“ಫರ್ಸ್ಟ್ ಡೇ ಫರ್ಸ್ಟ್ ಶೋ” ಎಂಬ ಕಲ್ಪನೆಯೇ ನಮ್ಮಲ್ಲಿ ಪುಳಕ ಹುಟ್ಟಿಸುತ್ತದೆ. ಸಿನೆಮಾ ಹೇಗಿದೆಯೋ ಅದು ಬೇರೆ ವಿಷಯ. ಆದರೆ ಆ ಸಿನೆಮಾವನ್ನು ನಾನು ಎಲ್ಲರಿಗಿಂತಾ ಮೊದಲು ನೋಡಿಬಿಡಬೇಕು ಅನ್ನುವ ಕ್ರೇಜ್ ನಮಗಿರುತ್ತದೆ. ಈಗಂತೂ ಅಮೆಜಾನ್ ಪ್ರೈಮಿನಲ್ಲಿ ನೇರವಾಗಿ ಸಿಗುವುದರಿಂದ ಸಿನೆಮಾ ಅನ್ನೋದು ಅಂಗೈಯಲ್ಲಿನ ಅರಗಿಳಿಯಾಗಿದೆ. ಹಾಗಾಗಿ “ನಿಶ್ಯಬ್ದಂ” ಟ್ರೈಲರ್ ನೋಡಿದಾಗಿನಿಂದ ಅಕ್ಟೋಬರ್ ‘ಎರಡು’ ಯಾವತ್ತು ಆಗುವುದೆಂದು ಕಾಯತೊಡಗಿದ್ದೆ.
ಕಾಯುವುದಕ್ಕೆ ಕಾರಣ ಒಂದೇ… ಅದು ಅನುಷ್ಕಾ.
ಅದರಲ್ಲೂ ಮೂಕಿ-ಕಿವುಡಿಯ ಪಾತ್ರ ಬೇರೆ. ಏನೋ ಹೊಸ ರೀತಿಯ ಥ್ರಿಲ್ಲರ್, ಎಂಟರ್ ಟೈನರ್, ಆಕ್ಷನ್, ಹಾರರ್ ಅಂತೆಲ್ಲ ಕಲ್ಪಿಸಿ ಅಕ್ಟೋಬರ್ ಎರಡರ ಬೆಳ್ಳಂಬೆಳಿಗ್ಗೆಯೇ ಸಿನೆಮಾ ನೋಡಲು ಕುಳಿತೆ.
ಶುರುವಿನಲ್ಲಿಯೇ ಭಯಾನಕ ಕೊಲೆಯಾಗುತ್ತದೆ.
ಆ ಕೊಲೆ ಮಾಡಿದವರು ಯಾರು…. ??? ಮತ್ಯಾರು….? ಆ ಮನೆಯಲ್ಲಿದ್ದ ಆತ್ಮ ಅಥವಾ ದೆವ್ವ…. !!! ನಂತರ ಆ ಮನೆ woodside villa ಭೂತ ಬಂಗಲೆಯಾಗಿಬಿಡುತ್ತದೆ. ಅಲ್ಲಿಗೆ ಯಾರೂ ಹೋಗುತ್ತಿರುವುದಿಲ್ಲ. ಆ ಮನೆಯಲ್ಲಿ ಒಂದು ಪೇಂಟಿಂಗ್ ಇರುತ್ತದೆ. ಆ ಪೇಂಟಿಂಗಿಗಾಗಿ ನಮ್ಮ ಸಿನೆಮಾದ ನಾಯಕ ಮತ್ತು ನಾಯಕಿ ಸುಮಾರು ಐವತ್ತು ವರ್ಷಗಳ ನಂತರ ಆ ಭೂತಬಂಗಲೆಗೆ ಭೇಟಿ ಕೊಡುತ್ತಾರೆ. ಅವರಿಗೆ ಆ ಪೇಂಟಿಂಗ್ ಸಿಗುವುದಿಲ್ಲ. ಆದರೆ ಆ ಮನೆಯಲ್ಲಿದ್ದ ಭೂತಕ್ಕೆ ನಾಯಕ ಬಲಿಯಾಗುತ್ತಾನೆ. ಕಿವಿ ಕೇಳದ-ಮಾತು ಬರದ ನಾಯಕಿ ಹೇಗೋ ತಪ್ಪಿಸಿಕೊಂಡು ಹೊರಬರುತ್ತಾಳೆ.
