ಗಮಕ ಕಲಾ ನಿಧಿ ಜೋಳದ ರಾಶಿ ದೊಡ್ಡನ ಗೌಡರು

ಗಮಕ ಕಲಾ ನಿಧಿ ಎಂದೇ ಪ್ರಸಿದ್ಧಿ ಪಡೆದಿರುವ ಜೋಳದ ರಾಶಿ ದೊಡ್ಡನ ಗೌಡರದು ಬಹು ಮುಖ ವ್ಯಕ್ತಿತ್ವದ ಪ್ರತಿಭೆ. ವರ್ಣಿಸಲು ಪದಗಳೇ ಸಾಲದಷ್ಟು ಸಾಧನೆಯನ್ನು ಮಾಡಿರುವ ಇವರು ನಾಟಕ ರಂಗದ ದೈತ್ಯ ಪ್ರತಿಭೆ.

   ಬಳ್ಳಾರಿ ಜಿಲ್ಲೆಯ ಸಾಂಪ್ರದಾಯಿಕ ಹಳ್ಳಿಯಾದ ಜೋಳದ ರಾಶಿ ಬಳ್ಳಾರಿಯಿಂದ ೨೫ ಕಿಲೋ ಮೀಟರ್ ದೂರದಲ್ಲಿದ್ದು ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯ ಕಟ್ಟ ಕಡೆಯ ಹಳ್ಳಿಯಾಗಿದೆ. ಇವರು ಜನಿಸುವ ಮೊದಲು ಈ ಹಳ್ಳಿ ಯಾರಿಗೂ ಅಷ್ಟು ಪರಿಚಯವಿರಲಿಲ್ಲ. ಇದೇ ಹಳ್ಳಿಯಲ್ಲಿ ದೊಡ್ಡನ ಗೌಡರ ಜನನವಾಯಿತು. ಇವರ ತಂದೆ ಹೆಸರು ಪಂಪನ ಗೌಡರು ಮತ್ತು ತಾಯಿಯ ಹೆಸರು ರುದ್ರಮ್ಮ.

ದೊಡ್ಡನಗೌಡರು ತಮ್ಮ ಹಳ್ಳಿಯಲ್ಲಿ ಶಿಕ್ಷಣ ಕಲಿಯಲು ಅವಕಾಶ ಇದ್ದಷ್ಟು ಮಾತ್ರ ಶಿಕ್ಷಣ ಕಲಿಯಲು ಸಾಧ್ಯವಾಯಿತು. ಆದರೆ ಕಾರಣಾಂತರಗಳಿಂದ ಮುಂದಿನ ಶಿಕ್ಷಣ ಪಡೆಯುವುದರಿಂದ ವಂಚಿತರಾದರು. ಆದರೆ ಆಶ್ಚರ್ಯಕರ ವಿಷಯವೇನೆಂದರೆ ನಮ್ಮ ಗೌಡರು ಮೂಲತಃ ಜಮೀನುದಾರರು. ೪೦೦ ಎಕರೆ ಭೂಮಿಯನ್ನು ಹೊಂದಿದ್ದರೂ ಭೂ ಕಾಯಿದೆಯಲ್ಲಿ ಕೈ ತಪ್ಪಿದ ಪರಿಣಾಮ ೫೦ ಎಕರೆ ಭೂಮಿಯ ಮಾಲೀಕರಾದರು. ಆದರೆ ಎಂದೂ ಅವರು ಭೂ ಮಾಲಿಕತ್ವದ ಯಜಮಾನಿಕೆಯಾಗಲಿ, ದರ್ಪವಾಗಲಿ ನಡೆಸಲಿಲ್ಲ. ಬದಲಾಗಿ ನಟನೆ, ಕಾವ್ಯ ವಾಚನ,ಸಾಹಿತ್ಯಗಳಲ್ಲಿಯೇ ತಮ್ಮ ದಿನಗಳನ್ನು ಕಳೆಯುತ್ತ ನಾಡಿನಾದ್ಯಂತ ಸಂಚರಿಸಿದ್ದರು. ಬಾಲ್ಯದಲ್ಲಿಯೇ ಪಾತ್ರಗಳನ್ನು ನಿರ್ವಹಿಸಲು ಆರಂಭಿಸಿ ನಂತರ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಯಶಸ್ಸನ್ನು ಪಡೆದು ಕೆಲವು ದಿನಗಳ ನಂತರ ತಮ್ಮದೇ ನಾಟಕ ಮಂಡಳಿಯನ್ನು ಆರಂಭಿಸಿದರು. ಆದರೆ ಕಾರಣಾಂತರಗಳಿಂದ ಸ್ವಲ್ಪ ದಿನಗಳಲ್ಲೇ ಮುಚ್ಚಲ್ಪಟ್ಟಿತು. ಆದರೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಸಂಕಲ್ಪ ಹೊಂದಿದ್ದರಿಂದ ದೇವರ ಆಟ ಬಲ್ಲವರಾರು ಅಲ್ಲವೇ?

