ಬೆಳ್ಳಿ ತೆರೆಯ ಗಾರುಡಿಗ ಬಿ.ಆರ್.ಪಂತುಲು

B.R.Pantulu
ಬಿ.ಆರ್.ಪಂತುಲು

( ಮುಂದುವರೆದ ಭಾಗ……) ೧೯೩೬ ರಲ್ಲಿ ನಿರ್ಮಾಣವಾದ ಸಂಸಾರದ ನೌಕೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ರಾಧಾ ರಮಣ ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಇವರು  ಪ್ರವೇಶವಾದ ಸಮಯದಲ್ಲಿ ಕನ್ನಡ ಚಿತ್ರರಂಗ ಕುಂಟುತ್ತ ಸಾಗುತ್ತಿತ್ತು. ಮದ್ರಾಸ್ ನಿಂದ ತಯಾರಾಗುತ್ತಿದ್ದ ಕನ್ನಡ ಚಿತ್ರಗಳಲ್ಲಿ ಕನ್ನಡತನವನ್ನು ಹುಡುಕುವ ಪರಿಸ್ಥಿತಿಯಿತ್ತು. ಪರಿಸ್ಥಿತಿ ಅರ್ಥ ಮಾಡಿಕೊಂಡ ಬಿ.ಆರ್.ಪಂತುಲು ೧೯೫೫ ರಲ್ಲಿ ಪಿ.ನೀಲಕಂಠನ್ ಜೊತೆ ಸೇರಿ ಪದ್ಮಿನಿ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮಧ್ಯಮ ವರ್ಗದ ನೌಕರನ ಸುತ್ತ ನಡೆಯುವ ಕಥೆಯನ್ನು ಹೊಂದಿದ್ದು ಅಂದಿನ ದಿನಗಳಲ್ಲಿ ಸಾಮಾಜಿಕ ಸ್ಥಿತಿಗತಿಯನ್ನು ತೋರಿಸುವ ಇವರ ನಿರ್ಮಾಣದ ಮೊದಲ ಚಿತ್ರ ಮೊದಲ ತೇದಿ ಭರ್ಜರಿ ಜನಪ್ರಿಯತೆಯನ್ನು ಪಡೆದಿತ್ತು. ಎರಡನೇ ಚಿತ್ರ ಶಿವಗಂಗೆ ನಂಬೆಕ್ಕ . ಅದೇ ಧೈರ್ಯದಿಂದ ತಮಿಳರ ಒಡನಾಟದೊಂದಿಗೆ ಅನೇಕ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದರು. ೧೯೫೭ ರಲ್ಲಿ ಕುತೂಹಲಕಾರಿ ಕಥೆಯನ್ನು ಹೊಂದಿದ್ದ ರತ್ನ ಗಿರಿ ರಹಸ್ಯ ಚಿತ್ರವನ್ನು ನಿರ್ಮಿಸಿದರು. ಕಣಗಾಲ್ ಪ್ರಭಾಕರ ಶಾಸ್ತ್ರಿ ಸಾಹಿತ್ಯ ಮತ್ತು ಟಿ.ಜಿ.ಲಿಂಗಪ್ಪ ನವರ ಸಂಗೀತದಿಂದ ಈ ಚಿತ್ರವು ಭರ್ಜರಿ ಯಶಸ್ಸು  ಕಂಡಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರ ಪ್ರಥಮ ಬಾರಿಗೆ ರಜತೋತ್ಸವ ಆಚರಿಸಿದ ಸ್ಕೂಲ್ ಮಾಸ್ಟರ್ ಚಿತ್ರ ೧೯೫೮ ರಲ್ಲಿ ಇವರದೇ ನಿರ್ಮಾಣದಲ್ಲಿ  ಬಂದಿದ್ದು ಸ್ವತಃ ಪಂತುಲು ಅವರು ಅದೇ ಚಿತ್ರದಲ್ಲಿ ಮೇಷ್ಟ್ರು ಪಾತ್ರದ ಅಮೋಘ ಅಭಿನಯಕ್ಕೆ ಸಾಟಿಯಾಗಿ ಕಲಾವಿದೆ  ಎಮ್.ವಿ.ರಾಜಮ್ಮ ಅವರ ಮಡದಿಯ ಪಾತ್ರದ ನಿರ್ವಹಣೆ ಅವಿಸ್ಮರಣೀಯವಾಗಿದೆ. ಕಲಾವಿದೆ ಎಮ್.ವಿ.ರಾಜಮ್ಮ ನಿಜ ಜೀವನದಲ್ಲಿ ಪಂತುಲು ಅವರ ಮಡದಿಯಾಗಿದ್ದರು. ಅವರ ಪದ್ಮಿನಿ ಪಿಕ್ಚರ್ಸ್ ನಲ್ಲಿ ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ, ಗಾಳಿ ಗೋಪುರ, ಚಿನ್ನದ ಗೊಂಬೆ, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಶ್ರೀ ಕೃಷ್ಣ ದೇವರಾಯ ಮುಂತಾದ ಶ್ರೇಷ್ಠ ಚಿತ್ರಗಳು ನಿರ್ಮಾಣವಾದವು. ಚಿ.ಉದಯಶಂಕರ್, ಪುಟ್ಟಣ್ಣ ಕಣಗಾಲ್ ರಂತಹ ಅನೇಕ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಕನ್ನಡಿಗರ ಆರಾಧ್ಯ ದೈವ ಕನ್ನಡದ ಕಣ್ಮಣಿ ಡಾ‌.