ಜಂಪಿಂಗ್ ಜ್ಯಾಕ್ ಎಂಬ ಬಿರುದು ಪಡೆದಿರುವ ನಟ ಜಿತೇಂದ್ರ ಬಾಲಿವುಡ್ ದಿಗ್ಗಜ ನಟರಲ್ಲಿ ಕೂಡ ಒಬ್ಬರು. ಯಾವುದೇ ಹಿನ್ನಲೆಯಿಲ್ಲದೇ ಚಿತ್ರ ರಂಗ ಪ್ರವೇಶಿಸಿದ ಇವರು ತಮ್ಮ ಪರಿಶ್ರಮದಿಂದ ಶ್ರೇಷ್ಠ ನಾಯಕ ನಟನಾಗಿ ಯಶಸ್ವಿಯಾಗಿದ್ದಲ್ಲದೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಇವರು ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಸ್ತುತ ತಮ್ಮದೇ ಒಡೆತನದ ಬಾಲಾಜಿ ಟೆಲಿಫಿಲಂ ನ ಛೇರ್ಮನ್ ಆಗಿರುವ ಇವರ ಸಾಧನೆಗಳು ಅನೇಕ.
ಎಪ್ರಿಲ್ ೭,೧೯೪೨ ರಂದು ಬಾಲಿವುಡ್ ನ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ನಟ ಜಿತೇಂದ್ರ ಪಂಜಾಬ್ ಪ್ರಾಂತ್ಯದ ಅಮೃತಸರದಲ್ಲಿ ಕೃತಕ ಆಭರಣಗಳ ಪಂಜಾಬಿ ವ್ಯಾಪಾರಸ್ಥರ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹೆಸರು ಅಮರನಾಥ ಆಭರಣಗಳ ವ್ಯಾಪಾರಿಯಾಗಿದ್ದರು. ಮತ್ತು ತಾಯಿಯ ಹೆಸರು ಕೃಷ್ಣ ಕಪೂರ್. ಇವರ ಮೊದಲ ಹೆಸರು ರವಿ ಕಪೂರ್. ಇದೇ ಅಮೃತಸರದಲ್ಲಿ ಜನಿಸಿದ ಮತ್ತೋರ್ವ ಬಾಲಿವುಡ್ ದಿಗ್ಗಜ ನಟ ರಾಜೇಶ್ ಖನ್ನಾ ಇವರ ಆತ್ಮೀಯ ಸ್ನೇಹಿತರಾಗಿದ್ದರು. ಅಲ್ಲದೇ ಇದಕ್ಕೆ ಮುಂಚಿತವಾಗಿ ಇವರಿಬ್ಬರ ತಾಯಂದಿರು ಕೂಡ ಆತ್ಮೀಯ ಸ್ನೇಹಿತರಾಗಿದ್ದರು. ಇವರ ಬಾಲ್ಯದ ಜೀವನ ಮುಂಬೈ ನ ನಿರ್ಗಾವ್ ನಲ್ಲಿಯೇ ಕಳೆಯಿತು. ಮಧ್ಯಮ ವರ್ಗದ ಕುಟುಂಬಗಳು ವಾಸಿಸುತ್ತಿದ್ದ ರಾಮಚಂದ್ರ ವಸತಿ ಕಟ್ಟಡದಲ್ಲಿಯೇ ಇವರ ಕುಟುಂಬ ವಾಸಿಸುತ್ತಿತ್ತು.
ಮೊದಲು ತಮ್ಮ ಆಭರಣಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ೧೯೫೯ ರಲ್ಲಿ ಇವರ ಚಿತ್ರರಂಗದ ಪ್ರವೇಶವೇ ರೋಚಕವಾಗಿತ್ತು. ಇವರು ವಿ.ಶಾಂತಾರಾಮವರಿಗೆ ಆಭರಣಗಳನ್ನು ಕಳುಹಿಸಿಕೊಡುವ ಸಮಯದಲ್ಲಿ ನಟಿ ಸಂಧ್ಯಾ ವರ ಬದಲಿ ಪಾತ್ರ ನಿರ್ವಹಿಸುವುದರ ಮೂಲಕ ಅನಿರೀಕ್ಷಿತವಾಗಿ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು. ಆದರೆ ೩ ವರ್ಷಗಳ ನಂತರ ಅದೃಷ್ಟವೆಂಬಂತೆ ಶಾಂತಾರಾಮ್ ವರ ನಿರ್ಮಾಣದ ೧೯೬೩ ರಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ ಹಿಂದಿ ಚಿತ್ರ ಸೆಹ್ರಾ ಭರ್ಜರಿ ಯಶಸ್ಸು ಕಂಡಿತ್ತು.
ನಂತರ ೧೯೬೪ ನೇ ಇಸ್ವಿಯಲ್ಲಿ ಬಂದ ಗೀತ್ ಗಾಯ್ ಪತ್ಥರೊನೆ ಹಿಂದಿ ಚಿತ್ರ ಇವರ ಜೀವನವನ್ನು ಬದಲಾಯಿಸಿತು. ಮೂರು ವರ್ಷಗಳ ನಂತರ ೧೯೬೭ ರಲ್ಲಿ ಬಂದ ರವಿಕಾಂತ್ ನಾಗೈಚ್ ವರ ಫರ್ಜ್ ಎಂಬ ಹಿಂದಿ ಚಿತ್ರದಲ್ಲಿ ಪತ್ತೆದಾರಿ ಪಾತ್ರದ ಮೂಲಕ ಇವರ ಜನಪ್ರಿಯತೆ ನಿರೀಕ್ಷೆಗೂ ಮೀರಿ ಬೆಳೆಯಿತು. ಈ ಚಿತ್ರದಲ್ಲಿನ ಮಸ್ತ್ ಬಹಾನಾ ರೋಕಾ ಮೈ ಆಶಿಕ್( ಪ್ರಸಿದ್ಧ ಗಾಯಕ ಮಹಮದ್ ರಫಿ ಇವರ ಕಂಠದಿಂದ ಬಂದ ಹಾಡು) ಎಂಬ ಹಾಡು ಇಂದಿಗೂ ಜನಪ್ರಿಯವಾಗಿದೆ. ಅಲ್ಲದೇ ಈ ಚಿತ್ರ ೫೦ ವಾರಗಳ ಯಶಸ್ವಿ ಪ್ರದರ್ಶನ ಕಂಡು ಬಾಲಿವುಡ್ ಚಿತ್ರರಂಗದಲ್ಲಿ ದಾಖಲೆಯನ್ನು ನಿರ್ಮಿಸಿತು. ಅದೇ ವರ್ಷ ತೆರೆ ಕಂಡ ಇನ್ನೊಂದು ಹಿಂದಿ ಚಿತ್ರ ಬನ್ ಪೂಲ್ ತೆರೆ ಕಂಡು ಯಶಸ್ವಿಯಾಯಿತಲ್ಲದೆ ಈ ಚಿತ್ರದಲ್ಲಿನ ನೃತ್ಯ ದ ನಿರ್ವಹಣೆಯಿಂದ ಇವರಿಗೆ ಜಂಪಿಂಗ್ ಜ್ಯಾಕ್ ಎಂಬ ಬಿರುದು ಬಂದಿತು.
( ಮುಂದುವರೆಯುವುದು )