ಅದೇ ಸಮಯದಲ್ಲಿ ಅಂದಿನ ಪ್ರಸಿದ್ಧ ನಟ ಬಳ್ಳಾರಿಯ ರಾಘವ ರಿಂದ ನಟಿಸಲು ಆಹ್ವಾನ ಬಂದಾಗ ತನ್ನ ತಂದೆಯ ಒಪ್ಪಿಗೆ ಪಡೆದು ಪುನಃ ರಂಗಭೂಮಿಗೆ ಪ್ರವೇಶಿಸಿದರು. ಅಂದಿನ ದಿನಗಳಲ್ಲಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರೆಂದರೆ ಇವರ ಪ್ರತಿಭೆಗೆ ಇರುವ ಸಾಮರ್ಥ್ಯ ಎಂತಹುದು ಎಂಬುದು ತಿಳಿಯುತ್ತದೆ. ಅದರಲ್ಲೂ ಅವರ ನಟನೆಯಲ್ಲಿ ಮೂಡಿ ಬಂದ ಕನಕದಾಸರ ಪಾತ್ರಕ್ಕೆ  ಮರುಳಾಗದ ಪ್ರೇಕ್ಷಕರಿಲ್ಲ. ಬಸವೇಶ್ವರ, ಕನಕದಾಸ, ಕಬೀರ್ ದಾಸ,ನಾರದ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಎರಡು ಭಾಷೆಯ ರಂಗಭೂಮಿಯಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಹೀಗೆಯೇ ನಾಟಕ  ರಂಗದ ಮೂಲಕ ತಮ್ಮ ವೃತ್ತಿ ಆರಂಭಿಸಿ ಯಶಸ್ಸು ಪಡೆದರಲ್ಲದೆ ಗಮಕಿ,ಬರಹದ ತನಕ ತಮ್ಮ ವೃತ್ತಿಯನ್ನು ವಿಸ್ತರಿಸಿದರು. ಇವರಲ್ಲಿರುವ ಪ್ರತಿಭೆ ಒಂದೇ ಎರಡೇ, ಇವರ ಕಾಲದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ, ಜಾತ್ರೆಗಳಲ್ಲಿ ಕಾವ್ಯ ವಾಚನವಿರುತ್ತಿತ್ತು. ಆದರೆ ಈಗ ಅಷ್ಟಾಗಿ ಕಂಡುಬರುತ್ತಿಲ್ಲ. ನಮ್ಮ ಗೌಡರಿಗೆ ಸರಸ್ವತಿಯ ಕೃಪಾ ಕಟಾಕ್ಷ ಹೆಚ್ಚು ಇತ್ತೇನೋ ಗೊತ್ತಿಲ್ಲ. ಇವರು ತಮ್ಮ ಕಂಚಿನ ಕಂಠದ ಮೂಲಕ ಕವಿ ಪುಟ್ಟಪ್ಪನವರ ಮನೆಯಲ್ಲಿ ದ.ರಾ.ಬೇಂದ್ರೆ, ಕೋ ಚೆನ್ನಬಸಪ್ಪ, ವೀರಭದ್ರಪ್ಪ ಕವಿಗಳ ಸಮ್ಮುಖದಲ್ಲಿ ನಾರಾಯಣ ದರ್ಶನಂ,ಶಬಂ ಕಥಾ ಪ್ರಸಂಗವನ್ನು ವಾಚಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅದರಲ್ಲೂ ಗಮಕದ ಮೂಲಕ ಕಾವ್ಯವನ್ನು ಕೇಳಿಸಿಕೊಂಡಾಗ ಓದಿನಲ್ಲಿ ಕಾಣದ ಅರ್ಥದ ಪದರಗಳು ಹೊಳೆಯುತ್ತಿದ್ದವು. ಹೀಗೆ ಹೊಸ ಅರ್ಥವನ್ನು ಕಟ್ಟಿ ಕಾಣುವಂತೆ ಹಾಡುತ್ತಿದ್ದವರಲ್ಲಿ ಮೊದಲ ಸ್ಥಾನ ಜೋಳದ ರಾಶಿ ದೊಡ್ಡನ ಗೌಡರಿಗೆ ಇರುತ್ತಿತ್ತು. ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಕ್ಷೇತ್ರದಲ್ಲಿ  ಅನಭಿಷಿಕ್ತ ದೊರೆಯಾಗಿ ಸಾವಿರಾರು ಸಮ್ಮೇಳನ, ಸಾಹಿತ್ಯೋತ್ಸವ, ಜಾತ್ರೆಗಳಲ್ಲಿ ಕಾವ್ಯ,ಗಾಯನ ಮತ್ತು ಪ್ರವಚನಗಳನ್ನು ಮಾಡಿದ್ದರು..