ಇದೀಗ ಮುಂದಿನ ಸವಾಲು!!!!
ತಪ್ಪಿಸಿಕೊಂಡು ಬಂದಿರುವ ನಾಯಕಿಗೆ ಕಿವಿಯೂ ಕೇಳೋಲ್ಲ… ಮಾತೂ ಬರುವುದಿಲ್ಲ.. ಅಲ್ಲಿ ಎನು ನಡೆಯಿತು ಎಂದು ತಿಳಿಯುವುದಾದರೂ ಹೇಗೆ? ಅಲ್ಲಿಂದ ನಾಯಕಿಯ ಗತ ಜೀವನದ ಪರಿಚಯವಾಗುತ್ತದೆ. ಆಕೆಗೊಬ್ಬಳು ಪ್ರಾಣ ಸ್ನೇಹಿತೆ ಇದ್ದಳು, ಆಕೆ ಈಗ ಕಾಣೆಯಾಗಿದ್ದಾಳೆ ಅಂತ ಗೊತ್ತಾಗುತ್ತದೆ. ಅಷ್ಟೇ ಅಲ್ಲ… ಆ ನಗರದಲ್ಲಿ ಆಗಾಗ ಹೆಣ್ಣುಮಕ್ಕಳು ಕಾಣೆಯಾಗುತ್ತಿರುತ್ತಾರೆ ಎಂಬುದೂ ನಮಗೆ ತಿಳಿಯುತ್ತದೆ.
ಕಾಣೆಯಾದ ನಾಯಕಿಯ ಸ್ನೇಹಿತೆಗೂ, ಆಗಾಗ ಕಾಣೆಯಾಗುವ ಹೆಣ್ಮಕ್ಕಳಿಗೂ, woodside villa ಎಂಬ ಭೂತಬಂಗಲೆಗೂ ಏನು ಸಂಬಂಧ…? ಕಾಣೆಯಾದ ಗೆಳತಿ ಸಿಗುತ್ತಾಳೆಯೇ? ನಾಯಕನನ್ನು ಸಾಯಿಸಿದವರು ಯಾರು? ಈ ಪ್ರಶ್ನೆಗಳಿಗೆ ಉತ್ತರಗಳು ಸಿಂಪಲ್ ಆಗಿ ಒಂದೊಂದೇ ತೆರೆದುಕೊಳ್ಳುತ್ತಾ ಹೋಗುತ್ತದೆ. ಥ್ರಿಲ್ಲರ್ ಎಂದು ಸಿನೆಮಾ ನೋಡಲು ಕುಳಿತವರಿಗೆ ಗೊಂದಲ…. ಇದೇನು… ಇಷ್ಟೇನಾ? ಅಂತ.
ಹೌದು. ಇದಕ್ಕಾಗಿ ಫಾರಿನ್ನಿನಲ್ಲಿ ಚಿತ್ರಿಸಬೇಕಿತ್ತೇ? ಅನುಷ್ಕಾಳನ್ನು ಮೂಕಿ-ಕಿವುಡಿ ಮಾಡಿದ ಉದ್ದೇಶವೇನು? ಆ ಊರಿನ ಹೆಣ್ಮಕ್ಕಳು ಕಾಣೆಯಾಗುತ್ತಿದ್ದ ಹಿಂದಿರುವ ಸಿಲ್ಲಿ ಕಾರಣಗಳು… ಅದೇ ಕಾರಣಕ್ಕಾಗಿ ನಾಯಕಿಯ ಗೆಳತಿಯೂ ಕಾಣೆಯಾಗಿದ್ದು.. ಕಡೆಗೆ ಇದೆಲ್ಲವನ್ನೂ ಒಂದೇ ದಾರದಲ್ಲಿ ಪೋಣಿಸಿ ನಮ್ಮೆದುರು ಇಡಲಾಗಿದೆ..
