ಒಂದು ಸಿನೆಮಾ ಉದ್ದದ (2 ಗಂಟೆ) ಸರಳ ಅಪರಾಧದ ಕಥೆಯಲ್ಲಿ ಅಸಂಬದ್ಧ ಮತ್ತು ಹಲವಾರು ಅನವಶ್ಯಕ ಅನೈತಿಕ ಸಂಬಂಧಗಳನ್ನು ತುರುಕಿ ಗೊಂದಲವೆಬ್ಬಿಸಿ ಆರು ಎಪಿಸೋಡುಗಳಿಗೆ (5 ಗಂಟೆ) ಎಳೆದು ಹೇಳಲು ಹೊರಟರೆ ಏನು ಸಿಗುತ್ತದೆ? ನೆಟ್ಫ್ಲಿಕ್ಸ್ ನಲ್ಲಿ ಹರಿಯುತ್ತಿರುವ ಕೊಹ್ರಾ ಎಂಬ ಹೊಸ ವೆಬ್ ಸರಣಿ:
ಒಬ್ಬ ಯು.ಕೆ.ಯ ಅನಿವಾಸಿ ಭಾರತೀಯ ಕುಟುಂಬ ಮತ್ತು ಸ್ನೇಹಿತರು ಪಂಜಾಬಿಗೆ ಅವರ ಮನೆಯ ಯುವಕನ ಮದುವೆಗೆ ಬಂದಿದ್ದಾಗ ಗದ್ದೆಯೊಂದರಲ್ಲಿ ಅವನ ಕೊಲೆಯಾಗುತ್ತದೆ. ಮತ್ತು ಅವನ ಗೆಳೆಯ ಕಾಣೆಯಾಗುತ್ತಾನೆ, ಇದಿಷ್ಟೇ ಮುಖ್ಯ ಕಥೆ. ಅದನ್ನು ಪತ್ತೆ ಹಚ್ಚಲು ಬಂದ ಲೋಕಲ್ ಪೋಲೀಸ್ ಅಧಿಕಾರಿಗಳಿಗೆ ರಾಜಕೀಯ/ ಮೇಲಧಿಕಾರಿಗಳ ಒತ್ತಡವೂ ಇದೆ. ಇನ್ನು ಆ ಡಿಸ್ಜಾಯಿಂಟೆಡ್ ಕುಟುಂಬದ ಸದಸ್ಯರ ಸುತ್ತ ಅನುಮಾನದ ಹುತ್ತ ಬೆಳೆಸುವ ಪ್ರಯತ್ನ ಮೊದಲ ಸಂಚಿಕೆಯಲ್ಲೇನೋ ಯಶಸ್ವಿಯಾಗುತ್ತದೆ, ಎರಡನೇ ಎಪಿಸೋಡಿನಿಂದ ಈ ಕಥೆಗಾರ -ನಿರ್ದೇಶಕ ತಂಡ ಅತಿರೇಕದ ಪೋಲೀಸ್ ಕಸ್ಟಡಿ ಕ್ರೌರ್ಯ, ಎಲ್ಲ ಪಾತ್ರಗಳಿಗೂ ಗ್ರೇ ಬಣ್ಣ ಬಳಿಯುವಂತಾ ಗುಪ್ತ ಅನೈತಿಕ ಸಂಬಂಧಗಳನ್ನು ಸೃಷ್ಟಿಸಿ ವೀಕ್ಷಕರನ್ನು ಒಂದೆಡೆ ಗೊಂದಲಕ್ಕೆ ತಳ್ಳಿದರೆ ಇನ್ನೊಂದೆಡೆ ಪತ್ತೇದಾರಿ ಅನಿಸಿಕೊಂಡ ಮುಖ್ಯ ಕಥೆಯ ವೇಗ ಕುಂಠಿತವಾಗುತ್ತದೆ.
ಈ ನಡುವೆ ಎಲ್ಲ ವೆಬ್ ಸೀರಿಯಲ್ಲುಗಳ ಯಶಸ್ಸಿಗೂ ಕಂಡುಕೊಂಡ ಹೊಸ ಮಂತ್ರ: ಹಸಿ ಬಿಸಿ ಲೈಂಗಿಕ ದೃಶ್ಯಗಳನ್ನು ತುರುಕಿ ಅದೆಲ್ಲ ನಮ್ಮ ಸಮಾಜದಲ್ಲಿ ಸರ್ವೇ ಸಾಮಾನ್ಯ ಎಂಬಂತೆ ಬಿಂಬಿಸುವುದು, ಪೋಲೀಸ್ ಎಂದ ತಕ್ಷಣ ಅವನು ಟಫ್ ಅಧಿಕಾರಿ ಎಂದು ಸೂಚಿಸಲು ಅನವಶ್ಯಕವಾದ ಧೀರ್ಘ ಹಿಂಸೆಯ ದೃಶ್ಯಗಳನ್ನು ತುರುಕುವುದೂ ರೂಢಿಯಾಗಿಬಿಟ್ಟಿದೆ. ಅಂತಹ ದೌರ್ಜನ್ಯಕ್ಕೆಲ್ಲ ಈಗ ಕಾನೂನಿನ ಸಮ್ಮತಿಯಿಲ್ಲ, ಅದು ಯಾವುದೋ ಹಳೇ ಕಾಲದ ಕ್ರೂರ ಪೋಲೀಸರ ಬಗೆಗಿನ ಕಲ್ಪನೆ ಎಂದು ಈ ಸರಣಿಯ ನಿರ್ದೇಶಕರಿಗೆ ಅರ್ಥವಾಗಿಲ್ಲ. ಇಷ್ಟೆಲ್ಲ ಕಾಂಟೆಂಪೊರರಿ ಎಂದು ಹೇಳಿಕೊಳ್ಳುವ ಇವರು ಶಂಕಿತರ ಮತ್ತು ಬಂಧಿತರ ಮಾನವೀಯ ಹಕ್ಕುಗಳ ( ಹ್ಯೂಮನ್ ರೈಟ್ಸ್) ಬಗ್ಗೆಯೇ ಕೇಳಿಲ್ಲ ಮಾತ್ರವಲ್ಲ, ಅದರ ಬಗ್ಗೆ ಅಪಹಾಸ್ಯವನ್ನೂ ಒಂದೆಡೆ ಮಾಡಿದ್ದಾರೆ. ಇದೆಲ್ಲ ಅಕ್ಷಮ್ಯ ಅಲ್ಲದೇ ಅಸಹ್ಯ ತರುವಷ್ಟು ಸಲ ತೋರಿಸಿ ನಮಗೆ ಬುದ್ದಿ ಚುರುಕಾಗಿರುವುದರ ಬದಲು ಜಡವಾಗುತ್ತದೆ. ಅದುವೇ ಪತ್ತೇದಾರಿ ಕಥೆಗೆ ಮಾರಕ. ಉದಾಹರಣೆಗೆ ಇಬ್ಬರೂ ಪೋಲೀಸರ ಕುಂಟುಂಬಗಳ ವಿರಸ, ವಿವಾಹೇತರ, ಅನೈತಿಕ ಸಂಬಂಧಗಳು ಅಲ್ಲಲ್ಲಿ ದೊಡ್ಡ ಫುಟೇಜ್ ಪಡೆದು, ಕೊನೆಗೆ ಮುಖ್ಯಧಾರೆಗೆ ಸಹಾಯ ಮಾಡುವುದೇ ಇಲ್ಲ. ಅದು ಪೂರಕವೂ ಅಲ್ಲ, ಅವಶ್ಯಕವಂತೂ ಅಲ್ಲವೇ ಅಲ್ಲ ಎಂದು ನಮಗೆ ಕೊನೆಯಲ್ಲಿ ಗೊತ್ತಾದಾಗ ನಿಜಕ್ಕೂ ಸಮಯ ವ್ಯಯ ಮಾಡಿದ್ದಕ್ಕೆ ನಿರಾಸೆಯಾಗುತ್ತದೆ.
ಇದೆಲ್ಲಾ ಮುಗಿಯುವ ಹೊತ್ತಿಗೆ ಕೊನೆಯ ಎಪಿಸೋಡಿನಲ್ಲಿ ಸಹಜವಾಗಿಯೇ ಸ್ವಲ್ಪ ಅರ್ಥವತ್ತಾಗಿಯೇ ಕ್ಲೈಮ್ಯಾಕ್ಸ್ ಪ್ರದರ್ಶಿಸಿ ಕಥೆಯನ್ನು ಸೂಕ್ತವಾಗಿಯೇ ಮುಗಿಸಿದ ಕ್ರೆಡಿಟ್ ಕೂಡ ನಾವು ಇವರಿಗೆ ಕೊಡಬಹುದು. ಇದೇ ಜಾಣ್ಮೆಯನ್ನು ನಿರ್ದೇಶಕ ಮತ್ತು ಕಥೆಗಾರರು ಸರಣಿಯ ಮಧ್ಯದಲ್ಲಿ ತೋರಿಸಿದ್ದರೆ ಇದು ಒಂದು ಎರಡು ಗಂಟೆಯ ಚಲನಚಿತ್ರವಾಗಿಯೇ ಇನ್ನೂ ಚುರುಕಾಗಿ ಮಾಡಿಬಂದಿರುತ್ತಿತ್ತು.
ಪಾತ್ರವರ್ಗದಲ್ಲಿ ಅಂತಹ ಖ್ಯಾತನಾಮರಿಲ್ಲ. ಆದರೆ ಅಭಿನಯ ಅವರಿಗೆ ಕೊಟ್ಟ ಕಥೆಯ ಸ್ಪೇಸಿನಲ್ಲಿ ತೃಪ್ತಿಕರವೇ ಆಗಿದೆ. ಪಂಜಾಬಿ ಅಂದ ಕೂಡಲೇ ಕೇಳಬೇಕೆ, ಅಶ್ಲೀಲ ಪದಗಳು ಸರ್ವೇಸಾಮಾನ್ಯವಾಗಿ ಹಾಸುಹೊಕ್ಕಿವೆ.
ಸ್ವಲ್ಪ ಈ ಡಲ್ ಮತ್ತು ಗ್ರೇ ಮೂಡ್ ಇಲ್ಲದಿದ್ದರೆ ಒಟ್ಟಾರೆ ಆಸಕ್ತಿಕರ ಮರ್ಡರ್ ಮಿಸ್ಟರಿ ನೋಡಿದಂತಾಗುತ್ತಿತ್ತು. ಮೊದಲ ಎರಡು ಮತ್ತು ಕೊನೆಯ ಎಪಿಸೋಡು ಮಾತ್ರ ನೋಡಿದರೆ ಸಾಕು, ಮಿಕ್ಕವೂ ಮುಖ್ಯವೇ ಅಲ್ಲ ಎಂದು ಇದನ್ನು ನೋಡಬಯಸುವವರಿಗೆ ನನ್ನ ಸಲಹೆ,
ರೇಟಿಂಗ್: 2.5/5