~~~~~~~~~~~~~~~
ಯಾವುದೇ ಚಿತ್ರವನ್ನು ಫ಼್ರೇಮ್ ಟು ಫ್ರೇಂ ಭಾಷಾಂತರ ರೀಮೇಕ್ ಚಿತ್ರ ಮಾಡಿದಾಗ ಹೋಲಿಕೆ, ಟೀಕೆ ಟಿಪ್ಪಣಿ ಅನಿವಾರ್ಯ , ಬಹುಶಃ ಅಪೇಕ್ಷಣೀಯವೂ ಹೌದು… ಬಹುಭಾಷಾ ಚಿತ್ರರಸಿಕರು ಈಗ ಕಡಿಮೆಯೆನೂ ಇಲ್ಲ. ಹಾಗಾಗಿ ಉಪಯುಕ್ತವೂ ಸಹಾ.ಹೇಮಂತ ರಾವ್ ಕನ್ನಡದಲ್ಲಿ ನಿರ್ದೇಶಿಸಿದ್ದ ಹೊಸತನದ ಕಥೆ, ನಿರೂಪಣೆ ಮತ್ತು ಟ್ರೀಟ್ಮೆಂಟ್ ಇದ್ದ ಕೌತುಕಮಯ ಥ್ರಿಲ್ಲರ್ – ಕವಲುದಾರಿ-ಕನ್ನಡದಲ್ಲಿ ಜನಪ್ರಿಯ ಹಿಟ್ ಆಗಿ ಪ್ರದರ್ಶಿಸಲ್ಪಟ್ಟಿತ್ತು.
ಇದು ತಮಿಳು ಮತ್ತು ತೆಲುಗು ಚಿತ್ರರಂಗದವರನ್ನೂ ಆಕರ್ಷಿಸಿದ್ದು ಸಹಜವೇ.ಕನ್ನಡದ ಚಿತ್ರಕಥೆಯನ್ನು ಯಥಾವತ್ತಾಗಿ ಕೆಲವು ಮೈನರ್ ಅನಿಸಬಹುದಾದ ಬದಲಾವಣೆ ಮಾಡಿಕೊಂಡು ಸಿಬಿರಾಜ್ ( ಸತ್ಯರಾಜ್ ಪುತ್ರ) ನಾಯಕತ್ವದಲ್ಲಿ ಪ್ರದೀಪ್ ಕೃಷ್ಣಮೂರ್ತಿ ತಮಿಳು ಚಿತ್ರವಾಗಿ ನಿರ್ದೇಶಿಸಿದ್ದಾರೆ.ನಾಯಕ ರಿಶಿ ಕನ್ನಡದಲ್ಲಿ ತಂದ ಅನುಭವಸ್ತನಲ್ಲದವನ ಭೋಳೇತನ, ಅಸಹಾಯಕತೆಯನ್ನು ಇಲ್ಲಿ ಸಿಬಿರಾಜ್ ತರುವುದಿಲ್ಲ.
ಆ ಚಿತ್ರದಲ್ಲಿ ಒಬ್ಬ ಅವಕಾಶವಂಚಿತ, ತಿರಸ್ಕೃತ ಟ್ರಾಫಿಕ್ ಪೋಲಿಸ್ ಮನ್ ನಾಯಕ ತನಗೆ ಸಂಬಂಧವಿಲ್ಲದ ದಶಕಗಳ ಹಿಂದಿನ ಕೊಲೆ ರಹಸ್ಯಕ್ಕೆ ತನ್ನನ್ನು ತಾನೇ ತಗಲು ಹಾಕಿಕೊಂಡು ಹಠಕ್ಕೆ ಬಿದ್ದು ಪತ್ತೇದಾರಿ ಮಾಡಲು ಹೋಗಿ ಬಹಳ ಅನಿರೀಕ್ಷಿತ ಸಂಕಷ್ಟಗಳಿಗೆ ಈಡಾಗುವುದು ಮುಖ್ಯಧಾರೆ.ಸಿಬಿರಾಜ್ ತಮಿಳಿನಲ್ಲಿ ಸ್ವಲ್ಪ ಟಫೀ ಎನಿಸಿಕೊಳ್ಳುತ್ತಿರುವ ಸಾಹಸ ಪ್ರಧಾನ ಚಿತ್ರಗಳ ಹೀರೋ.
ಅವನೇ ಕಬಡದಾರಿ( ಕಪಟಧಾರಿ ಪದದ ಅಪಭ್ರಂಶ ತಮಿಳಿನಲ್ಲಿ) ಚಿತ್ರಕ್ಕೆ ತನ್ನದೇ ಆದ ಇಮೇಜ್ ಮೇಕೋವರಿನಲ್ಲಿ ಬಂದಂತೆ ಪ್ರಯತ್ನಿಸಿದ್ದಾನೆ. ಅವನಲ್ಲಿ ಪ್ರತಿಭೆಯಿದೆ ಎಂಬುದು ನಿಧಾನವಾಗಿ ವೇದ್ಯವಾಗುತ್ತಾ ಹೋಗುತ್ತದೆ.ಆದರೆ ರಿಶಿಗೂ ಸಿಬಿಗೂ ಹೋಲಿಕೆ ಮಾಡದಿರುವುದೇ ಲೇಸು.ಇನ್ನು ನಿವೃತ್ತ, ಕುಡಿತದ ದಾಸನಾದ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಕನ್ನಡದಲ್ಲಿ ಅನಂತನಾಗ್ ಮಾಡಿದ ಪಾತ್ರ ಇಲ್ಲಿ ನಾಜ಼ರ್ ಮಾಡಿದ್ದಾರೆ. ಅದರಲ್ಲಿ ನಾವು ಅನಂತನಾಗ್ ಆ ಪಾತ್ರಕ್ಕೆ ತಂದ ತಂದ ಇನ್ಟೆನ್ಸಿಟಿ, ಸೆನ್ಸಿಟಿವಿಟಿ ಇಲ್ಲಿ ಕಾಣಲಾರೆವು. ಆದರೂ ನಾಜ಼ರ್ ಸಮರ್ಥ ಅನುಭವೀ ನಟ, ಆ ಪಾತ್ರವನ್ನು ಬಹುತೇಕ ಸಮರ್ಪಕವಾಗೇ ನಿಭಾಯಿಸಿದ್ದಾರೆ.
ಬಡತನದಲ್ಲಿ ಜೀವನ ನಡೆಸಲು ಹೆಣಗುತ್ತಿರುವ ಸಾಲಗಾರರಿಂದ ತಪ್ಪಿಸಿಕೊಂಡು ಓಡಾಡುವ ಪತ್ರಕರ್ತನ ಪಾತ್ರವನ್ನು ಕನ್ನಡದಲ್ಲಿ ಅಚ್ಯುತರಾವ್ ಮರೆಯಲಾರದಂತೆ ಅನುಭವಿಸಿ ತೋರಿಸಿದ್ದರು. ಅದನ್ನು ಸಹಾ ಸಾಕಷ್ಟು ಪ್ರತಿಭೆಯುಳ್ಳ ಪೋಷಕ ನಟ ಜಯಪ್ರಕಾಶ್ ತಮಿಳಿನಲ್ಲಿ ಮಾಡಿದ್ದಾರೆ. ಪರವಾಗಿಲ್ಲ!
ಒಂದೊಮ್ಮೆ ವಿಜಯನಗರದ ನಿಧಿ ರಹಸ್ಯದಲ್ಲಿ ಕೊಲೆಯಾದ ಕುಟುಂಬದ ಅವಶೇಷಗಳನ್ನು ಸುಳಿವು ಹಿಡಿದು ಈಗ ಹಳೆ ಸಂಪರ್ಕಗಳನ್ನು ಕೆದಕಿ ಕೆದಕಿ ಸಮಾಜದಲ್ಲಿ ಹಲವರ ವಿರೋಧ, ಮುಚ್ಚಿಹಾಕಿದ್ದ ರಾಜಕೀಯ ಕುತಂತ್ರವನ್ನು ಜೀವಂತಗೊಳಿಸಿಬಿಡುತ್ತಾರೆ ನಾಯಕ ಮತ್ತು ನಿವೃತ್ತ ಇನ್ಸ್ಪೆಕ್ಟರ್. ಬಹಳ ಪದರಗಳಲ್ಲಿ “ನಾನ್ ಲೀನಿಯರ್” ಆಗಿ ಕಥೆ ಇಲ್ಲಿಯೂ ಒರಿಜಿನಲ್ ಕನ್ನಡದಂತೆಯೇ ದ್ವಿತೀಯಾರ್ಧದಲ್ಲಿ ಮಾತ್ರ ಶರವೇಗದಲ್ಲಿ ಸಾಗುತ್ತದೆ.
