( ಮುಂದುವರೆದ ಭಾಗ )
ಚಿತ್ರ ರಂಗ ಪ್ರವೇಶಿಸಿದ ೪೦ ವರ್ಷಗಳ ನಂತರ ಶ್ರೀಮಂತ ಉದ್ಯಮಿ ಪಾತ್ರದಲ್ಲಿ ನಟಿಸಿದ್ದ ಕಾಲೇಜು ಬುಲ್ಲುಡು ಚಿತ್ರವು ಇತರರ ಬದುಕಿಗೆ ಸ್ಪೂರ್ತಿದಾಯಕ ಚಿತ್ರವಾಗಿದೆ. ಈ ಚಿತ್ರದಲ್ಲಿ ಶ್ರೀ ಮಂತ ಉದ್ಯಮಿಯಾಗಿದ್ದರೂ ಇಂಗ್ಲೀಷ್ ಬರುವುದಿಲ್ಲ ಎಂದು ಹಾಸ್ಯ ಮಾಡಿದವರಿಗೆ ಉತ್ತರಿಸಲು ಸವಾಲ್ ಹಾಕಿ ತನ್ನ ಮಗನು ಓದುವ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದು ಇಂಗ್ಲೀಷ್ ಭಾಷೆಯನ್ನು ಕಲಿತು ಮನಸ್ಸಿದ್ದರೆ ಮಾರ್ಗ ಎಂಬ ಸಂದೇಶವನ್ನು ನೀಡುವುದರೊಂದಿಗೆ ಎಲ್ಲರ ಮನಸ್ಸನ್ನು ಗೆಲ್ಲುವ ಪಾತ್ರವನ್ನು ವರ್ಣಿಸಲು ಸಾಧ್ಯವಾಗುವುದಿಲ್ಲ.
ಇವರ ನಟನೆಯ ಮ್ಯೂಸಿಕಲ್ ಸೂಪರ್ ಹಿಟ್ ಚಿತ್ರ ಪ್ರೇಮ್ ನಗರ್ ಇದರಲ್ಲಿ ಶ್ರೀಮಂತ ಮನೆತನದ ವ್ಯಕ್ತಿ ಕುಡಿತದ ಚಟಕ್ಕೆ ಬಿದ್ದ ಪಾತ್ರ. ಹಾಡುಗಳಿಂದಲೇ ಯಶಸ್ಸನ್ನು ಪಡೆದ ಈ ಚಿತ್ರವು ತೆರೆ ಕಂಡ ಚಿತ್ರ ಮಂದಿರಗಳಲ್ಲಿ ಶತದಿನೋತ್ಸವವನ್ನು ಕಂಡಿತ್ತು. ಆದರೆ ಇವರದೇ ನಟನೆಯ ಪ್ರೇಮ ಕಥೆಯನ್ನು ಹೊಂದಿದ ಪ್ರೇಮಾಭಿಷೇಕಂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಇವರ ತಮ್ಮ ೭೩ ವರ್ಷಗಳ ಚಿತ್ರರಂಗದ ಜೀವನದಲ್ಲಿ ಸುಮಾರು ೨೫೬ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದರು.
೨೦೧೪ ರಲ್ಲಿ ತೆರೆ ಕಂಡ ಮತ್ತು ಪುತ್ರ ನಟ ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ ಮನಂ ಚಿತ್ರವು ಇವರ ವೃತ್ತಿ ಬದುಕಿನ ಕೊನೆಯ ಚಿತ್ರವಾಯಿತು. ತೆಲುಗು ಚಿತ್ರರಂಗದ ಮಹಾನ್ ಕಲಾವಿದರಾಗಿದ್ದ ಇವರಿಗೆ ಕ್ಯಾನ್ಸರ್ ಕಾಯಿಲೆಯಿಂದ ಆರೋಗ್ಯದಲ್ಲಿ ಏರು ಪೇರಾಗಿ ಕೆಲವು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದ ಕಾರಣ ಜನವರಿ ೨೨, ೨೦೧೪ ರಂದು ತಮ್ಮ ೯೦ ನೇ ವಯಸ್ಸಿನಲ್ಲಿ ಹೈದರಾಬಾದಿನಲ್ಲಿ ಮರಣವನ್ನು ಹೊಂದಿದರು.
ಇವರು ಅಕ್ಕಿನೇನಿ ಅನ್ನಪೂರ್ಣ ಎಂಬುವವರನ್ನು ವಿವಾಹವಾಗಿರುವ ಇವರಿಗೆ ಐದು ಜನ ಮಕ್ಕಳಿದ್ದು ಇವರ ಒಬ್ಬ ಮಗ ನಟ ಅಕ್ಕಿನೇನಿ ನಾಗಾರ್ಜುನ ಪ್ರಖ್ಯಾತ ನಟರಾಗಿದ್ದಾರೆ. ಅಲ್ಲದೇ ಇವರ ಕುಟುಂಬವೇ ಚಿತ್ರ ರಂಗದಲ್ಲಿ ಇಂದಿಗೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮತ್ತು ಇವರು (ಅಕ್ಕಿನೇನಿ ನಾಗೇಶ್ವರರಾವ್) ತಮ್ಮ ಪತ್ನಿಯ ಹೆಸರಿನಲ್ಲಿ ಅನ್ನ ಪೂರ್ಣ ಸ್ಟುಡಿಯೋ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಕಟ್ಟಿಸಿದ್ದು ಇದುವರೆಗೂ ಅನೇಕ ಚಿತ್ರಗಳನ್ನು ನಿರ್ಮಿಸಲಾಗಿದೆ. ಹಲವು ವರ್ಷಗಳಿಂದ ಹಳೆಯ ತಲೆಮಾರಿನ ಬಹುತೇಕ ಪ್ರಸಿದ್ಧ ನಟರ ಮರಣದಿಂದ ಕಂಗೆಟ್ಟಿದ್ದ ತೆಲುಗು ಚಿತ್ರರಂಗ ಇವರ ಮರಣದಿಂದ ಇನ್ನೂ ಹೆಚ್ಚು ಆಘಾತಕ್ಕೊಳಗಾಯಿತು.