ಮೊದಲನೆಯದಾಗಿ ೧೯೫೧ ರಲ್ಲಿ ತೆರೆ ಕಂಡ ಬೈಸಾಕಿ, ೧೯೫೨ ರಲ್ಲಿ ತೆರೆ ಕಂಡ ಜುಗ್ನಿ, ಕೌಡೇ ಷಾ, ನಿಕ್ಕಿ ಚಿತ್ರಗಳು ಸಾಧಾರಣ ಪ್ರಮಾಣದ ಯಶಸ್ಸು ಪಡೆದಿದ್ದವು. ಆದರೆ ಈ ದೆಸೆಯಲ್ಲಿ ಪ್ರಮುಖ ಚಿತ್ರವೆಂದರೆ ೧೯೫೯ ರಲ್ಲಿ ತೆರೆ ಕಂಡ ರಾಜ್ ಭಕ್ರಿ ನಿರ್ದೇಶನದ ಸುಂದರ್ ಮತ್ತು ನಿಶಿ ನಟಿಸಿದ ಹಾಸ್ಯ ಪ್ರಧಾನ ಚಿತ್ರ ಭಾಂಗ್ರಾ ವಾಣಿಜ್ಯಾತ್ಮಕವಾಗಿ ಯಶಸ್ಸನ್ನು ಕಂಡಿತ್ತು. ಹನ್ಸ್ ರಾಜ್ ಬೆಹ್ಲ್ ಅವರ ಸಂಗೀತ ನಿರ್ದೇಶನದ ಈ ಚಿತ್ರದ ಗೀತೆಗಳನ್ನು ಶಂಶಾದ್ ಬೇಗಂ ಮತ್ತು ರಫಿ ಮುಂತಾದ ಜನಪ್ರಿಯ ಗಾಯಕರು ಹಾಡಿದ್ದರು.
೧೯೬೦ ರಲ್ಲಿ ತೆರೆ ಕಂಡ ಪ್ರೇಮ್ ಚೋಪ್ರಾ, ಮದನ್ ಪುರಿ, ಕೃಷ್ಣ ಕುಮಾರಿ ಮತ್ತು ಸುಂದರ್ ನಟಿಸಿದ ಚೌಧರಿ ಕರ್ನೈಲ್ ಸಿಂಗ್ ಈ ಚಿತ್ರದ ಮೂಲಕ ಆರಂಭಗೊಂಡ ಯಶಸ್ಸಿನ ಪಯಣ ಅದೇ ವರ್ಷ ತೆರೆ ಕಂಡ ಇಂದಿರಾ ಬಿಲ್ಲಿ ಮತ್ತು ಸುಂದರ್ ನಟಿಸಿದ ಯಮ್ಲಾ ಜಟ್, ಜಗದೀಶ್ ಸೇಠಿ,ಇಂದಿರಾ ಬಿಲ್ಲಿ ಮತ್ತು ಮದನ್ ಪುರಿ ನಟಿಸಿದ ಕಿಕ್ಲಿ, ಇಂದಿರಾ ಬಿಲ್ಲಿ, ಕೃಷ್ಣ ಕುಮಾರಿ ಮತ್ತು ದಲ್ಜಿತ್ ನಟಿಸಿದ ದೋ ಲಜ್ಜಿಯಾ, ೧೯೬೧ ರಲ್ಲಿ ತೆರೆ ಕಂಡ ನಿಶಿ ಮತ್ತು ಕರಣ್ ದಿವಾನ್ ನಟನೆಯ ಗುಡ್ಡಿ, ಮತ್ತು ೧೯೭೪ ರಲ್ಲಿ ತೆರೆ ಕಂಡ ಜಾನಿ ಸಲುಜಾ ಮತ್ತು ಶಮೀಂದರ್ ಸಿಂಗ್ ನಟನೆಯ ದುಖ್ ಭಂಜನ್ ತೇರಾ ನಾಮ್ ಮುಂತಾದ ಚಿತ್ರಗಳು ಯಶಸ್ಸನ್ನು ಕಂಡಿವೆ.
