ಅಣ್ಣಾವ್ರ ಚಿತ್ರಗಳಲ್ಲಿ ಇದೊಂದು ಚಿತ್ರ ಕೂಡ ನನ್ನ ಫೇವರಿಟ್.
ಆನಂದ್ ಅವರ ನಾನೂ ನೀನೂ ಜೋಡಿ ಎನ್ನುವ ಸಣ್ಣಕಥೆಯ ಆಧಾರ ಈ ಚಿತ್ರ.
ಲಕ್ಷ್ಮಿ ನಾಯಕಿಯಾಗಿ ಬರುತ್ತಾರೆ ಎಂದೊಡನೆ ಏನೋ ಖುಷಿ. ಏಕೆಂದರೆ ಚಟ್ಟಕ್ಕಾರಿ ಎನ್ನುವ ಮಲಯಾಳಂ ಸಿನಿಮಾವನ್ನು ಈಕೆಗಾಗಿ ನೋಡಿದ್ದೆ. ಒಂದು ಅಕ್ಷರವೂ ಆಗಿರಲಿಲ್ಲ. ಚಿತ್ರ ನೋಡಿ ಓಹೋ ಹೀಗೆ ಹೇಳಿರಬಹುದು ಈ ಪಾತ್ರ ಎನ್ನುವ ಊಹೆ ಮಾತ್ರವೇ!
ಗೋವಾದಲ್ಲಿ ಸಿ.ಐ.ಡಿ. 999ನಲ್ಲಿ ಬಾಂಡ್ ಪ್ರಕಾಶನ ಪ್ರೇಯಸಿಯಾಗಿ ಕಾಣಿಸಿಕೊಂಡ ಮೇಲೆ, ಬಹಳ ವರ್ಷಗಳ ನಂತರ ಲಕ್ಷ್ಮಿ ಕನ್ನಡದಲ್ಲಿ!
ಅಣ್ಣಾವ್ರ ನಟನೆಗೆ ಅವರೇ ಸಾಟಿ. ಪ್ರಥಮ ಭಾಗದ ಪ್ರೇಮಿಯ ಪಾತ್ರವಾಗಲೀ, ಎರಡನೇ ಭಾಗದ ಆ್ಯಕ್ಟಿಂಗ್ ತಂದೆಯಾಗಲೀ ಬಹಳವೇ ಚೆನ್ನ.
ಬಹುಶಃ ಈ ಚಿತ್ರದ ಹಾಡುಗಳದ್ದೇ ಇರಬೇಕು, ರೆಕಾರ್ಡ್ ಕಂಪೆನಿಯವರು ಹಾಡಿನ ಮೊದಲ ಸಾಲುಗಳನ್ನು ಪತ್ರಿಕೆಯಲ್ಲಿ ಮುದ್ರಿಸಿದ್ದರು.
ಈ ಚಿತ್ರ ಬಿಡುಗಡೆಯಾದಾಗ ನನಗೆ 19 ವರ್ಷಗಳು. ಕಲ್ಪನೆಗಳು ಗರಿಗೆದರುತ್ತಿದ್ದ ಕಾಲ!
ಸಿಹಿ ಮುತ್ತು ಎಂಬ ಹೆಸರು ಓದಿ ಇದು ಖಂಡಿತ ಅಣ್ಣಾವ್ರು ಲಕ್ಷ್ಮಿ ಯುಗಳಗೀತೆ ಎಂದುಕೊಂಡು ಬಹಳ ಬೋಲ್ಡ್ ಡೈರೆಕ್ಟರ್ ಎಂದುಕೊಂಡೆವು. ಸಿನಿಮಾ ನೋಡಿದಾಗ ಅದು ಮಗುವಿಗೆ ಎಂದು ತಿಳಿಯಿತು! ಅದಾಗಲೀ, ನನ್ನಾಸೆಯಾ ಹೂವೆ ಆಗಲೀ, ಎಲ್ಲೆಲ್ಲಿ ನೋಡಲಿ, ನಿನ್ನ ಮರೆಯಲಾರೆ… ವಾಹ್ ಇಂದಿಗೂ ಎಲ್ಲ ಹಾಡುಗಳ ಎಲ್ಲ ಪದಗಳೂ ಕಂಠಪಾಠವಾಗಿವೆ.
ಲೀಲಾವತಿಯವರ ಅತ್ತೆ ಪಾತ್ರವು ಅವರಿಗೆ ರಾಜ್ಯ ಪ್ರಶಸ್ತಿಯನ್ನು ಕೊಡಿಸಿತೆಂದು ನೆನಪು. ಯಾವಾಗಲೂ ಸಾಫ್ಟ್ ಕ್ಯಾರೆಕ್ಟರ್ ಮಾಡುತ್ತಿದ್ದ ಲೀಲಾವತಿಯವರಿಗೆ ಇದೊಂದು ಮೇಕ್ ಓವರ್ ಪಾತ್ರ.
ಕಥೆಯೇ ಎಷ್ಟು ಚೆನ್ನಾಗಿ ಇತ್ತೆಂದರೆ ಬೇರೆ ಯಾವ ಹೆಚ್ಚಿನ ಪಾತ್ರಗಳೂ ಇಲ್ಲ. ಬಾಲಕೃಷ್ಣ, ವಾದಿರಾಜ್ ಇವರ ಪಾತ್ರಗಳು ‘ಸಮಯ ಸರಿದಿದೆ’ ಎಂದು ಹೇಳಲು ಮಾತ್ರ ಇವೆ ಎನ್ನಿಸುತ್ತದೆ.
ಆಗಿನ ಪ್ರಜಾವಾಣಿಯಲ್ಲಿ ಲಕ್ಷ್ಮಿಯವರ ಗರಿಮುರಿಯಾದ ಬಿಸ್ಕಿಟ್ನಂಂತಹ ಸೌಂದರ್ಯ ಎಂದು ವಿಮರ್ಶೆ ಮಾಡಿದ್ದ ನೆನಪಿದೆ!
‘ಶುಕ್ರವಾರ ಹಾಫ್ ಡೇ ಇಲ್ವಾ?’ ಎಂದು ಉಷಾ ಆನಂದನನ್ನು ಕೇಳುವ ಡಯಲಾಗ್ ಇಂದಿಗೂ ನೆನಪಿದೆ!