ರಾಜಕುಮಾರ್ ಅವರಿಗಾಗಿ ಗಾಳಿ ಗೋಪುರ, ಸಾಕು ಮಗಳು, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣದಂತಹ ಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ ಚಿತ್ರದಲ್ಲಿ ಹಾಸ್ಯ ಇರಲೇಬೇಕೆಂಬ ಉದ್ದೇಶದಿಂದ ಹಾಸ್ಯ ಚಕ್ರವರ್ತಿ ನರಸಿಂಹರಾಜುವರಿಗಾಗಿ ಕಥೆಯಲ್ಲಿ ಪಾತ್ರವಿರದಿದ್ದರೂ ಪ್ರತ್ಯೇಕ ಪಾತ್ರವನ್ನು ಸೃಷ್ಟಿಸಿ ಹಾಸ್ಯದ ಹೊಸ ಪದ್ಧತಿಗೆ ನಾಂದಿ ಹಾಡಿದರು. ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ಇವರಿಂದ ನಿರ್ಮಾಣವಾದ ಚಿತ್ರಗಳಿಗೆ ಪಂತುಲು ಚಿತ್ರಗಳೆಂದು ಕರೆಯುತ್ತಿದ್ದರು. ಇವರ ಎಲ್ಲ ಚಿತ್ರಗಳಿಗೆ ಟಿ.ಜಿ.ಲಿಂಗಪ್ಪನವರೇ ಸಂಗೀತ ನಿರ್ದೇಶನ ಮಾಡಿದ್ದು ವಿಶೇಷ ವಿಷಯವಾಗಿದೆ. ಇವುಗಳಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಕಿತ್ತೂರು ಚೆನ್ನಮ್ಮ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತರೆ ಶ್ರೀ ಕೃಷ್ಣ ದೇವರಾಯ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ದೊರೆಯಿತು. ಇದೇ ಚಿತ್ರದಲ್ಲಿ ಇವರು ನಿರ್ವಹಿಸಿದ ತಿಮ್ಮರಸುವಿನ ಪಾತ್ರಕ್ಕೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ದೊರೆತರೂ ಇದೇ ಚಿತ್ರದಲ್ಲಿ ಅಮೋಘ ಅಭಿನಯದಿಂದ ಚಿತ್ರ ರಸಿಕರ ಮನಸ್ಸನ್ನು ಗೆದ್ದಿದ್ದ ಡಾ.ರಾಜಕುಮಾರ್ ಅವರಿಗೆ ಪ್ರಶಸ್ತಿಯನ್ನು ಕೊಡಬೇಕೆಂಬ ವಾದದಿಂದ ತಮಗೆ ಬಂದ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಇವರ ಶಿಷ್ಯ ನಿರ್ದೇಶಕರು ಪುಟ್ಟಣ್ಣ ಕಣಗಾಲ್ ಹೇಳಿದ ಪ್ರಕಾರ  ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟ ಬಿ.ಆರ್.ಪಂತಲು ನಟನೆ, ನಿರ್ಮಾಣ ಮತ್ತು ನಿರ್ದೇಶನ ಈ ಮೂರು ಕಲೆಗಳನ್ನು ಮೈಗೂಡಿಸಿಕೊಂಡು ಅತ್ಯುತ್ತಮ ಗುಣಮಟ್ಟದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟದಲ್ಲಿ ಶ್ರೀಮಂತಗೊಳಿಸಿದರು. ಸುಮಾರು ಇವರ ಶೇಕಡಾ ೯೦ ರಷ್ಟು ಚಿತ್ರಗಳಿಗೆ ಡಾ.ರಾಜಕುಮಾರ್ ನಾಯಕರಾಗಿ ಅಭಿನಯಿಸಿದ್ದು  ವಿಶೇಷ ಸಂಗತಿಯಾಗಿದೆ. ಅಲ್ಲದೇ ಸ್ವತಃ ಪಂತುಲು ಅವರು ಒಂದು ಮುಖ್ಯ ಪೋಷಕ ಪಾತ್ರದಲ್ಲಿದ್ದು ತಂದೆಯಂತೆ ಚಿತ್ರದ ಏಳಿಗೆಗೆ ಕಾರಣವಾಗುತ್ತಿದ್ದರು. ೧೯೫೭ ರಿಂದ ೧೯೭೨ ರ ವರೆಗೆ ಇವರು ಕನ್ನಡದಲ್ಲಿ ನಿರ್ಮಿಸಿದ ಚಿತ್ರಗಳು ಪೂರ್ತಿ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡಿದ ಇತಿಹಾಸವನ್ನು ನಿರ್ಮಿಸಿವೆ. ಬಿ.ಆರ್.ಪಂತುಲು ಅವರು ತಮ್ಮ ೨೫ ವರ್ಷಗಳ ಚಿತ್ರ ರಂಗದ ಜೀವನದಲ್ಲಿ ನಾಲ್ಕು ಭಾಷೆಗಳಲ್ಲಿ.