೭೦ ರ ದಶಕದಲ್ಲಿ ಪ್ರತಿ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಸರಾಸರಿ ಚಿತ್ರಗಳ ಸಂಖ್ಯೆ ೯ ರಷ್ಟಿತ್ತು. ೧೯೭೫ ರಲ್ಲಿ ತೆರೆ ಕಂಡ ತೇರಿ ಮೇರಿ ಇಕ್ ಜಿಂದ್ರಿ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಧರ್ಮೆಂದ್ರ ರವರ ಸೋದರ ಸಂಬಂಧಿ ರವೀಂದ್ರ ಪಂಜಾಬಿ ಚಿತ್ರರಂಗವನ್ನು ನಿಚ್ಚಳವಾಗಿ ಪ್ರವೇಶಿಸಿದ್ದರು. ಅನಂತರ ಸತತ ಹತ್ತು ವರ್ಷಗಳ ಕಾಲ ಅನೇಕ ಯಶಸ್ವಿ ಪಂಜಾಬಿ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಚಿತ್ರ ರಸಿಕರ ಮನಸ್ಸನ್ನು ಗೆದ್ದಿದ್ದರು.
೧೯೭೬ ರಲ್ಲಿ ತೆರೆ ಕಂಡ ನಟ ಧಾರಾ ಸಿಂಗ್ ನಟಿಸಿದ ಸಾವಾ ಲಾಬ್ ಸೆ ಏಕ್ ಲಡೌನ್ ಮತ್ತು ೧೯೭೭ ರಲ್ಲಿ ತೆರೆ ಕಂಡ ನಟ ಸುನೀಲ್ ದತ್ ಮತ್ತು ಶತ್ರುಘ್ನ ಸಿನ್ಹಾ ನಟಿಸಿದ ಸತ್ ಶ್ರೀಕಾಲ್ ಚಿತ್ರವು ನಿರೀಕ್ಷೆಗೂ ಮೀರಿ ಗಳಿಕೆಯಲ್ಲೂ ದಾಖಲೆ ನಿರ್ಮಿಸಿತ್ತು. ಅದೇ ವರ್ಷ ತೆರೆ ಕಂಡ ಜಹೀರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಸಾಲ್ ಸೋಲ್ವಾ ಚಾಡ್ಯಾ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಹಿರಿಯ ನಟಿ ರೇಖಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ವರ್ಷ ತೆರೆ ಕಂಡ ನಟ ಸಿಮಿಗರೇವಾಲ್ ನಟಿಸಿದ ಉಡೀಕನ್ ಚಿತ್ರವು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತ್ತು.
೧೯೬೧ ರಲ್ಲಿ ತೆರೆ ಕಂಡ ನಟ ಜಾನಿ ವಾಕರ್ ನಟಿಸಿದ ವಿಲಯತಿ ಬಾಬು ಚಿತ್ರವು ೧೯೭೮ ರಲ್ಲಿ ಇದೇ ಹೆಸರಿನಲ್ಲಿ ನಟ ಮೆಹರ್ ಮಿತ್ತಲ್ ನಟನೆಯಲ್ಲಿ ರಿಮೇಕ್ ಮಾಡಲಾಗಿದ್ದ ಈ ಚಿತ್ರದಲ್ಲಿ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಎಂದು ಪ್ರಸಿದ್ಧಿ ಪಡೆದಿರುವ ಹಿರಿಯ ನಟ ಅಮಿತಾಬ್ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ವರ್ಷ ತೆರೆ ಕಂಡ ಹಿಂದಿ ಚಿತ್ರ ರಂಗದ ಹಿರಿಯ ನಟ ರಾಜೇಶ್ ಖನ್ನಾ ನಟಿಸಿದ ಟಿಲ್ ಟಿಲ್ ದ ಲೇಖ ಚಿತ್ರವು ಸತತ ೫೦ ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಾಣುವುದರ ಮೂಲಕ ಸುವರ್ಣ ಮಹೋತ್ಸವ ಆಚರಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.ಇದೇ ವರ್ಷ ತೆರೆ ಕಂಡ ನಟ ಮನೋಜ್ ಕುಮಾರ್ ನಟಿಸಿದ ಜಟ್ಟ ಪಂಜಾಬ್ ಎಂಬ ಚಿತ್ರದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಿದ್ದರು.
