ವಿದ್ಯಾವಾಚಸ್ಪತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ವಿದ್ವಾಂಸ ಡಾ. ಬನ್ನಂಜೆ ಗೋವಿಂದಾಚಾರ್ಯ ರವರು ಇಂದು ಬೆಳಿಗ್ಗೆ ತಮ್ಮ ಅಂಬಲಪಡಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
೧೯೩೬ ರಲ್ಲಿ ಉಡುಪಿಯ ಅಂಬಲಪಾಡಿಯಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೂ ಭಾರತೀಯ ತತ್ವಶಾಸ್ತ್ರ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ವಿಶೇಷ ಆಸಕ್ತಿ. ಕನ್ನಡ ತುಳು ಹಾಗು ಸಂಸ್ಕೃತಗಳಲ್ಲಿ ಅನೇಕ ಪ್ರವಚನಗಳನ್ನು ನೀಡಿದ್ದಾರೆ. ಸಂಸ್ಕೃತದಿಂದ ಕನ್ನಡಕ್ಕೆ ಹತ್ತಾರು ಕೃತಿಗಳನ್ನು ಅನುವಾದ ಮಾಡಿದ್ದಾರೆ.
ಇವರು ದೇಶ ವಿದೇಶಗಳಲ್ಲಿ ಸಾವಿರಾರು ಪ್ರವಚನಗಳನ್ನು ನೀಡಿದ್ದಾರೆ. ಸಂಸ್ಕೃತ ದಿಂದ ಅನುವಾದಗೊಂಡ ಪುಸ್ತಕಗಳೂ ಸೇರಿದಂತೆ, ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸಂಸ್ಕೃತದ ‘ಮೃಚ್ಛಕಟಿಕ’ ಕೃತಿಯನ್ನು ಕನ್ನಡಕ್ಕೆ ‘ಆವೆಯ ಮಣ್ಣಿನ ಆಟದ ಬಂಡಿ’ ಹೆಸರಲ್ಲಿ ಅವರು ಭಾಷಾಂತರಿಸಿದ್ದು, ಈ ಕೃತಿಗೆ ೨೦೦೨ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಜಿವಿ ಅಯ್ಯರ್ ನಿರ್ದೇಶನದ ಮಧ್ವಾಚಾರ್ಯ ಚಿತ್ರಕ್ಕೆ ಸಂಭಾಷಣೆ ಆದಿ ಶಂಕರಾಚಾರ್ಯ ಚಿತ್ರಕ್ಕೆ ಚಿತ್ರಕತೆಯನ್ನು ಕೂಡ ಬರೆದಿದ್ದಾರೆ. ಶ್ರೀಯುತ ಬನ್ನಂಜೆಯವರು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮಿಕ ಗುರುಗಳಾಗಿದ್ದರು.
೮೪ ವರ್ಷದ ಇವರ ನಿಧನಕ್ಕೆ ಲಕ್ಷಾಂತರ ಇವರ ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ.