ಅಕ್ಕಿನೇನಿ ನಾಗೇಶ್ವರರಾವ್ ತೆಲುಗು ಚಿತ್ರರಂಗ ಕಂಡ ಶ್ರೇಷ್ಟ ನಟ, ನಿರ್ಮಾಪಕರಾಗಿದ್ದರಲ್ಲದೆ ಸುಮಾರು ೭೩ ವರ್ಷಗಳ ತಮ್ಮ ಚಿತ್ರ ರಂಗದ ಜೀವನದಲ್ಲಿ ಹಲವಾರು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಇಂದಿಗೂ ನಟ ಸಾಮ್ರಾಟ್ ಆಗಿ ಅಚ್ಚಳಿಯದೇ ಉಳಿದಿದ್ದಾರೆ. ಯಾವುದೇ ಹಿನ್ನಲೆಯಿಲ್ಲದೆ ಚಿತ್ರರಂಗವನ್ನು ಪ್ರವೇಶಿಸಿ ನಟನೆಯೊಂದಿಗೆ ತಮ್ಮ ಚಿತ್ರರಂಗದ ಬದುಕನ್ನು ಪ್ರಾರಂಭಿಸಿದ ಇವರು ನಟನೆಯಲ್ಲಿ ಯಶಸ್ಸನ್ನು ಪಡೆದು ನಿರ್ಮಾಪಕರಾಗಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು.ಮತ್ತು ಅನ್ನಪೂರ್ಣ ಸ್ಟುಡಿಯೋ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಯನ್ನು ಸ್ಥಾಪಿಸಿ ಅನೇಕ ಜನರಿಗೆ ಕೆಲಸವನ್ನು ಕೊಡುವುದರ ಮೂಲಕ ಅವರ ಬದುಕಿಗೆ ಬೆಳಕಾಗಿದ್ದಾರೆ.
ಮತ್ತು ಚಿತ್ರ ರಂಗದಲ್ಲಿ ಇವರ ಸಾಧನೆಯು ವಿಶೇಷತೆಯಿಂದ ಕೂಡಿದ್ದು ಗೌರವಾನ್ವಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.
ಸೆಪ್ಟೆಂಬರ್ ೨೦, ೧೯೨೪ ರಂದು ಆಂದ್ರ ಪ್ರದೇಶದ ರಾಮಾಪುರಂ ಎಂಬ ಗ್ರಾಮದಲ್ಲಿ ಅಕ್ಕಿ ನೇನಿ ವೆಂಕಟರತ್ಮಂ ಮತ್ತು ಅಕ್ಕಿನೇನಿ ಪುನ್ನಮ್ಮ ಎಂಬ ರೈತ ದಂಪತಿಯ ಮಗನಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಾಲೆಯ ಶಿಕ್ಷಣವನ್ನು ಸ್ವ ಗ್ರಾಮದಲ್ಲಿ ಪಡೆದರು. ಆದರೆ ಇವರ ಕುಟುಂಬವು ಕಂಡು ಬಡತನದಲ್ಲಿ ಇದ್ದ ಕಾರಣ ಇವರಿಗೆ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಇವರು ಚಿತ್ರ ರಂಗವನ್ನು ಪ್ರವೇಶಿಸುವ ಮೊದಲು ರಂಗಭೂಮಿಯ ನಾಟಕಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದರಲ್ಲೂ ನಾಟಕಗಳಲ್ಲಿ ಹೆಚ್ಚು ಮಹಿಳೆಯರ ಪಾತ್ರಗಳನ್ನು ನಿರ್ವಹಿಸುತ್ತಿದ್ದರಿಂದ ಈ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದರು. ೧೯೪೧ ನೇ ಇಸ್ವಿಯಲ್ಲಿ ಕೇವಲ ತಮ್ಮ ೧೭ ನೇ ವಯಸ್ಸಿನಲ್ಲಿ ಧರ್ಮಪತ್ನಿ ಎಂಬ ಚಿತ್ರದಲ್ಲಿ ನಟಿಸುವುದರ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದರು. ಅನಂತರ ಆರಂಭವಾಗಿದ್ದ ಇವರ ಯುಗ. ನಂತರ ತೆರೆ ಕಂಡ ಚೆಂಚು ಲಕ್ಷ್ಮಿ, ಶ್ರೀ ಕೃಷ್ಣ ಯುದ್ಧಂ, ಮಾಯಾಬಜಾರ್, ಬಾಲರಾಜು, ರೋಜುಲು ಮಾರಾಯಿ, ಮಿಸ್ಸಮ್ಮ, ಅದರಲ್ಲೂ ೧೯೫೦ ರ ಆಸು ಪಾಸಿನಲ್ಲಿ ತೆರೆ ಕಂಡ ದೇವದಾಸ್ ಚಿತ್ರ ಇವರ ವೃತ್ತಿ ಬದುಕಿಗೆ ಮಹತ್ತರ ತಿರುವನ್ನು ನೀಡಿತು.
ಈ ಚಿತ್ರದಲ್ಲಿ ಇವರ ನಟನೆಯ ದೇವದಾಸ್ ಪಾತ್ರ ಆ ಕಾಲದಲ್ಲಿ ನಿರ್ಮಿಸಿದ ಸೆನ್ಸೇಷನಲ್ ದಾಖಲೆ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಚಕ್ರಪಾಣಿ, ಲೈಲಾ ಮಜ್ನು, ಅರ್ನಾಕಲಿ ಯಂತಹ ವಿಭಿನ್ನ ಚಿತ್ರಗಳಲ್ಲಿ ನಟಿಸಿರುವ ಇವರು ಪ್ರೇಮಿಂಚಿ ಚೂಡು ಎಂಬ ಹಾಸ್ಯ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಎಂತಹ ಪಾತ್ರವನ್ನಾದರೂ ಲೀಲಾಜಾಲವಾಗಿ ನಿರ್ವಹಿಸಬಲ್ಲೆನು ಎಂಬುದನ್ನು ಈ ಹಾಸ್ಯ ಚಿತ್ರದ ಮೂಲಕ ಸಾಬೀತು ಪಡಿಸಿದ್ದರು. ಇದೇ ಚಿತ್ರವು ಶಂಕರ್ ನಾಗ್ ಮತ್ತು ಶ್ರೀನಾಥ್ ನಟನೆಯ ಪ್ರೀತಿ ಮಾಡು ತಮಾಷೆ ನೋಡು ಎಂಬ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ರೀಮೇಕ್ ಮಾಡಲಾಗಿತ್ತು.
( ಮುಂದುವರೆಯುವುದು )