ಮೊದಲರ್ಧ ಸ್ವಲ್ಪ ನಿಧಾನವಾಯಿತು ಎನಿಸಿತು.ತಮಿಳಿನ ನಿರ್ದೇಶಕ ಪ್ರದೀಪ್ ಸಹಾ ಕಥಾವಸ್ತುವಿಗೆ ನ್ಯಾಯ ಒದಗಿಸಿ ವೀಕ್ಷಕನನ್ನು ಕಟ್ಟಿಹಾಕುತ್ತಾರೆ.ಬಹಳ ಕಠಿಣ ಹೃದಯದ, ನಿಗೂಢ ರಹಸ್ಯವನ್ನು ಬಚ್ಚಿಟ್ಟುಕೊಂಡ ರಾಜಕಾರಣಿ- ವಿಲನ್ ಆಗಿ ಅದೇ ಕನ್ನಡದ ನಟ ಸಂಪತ್ ಮೈತ್ರೇಯ ಇಲ್ಲಿಯೂ ಕಾಣಿಸಿಕೊಡಿರುವುದು ಸ್ತ್ಯುತ್ಯರ್ಹ.
ಸುಮನ್ ರಂಗನಾಥನ್ ಮೋಹಕ ನಟಿಯಾಗಿ ನಾಯಕನನ್ನು ಬಲೆಗೆ ಬೀಳಿಸಿಕೊಳ್ಳಲು ಯತ್ನಿಸುವ ಪಾತ್ರವನ್ನು ಪುನಃ ಇಲ್ಲಿಯೂ ಅಭಿನಯಿಸಿದ್ದಾರೆ.ತಮಿಳು ಸಂಭಾಷಣೆ ಸಹಾ ಚುರುಕಾಗಿ ಆ ಚಿತ್ರದ ವಾತಾವರಣಕ್ಕೆ, ಮೂಡ್ ಗೆ ತಕ್ಕಂತಿದೆ.ಹಿನ್ನೆಲೆ ಸಂಗೀತ ಮತ್ತು ಎರಡು ಗೀತೆಗಳು ಜನಪ್ರಿಯವಾಗಿವೆ, ಬಹಳ ಸೂಕ್ತವಾಗಿ ನೆನಪಿಸಿಕೊಳ್ಳುವಂತೆ ಅದನ್ನು ನಿರ್ವಹಿಸಿದ್ದಾರೆ ಸಂಗೀತ ನಿರ್ದೇಶಕ ಸೈಮನ್ ಕೆ ಕಿಂಗ್!
ಹೀಗೆಲ್ಲಾ ಕನ್ನಡದ ಚಿತ್ರವನ್ನು ಎರಡು ಬಾರಿ ವೀಕ್ಷಿಸಿದ ನಾನು ನಿಷ್ಪಕ್ಷವಾತವಾಗಿಯೇ ಅಂದರೂ ಇದಕ್ಕೆ ರೇಟಿಂಗ್= 3.5/5 ಕೊಡಬಲ್ಲೆ.
ಅಮೆಜ಼ಾನ್ ಪ್ರೈಂ ನಲ್ಲಿ ಲಭ್ಯ.
ಅಂದಹಾಗೆ ಇದನ್ನು ತೆಲುಗುನಲ್ಲಿ ಸಮಕಾಲೀನವಾಗಿ ರೀಮೇಕ್ ಮಾಡಿ ಸುಮಂತ್ ಎಂಬ ನಾಯಕ ನಿರ್ವಹಿಸಿದ್ದಾನಂತೆ. ಮತ್ತೆ ಅದನ್ನು ನಾನೂ ನೋಡಿಲ್ಲ.