೧೯೭೨ ರಲ್ಲಿ ತೆರೆ ಕಂಡ ರೂಪ್ ಶೌಕೀನ್ ದಾ ಚಿತ್ರದ ಮೂಲಕ ಸತೀಶ್ ಕೌಲ್ ಮತ್ತು ದಲ್ಜಿತ್ ಕೌರ್ ಎಂಬ ಉದಯೋನ್ಮುಖ ನಟರು ಈ ಚಿತ್ರರಂಗವನ್ನು ಪ್ರವೇಶಿಸಿದರು. ೧೯೭೦ ರ ದಶಕದಲ್ಲಿ ಪ್ರಖ್ಯಾತ ಹಿಂದಿ ಚಿತ್ರ ನಟರಾದ ರಾಜೇಶ್ ಖನ್ನಾ, ಧರ್ಮೇಂದ್ರ, ಸುನೀಲ್ ದತ್, ಧಾರಾ ಸಿಂಗ್ ಮತ್ತು ಶತ್ರುಘ್ನ ಸಿನ್ಹಾ ಮುಂತಾದ ನಟರು ಪಂಜಾಬಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ವೀರೇಂದ್ರ, ಧೀರಜ್ ಕುಮಾರ್ ಮತ್ತು ಮೆಹರ್ ಮಿತ್ತಲ್ ಮುಂತಾದ ಪಂಜಾಬಿ ನಟರು ಮೊದಲೇ ಜನಪ್ರಿಯತೆಯನ್ನು ಪಡೆದಿದ್ದರು. ಹಿಂದಿ ಚಿತ್ರ ರಂಗದ ಜನಪ್ರಿಯ ನಟಿಯರಾದ ಆಶಾ ಪಾರೇಖ್, ಸಿಮಿಗರೆವಾಲ್ , ರೀನಾ ರಾಯ್ ಮುಂತಾದ ನಟಿಯರು ಬೆರಳೆಣಿಕೆಯ ಪಂಜಾಬಿ ಚಿತ್ರಗಳಲ್ಲಿ ನಾಯಕಿಯಾಗಿ ವಿಜ್ರಂಭಿಸಿದ್ದರೆ ಯೋಗೀತಾ ಬಾಲಿ,ಜಹೀರಾ,ಅರುಣಾ ಇರಾನಿ, ಮೀನಾರಾಯ್ ಮತ್ತು ರಾಧಾ ಸಲುಜಾ ೭೦ ರ ದಶಕದಲ್ಲಿ ಬೇಡಿಕೆಯ ನಟಿಯರಾಗಿದ್ದರು.
೭೦ ರ ದಶಕದಲ್ಲಿ ಪ್ರತಿ ವರ್ಷ ಚಿತ್ರಗಳ ಬಿಡುಗಡೆ ಸರಾಸರಿ ೯ ಇತ್ತು. ಆದರೆ ೮೦ ರ ದಶಕದಲ್ಲಿ ಚಿತ್ರಗಳ ಬಿಡುಗಡೆ ಸರಾಸರಿ ೮ ಕ್ಕೆ ಇಳಿಯಿತು. ೧೯೮೦ ರಲ್ಲಿ ತೆರೆ ಕಂಡ ಫೌಜಿ ಚಾಚಾ ಚಿತ್ರದಲ್ಲಿ ನಟ ಸಂಜೀವ್ ಕುಮಾರ್ ತಮ್ಮ ನಟನೆಯ ಮೂಲಕ ಚಿತ್ರ ಪ್ರೇಮಿಗಳ ಗಮನವನ್ನು ತಮ್ಮ ಕಡೆಗೆ ಸೆಳೆದಿದ್ದರು. ರಾಜ್ ಬಬ್ಬರ್, ರಮಾ ವಿಜ್, ಅಮರೀಶ್ ಪುರಿ ಮತ್ತು ಓಂ ಪುರಿ ನಟನೆಯ ಚನ್ನ್ ಪರ್ದೇಸಿ ಚಿತ್ರವು ವಾಣಿಜ್ಯವಾಗಿ ಯಶಸ್ಸು ಪಡೆಯಿತಲ್ಲದೆ ಅತ್ಯುತ್ತಮ ಪಂಜಾಬಿ ಚಿತ್ರ ಎಂದು ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಯಿತು.