ಪ್ರೀತಿ- ಪ್ರೇಮ ಎನ್ನುವುದು ಮನುಷ್ಯರಿಗೆ ಮಾತ್ರ. ಮನುಷ್ಯ ಸತ್ತು ಬೂದಿಯಾದ ಮೇಲೆ ಎಲ್ಲವೂ ನಶ್ವರ. ಆದರಿಲ್ಲಿ ಸತ್ತು ಬೂದಿಯಾದ ಮೇಲೆಯೇ ಆತ್ಮಕ್ಕೆ ಪ್ರೀತಿ ಹುಟ್ಟುತ್ತದೆ. ಆ ಆತ್ಮವು ಮನುಷ್ಯರಿಗಿಂತಲೂ ನಿಷ್ಠೆಯಿಂದ ನಾಯಕಿಯನ್ನು ಪ್ರೀತಿಸುತ್ತಿರುತ್ತದೆ. ಆತ್ಮದ ಪಾತ್ರ ಮಾಡಿರುವ ಡಾಲಿ ಧನಂಜಯ ಅದೆಷ್ಟು ಮುದ್ದಾಗಿ ಕಾಣುತ್ತಾನೆಂದರೆ ಅವನಿಗೆ ಜೀವ ಕೊಟ್ಟು, ಅವಳೊಡನೆ ಮದುವೆ ಮಾಡಿಸುವ ಅಂತ ನಮಗೇ ಮನಸ್ಸಾಗುತ್ತದೆ. ಆದರೇನು ಮಾಡುವುದು? ಅವನು ಸತ್ತು ಆಗಿದೆ…
ಮತ್ತೆಂಥಾ ಪ್ರೇಮ ಕತೆ ಇದು ಅಂತ ಮೂಗು ಮುರಿಯದಿರಿ..
ಅವನಿಗೆ ಅವಳಿಷ್ಟ… ಆದರೆ ಅವಳಿಗೆ ಅವನನ್ನು ಕಂಡರೆ ಭಯ.. ಭೂತಕ್ಕಂತೂ ಭವಿಷ್ಯವಿಲ್ಲ. ಆದರೆ ನಾಯಕಿಗೆ ತನ್ನ ಭವಿಷ್ಯದ ಬಗ್ಗೆ ಯೋಚನೆ ಇದೆ. ಅದಕ್ಕೆಂದೇ ಭೂತದ ಪ್ರೀತಿಯನ್ನು ಸೀರಿಯಸ್ಸಾಗಿ ತೆಗೊಳ್ಳದೇ ಒಂದು ತಾಯಿತ ಕಟ್ಟಿಸಿಕೊಂಡು ಬೇರೆಯವನನ್ನು ಮದುವೆಯಾಗುತ್ತಾಳೆ. ಆ ಮದುವೆಯಾದ ಗಂಡನೋ ಸಾಕ್ಷಾತ್ ಮನ್ಮಥ !!!
ಈಗ ಕನ್ಫ್ಯೂಸ್ ನಮಗೆ….
ಅವಳು ಗಂಡನ ಜೊತೆ ಇರಬೇಕೋ ಅಥವಾ ಸತ್ತರೂ ಅವಳನ್ನು ಪ್ರೀತಿಸುತ್ತಿರುವ ದೆವ್ವದ ಜೊತೆ ಇರಬೇಕೋ ಅಂತ ಗೊಂದಲ ಶುರುವಾಗುತ್ತದೆ… ಗಂಡ-ಹೆಂಡತಿಯ ಜೋಡಿ ನೋಡಿದಾಗ ಇವರು ಹೀಗೆಯೇ ಇರಲಿ ಎಂದುಕೊಂಡರೆ ದೆವ್ವವನ್ನು ನೋಡಿದಾಗ ಅದರ ಅಮಾಯಕತೆಗೆ ಮರುಕ ಹುಟ್ಟುತ್ತದೆ…
ಕಡೆಗೆ ನಾಯಕಿ ಯಾರತ್ತ ಮನಸ್ಸು ಮಾಡುತ್ತಾಳೆ? ಯಾರ ಪ್ರೀತಿ ಗೆಲ್ಲುತ್ತದೆ? ಅಂತ ನೇರವಾಗಿಯೇ ನೋಡಿ….. ಮೂವರ ಪರ್ಫಾಮೆನ್ಸ್ ಅತ್ಯದ್ಭುತ… ಯಾರೂ ಹೆಚ್ಚಿಲ್ಲ ಯಾರೂ ಕಡಿಮೆ ಇಲ್ಲ… ಅವಳು ಇಬ್ಬರಲ್ಲಿ ಒಬ್ಬರನ್ನು ಆರಿಸುವಾಗ ನಿಜಕ್ಕೂ ನಮಗೆ ಬೇಸರವಾಗುವಷ್ಟು ಇಬ್ಬರೂ ನಾಯಕರು ಚೆನ್ನಾಗಿ ಅಭಿನಯಿಸಿದ್ದಾರೆ… ಪಾರುಲ್ ಯಾದವ್ ಮದುವೆಗೆ ಮುಂಚೆ ಚೂಡಿಯಲ್ಲಿ, ಮದುವೆಯ ನಂತರ ಸೀರೆಯಲ್ಲಿ ಸಕತ್ತಾಗಿ ಮಿಂಚಿಂಗೂ..
ಭೌತಿಕ ದೇಹವೇ ಇಲ್ಲದ ಆತ್ಮವೊಂದು ಪ್ರೀತಿಯಲ್ಲಿ ಬಿದ್ದು ಒದ್ದಾಡುವ, ಆ ಪ್ರೀತಿ ಪಡೆಯಲು ಮಾಡುವ ಹೋರಾಟ ಕುತೂಹಲ ಹುಟ್ಟಿಸುತ್ತದೆ. ಯಾವ ಭಾಷೆಯ ಚಿತ್ರವನ್ನೇ ನಾನು ನೋಡಿದರೂ ಅಂತಿಮವಾಗಿ ನನ್ನದೇ ಮಾತೃಭಾಷೆಯ ಸಿನೆಮಾ ಸಿಕ್ಕಾಗ ಆಗುವ ಸಂತಸ ವರ್ಣನಾತೀತ…
********