ಇವರ ಜೀವನದಲ್ಲಿ ಮರೆಯಲಾಗದ ಅನೇಕ ಪ್ರಸಂಗಗಳಿವೆ. ಇಲ್ಲಿ ಇದರ ಕುರಿತು ಎರಡು ಪ್ರಸಂಗಗಳನ್ನು ದಾಖಲಿಸಿದ್ದೇನೆ. ೧೯೩೫ ರಲ್ಲಿ ಹಂಪಿಯಲ್ಲಿ ವಿಜಯನಗರ ಸ್ಥಾಪನೆಯ ೫೦೦ ನೇ ವರ್ಷದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಸಭೆಯ ಗದ್ದಲದಲ್ಲಿ ಯಾರು ಕಾವ್ಯ ವಾಚನ ಮಾಡಿದರೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಸಭೆಯ ಅಂದವೇ ಕೆಡುವ ಲಕ್ಷಣ ಕಾಣಿಸುತ್ತಿತ್ತು. ಆದರೂ ಗದ್ದಲ ನಿಲ್ಲಲಿಲ್ಲ. ಇಂತಹ ಸಮಯದಲ್ಲಿ ವೇದಿಕೆಗೆ ಆಗಮಿಸಿದ ನಮ್ಮ ಗೌಡರು ಉಚ್ಛ ಕಂಠದಲ್ಲಿ ಹರಿಹರನ ರಚನೆಯನ್ನು ಹಾಡಿ ಸಭೆಯ ಗದ್ದಲವನ್ನು ನಿಲ್ಲಿಸಿದ್ದರು.ಇನ್ನೊಂದು ತರಕೇರಿ ಎಂಬಲ್ಲಿ ನಡೆದ ಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಕಾವ್ಯವಾಚನ ಮಾಡುತ್ತಿದ್ದರು. ಇಲ್ಲಿಯೂ ಸಭೆಯಲ್ಲಿ ಗದ್ದಲವಿತ್ತು. ಇದರಿಂದ ಕುಪಿತಗೊಂಡ ಗೌಡರು ಗದ್ದಲ ಮಾಡುತ್ತಿದ್ದ ಸಭೆಯ ಜನರ ಹತ್ತಿರ ತಮ್ಮ ಕೈಯಲ್ಲಿದ್ದ ಗ್ರಂಥವನ್ನು ಬೀಸಿ ಒಗೆದಿದ್ದರು. ಇದು ಅವರಿಗೆ ತಮ್ಮ ಸಾಹಿತ್ಯದ ಮೇಲೆ ಇದ್ದ ಪ್ರೀತಿ, ಗೌರವವನ್ನು ತೋರಿಸಿತ್ತು. ಈ ಎರಡು ಪ್ರಸಂಗಗಳು ಆಗಿನ ಕಾಲದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದವು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply