ಕಲ್ಯಾಣ ಕರ್ನಾಟಕದ ಈ ಪ್ರತಿಭೆಯ ಹೆಸರು ಜೆ. ಎಸ್. ಸ್ವಾತಿಶ್ರೀ, ಭತ್ತದ ನಾಡು ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಗಂಗಾವತಿಯ ನಿವಾಸಿ,ಅಪ್ಪಟ ಕನ್ನಡತಿ, ವಿದ್ಯಾರ್ಹತೆ BE. ಸಂಗೀತ, ಡ್ಯಾನ್ಸ್, ನಾಟಕಗಳ ಜೊತೆಯಿರುವ ಒಡನಾಟ, ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕೆಂಬ ಉದ್ದೇಶದಿಂದ ಒಳ್ಳೆಯ ಸಂಭಳದ ಕೆಲಸವಿದ್ದರೂ ಬಿಟ್ಟು ಬಂದ ಗಟ್ಟಿ ಮನಸ್ಸಿನ ಹೆಣ್ಣು, ಹಿಡಿದ ಕೆಲಸವನ್ನು ಪೂರ್ಣಗೊಳಿಸಲೇಬೇಕೆಂಬ ಛಲ,ಕೇವಲ ತನ್ನ ಕಣ್ಣುಗಳ ಮೂಲಕವೇ ಅಸಂಖ್ಯ ಯುವಕರ ನಿದ್ದೆಗೆಡೆಸುವ ಚೆಲುವೆ, ಯಾವುದೇ ಪಾತ್ರವಾಗಲಿ ಕ್ಯಾಮೆರಾ ಮುಂದೆ ನಿಂತೊಡನೆ ತಾನೇ ಆ ಪಾತ್ರವಾಗಿ ಬಿಡುವ ನಟಿ ಸ್ವಾತಿ ನಮ್ಮ ಇಂದಿನ ಸೆಲೆಬ್ರಿಟಿ.
ಕ್ಯಾಮೆರಾ ಹೊರಗಡೆ ನಟಿ ಸ್ವಾತಿಯ ಹವ್ಯಾಸ, ನೋವು, ನಲಿವುಗಳ ಕುರಿತ ಒಂದು ಚಿಕ್ಕ ಪರಿಚಯ.
ಚಿತ್ರೋದ್ಯಮ: ನಿಮ್ಮ ಸಿನಿಮಾ ಜರ್ನಿ ಹೇಗೆ ಆರಂಭವಾಯಿತು?
ಸ್ವಾತಿ: ನನ್ನ ಮೊದಲ ಕಿರು ಚಿತ್ರ ನಿಧಿ, ಹೆಣ್ಣಿನ ಭ್ರೂಣ ಹತ್ಯೆಯ ಕಥೆ, ಇದರಲ್ಲಿ ಮನೆಗೆಲಸದವಳ ಪಾತ್ರವನ್ನು ಮಾಡಿದ್ದೆ. ನನಗೆ ಈ ಶಾರ್ಟ್ ಮೂವಿಯಲ್ಲಿ ಛಾನ್ಸ್ ಸಿಕ್ಕಿದ್ದು ನನ್ನ ಗುರುಗಳು ಡ್ಯಾನ್ಸ್ ಕೋರಿಯೋಗ್ರಾಫರ್ ಮಾಲೂರು ಶ್ರೀನಿವಾಸ್ ಥ್ರೂ. ನಾನು ಕೂಡ ಅವರ ಸ್ಟೂಡೆಂಟ್. ಹೀಗೆಯೇ ಒಂದು ದಿನ ಪುನೀತ್ ಎನ್ನುವವರು ನನ್ನ ಸರ್ ಸ್ಟೂಡೆಂಟ್, ನಮ್ಮ ಸರ್ ಹತ್ತಿರ ಬಂದು ಮಹಿಳಾ ಪ್ರಧಾನ ಕಿರುಚಿತ್ರವನ್ನು ಮಾಡುತ್ತಿದ್ದು ನಾಲ್ಕು ಜನ ಲೇಡಿ ಆರ್ಟಿಸ್ಟ್ ಬೇಕೆಂದು ಕೇಳಿದ್ದರು.ಆ ಟೈಮಲ್ಲಿ ನಮ್ಮನ್ನೆಲ್ಲ ಇಂಟ್ರಡ್ಯೂಸ್ ಮಾಡಿ ಕ್ಯಾರೆಕ್ಟರ್ ಕೂಡ ಸೆಲೆಕ್ಟ್ ಮಾಡಿದ್ದರು. ಈ ರೀತಿ ನನ್ನ ಶಾರ್ಟ್ ಮೂವಿ ಪ್ರವೇಶಕ್ಕೆ ಪ್ರಮುಖ ಕಾರಣವೆಂದರೆ ಅದು ಮಾಳೂರು ಶ್ರೀನಿವಾಸ್ ಸರ್.
