ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್(2020)

ನೆಟ್ ಫ್ಲಿಕ್ಸ್ ನಲ್ಲಿ ಲಭ್ಯ

ರೇಟಿಂಗ್: 3.5/5

ಭಾರತದ ಪ್ರಥಮ ಮಹಿಳಾ ಏರ್ ಫೋರ್ಸ್ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರಳಾದ ದಿಟ್ಟ ಯುವತಿಯೊಬ್ಬಳ ಜೀವನ ಚಿತ್ರ: “ಗುಂಜನ್ ಸಕ್ಸೇನಾ…”

ಪ್ರಸಿದ್ಧ ನಟಿ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ನಿಜ ಜೀವನದ ಪೈಲೆಟ್ ಹೇಗೆ ಪುರುಷ ಪ್ರಧಾನ ಹಾಗೂ ಮಹಿಳೆಯರ ಬಗ್ಗೆ ತಾರತಮ್ಯ ಮಾಡುವ ಭಾರತೀಯ ಸೇನಾ ವ್ಯವಸ್ಥೆಯಲ್ಲಿ ಮಧ್ಯಮ ವರ್ಗದಿಂದ ಬಂದ ವಿಮಾನ ಹಾರಿಸುವ ಕನಸು ಹೊತ್ತ ಓರ್ವ ಯುವತಿ ಅದನ್ನು ನನಸಾಗಿಸಲು ಪಡುವ ಹೋರಾಟ ಮಾಡಿದಳೆಂಬ ಚಿತ್ರಣ ಇಲ್ಲಿದೆ.

ಆಕೆಯ ಬೆಂಬಲಕ್ಕೆ ಶತಪ್ರಯತ್ನ ಮಾಡಲೂ , ಕುಟುಂಬಸ್ಥರ ಜತೆ ವಿರಸ ತಂದುಕೊಳ್ಳಲೂ ಹೇಸದ ನಿಸ್ವಾರ್ಥ ಆರ್ಮಿ ಲೆಫ್ಟಿನೆಂಟ್ ತಂದೆಯ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನಿಜಕ್ಕೂ ಈ ಚಿತ್ರದ ಜೀವಾಳ ಎನ್ನುವಂತೆ ಸುಲಲಿತವಾಗಿ ಸಮರ್ಥವಾಗಿ ಚಿತ್ರದ ಹೊಣೆಯನ್ನೇ ಹೊತ್ತಿದ್ದಾರೆ.ತಂದೆಯ ಏಕೈಕ ಬೆಂಬಲದಿಂದ ಕಾಲೇಜು ವಿದ್ಯಾಭ್ಯಾಸದ ನಡುವೆಯೂ ತನ್ನ ವಿಮಾನ ಪೈಲೆಟ್ ಕನಸನ್ನು ಸಾಕಾರಗೊಳಿಸಲು ಗುಂಜನ್ ಹಲವು ಸ್ಟೀರಿಯೋಟೈಪ್ ಸರಕಾರಿ ಅಧಿಕಾರಿ ಹಾಗೂ ನಂತರ ಏಫೋರ್ಸ್ ಶಿಕ್ಷಕರ ವಿರೋಧ ಹಾಗೂ ಅನ್ಯಾಯಗಳ ನಡುವೆ ಹೋರಾಟ ಮಾಡಿ ಯಶಸ್ಸಿನ ಗುರಿಯತ್ತ ಸಾಗುತ್ತಾಳೆ.ಮಹಿಳಾ ಅಧಿಕಾರಿಗಳೇ ಇಲ್ಲದ ಭಾರತೀಯ ವಾಯುಸೇನೆಯಲ್ಲಿ ಮೊದಲಿಗೆ ತರಬೇತಿಗೆ ಸೇರಿ ಇನ್ನಿಲ್ಲದ ಪಕ್ಷಪಾತಿ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಆಕೆಯನ್ನು ಅವರೆಲ್ಲಾ ಪೀಡಿಸುವ ದೃಶ್ಯಗಳು ಸ್ವಲ್ಪ ಓವರ್ ಆಯಿತೇನೋ ಎನಿಸಿತು. ( ಸ್ವತಃ ಈ ಬಗ್ಗೆ ಗುಂಜನ್ ಪತ್ರಿಕಾ ಹೇಳಿಕೆ ನೀಡಿದ್ದಾರೆ). ಇರಲಿ!

