ಕನ್ನಡದಲ್ಲಿ ಹಾರರ್ ಸಿನೆಮಾ ಹುಡುಕುತ್ತಿದ್ದರೆ ‘ನಾನಿ’ ಅತ್ಯುತ್ತಮ ಆಯ್ಕೆ.
ಇದು ಭಯಾನಕವಾಗಿರುವುದಲ್ಲದೇ, ನಮ್ಮ ಹೃದಯವನ್ನು ಕರಗಿಸುವಂತಹಾ ಒಂದು ಕರುಣಾಜನಕ ಕಥೆಯನ್ನೂ ಸಹ ಹೊಂದಿದೆ. ಮೊದಲಿಗೆ ದೆವ್ವದ ಆಟ ನೋಡಿ ಬೇಸತ್ತವರಿಗೆ, ಆ ದೆವ್ವದ ಹಿನ್ನೆಲೆ ತಿಳಿದು ಹೃದಯ ಆರ್ದ್ರವಾಗುತ್ತದೆ. ಎರಡು ದಿನ ಕಳೆದರೂ ಆ ಹಳೆಯ ಕಥೆ ನಮ್ಮನ್ನು ಕಾಡುತ್ತದೆ…..
ನೂತನ ದಂಪತಿಗಳು ಒಂದು ಬಂಗಲೆಯಲ್ಲಿ ವಾಸಿಸಲು ಬಂದಾಗಿನಿಂದ ಚಿತ್ರ ಶುರುವಾಗುತ್ತದೆ. ಎರಡು ದಿನ ಮಾಮೂಲಿಯಾಗಿ ಕಳೆದ ನಂತರ, ಮೂರನೇ ದಿನದಿಂದ ಆ ಮನೆಯಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯತೊಡಗುತ್ತವೆ.
ಇದು ದೆವ್ವದ ಸಿನೆಮಾ ಅಂತ ಮೊದಲೇ ಗೊತ್ತಿರುವುದರಿಂದ ಮತ್ತು ಇದೇ ರೀತಿಯ ಹಲವಾರು ಸಿನೆಮಾಗಳನ್ನು ನಾವು ಈಗಾಗಲೇ ನೋಡಿರುವುದರಿಂದ, ಈ ಸನ್ನಿವೇಶಗಳನ್ನು ನೋಡಿ ನಾವೇನು ಹೆದರುವುದಿಲ್ಲ. ಆದರೆ ಮುಂದೇನು ಆಗಬಹುದು ಎಂಬ ಕುತೂಹಲ ಉಳಿಸುವಲ್ಲಿ ಸಿನೆಮಾ ಸಫಲವಾಗಿದೆ.
ಹಾಗೆ ಮುಂದೇನು ಅಂತ ನೋಡುವಾಗ, ಆ ಮನೆಯ ಹಿನ್ನೆಲೆ ತಿಳಿದುಬರುತ್ತದೆ. ಅದೊಂದು ಕರುಳು ಹಿಂಡುವಂತಹಾ ಕಥೆ. ನಿರ್ದೇಶಕರು ಅದನ್ನು ನಿರೂಪಿಸಿರುವ ರೀತಿಗೆ ಮನಸ್ಸು ಕದಡುತ್ತದೆ. ಕನಿಷ್ಠ ಎರಡು ದಿನಗಳಾದರೂ ಕಾಡುವ ಫ್ಲಾಷ್ ಬ್ಯಾಕ್ ಇಟ್ಟು ನಿರ್ದೇಶಕರು ನಮ್ಮ ಹೃದಯ ಗೆಲ್ಲುತ್ತಾರೆ.
ಎಲ್ಲರನ್ನೂ ಕಾಡುವ ದೆವ್ವದ ಹಿಂದಿನ ಕಥೆ ಕೇಳಿ ನಾವೂ ದೆವ್ವದ ಪರವಾದಾಗ ಮತ್ತೇನು? ದೆವ್ವ ಆಡಿದ್ದೇ ಆಟ…..
ಇರುವ ಹಾಡುಗಳು ಬಹಳ ಸೊಗಸಾಗಿವೆ.
‘ಕನ್ನಡದಲ್ಲಿ ಇಷ್ಟೊಳ್ಳೆಯ ದೆವ್ವದ ಸಿನೆಮಾ ಇದೆಯಾ?’ ಅಂತ ನಿಮಗೆ ಅನ್ನಿಸದಿರೋಲ್ಲ…. ಅಷ್ಟು ಚೆನ್ನಾಗಿದೆ ಈ ಸಿನೆಮಾ. ಕೆಲವೇ ಕೆಲವು ಉತ್ತಮ ಹಾರರ್ ಸಿನೆಮಾಗಳಲ್ಲಿ ಇದೂ ಒಂದಾಗಿದೆ.