ಚಿತ್ರೋದ್ಯಮ: ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ನಿಮಗಾದ ಅನುಭವ?
ಸ್ವಾತಿ: ನಿಜಕ್ಕೂ ಅದ್ಭುತ ಅನುಭವ, ಆ ಟೀಮ್ ಜೊತೆ ಕೆಲಸವನ್ನು ಮಾಡಿದ ಅಷ್ಟು ದಿನಗಳ ಕಾಲ ನನ್ನ ಕುಟುಂಬದ ಜೊತೆಯಲ್ಲಿದ್ದೇನೆ ಎನ್ನುವ ಫೀಲಿಂಗ್ ಬಂದಿತ್ತು.
ಚಿತ್ರೋದ್ಯಮ: ನಿಮ್ಮ ತಾಯಿಯವರು ಕೂಡ ರಂಗ ಭೂಮಿಯ ಕಲಾವಿದರು ಎಂದು ಕೇಳ್ಪಟ್ಟಿದ್ದೇವೆ, ಇದರ ಬಗ್ಗೆ ನೀವೇನು ಹೇಳ್ತೀರಾ?
ಸ್ವಾತಿ: ನನ್ನ ತಾಯಿಯ ಹೆಸರು ಡಾ.ಸಿ.ಮಹಾಲಕ್ಷ್ಮೀ,ಸಮಾಜ ಸೇವಕರು, ಹವ್ಯಾಸಿ ರಂಗಭೂಮಿ ಕಲಾವಿದರು. ಸುಮಾರು 40 ವರ್ಷಗಳಿಂದ ರಂಗಭೂಮಿಯಲ್ಲಿ ಇದ್ದಾರೆ. 1990 ರಲ್ಲಿ ನನ್ನ ತಾಯಿ ನಟಿಸಿ, ನಿರ್ದೇಶನ ಮಾಡಿದ ಗೋಳು ನಾಟಕದಲ್ಲಿನ ಪಾತ್ರಕ್ಕೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಪೌರಾಣಿಕ, ಆಧ್ಯಾತ್ಮಿಕ, ಸಾಮಾಜಿಕ ಎಂದು ಬಹಳಷ್ಟು ನಾಟಕಗಳಲ್ಲಿ ಪಾತ್ರವನ್ನು ಮಾಡಿದ್ದಾರೆ. ಹಾಗಾಗಿ ನಟನೆ ಅನ್ನುವುದು ನನಗೂ ಕೂಡ ರಕ್ತದಲ್ಲಿಯೇ ಬಂದು ಬಿಟ್ಟಿದೆ.
ಚಿತ್ರೋದ್ಯಮ: ನೀವು ಇತ್ತೀಚೆಗೆ ಸ್ಥಳೀಯ ಕಲಾವಿದರೊಂದಿಗೆ ಸೇರಿ ಪ್ರಣಂ ಎನ್ನುವ ಕಿರುಚಿತ್ರದಲ್ಲಿ ನಟಿಸಿದ್ದಿರಿ, ಅಲ್ಲಿ ನಿಮಗೆ ಯಾವ ರೀತಿ ಅನುಭವ ವಾಯಿತು?
ಸ್ವಾತಿ: ತುಂಬ ಒಳ್ಳೆಯ ಪ್ರಶ್ನೆ ಕೇಳಿದ್ದೀರಿ ಸರ್, ಪ್ರಣಂ ಚಿತ್ರ ತಂಡವು ಸಂಪೂರ್ಣ ಹೊಸಬರಿಂದ ಕೂಡಿದ ತಂಡ, ಅಚ್ಚುಕಟ್ಟಾದ ಚಿತ್ರೀಕರಣ, ಟೈಮ್ ಮೆಂಟೇನ್ ತುಂಬಾ ಚೆನ್ನಾಗಿ ಮಾಡ್ತಾರೆ, ಉದಾಹರಣೆಗೆ ಬೆಳಿಗ್ಗೆ 10 ಗಂಟೆಗೆ ಶೂಟಿಂಗ್ ಎಂದರೆ ಆಕ್ಟರ್ ಗಳೆಲ್ಲ ಬೆಳಿಗ್ಗೆ 9 ಗಂಟೆಗೆ ಲೊಕೇಶನ್ ಗೆ ಬಂದು ಬಿಡುವರಲ್ಲದೇ ಅಂದುಕೊಂಡ ಟೈಂನಲ್ಲಿ ಶೂಟಿಂಗ್ ಮುಗಿಸುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕೆಂಬ ಉದ್ದೇಶದಿಂದ ಒಂದು ಒಳ್ಳೆಯ ಟೀಮ್ ನ್ನು ತಯಾರು ಮಾಡಿಕೊಂಡಿದ್ದಾರೆ. ಈ ಟೀಂ ಜೊತೆ ನಾನು ಇನ್ನೂ ಹೆಚ್ಚು ಚಿತ್ರಗಳಲ್ಲಿ ನಟಿಸಲು ರೆಡಿಯಿದ್ದೇನೆ.