ಆದರೆ ಆಕೆಯ ನಿಸ್ಪೃಹತೆ ಮತ್ತು ದಿಟ್ಟ ಪ್ರಯತ್ನ ಇಷ್ಟೆಲ್ಲಾ ದೈಹಿಕ ಹಾಗೂ ಮಾನಸಿಕ ಹಿಂಸೆಯ ನಡುವೆಯೂ ಬೆಳಗುತ್ತಲೇ ಹೋಗುತ್ತದೆ. ಅದೇ ಕಥೆಯ ಮುಖ್ಯ ಓಘ.ಮುಖ್ಯ ಭೂಮಿಕೆಯಲ್ಲಿ ಜಾಹ್ನವಿ ಕಪೂರ್ ಕೆಲವೊಮ್ಮೆ ಬಹಳ ಭೋಳೇ ಮತ್ತು ತೀರಾ ಮೃದು ಎನಿಸುತ್ತಾಳೆ. ಭಾವನಾತ್ಮಕವಾದ ಹಲವು ಕಡೆ ಸ್ವಲ್ಪ ಸಪ್ಪೆಯಾಗುತ್ತಾಳೆ. ಬಹುಶಃ ಆಕೆ ಈ ಪಾತ್ರಕ್ಕೆ ತನ್ನ ವೃತ್ತಿಜೀವನದ ಈ ಬಾಲ್ಯಾವಸ್ಥೆಯಲ್ಲೇ ಒಪ್ಪಬಾರದಿತ್ತೇನೋ.

ಆದರೆ ಆಕೆಗೆ ಅಭಿನಯ ಪ್ರತಿಭೆಯಿದೆ, ಹಲವೊಮ್ಮೆ ತಟ್ಟನೆ ಈ ಚಿತ್ರದಲ್ಲಿ ಕಾಣಸಿಗುತ್ತದೆ. ಹಾಗಾಗಿ ಆಕೆಯ ನಟನೆ ತೀರಾ ಮೋಸವೇನೂ ಇಲ್ಲ. ಎಷ್ಟಾದರೂ ನಮ್ಮ ಶ್ರೀದೇವಿಯ ಮಗಳಲ್ಲವೆ!ಕಾರ್ಗಿಲ್ ಸಮಯದ ಯುದ್ಧಭೂಮಿಯ ಹೆಲಿಕಾಪ್ಟರ್ ಆಕ್ಷನ್ ದೃಶ್ಯಗಳು ನೈಜವಾಗಿದೆ, ತಾಂತ್ರಿಕ ಮೌಲ್ಯಗಳು ಚೆನ್ನಾಗಿವೆ. ಕರನ್ ಜೋಹರ್ ಇದರ ನಿರ್ಮಾಪಕರಲ್ಲಿ ಒಬ್ಬರು.

ಹೊಸ ನಿರ್ದೇಶಕ ಶರನ್ ಶರ್ಮ ಪ್ರತಿಭಾವಂತರು ಎನಿಸಿತು.ಈ ಚಿತ್ರವನ್ನೂ ನಮ್ಮ ಭಾರತೀಯ ಚಿತ್ರರಸಿಕರು ನೋಡಬೇಕು.

ನಮ್ಮ ಭಾರತೀಯ ಮಹಿಳೆಯೊಬ್ಬರ ಸಾಹಸಿ ಸಾಧನೆಗಾಗಿ, ಸ್ವಲ್ಪ ದೇಶಪ್ರೇಮದ ಫ್ಲೇವರಿಗಾಗಿ ಸಹಾ.

Nagesh Kumar C S

Nagesh Kumar C S

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ

Leave a Reply