ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ನೋಡಿದ ಸಿನೆಮಾ ಇದು. ಏಕೆಂದರೆ ಈಗಾಗಲೇ ಇದರ ಮೂಲ ಸಿನೆಮಾವನ್ನು ನಾನು ನೋಡಿಯಾಗಿದೆ. ಕಥೆ ಏನು ಅಂತಲೂ ಗೊತ್ತಿದೆ. ಹಾಗಾಗಿ ಈ ಸಿನೆಮಾದ ಏಕೈಕ ಕುತೂಹಲವೆಂದರೆ ಅನುಷ್ಕಾಳ ಸ್ಥಾನ ಪಡೆದಿರುವ ಹಿಂದಿಯ ನಟಿ ಹೇಗೆ ನಟಿಸಿದ್ದಾಳೆಂಬುದು ಮಾತ್ರ.
ಚಿತ್ರಕಥೆಯನ್ನು ಫ್ರೇಮ್ ಟು ಫ್ರೇಮ್ ಕಾಪಿ ಮಾಡಲಾಗಿದೆ. ಈ ಸಿನೆಮಾ ನೋಡುತ್ತಿದ್ದರೆ ನಮಗೆ ಮೂಲ ಸಿನೆಮಾ ನೆನಪಾಗುತ್ತಿರುತ್ತದೆ. ಎಲ್ಲೋ ಚೂರು ಮಾರ್ಪಾಟು ಇರಬಹುದು ಹೊರತೂ ಇದು ತೆಲುಗಿನ “ಭಾಗಮತಿ” ಯ ಜೆರಾಕ್ಸ್ ಕಾಪಿಯೇ ಆಗಿದೆ.
ಆ ಭೂತಬಂಗಲೆಯಲ್ಲಿ ನಾಯಕಿಯ ಏಕಾಂತದ ದೃಶ್ಯಗಳು ಭಯ ಹುಟ್ಟಿಸುವ ಬದಲು ಆಕಳಿಕೆ ತರುತ್ತದೆ. ಕಾರಣ ನಮಗೆ ಈ ಮೊದಲೇ ಸಿನೆಮಾ ಏನು ಅಂತ ಗೊತ್ತಿದೆಯಲ್ಲ. ಹಾಗಾಗಿ ಕುತೂಹಲದಿಂದ ಮುಂದೇನು ಅಂತ ಕಾದು ಕೂರುವ ಅಗತ್ಯ ಕಂಡುಬರುವುದಿಲ್ಲ. ಮೊದಲ ಬಾರಿ ನೋಡಿದವರಿ್ಗೆಗೆ ಆ ಕಾತುರ ಬರಬಹುದೇನೋ?
ಭಾಗಮತಿಯಲ್ಲಿ ನಾನು ಇಷ್ಟಪಟ್ಟಿದ್ದು ಅನುಷ್ಕಾಳ ಮುಗ್ಧ ಮುಖ. ಮೇಕಪ್ ಇಲ್ಲದ, ಸರಳವಾದ, ಮುದ್ದಾದ ನಿಷ್ಕಲ್ಮಶ ಮುಖ. ಅಂತಹ ಮುಖವನ್ನೇ ಇಲ್ಲಿ ನಿರೀಕ್ಷಿಸಿ ನಿರಾಸೆಯಾಯ್ತು. ಭೂಮಿ ಪಡ್ನೇಕರ್ ತನ್ನೆಲ್ಲಾ ಶ್ರಮವನ್ನೂ ಹಾಕಿ ಅದ್ಭುತವಾಗಿ ನಟಿಸಿದ್ದಾರೆ. ಆದರೆ ಅನುಷ್ಕಾರನ್ನು ಮೀರಲು ಆಗಿಲ್ಲ. ಸುಮ್ಮನಿರುವುದಕ್ಕೂ, ಗಾಂಭೀರ್ಯಕ್ಕೂ ವ್ಯತ್ಯಾಸವಿದೆ. ಇದನ್ನು ಅರಿತುಕೊಳ್ಳುವುದು ಉತ್ತಮ.
ಉಳಿದಂತೆ ಪ್ರತಿಯೊಬ್ಬ ನಟರೂ ತಮಗೆ ಕೊಟ್ಟಿದ್ದನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ರಿಮೇಕ್ ಅನ್ನುವುದನ್ನು ಬದಿಗಿಟ್ಟು ನೋಡಿದರೆ ಕಥೆ ನೋಡುವಂತಿದೆ. ಯಾರದ್ದೋ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗೋದು ಮಾತ್ರ ಅಧಿಕಾರಿಗಳು ಅಂತ ತೋರಿಸಲಾಗಿದೆ.
ಆದರೆ ಕೊನೆಯಲ್ಲಿ ಇರುವ ಟ್ವಿಸ್ಟ್ ನಮ್ಮ ಊಹೆಗೆ ನಿಲುಕದ್ದು. ಅದು ಇಡೀ ಸಿನೆಮಾವನ್ನು, ಸಿನೆಮಾದ ಬಗೆಗಿನ ನಮ್ಮ ಅಭಿಪ್ರಾಯವನ್ನು ಬುಡಮೇಲು ಮಾಡಿಬಿಡುತ್ತದೆ. ಧಾರಾಳವಾಗಿ ಒಮ್ಮೆ ನೋಡಬಹುದು. ತೆಲುಗಿನಷ್ಟು ಅಬ್ಬರವಿಲ್ಲ. ನಾಯಕಿ ತನ್ನ ತಣ್ಣನೆಯ ಸ್ವರದಲ್ಲಿಯೇ ಎಲ್ಲವನ್ನೂ ನಿಭಾಯಿಸುತ್ತಾರೆ.
ಸಿನೆಮಾ ಮುಗಿದ ಮೇಲೆಯೂ ಒಂದು ಪ್ರಶ್ನೆ ಕಾಡುತ್ತದೆ……
“ಭೂತಗಳು ಇವೆಯೋ ಇಲ್ಲವೋ…?”