ಗಮಕ ಕಲಾ ನಿಧಿ ಜೋಳದ ರಾಶಿ ದೊಡ್ಡನ ಗೌಡರು

( ಮುಂದುವರೆದ ಭಾಗ )

ಜನರಲ್ಲಿ ಕನ್ನಡ ಕಾವ್ಯಗಳ ಬಗ್ಗೆ ಆಸಕ್ತಿ ಹುಟ್ಟಿಸುವ ಕಾರ್ಯ ಆರಂಭಿಸಿದಾಗ ಮೊದಲು ಅ.ನ.ಕೃಷ್ಣರಾಯರು ತಮ್ಮ ಅಮೋಘ ಭಾಷಣಗಳ ಮೂಲಕ ಮಾಡಿದರೆ ಅವರ ಆಪ್ತ ಸ್ನೇಹಿತರಾದ ದೊಡ್ಡನ ಗೌಡರು ಕಾವ್ಯ ಗಾಯನದಲ್ಲಿ ಸಾಹಿತ್ಯಾಭಿರುಚಿ, ಸಂಗೀತ ಪ್ರಜ್ಞೆ ಮತ್ತು ದೈವ ಭಕ್ತಿಯ ಆವೇಶವನ್ನು ತಮ್ಮ ಗಾಯನದ ಮೂಲಕ ತೋರಿಸಿದರು. ರಾಜಶೇಖರ ವಿಳಾಸ, ಶೂನ್ಯ ಸಂಪಾದನೆ, ಭರತೇಶ ವೈಭವ, ಪ್ರಭು ಲಿಂಗಲೀಲೆ,ಬಸವ ಪುರಾಣ, ಹರಿಹರನ್ ರಗಳೆಗಳು, ಗಿರಿಜಾ ಕಲ್ಯಾಣ, ಹರಿಶ್ಚಂದ್ರ ಕಾವ್ಯ, ರಾಮಾಯಣ ದರ್ಶನಂ ಮತ್ತು ಜೈಮಿನಿ ಭಾರತ ಇತ್ಯಾದಿ  ಪ್ರಸಿದ್ಧ ಮಹಾಕಾವ್ಯಗಳನ್ನು ಹಾಡುತ್ತಿದ್ದರು. ಗೌಡರಿಗೆ ಕನ್ನಡ ಮತ್ತು ಕನ್ನಡದ ಕಾವ್ಯಗಳ ಮೇಲೆ ಎಂತಹ ಪ್ರೀತಿಯಿತ್ತೆಂದರೆ ಅವರ ವಾಡಿಕೆಯಲ್ಲಿ ಬರುವ ಶೋತ್ರಗಳಲ್ಲಿ ಬಿಕ್ಕಿ ಬಿಕ್ಕಿ ಅಳುವ ಪ್ರಸಂಗಗಳು ಬಂದಾಗ ಹಾಡಿದ  ಸಮಯದಲ್ಲಿ ಎಷ್ಟೋ ಸಲ ಉದ್ವೇಗಕ್ಕೊಳಗಾಗಿ ಅಳುತ್ತಿದ್ದ ಪ್ರಸಂಗಗಳು ಇದ್ದವು. ದೊಡ್ಡನಗೌಡರು ನಟ,ಗಾಯಕರಲ್ಲದೆ ಶ್ರೇಷ್ಠ ಬರಹಗಾರರಾಗಿ ದ್ದರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸೇರಿ ಸುಮಾರು ೪೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ರಸವರ್ಷ,ಯಾಂತ್ರಿಕ ಹಂಪೆ,ಗೌಡತಿ ಬರಲಿಲ್ಲ ಮುಂತಾದವು ಅವರ ಪ್ರಸಿದ್ಧ ಕಾವ್ಯ ಕೃತಿಗಳಾದರೆ ನೋಡ್ರವ್ವ ನಾಟಕ,ಅಭಯ,ಸಾಯದವನ ಸಮಾಧಿ, ಕ್ರಾಂತಿ ಪುರುಷ ಮತ್ತು ಕನಕದಾಸ ಅವರು ರಚಿಸಿದ ಪ್ರಖ್ಯಾತ ನಾಟಕಗಳಾಗಿವೆ. ಅವರ ಆತ್ಮ ಚರಿತ್ರೆ ನಂದೇನಾನೋದಿದೆ ಪುಸ್ತಕ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಕೃತಿ ಎಂದು ಖ್ಯಾತಿ ಪಡೆದಿದೆ. ಅವರ ಆತ್ಮ ಚರಿತ್ರೆಯ ಒಂದು ಘಟನೆಯ ಅನುಭವವನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಎಷ್ಟು ಸೊಗಸಾಗಿ ವಿವರಿಸಿದ್ದಾರೆ ಎಂದು ನಿಮಗೆ ಗೊತ್ತಾ? ನನ್ನ ವಯಸ್ಸು ಸುಮಾರು ೬ ರಿಂದ ೭ ವರ್ಷ ಇರಬಹುದು. ನಾಟಕದ ಹೆಸರು ಕನಕಾತರ ಆ ನಾಟಕದ ಕಥೆಯೇ ತಿಳಿಯದು‌. ಅದರಲ್ಲಿ ಋಷ್ಯಾಶ್ರಮ, ಅಲ್ಲಿ ಒಬ್ಬ ಋಷಿ. ಆ ಋಷಿಯ ಶಿಷ್ಯರಲ್ಲಿ ನಾನೊಬ್ಬ ಬಾಲ ಶಿಷ್ಯ. ಪದವನ್ನೇನೋ ಕಲಿತು ಹಾಡುತ್ತಿದ್ದೆ, ಆದರೆ ಪದದಲ್ಲಿಯ ಪರಮ ಗುರುವರ ಎಂದು ಹೇಳುವ ಬದಲಾಗಿ ಪಲಮ ಗುಲುವಲ ಎಂದು ಹೇಳುತ್ತಿದ್ದೆ. ರಕಾರವನ್ನು ನುಡಿಯದೇ ಇದ್ದ ನಾಲಿಗೆ ಎಷ್ಟು ಸರಿ ಹೇಳಿಕೊಟ್ಟರೂ ಲಕಾರವನ್ನೇ ನುಡಿಯುತ್ತಿತ್ತು. ಇದರಿಂದ ನನ್ನ ಓರಗೆಯ ಹುಡುಗರೆಲ್ಲ ನನ್ನ ಹೆಸರಿಗೆ ಬದಲಾಗಿ ಏಗುವಲಾ ಬಾರೋ ಎಂದು ಅಪಹಾಸ್ಯ ಮಾಡುತ್ತಿದ್ದರು.

ಮೊದಲನೆಯ ಗುಲು ಸ್ತೋತ್ರ ನಾಟಕವಾಡಿಸಲೇ ಇಲ್ಲ. ಅದೇ ಸಮಯದಲ್ಲಿ ಊರಿನಲ್ಲಿ ಪ್ಲೇಗ್ ಬಂದು ಊರವರನ್ನಲ್ಲದೇ ನಾಟಕದವರಲ್ಲಿ ಕೆಲವರನ್ನು ನುಂಗಿ ನೀರು ಕುಡಿದಿದ್ದರಿಂದ ಆ ನಾಟಕ ಆ ನನ್ನ ಗುಲ್ಲು ಸ್ತೋತ್ರ ಅಲ್ಲಿಗೆ ನಿಂತು ಹೋಯಿತು. ಇನ್ನು ಹಲವು ವಿಶಿಷ್ಟ ಘಟನೆಗಳಿಂದ ಕೂಡಿದ ಕರ್ನಾಟಕ ರಂಗ ಭೂಮಿಯ ಚರಿತ್ರೆ ದೃಷ್ಟಿಯಿಂದ ಮಹತ್ವದ್ದಾಗಿದೆ. ಅಲ್ಲದೇ ಗದ್ಯ ಕೂಡ ವಿಶಿಷ್ಟವಾಗಿದೆ. ಇವರ ದ್ವೀ ಭಾಷಿಕ ಕೃತಿಯಲ್ಲಿ ಬರಹ, ನಟನೆ ಮತ್ತು ಗಾಯನಗಳ ವಿಶಿಷ್ಟತೆಯಿದೆ. ದೊಡ್ಡನ ಗೌಡರು ಅಂದಿನ ಪ್ರಸಿದ್ಧ ತೆಲುಗು ನಟರಾದ ಬಳ್ಳಾರಿಯ ರಾಘವ ಅವರ ಪರಮಾಪ್ತ ಶಿಷ್ಯರಾಗಿದ್ದು ಭಾಷಾ ಕವಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದರು. ಕನ್ನಡ ಮತ್ತು ತೆಲುಗು ಭಾಷೆ ಅವರ ಎರಡು ಶ್ವಾಸಕೋಶಗಳಂತೆ ಇದ್ದವು. ವಚನಾಮೃತ ಅನುಭವಾಲು,ಗೇಯ,ಗುಂಜಾರಮ ಅವರು ರಚಿಸಿದ ಪ್ರಮುಖ ತೆಲುಗು ಕೃತಿಗಳಾಗಿವೆ. ಸಾಹಿತ್ಯದ ಉಳಿವು, ಅಭಿವೃದ್ಧಿಗಾಗಿ ನಾಡಿನಾದ್ಯಂತ ಸಂಚರಿಸಿದರೂ ತಮ್ಮ ಊರಿನಲ್ಲಿ ನೆಲೆಸಿ ಸಮೃದ್ಧಿ ಗೊಳಿಸಿದರು. ಏಕೀಕರಣ ಚಳುವಳಿಕಾರ, ರೈತ,ನಟ,ಗಾಯಕ,ಗ್ರಾಮ ಪಂಚಾಯಿತಿ ಅಧ್ಯಕ್ಷತೆ ಹೀಗೆ ಹಲವು ಕೆಲಸಗಳನ್ನು ನಿರ್ವಹಿಸಿದ್ದು ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಮಧ್ಯೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದರು.

ಅವರಿಗೆ ತಮ್ಮ ಕಾವ್ಯದ ಬಗ್ಗೆ ಇದ್ದ ಬದ್ಧತೆ ಹೇಗೆ ಇತ್ತು? ನಿಮಗೆ ಗೊತ್ತಾ? ಹರಿಶ್ಚಂದ್ರ ಕಾವ್ಯವಾಗಲಿ, ಶೂನ್ಯ ಸಂಪಾದನೆಯನ್ನಾಗಲಿ ಹಾಡುತ್ತಿರುವಾಗ ಅಥವಾ ನಟನೆ ಮಾಡುತ್ತಿರುವಾಗಲೇ ರಂಗಭೂಮಿಯಲ್ಲಿ ತಮಗೆ ಸಾವು ಬರಬೇಕೆಂದು ಬಯಸಿದ್ದರು. ಮತ್ತು ಅಂತ್ಯ ಸಂಸ್ಕಾರದ ವೇಳೆ ಅಪಸ್ವರದಲ್ಲಿ ಹಾಡುವ ಭಜನೆಯವರನ್ನು ಕರೆಯಿಸಿಬಾರದು ಎಂದು ಅವರ ಸಂಬಂಧಿಕರಿಗೆ ಸೂಚಿಸಿದ್ದರು. ಈ ನಮ್ಮ ಅಪ್ಪಟ ದೇಸೀ ಪ್ರತಿಭೆಗೆ ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಕರ್ನಾಟಕ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,೧೯೮೧ ರಲ್ಲಿ ಬಳ್ಳಾರಿ ಜಿಲ್ಲೆಯ ೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು ಕಲ್ಬುರ್ಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳು ಲಭಿಸಿವೆ. ಈ ಮಹಾನ್ ಸಾಧಕ ಜೋಳದ ರಾಶಿ ದೊಡ್ಡನ ಗೌಡರು

ಮೇ ೧೦,೧೯೯೪ ರಂದು ತಮ್ಮ ೮೪ ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಈ ಲೋಕವನ್ನು ತ್ಯಜಿಸಿದರು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply