕಗಳಲ್ಲಿ ಅಭಿನಯಿಸಿ ಅಸಂಖ್ಯ ಪ್ರದರ್ಶನಗಳನ್ನು ನೀಡಿದ್ದರು. ಆದರೆ ಇವರ ಸಾಧನೆ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಸಾಮಾನ್ಯವಾಗಿ ಆಗಿನ ಕಾಲದಲ್ಲಿ ಪುರುಷ ಪ್ರಧಾನ, ಪೌರಾಣಿಕ ನಾಟಕಗಳೇ ಹೆಚ್ಚು ಪ್ರಚಲಿತದಲ್ಲಿದ್ದವು. ಅಲ್ಲದೇ ಸ್ತ್ರೀ ಪ್ರಧಾನ ಪಾತ್ರವನ್ನು ಹೆಚ್ಚಾಗಿ ಪುರುಷರೇ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಇವರು ಮಾಡಿದ ನೂತನ ಪ್ರಯತ್ನ ಒಂದು ಹೊಸ ದಾಖಲೆಯನ್ನು ನಿರ್ಮಿಸಿತು. ‌ಹೀಗೆಯೇ ಒಂದು ದಿನ ಇವರ ಅಭಿಮಾನಿ  ಅಂಬುಜಮ್ಮ ಎಂಬುವರು ಇವರಿಗೆ  ಮಹಿಳೆಯರೇ ಎಲ್ಲ ಪಾತ್ರಗಳನ್ನು ಏಕೆ ಮಾಡಬಾರದು  ಎಂಬ ಸಲಹೆಯನ್ನು ನೀಡಿದರು. ಆ ಸಲಹೆಯ ಪ್ರೇರಣೆಯೇ ಇವರ ಸಾಧನೆಗೆ ಮೊದಲ ಹೆಜ್ಜೆಯೆಂಬಂತೆ ಕೃಷ್ಣ ಗಾರುಡಿ ನಾಟಕಕ್ಕೆ ಅಭ್ಯಾಸವನ್ನು ಪ್ರಾರಂಭಿಸಿದ್ದರು.


ಅದುವೇ ಪುರುಷ ಪಾತ್ರಗಳ ನಿರ್ವಹಣೆ, ಒಬ್ಬ ಸ್ತ್ರೀ ಆ ಪುರುಷ ಪಾತ್ರಕ್ಕೆ ಜೀವ ತುಂಬುವ ರೀತಿ, ನಟನೆ ಅಪಾರ ಜನಪ್ರಿಯತೆಯನ್ನು ಪಡೆದಿತ್ತಲ್ಲದೆ ಪ್ರೇಕ್ಷಕರಿಗೆ ಒಂದು ಹೊಸ ಅನುಭವವನ್ನು ನೀಡಿತ್ತು. ಮಂಡ್ಯದಲ್ಲಿ ಮೂರು ನಾಲ್ಕು ಯಶಸ್ವಿ ಪ್ರಯೋಗಗಳು, ಅಲ್ಲದೇ ಈ ನಾಟಕವು ಮಹಿಳೆಯರೇ ಪುರುಷ ಪಾತ್ರಗಳನ್ನು ನಿರ್ವಹಿಸಿ ಸ್ಥಾಪಿಸಿದ ಐತಿಹಾಸಿಕ ದಾಖಲೆ ಎಂದು ಗುರುತಿಸಲ್ಪಟ್ಟಿತು. ಈ ನಾಟಕದಲ್ಲಿ ಆರ್.ಮಂಜುಳಾ, ನಿರ್ಮಲ, ಎಚ್.ಪಿ. ಸರೋಜ, ಸುಜಾತ, ಕಮಲಮ್ಮ,ಎಂ.ಎನ್. ಪುಟ್ಟಮ್ಮ ಮತ್ತು ಕಾತ್ಯಾಯಿನಿ ಸೇರಿ ಹಲವು ಪ್ರಮುಖ ಕಲಾವಿದರು ಈ ಪಾತ್ರವರ್ಗದಲ್ಲಿದ್ದರು. ನಂತರವೇ 1958 ನೇ ಇಸ್ವಿಯಲ್ಲಿ ಸ್ತ್ರೀ ನಾಟಕ ಮಂಡಳಿಯು ಚಾಲನೆಗೆ ಬಂದಿತು.ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ನಾಟಕ ಕಂಪನಿಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಕೂಡ ಇವರದ್ದೇ ಆಗಿದೆ.

ಇವರು ಹೋದ ಕಡೆಯಲ್ಲ ಪ್ರೇಕ್ಷಕರ ಒತ್ತಾಯದ ಮೇರೆಗೆ ಹೆಚ್ಚುವರಿಯಾಗಿ 50 ರಿಂದ 100 ಪ್ರದರ್ಶನಗಳು ನಡೆಯುತ್ತಿದ್ದವೆಂದರೆ ಇವರ ನಾಟಕಗಳು ಎಂತಹ ಪ್ರಸಿದ್ಧಿಯನ್ನು ಪಡೆದಿದ್ದವು ಎಂಬುದು ಅರ್ಥವಾಗುತ್ತದೆ. ರಾಜ್ಯಾದ್ಯಂತ ಬಂದ ಮೆಚ್ಚುಗೆಯ ಸುರಿಮಳೆಯೇ ಹರಿದಿತ್ತಲ್ಲದೇ ವಿಜಾಪುರ, ಸಾಲಿಗ್ರಾಮ, ಚಿಕ್ಕ ಮಗಳೂರು ಮತ್ತು ಹಾಸನದಲ್ಲಿ ಮಳೆ ಬಂದರೂ ನಿಲ್ಲದೆ  ನಾಟಕವನ್ನು ಪ್ರದರ್ಶಿಸುತ್ತಿದ್ದರೆ  ಪ್ರೇಕ್ಷಕರು ಕೊಡೆಯನ್ನು ಹಿಡಿದುಕೊಂಡು ವೀಕ್ಷಿಸುತ್ತಿದ್ದರು. ಅದರಲ್ಲೂ ಕಲಾವಿದರು ಮಳೆಯಲ್ಲಿ ತೊಯಿಸಿಕೊಂಡು ನಟಿಸುತ್ತಿದ್ದರು. ಈ ರೀತಿಯಾಗಿ ಮಳೆ ಬಂದರೂ ನಿಲ್ಲದೇ ನಡೆದ  ನಾಟಕ ಪ್ರದರ್ಶನದ ದಾಖಲೆ ಇತಿಹಾಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಆದರೆ ಕೇವಲ ರಂಗಭೂಮಿಗೆ ಮಾತ್ರ ಸೀಮಿತವಾಗದ ಇವರ ಪ್ರತಿಭೆ ಕನ್ನಡ ಚಿತ್ರರಂಗದವರೆಗೂ ವ್ಯಾಪಿಸಿತ್ತು. ಇದರ ಪ್ರತಿಫಲ ಕಾಮನಬಿಲ್ಲು, ಪರಸಂಗದ ಗೆಂಡೆ ತಿಮ್ಮ ಮತ್ತು ದಂಗೆ ಎದ್ದ ಮಕ್ಕಳು ಸೇರಿ ಸುಮಾರು ಹದಿನೈದು ಚಿತ್ರಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ತೀರಾ ಅಪರೂಪದ ಸಮಯದಲ್ಲಿ ಪ್ರಖ್ಯಾತ ತಮಿಳು ಕಲಾವಿದ ಶಿವಕುಮಾರ್ ಜೊತೆ ನಟಿಸಿದ್ದ ರೋಸಾಪೂ ರವಿಕ್ಕ್ಐಕಾರಿ ಎಂಬ ತಮಿಳು ಚಿತ್ರದಲ್ಲಿ ನಟಿಸಿ ಆ ಚಿತ್ರ ರಂಗದಲ್ಲಿ ಕೂಡ ಪ್ರಸಿದ್ಧಿಯನ್ನು ಪಡೆದಿದ್ದರು.


       ಜೂನ್ 21, 2003 ರಂದು ಅಭಿಮಾನಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ಇವರ 77 ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ  ಸಮಯದಲ್ಲಿ ಒಂದು ಘಟನೆ ನಡೆಯಿತು. ಅಂದು ಇವರು ತಮ್ಮ ಇಳಿ ವಯಸ್ಸಿನಲ್ಲಿ ಭೀಮನ ಪಾತ್ರವನ್ನು ನಿರ್ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಮತ್ತು ನಮ್ಮ ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇವರ ಪಾತ್ರ ನಿರ್ವಹಣೆಯನ್ನು ನೋಡಿ ಬಡ್ಡಿ ಮಗ ಭೀಮ ತನ್ನ 77 ನೇ ವಯಸ್ಸಿನಲ್ಲಿ ಹೀಗೆ ಮೀಸೆಯನ್ನು ತಿರುವಿದ್ದನೋ ಇಲ್ಲವೋ? ಅವನನ್ನು ಇಲ್ಲಿ ಕೂರಿಸಿ ಇವರ ನಟನೆಯನ್ನು ತೋರಿಸಬೇಕು ಎಂದು ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಹೇಳಿದಾಗ ಪ್ರೇಕ್ಷಕರಿಂದ ಮುಗಿಲು ಮುಟ್ಟುವ ಚಪ್ಪಾಳೆ ಸಾಮಾನ್ಯವಾಗಿ ರಲಿಲ್ಲ.

ಮಹಾಭಾರತ, ಕುರುಕ್ಷೇತ್ರ ನಡೆದು ಬಹಳ ಕಾಲವಾಗಿದೆ. ಆದರೆ ಇವತ್ತು ಇವರು ತಮ್ಮ ನಟನೆಯಿಂದ ಆ ಯುಗಕ್ಕೆ ನಮ್ಮನ್ನು ಕರೆದುಕೊಂಡು ಹೋದರು. ಇದನ್ನು ಕಂಡಿದ್ದು ನಮ್ಮ ಸೌಭಾಗ್ಯ, ಕಲಾವಿದ ಪರಕಾಯ ಪ್ರವೇಶ ಮಾಡುವುದು ಕೇಳಿದ್ದೆ, ಆದರೆ ಈ ದಿನ ನೋಡಿದೆ. 77 ನೇ ವಯಸ್ಸಿನಲ್ಲಿ ಇವರು  ಪಾತ್ರ ಮಾಡುತ್ತಿಲ್ಲ. ಬದಲಾಗಿ ಪಾತ್ರವೇ ಮಾಡಿಸುತ್ತಿದೆ. ಇಂತಹವರನ್ನು ನೋಡಿ ಕಲಿಯಬೇಕು, ಇವರು 77 ವರ್ಷ ಬದುಕಿದರೆ ಸಾಲದು, 700 ವರ್ಷ ಬದುಕಬೇಕು ಎಂದು ಆ ದಿನ ನಮ್ಮ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರು ಹೇಳಿದಾಗ ಈ ಮಹಾನ್ ಕಲಾವಿದೆಯ ಕಣ್ಣಲ್ಲಿ ಮಿಂಚು ಹೊಳೆಯುತ್ತಿತ್ತು.


ಶ್ರೀ ಕೃಷ್ಣ ಗಾರುಡಿ ನಾಟಕದಲ್ಲಿ ಭೀಮ, ಕೃಷ್ಣ ಲೀಲೆಯ ಕೃಷ್ಣ, ರಾಮಾಯಣದಲ್ಲಿ ದಶರಥ ಮತ್ತು ರಾವಣ, ದಾನಶೂರ ಕರ್ಣದಲ್ಲಿ  ದುರ್ಯೋಧನ ಮತ್ತು ಇನ್ನಿತರ ಪಾತ್ರಗಳಲ್ಲಿ ನಟಿಸಿರುವ ಇವರ ನಟನೆಯನ್ನು ಇಂದಿಗೂ ಬಹಳಷ್ಟು ಜನರು ಮರೆತಿಲ್ಲ, ಬದಲಾಗಿ ಇನ್ನೂ ಪ್ರೀತಿ, ಮೆಚ್ಚುಗೆಗಳ ಮೂಲಕ ಸ್ಮರಿಸುತ್ತಿದ್ದಾರೆ.
    ದೇಶದ ಇತರೇ ನಗರಗಳಲ್ಲೂ ನಾಟಕಗಳನ್ನು ಪ್ರದರ್ಶಿಸಿರುವ ಇವರಿಗೆ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ,ಗುಬ್ಬಿ ವೀರಣ್ಣ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ,ಗೌರವ ಕೂಡ ಲಭಿಸಿದ್ದವು.


     ಇವರು ನಿಧನರಾಗುವುದಕ್ಕೆ ಕೆಲವು ತಿಂಗಳುಗಳ ಹಿಂದೆ ಅತಿಯಾದ ವಯಸ್ಸಿನ ಸಹಜತೆಯಿಂದ ಗಾಲಿ ಕುರ್ಚಿಯಲ್ಲಿ ಕುಳಿತು ರಾಷ್ಟ್ರ ಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗಲೂ ಈ ಮಹಾತಾಯಿಯ ಮೊಗದಲ್ಲಿನ ಮಿನುಗು ಹಾಗೆಯೇ ಪ್ರಕಾಶಿಸುತ್ತಿತ್ತು. ಇವರು ಮುಂದಿನ ಜನ್ಮ ಅನ್ನೊದು ಇದ್ದರೆ ಪುನಃ ಕಲಾಸೇವೆ ಮಾಡುವ ಅವಕಾಶವನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದೇ ಹೇಳುತ್ತಿದ್ದರು. ಈ ಮಹಾನ್ ಸಾಧಕಿ, ಕಲಾರಂಗದ ಹಿರಿಯ ತಾಯಿಯಾದ ಇವರು ತಮ್ಮ  86 ನೇ ವಯಸ್ಸಿನಲ್ಲಿ ಅಕ್ಟೋಬರ್ 7, 2012 ರಂದು ಈ ಲೋಕವನ್ನು ತ್ಯಜಿಸಿದರು. ಇಂತಹ ಒಂದು ಮಹಾನ್ ಚೇತನಕ್ಕೆ ನಮ್ಮ ಚಿತ್ರೋದ್ಯಮ.ಕಾಂ.ವೆಬ್ ಸೈಟ್ ವತಿಯಿಂದ ನಮ್ಮ ನಮನವನ್ನು ಸಲ್ಲಿಸುತ್ತ ನನ್ನ ಈ ಲೇಖನದ ರಚನೆಯನ್ನು ಮುಗಿಸುತ್ತೇನೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply