ಮಾಲಾ ಸಿನ್ಹಾ ನೇಪಾಳಿ ಮೂಲದ ಒಬ್ಬ ಭಾರತೀಯ ನಟಿಯಾದ ಇವರು ಚಿತ್ರ ರಂಗದ ಯಾವುದೇ ಹಿನ್ನಲೆಯಿಲ್ಲದೆ ಬಾಲ ಕಲಾವಿದೆಯ ಪಾತ್ರವನ್ನು ನಿರ್ವಹಿಸುವುದರ ಮೂಲಕ ಬಂಗಾಳಿ ಚಿತ್ರ ರಂಗವನ್ನು ಪ್ರವೇಶಿಸಿ ನಂತರ ೪೪ ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ನಾಯಕಿ ಪಾತ್ರ ಸೇರಿದಂತೆ ಹಲವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಇಂದಿಗೂ ಬಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ಪ್ರಮುಖ ಹಿರಿಯ ನಟಿಯಾಗಿದ್ದಾರೆ.
ಮಾಲಾ ಸಿನ್ಹಾ ನವೆಂಬರ್ ೧೧, ೧೯೩೬ ರಂದು ಕಾಶ್ಮೀರದಲ್ಲಿ ನೇಪಾಳಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಆಲ್ಬರ್ಟ್ ಸಿನ್ಹಾ. ಇವರು ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡ ಕುರಿತ ಒಂದು ಚಿಕ್ಕ ಸ್ವಾರಸ್ಯಕರ ಸಂಗತಿ ನಿಮಗೆ ತಿಳಿದಿದಿಯೇ? ಇವರ ಮೂಲ ಹೆಸರು ಆಲ್ಡಾ. ಇವರು ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಇವರ ಸ್ನೇಹಿತೆಯರು ಇವರನ್ನು ಆಲ್ಡಾ ಎಂಬುದರ ಬದಲಾಗಿ ಡಾಲ್ಡಾ ಎಂದು ಚುಡಾಯಿಸುತ್ತಿದ್ದರು. ಈ ಕಾರಣದಿಂದಲೇ ಅವರು ತಮ್ಮ ಹೆಸರನ್ನು ಆಲ್ಡಾ ಬದಲಾಗಿ ಮಾಲಾ ಎಂದು ಬದಲಾಯಿಸಿದರು. ನಟಿ ಮಾಲಾ ಸಿನ್ಹಾ ಜೈ ವೈಷ್ಣೋದೇವಿ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸುವ ಮೂಲಕ ಮೊದಲ ಬಾರಿಗೆ ಬಂಗಾಳಿ ಚಿತ್ರರಂಗವನ್ನು ಪ್ರವೇಶಿಸಿದರು. ಅನಂತರ ಕೂಡ ಶ್ರೀ ಕೃಷ್ಣ ಲೀಲಾ,ಜೋಗ್ ಬಿಯೋಗ್ ಮತ್ತು ಧೂಳಿ ಎಂಬ ಬಂಗಾಳಿ ಚಿತ್ರಗಳಲ್ಲಿ ಬಾಲಕಲಾವಿದೆಯಾಗಿ ನಟಿಸಿದ್ದರು. ಒಂದು ದಿನ ಇವರ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ನಾಟಕವನ್ನು ಆಯೋಜಿಸಿದ್ದರು.
ಈ ನಾಟಕದಲ್ಲಿ ಇವರು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಅಂದು ಅದೇ ಶಾಲೆಗೆ ಅಂದಿನ ಪ್ರಸಿದ್ಧ ಬಂಗಾಳಿ ಚಿತ್ರ ನಿರ್ದೇಶಕ ಅರ್ಥೇಂದ್ರ ಬೋಸ್ ನಾಟಕ ವೀಕ್ಷಿಸಲು ಆಗಮಿಸಿದ್ದರು. ಈ ನಾಟಕದಲ್ಲಿ ನಿರ್ದೇಶಕರು ಮಾಲಾರ ಪ್ರತಿಭೆಯನ್ನು ಗುರುತಿಸಿದ್ದರು. ಕೆಲವು ದಿನಗಳ ನಂತರ ಇದೇ ನಿರ್ದೇಶಕರು ಇವರ ತಂದೆಯನ್ನು ಭೇಟಿ ಮಾಡಿ ವಿಷಯ ತಿಳಿಸಿ ಒಪ್ಪಿಗೆ ಪಡೆದು ಕೆಲವು ದಿನಗಳ ನಂತರ ಇದೇ ನಿರ್ದೇಶಕರ ನಿರ್ದೇಶನದಲ್ಲಿ ೧೯೫೨ ರಲ್ಲಿ ಬಂದ ರೋಷನಾರಾ ಎಂಬ ಬಂಗಾಳಿ ಚಿತ್ರದಲ್ಲಿ ಮುಖ್ಯ ನಟಿಯಾಗಿ ಅಭಿನಯಿಸುವುದರ ಮೂಲಕ ಅಧಿಕೃತವಾಗಿ ಬಂಗಾಳಿ ಚಿತ್ರ ರಂಗವನ್ನು ಪ್ರವೇಶಿಸಿದರು.
