ಬಾಲಿವುಡ್ ಚಿತ್ರರಂಗದ ಹಾಸ್ಯ ಚಕ್ರವರ್ತಿ ಎಂದು ಪ್ರಸಿದ್ಧಿ ಪಡೆದಿರುವ ನಟ ಜಾನಿ ಲಿವರ್ ಮೂಲತಃ ಆಂದ್ರ ಪ್ರದೇಶದವರಾಗಿದ್ದರೂ ತಮ್ಮ ವಿಶಿಷ್ಟ ಶೈಲಿಯ ಹಾಸ್ಯ ಪಾತ್ರಗಳಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಫಿರ್ ಹೇರಾಫೇರಿ, ಟೋಟಲ್ ಧಮಾಲ್,ಗೋಲ್ ಮಾಲ್ ೩, ಅಗೇನ್ ಗೋಲ್ ಮಾಲ್.
ಈ ಚಿತ್ರಗಳನ್ನು ನೋಡಿದರೆ ಸಾಕು ಪ್ರೇಕ್ಷಕರಿಗೆ ಹಾಸ್ಯದ ಭೋಜನ ಖಚಿತವಾಗಿರುತ್ತದೆ. ಅದರಲ್ಲೂ ನಟ ಸಲ್ಮಾನ್ ಖಾನ್ ನಟನೆಯ ಹಲೋ ಬ್ರದರ್ ಚಿತ್ರದಲ್ಲಿ ಕಾಮಿಡಿ ಪೋಲೀಸ್ ಪಾತ್ರ, ಬಾಲಿವುಡ್ ಬಾದಶಾಹ ಶಾರುಖ್ ಖಾನ್ ನಟನೆಯ ಬ್ಲಾಕ್ ಬಸ್ಟರ್ ಬಾಜೀಗರ್ ಚಿತ್ರದಲ್ಲಿ ಮರೆಗುಳಿ ಸರ್ವೆಂಟ್, ಈ ಚಿತ್ರದ ಪಾತ್ರಗಳನ್ನು ಎಷ್ಟು ಸರಿ ನೋಡಿದರೂ ಪ್ರೇಕ್ಷಕರಿಗೆ ನಗು ಬರುತ್ತದೆಂದರೆ ಇವರ ಹಾಸ್ಯದ ಶಕ್ತಿ ಎಂತಹುದು ಎಂದು ಎಂತಹವರಿಗೂ ತಿಳಿಯುತ್ತದೆ. ಆದ್ದರಿಂದ ಅಭಿಮಾನಿಗಳು ಇವರಿಗೆ ಬಾಲಿವುಡ್ ಚಿತ್ರರಂಗದ ಹಾಸ್ಯ ಚಕ್ರವರ್ತಿ ಎಂಬ ಬಿರುದನ್ನು ನೀಡಿದ್ದಾರೆ.
ಅಗಸ್ಟ್ ೧೪, ೧೯೫೬ ರಂದು ಆಂದ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಉಸಲಪಲ್ಲೆ ಎಂಬ ಗ್ರಾಮದಲ್ಲಿ ಪ್ರಕಾಶ್ ರಾವ್ ಜನುಮಲ ಮತ್ತು ಕರುಣಮ್ಮ ಜನುಮಲ ದಂಪತಿಯ ಮಗನಾಗಿ ಜನಿಸಿದ ಇವರ ಮೊದಲ ಹೆಸರು ಜಾನ್ ರಾವ್ ಜನುಮಲ. ಇವರು ಜನಿಸಿದ ಸಮಯದಲ್ಲಿ ಇವರ ಕುಟುಂಬವು ತೀವ್ರ ಬಡತನವನ್ನು ಎದುರಿಸುತ್ತಿತ್ತು.
ಕುಟುಂಬದಲ್ಲಿನ ಬಡತನ ಮತ್ತು ಆರ್ಥಿಕತೆಯ ಕೊರತೆಯಿಂದ ಇವರಿಗೆ ಏಳನೇ ತರಗತಿ ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಆಗಲಿಲ್ಲ. ಆದರೂ ಬದುಕುವ ಅನಿವಾರ್ಯತೆಯಿಂದ ಹೊಸ ಬದುಕನ್ನು ರೂಪಿಸಿಕೊಳ್ಳಲು ಬೊಂಬಾಯಿಗೆ ಬಂದರು. ಆದರೆ ಕೈಯಲ್ಲಿ ಕೆಲಸವಿರಲಿಲ್ಲ. ಅದೇ ಸಮಯದಲ್ಲಿ ಜೀವನ ನಿರ್ವಹಣೆಗೆ ಬೊಂಬಾಯಿಯ ರಸ್ತೆಗಳಲ್ಲಿ ಪೆನ್ನುಗಳ ಮಾರಾಟವನ್ನು ಪ್ರಾರಂಭಿಸಿದರು.
ಆಗಾಗ ಕಿಶೋರ್ ಕುಮಾರ್, ಮೆಹ್ಮೂದ್ ಮತ್ತು ದಿನೇಶ್ ಹಿಂಗೂರ್ ರವರ ಹಾಸ್ಯ ಚಿತ್ರಗಳನ್ನು ನೋಡುತ್ತಿದ್ದರು. ಕ್ರಮೇಣ ಈ ಹಾಸ್ಯ ನಟರ ನಟನೆಯು ಇವರ ಮೇಲೆ ಒಂದು ರೀತಿಯಲ್ಲಿ ಉತ್ತಮ ಪರಿಣಾಮವನ್ನು ಬೀರಿತ್ತು. ಪೆನ್ ಗಳ ಮಾರಾಟ ಸಮಯದಲ್ಲಿ ಬಾಲಿವುಡ್ ನಟರ ಮಾತಿನ ಶೈಲಿ, ಹಾಡು, ಅವರ ಹಾವಭಾವಗಳ ಅನುಕರಣೆಯನ್ನು ಮಾಡುತ್ತಿದ್ದರು.
ಈ ರೀತಿಯಾಗಿ ಇವರಲ್ಲಿ ಒಬ್ಬ ಮಿಮಿಕ್ರಿ ಕಲಾವಿದನ ಉದಯವಾಯಿತು. ನಂತರ ಮಿಮಿಕ್ರಿ ಕಲಾವಿದನಾಗಲು ನಿರ್ಧರಿಸಿದ ಇವರು ಪ್ರತಾಪ್ ಜಾನಿ, ರಾಮ್ ಕುಮಾರ್ ರಂತಹ ಮಿಮಿಕ್ರಿ ಕಲಾವಿದರ ಸಹಕಾರದಿಂದ ತಮ್ಮ ಮಿಮಿಕ್ರಿಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡರಲ್ಲದೆ ಜೀವನ ನಿರ್ವಹಣೆಗೆ ಹಿಂದು ಸ್ತಾನ್ ಲೀವರ್ ಕಂಪನಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಹೀಗೆಯೇ ಒಂದು ದಿನ ಇವರು ಕೆಲಸ ನಿರ್ವಹಿಸುತ್ತಿದ್ದ ಕಾರ್ಖಾನೆಯಲ್ಲಿ ಹಾಸ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಹಾಸ್ಯ ಪ್ರದರ್ಶನದಲ್ಲಿ ಇವರು ತಮ್ಮ ಯುನಿಯನ್ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳ ಮಾತು, ಹಾವ ಭಾವವನ್ನು ಮಿಮಿಕ್ರಿ ಮಾಡಿ ತೋರಿಸಿದರು.ಇವರ ಪ್ರತಿಭೆಯನ್ನು ಕಂಡು ಬೆರಗಾದ ಅಲ್ಲಿಯ ಯುನಿಯನ್ ಲೀಡರ್ ಗಳು, ಸಹೋದ್ಯೋಗಿಗಳು ಇವರಿಗೆ ಜಾನಿ ಲಿವರ್ ಎಂದು ಮರುನಾಮಕರಣ ಮಾಡಿದರು. ಇಲ್ಲಿಯವರೆಗೂ ಕೇವಲ ಜಾನ್ ರಾವ್ ಜಾನುಮಲ ಎಂದು ಕರೆಯಲ್ಪಡುತ್ತಿದ್ದ ಇವರು ನಂತರ ತಮ್ಮ ವಿಶಿಷ್ಟ ರೀತಿಯ ಹಾಸ್ಯ ಶೈಲಿಯಿಂದ ಚಿತ್ರ ರಂಗದಲ್ಲಿ ಜಾನಿ ಲಿವರ್ ಎಂದು ಪ್ರಸಿದ್ಧಿ ಪಡೆದರು.
( ಮುಂದುವರೆಯುವುದು )