೧೯೭೦ರ ಈ ಸಿನಿಮಾ ಬಗ್ಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ.
ತ್ಯಾಗಮಯಿ ಅಣ್ಣ ಪ್ರಸಾದ್ (ರಾಜ್ ಕುಮಾರ್) ತನ್ನ ತಾಯಿ ಉಮಾದೇವಿ (ಬಿ. ಜಯಮ್ಮ)ಸಾಯುವಾಗ ತನ್ನ ತಮ್ಮ ರಘುವನ್ನು (ಗಂಗಾಧರ್) ಚೆನ್ನಾಗಿ ನೋಡಿಕೊಳ್ಳುವೆನೆಂದು ಆಕೆಗೆ ಭಾಷೆ ಕೊಡುತ್ತಾನೆ. ಆ ತಮ್ಮನೋ ಕ್ಲಬ್ಬಿನಲ್ಲಿ ಮಂಜು ಎನ್ನುವ ನರ್ತಕಿಯೊಂದಿಗೆ ಬಾ ಬಾ ಬಾರೋ ಬಳಿ ಸಾರಿ ಐ ಲವ್ ಲವ್ ಯೂ ಕಸ್ತೂರಿ ಎಂದು ಹಾಡುತ್ತಿರುತ್ತಾನೆ. ಅಂವ ಬರೂ ವ್ಯಾಳಿಗೆ ಅಮ್ಮ ಹೋಗಿರ್ತಾಳ್ರೀ.
ಇದು ನಡಿಯೂದು ಡಾವಣಗೇರಿಯಾಗೆ. ಅವರದೊಂದು ನಾಟಕ ಕಂಪನಿ ಇರ್ತದ. ಭಾರೀ ಸಾವುಕಾರ್ರು ಇವರು. ಒಮ್ಮೆ ಒಬ್ಬ ಹೆಣ್ಣು ಶಾಂತ (ಜಯಂತಿ) ಆಶ್ರಯ ಬೇಡಿ ಬಂದಾಗ ಅವಳ ಪ್ರತಿಭಾ ಪರೀಕ್ಷೆ ಮಾಡಾಕ್ಕೆ ಹತ್ತುತ್ತಾರೆ ಈ ಅಣ್ತಮ್ಮ. ಆಕಿ ’ಆಶಾವಿದಾನೆ ಈ ಮೂಕವೀಣೇ’ ಅಂತ ಪಿ.ಸುಶೀಲಾ ಸ್ವರದಾಗೆ ಹಾಡ್ತಾಳ್ರಿ. ಅವರ ನಾಟಕ ಮಂದಿರದಾಗ ಕುಣೀತಾಳ್ರೀ.
ಆ ಶಾಂತಳ ಮ್ಯಾಲ ಪ್ರಸಾದ್ ಗೆ ಪ್ರೇಮ ಬರ್ತದ್ರೀ.
ಪಿಯಾನೋ ಮುಂದ ಪ್ರಸಾದ್ ಖುಷಿಯಾಗಿ ’ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು…’ ಅಂತ ಹಾಡ್ತಾನ್ರೀ.
ಆದ್ರ ರಘು ಆಕೀನ ಲವ್ ಮಾಡ್ತಾನ್ರಿ. ಸೋ, ಅಣ್ಣಾವ್ರ ತ್ಯಾಗ. ಖರೆ ವಿಷ್ಯ ಏನಂದ್ರ ಆಕೀಗು ರಘು ಅಂದ್ರ ಲವ್ವು. ಪ್ರಸಾದ್ ಅಂದ್ರ ಭಕ್ತೀರೀ.
ಮದ್ವಿ ಆಗ್ತದ್ರಿ. ಉಮಾ ಅನ್ನೂ ಪುಟ್ಟ ಹೆಣ್ಮಗೂ ಆಗ್ತದ್ರೀ.
ಆದ್ರ ಆ ಮಂಜೂ ಹಾಗೂ ಅವ್ಳ ತಂದೆ ಗುರುನಾಥಯ್ಯ (ಬಾಲಕೃಷ್ಣ) ಆ ಸಂಸಾರ ನಾಶ ಮಾಡಕ್ಕ ಪಣ ತೊಡ್ತಾರ್ರೀ. ಬೇಕೆಂದೇ ಶಾಂತಳನ್ನು ಮತ್ತೆ ಸ್ಟೇಜ್ ಹತ್ತಿಸಿ ’ನೆನೆನೆನೆದು ಕಾದಿರುವೆ ನಾ’ ಹಾಡಿಸಿ ಅದನ್ನು ಅವಳ ಗಂಡ ನೋಡುವಂತೆ ಮಾಡ್ತಾರ್ರೀ.
ಅಣ್ಣ ಮತ್ತು ತನ್ನ ಹೇಣ್ತಿ ಮಧ್ಯ ಸಂಬಂಧ ಇದೆ ಅಂತ ಮನೆ ಬಿಟ್ಟು ಹೋಗ್ತಾನೆ ರಘು. ಹೋಗುವಾಗ ಮಗೀನ ಎತ್ಕೊಂಡು ಹೋಗಿಬಿಡ್ತಾನೆ. (ಅಶ್ವತ್ಥ ಅವರ ಕಾದಂಬರಿ ಆಧಾರಿತ ರಂಗನಾಯಕಿ ಚಿತ್ರದಲ್ಲಿ ಅಶೋಕ್ ತನ್ನ ಮತ್ತು ಆರತಿಯ ಮಗನನ್ನು ಎತ್ತಿಕೊಂಡು ಹೋಗೋ ದೃಶ್ಯ ನೆನಪಾಯಿತು).
ನಂತರ ಬರೀ ಗೋಳು. ಪ್ರಸಾದ್ ತಮ್ಮನಿಗಾಗಿ ರೈಲು ನಿಲ್ದಾಣಕ್ಕೆ ಬಂದಾಗ ಅವನ ಕಾಲಿಗೆ ಪೆಟ್ಟು ಬಿದ್ದು ಅವನ ಕಾಲು ತೆಗೆದುಬಿಡುತ್ತಾರೆ. ಶಾಂತ ಮನೇಲಿ ಗೋಳಾಡ್ತಿರ್ತಾಳೆ.
ಕೊನೆಗೆ ಎಲ್ಲರೂ ಒಂದಾಗುತ್ತಾರೆ. ಶುಭವೋ ಅಶುಭವೋ ಒಟ್ನಲ್ಲಿ ಸಿನಿಮಾ ಮುಗೀತದೆ.
ರಾಜ್ ಆದರ್ಶ ಅಣ್ಣನಾಗಿ ಚೆಂದ ನಟನೆ. ಗಂಗಾಧರ (ಶರಪಂಜರ ಕಾವೇರಿ ಗಂಡ) ಕೂಡ ಫೈನ್.ಜಯಂತಿ ನಗು ಅಳು ನರ್ತನ ಎಲ್ಲಾ ಉಂಟು.
ಆರ್ ನಾಗೇಂದ್ರ ರಾವ್, ದಿನೇಶ್, ರಮಾದೇವಿ, ಪಾಪಮ್ಮ (ಈ ಹೆಣ್ಮಕ್ಕಳಿಬ್ರೂ ಫುಲ್ ಮಾಡರನ್), ರೌಡಿಯಂತೆ ಕಾಣುವ ಒಳ್ಳೆಯ ಹೃದಯದ ನಾಗಪ್ಪ ಇದ್ದಾರೆ.
ಇನ್ನೂ ಒಂದೆರಡು ಹಾಡುಗಳಿವೆ. ಒಂದು ಪಿ. ಸುಶೀಲ ಮತ್ತು ಇನ್ನೊಂದು ಎಲ್ ಆರ್ ಈಶ್ವರಿ ಹಾಡಿರೋದು.
ಘಂಟಸಾಲ ಅವರ ನೇಪಥ್ಯ ಸಂಗೀತ ಸನ್ನಿವೇಶಕ್ಕೆ ತಕ್ಕಂತೆ ಚೆನ್ನಾಗಿದೆ.