ರೋಷನಾರಾ ಎಂಬ ಬಂಗಾಳಿ ಚಿತ್ರ ಇವರ ಮೊಟ್ಟ ಮೊದಲ ಚಿತ್ರವಾಗಿದೆ. ನಂತರ ಆರಂಭವಾದ ಚಿತ್ರ ರಂಗದ ಜೀವನದಲ್ಲಿ ಹಲವಾರು ಬಂಗಾಳಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯ ನಟಿಯಾದರು. ಹೀಗೆಯೇ ಹಲವು ತಿಂಗಳುಗಳು ಕಳೆದ ನಂತರ ಬಂಗಾಳಿ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಮುಂಬೈಗೆ ತೆರಳಿದರು. ಆದರೆ ಅಲ್ಲಿ ಅನಿರೀಕ್ಷಿತ ಸಮಯದಲ್ಲಿ ಅಂದಿನ ಹಿಂದಿ ಚಿತ್ರದ ಖ್ಯಾತ ಹಿನ್ನೆಲೆ ಗಾಯಕಿ ಗೀತಾ ದತ್ ಅವರನ್ನು ಭೇಟಿಯಾದರು.
ಆಶ್ಚರ್ಯಕರ ವಿಷಯವೇನೆಂದರೆ ಮಾಲಾರ ಮೊದಲ ಭೇಟಿಯಲ್ಲಿ ಪ್ರಭಾವಿತರಾದ ಗೀತಾ ದತ್ ಇವರನ್ನು ಹಿಂದಿ ಚಿತ್ರ ರಂಗದ ನಿರ್ದೇಶಕ ಕಿದಾರ್ ಶರ್ಮಾರಿಗೆ ಪರಿಚಯಿಸಿದರು. ಇವರ ಪ್ರತಿಭೆಯ ಬಗ್ಗೆ ತಿಳಿದುಕೊಂಡ ನಿರ್ದೇಶಕ ಕಿದಾರ್ ಶರ್ಮಾ ಅವರದೇ ನಿರ್ದೇಶನದ ರಂಗೀನ್ ರಾತೇಂ ಚಿತ್ರದ ಪ್ರಮುಖ ಪಾತ್ರಕ್ಕೆ ಮಾಲಾ ಸಿನ್ಹಾ ಅವರನ್ನು ಆಯ್ಕೆ ಮಾಡಿದರು. ಆದರೆ ತಿಳಿಯದ ಸಂಗತಿಯೇನೆಂದರೆ ಇದಕ್ಕೂ ಮೊದಲು ನಟ ಪ್ರದೀಪ್ ಕುಮಾರ್ ಜೊತೆ ಬಾದಶಾಹ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದರು.
ಇದೇ ಇವರ ಮೊದಲ ಹಿಂದಿ ಚಿತ್ರವಾಗಿದ್ದು ಈ ಚಿತ್ರದ ಮೂಲಕ ಅಧಿಕೃತವಾಗಿ ಹಿಂದಿ ಚಿತ್ರ ರಂಗವನ್ನು ಪ್ರವೇಶಿಸಿದರು. ನಂತರ ಏಕಾದಶಿ ಎಂಬ ಪೌರಾಣಿಕ ಚಿತ್ರದಲ್ಲಿ ನಟಿಸಿದ್ದರು. ಆದರೆ ದುರದೃಷ್ಟವಶಾತ್ ಇವರು ನಟಿಸಿದ ಮೊದಲ ಎರಡು ಚಿತ್ರಗಳು ಹೀನಾಯ ಸೋಲನ್ನು ಅನುಭವಿಸಿದವು. ಆದರೂ ಕಿಶೋರ್ ಸಾಹು ನಿರ್ದೇಶನದಲ್ಲಿ ಮೂಡಿ ಬಂದ ಹಾಮ್ಲೆಟ್ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ ಮಾಲಾ ಸಿನ್ಹಾ ತಮ್ಮ ನಟನೆಗೆ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದರೂ ಚಿತ್ರ ನಿರೀಕ್ಷಿಸಿದಷ್ಟು ಹಣ ಗಳಿಕೆಯನ್ನು ಕಾಣಲಿಲ್ಲ.
( ಮುಂದುವರೆಯುವುದು )