“ಪೆಂಗ್ವಿನ್” ಸಿನೆಮಾದ ನಂತರ ‘ಕೊಲೆ ಮಾಡಲು ಅತೀ ದುರ್ಬಲ ಕಾರಣ ಇರುವ’ ಮತ್ತೊಂದು ಸಿನೆಮಾ ಇದು. ಸರಿಯಾದ ಮೋಟಿವೇಶನ್ ಇಲ್ಲದೇ ಸುಖಾಸುಮ್ಮನೆ ಕೊಲೆಗೈಯ್ವುದೇ? ಕೊಟ್ಟಿರುವ ಕಾರಣವಾದರೂ ಏನು? ಆ ಹೆಣ್ಮಕ್ಕಳ ಚಾರಿತ್ರ್ಯ ಸರಿ ಇರಲಿಲ್ಲ ಎನ್ನುವುದು. ಹಾಗಾದರೆ ಗಂಡು ತಪ್ಪು ಮಾಡುವುದೇ ಇಲ್ಲವೇ? ಬರೀ ಹೆಣ್ಣನ್ನು ಮಾತ್ರ ಅಪರಾಧಿಯಾಗಿ ತೋರಿಸಿರುವ ಕಾರಣವೇನು?
ಇದಲ್ಲದರ ಮಧ್ಯೆ ಮೂಕಿ-ಕಿವುಡಿಯಾದ ಅನುಷ್ಕಾಳನ್ನು ಸೈಡಿಗಿಟ್ಟು ಬೇರೆ ಪಾತ್ರಗಳೇ ವಿಜೃಂಭಿಸುತ್ತವೆ. ಅರೆ!!! ನಾವು ಸಿನೆಮಾ ನೋಡುತ್ತಿರುವುದಕ್ಕೆ ಕಾರಣವೇ ಅನುಷ್ಕಾ… ಅವಳನ್ನೇ ಬದಿಗೆ ಸರಿಸಿದರೆ ಹೇಗೆ? ಅಲ್ಲದೇ ಆಕೆಯ ಹೇರ್ ಸ್ಟೈಲ್ ಮತ್ತು ಕಾಸ್ಟ್ಯೂಮ್ ಅಷ್ಟು ಪರಿಣಾಮಕಾರಿಯಾಗಿಲ್ಲ.. ಮತ್ತಷ್ಟು ಚಂದದ ಕಾಸ್ಟ್ಯೂಮ್ ಡಿಸೈನ್ ಮಾಡಬಹುದಿತ್ತು.
ಕೊನೆಯಲ್ಲಿ ನಡೆಯುವುದಂತೂ ಸಿನಿಮೀಯ ರೀತಿಯಲ್ಲಿ ನಗಾಡಿಕೊಂಡು ನೋಡುವಂತಿದೆ. ಯಾವ ಹೊಸ ನಿರೀಕ್ಷೆಯೂ ಇಲ್ಲದೇ ಅಂದುಕೊಂಡಂತೆಯೇ ಆಗಿ ಸಿನೆಮಾ ಮುಗಿಯುತ್ತದೆ. ಇಷ್ಟಕ್ಕಾಗಿ ಫರ್ಸ್ಟ್ ಡೇ ಫರ್ಸ್ಟ್ ಶೋ ಅಂತ ಕಾಯುತ್ತಿದ್ದೆನೇ ಅನ್ನುವ ನಿರಾಸೆ ಮನದ ತುಂಬಾ ಕಾಡುತ್ತದೆ.
ಆದರೂ ಒಂದು ಪ್ರಶ್ನೆ ಸ್ಪಷ್ಟವಾಗೋಲ್ಲ.
ಈ ಸಿನೆಮಾದಲ್ಲಿ ಅನುಷ್ಕಾ ಮೂಕಿ-ಕಿವುಡಿಯಾಗಿದ್ದರೂ, ಆಗಿರದಿದ್ದರೂ ವ್ಯತ್ಯಾಸವೇನೂ ಇರುತ್ತಿರಲಿಲ್ಲ. ಆದರೆ ಹಾಗೆ ಮಾಡಿದ ಉದ್ದೇಶವೇನು??? ಗೊತ್ತಾಗಲಿಲ್ಲ.