ಚಿತ್ರೋದ್ಯಮ: ನೀವು ಪ್ರಸ್ತುತ ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?
ಸ್ವಾತಿ: ಈಗಾಗಲೇ ಎಸ್.ನಾರಾಯಣ್ ಸರ್ ಡೈರೆಕ್ಷನ್ ಮಾಡಿದ್ದು ನಟ ಆದಿತ್ಯ,ನಟಿ ಅದಿತಿ ಪ್ರಭುದೇವ ನಟಿಸಿದ 5 ಡಿ ಚಿತ್ರದಲ್ಲಿ ನರ್ಸ್ ಪಾತ್ರದಲ್ಲಿ ನಟಿಸಿದ್ದೇನೆ. ಇನ್ನೊಂದು ಬರ್ಗೆಟ್ಟ ಬಸ್ಯ ಚಿತ್ರದಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರ, ಲಾಕ್ ಡೌನ್ ಇದ್ದಿದ್ದರಿಂದ ಶೂಟಿಂಗ್ ನ್ನು ಡಿಸೆಂಬರ್ ತಿಂಗಳಿಗೆ ಪೋಸ್ಟ್ ಮನ್ ಮಾಡಿಬಿಟ್ಟರು.
ಚಿತ್ರೋದ್ಯಮ: ನೀವು ಯಾವ ರೀತಿಯ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೀರಿ?
ಸ್ವಾತಿ: ನನಗೆ ಇಂತಹದೇ ಪಾತ್ರಗಳಿಗೆ ಬ್ರ್ಯಾಂಡ್ ಆಗಬೇಕೆಂತಿಲ್ಲ, ನಾನು ಎಲ್ಲ ರೀತಿಯ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೇನೆ.
ಚಿತ್ರೋದ್ಯಮ: ನಿಮ್ಮ ಜೀವನದ ರೋಲ್ ಮಾಡೆಲ್ ಯಾರು?
ಸ್ವಾತಿ: ನನ್ನ ತಾಯಿ, ಏಕೆಂದರೆ ಚಿಕ್ಕಂದಿನಿಂದಲೂ ನನಗೆ ಏನು ಬೇಕು,ಬೇಡ, ನನ್ನ ಇಷ್ಟವನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಹಗಲು ರಾತ್ರಿ ಎನ್ನದೆ ನಿರಂತರವಾಗಿ ನನ್ನ ಏಳಿಗೆಗೆ ಶ್ರಮಿಸುತ್ತಿರುವ ನನ್ನ ತಾಯಿಯೇ ನನ್ನ ರೋಲ್ ಮಾಡೆಲ್ ಎಂದು ಹೆಮ್ಮೆಯಿಂದ ಹೇಳುತ್ತೇನೆ.
ಚಿತ್ರೋದ್ಯಮ: ನಿಮ್ಮ ಜೀವನದ ಪ್ರಮುಖ ಗುರಿ?
ಸ್ವಾತಿ: ಉತ್ತಮ ಪಾತ್ರಗಳ ಮೂಲಕ ಯಶಸ್ವಿ ನಟಿಯಾಗಬೇಕು, ಮುಖ್ಯವಾಗಿ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.
ಚಿತ್ರೋದ್ಯಮ: ನಿಮ್ಮ ಹವ್ಯಾಸಗಳೇನು?
ಸ್ವಾತಿ: ಹವ್ಯಾಸಗಳೆಂದರೆ ಹೆಚ್ಚು ಮೂವೀಸ್ ನೋಡುವುದು, ಆಗಾಗ ಫ್ರೆಂಡ್ಸ್ ಜೊತೆ ಟ್ರಿಪ್ ಗೆ ಹೋಗುವುದು ಮಾಡ್ತಾನೆ ಇರ್ತೀನಿ.
ಸ್ವಾತಿಯವರ ಸಿನಿಮಾ ಜರ್ನಿ ಹೂವಿನ ಹಾಸಿಗೆಯಾಗಲಿ, ಯಶಸ್ಸಿನ ಮೇಲೆ ಯಶಸ್ಸು ಪಡೆಯಲೆಂದು ನಮ್ಮ ಚಿತ್ರೋದ್ಯಮ.ಕಾಂ.ತಂಡವು ಹಾರೈಸುತ್ತದೆ.