ಬಿ.ಆರ್.ಪಂತುಲು

೫೦ ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಚಿತ್ರ ರಂಗದ ಅಭಿವೃದ್ಧಿಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡ ಮಹಾನ್ ಪುರುಷ ಅಪಾರವಾದ ಸಾಧನೆಯನ್ನು ಮಾಡಿದ್ದರೂ ಎಂದಿಗೂ ಪ್ರಶಸ್ತಿಗಳಿಗೆ ಆಸೆ ಪಡಲಿಲ್ಲ. ಆದರೆ ಅವರಿಗೆ ಜನರಿಂದ ಸಿಗುತ್ತಿದ್ದ ಪ್ರೀತಿ,ಅಭಿಮಾನದ ಮುಂದೆ ಎಲ್ಲವೂ ನಶ್ವರವಾಗಿದ್ದವು. ಆದರೂ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಅಂತ್ಯ ಇದ್ದೇ ಇರುತ್ತದೆ. ಮಹತ್ವಾಕಾಂಕ್ಷೆಯ ಕಾಲೇಜು ರಂಗ ಚಿತ್ರದ ಸಿದ್ದತೆಯಲ್ಲಿದ್ದಾಗ ದುರಾದೃಷ್ಟ

ಅಕ್ಟೋಬರ್ ೮,೧೯೭೪ ರಂದು ತಮ್ಮ ೬೪ ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಚಿತ್ರವು ಅರ್ಧಕ್ಕೆ ನಿಂತಾಗ ಇವರ ಮೆಚ್ಚಿನ ಶಿಷ್ಯ ಪುಟ್ಟಣ್ಣ ಕಣಗಾಲ್ ಪೂರ್ಣಗೊಳಿಸಿ ತಮ್ಮ ಗುರುಗಳಿಗೆ ಅರ್ಪಿಸಿದರು. ಇದು ಪದ್ಮಿನಿ

  ಪಿಕ್ಚರ್ಸನ ಕೊನೆಯ ಚಿತ್ರವಾಯಿತಲ್ಲದೆ ಈ ಮೂಲಕ ಭಾರತೀಯ ಚಿತ್ರರಂಗದ ಒಂದು ಸುವರ್ಣ ಅಧ್ಯಾಯವು ಕೊನೆಗೊಂಡಿತು. 

೨೦೧೧  ಜುಲೈ ೨೮ ಕ್ಕೆ ಪಂತುಲು ಅವರು ಜನಿಸಿ ೧೦೦ ವರ್ಷಗಳಾಗಿವೆ. ಆದರೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಮಾಡಿದ್ದಾರೋ ಇಲ್ಲವೋ ನನಗೆ  ತಿಳಿದಿಲ್ಲ. ತಿಳಿದವರು ಯಾರಾದರೂ ಇದ್ದರೆ ಮಾಹಿತಿಯನ್ನು ಕೊಡಬಹುದು. ಈಗಿನ ನಮ್ಮ ಕನ್ನಡ ಕಂದಮ್ಮಗಳು ಇವರ ಚಲನಚಿತ್ರಗಳನ್ನು ವೀಕ್ಷಿಸಿ ಸಿಗುವ ಉತ್ತಮ ಸಂದೇಶಗಳಿಂದ ಬೆಳೆಯುವಂತಹ ಸದಾವಕಾಶವನ್ನು ನಮ್ಮ ಫಿಲಂ ಚೇಂಬರ್ ಮತ್ತು ಟಿವಿ ಚಾನೆಲ್ ಗಳು ಕಲ್ಪಿಸಿಕೊಡಬೇಕಾಗಿದೆ. ಏಕೆಂದರೆ ಇದರಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಅವಿಸ್ಮರಣೀಯ ಜಯ ಸಿಗುತ್ತದೆಂಬ ನಂಬಿಕೆಯಿಂದ ಈ ಲೇಖನವನ್ನು ಮುಗಿಸುತ್ತೇನೆ.

ಲೇಖಕರು : ಶ್ರೀ ಸಂದೀಪ್ ಜೋಶಿ

ನನ್ನ ಹೆಸರು ಸಂದೀಪ ಜೋಶಿ, ಗಂಗಾವತಿ, ಜಿಲ್ಲೆ.ಕೊಪ್ಪಳ. ನಾನು ಮೂಲತಃ ಸ್ವ ಉದ್ಯೋಗಿಯಾಗಿದ್ದು ಹವ್ಯಾಸಿ ನಟ ಮತ್ತು ಬರಹಗಾರನಾಗಿದ್ದು ಇದುವರೆಗೂ ಹಲವಾರು ಲೇಖನಗಳನ್ನು ರಚಿಸಿದ್ದೇನೆ. ಇಂದಿನ ಮತ್ತು ಮುಂದೆ ಬರುವ ತಲೆಮಾರುಗಳಿಗೆ ನಮ್ಮ ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಹಳೆಯ ಕನ್ನಡ ಕಲಾವಿದರ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಕಲಾವಿದರ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ಅಧ್ಯಯನ ಮಾಡಿ ಕೆಲವು ಲೇಖನಗಳನ್ನು ರಚಿಸಿದ್ದೇನೆ. ಈ ಲೇಖನಗಳನ್ನು ಒಂದೆಡೆ ಸೇರಿಸಿ, ಚಿತ್ರೋದ್ಯಮ ವೆಬ್ಸೈಟ್ ನಲ್ಲಿ ಈ ಲೇಖನಗಳನ್ನು ಅಂಕಣಗಳ ರೂಪದಲ್ಲಿ ನಿಯಮಿತವಾಗಿ ಪ್ರಕಟಿಸಲಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ,
ಧನ್ಯವಾದಗಳು,
ಸಂದೀಪ್ ಜೋಶಿ, ಬರಹಗಾರರು

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply