ಬೆಳ್ಳಿ ತೆರೆಯ ಗಾರುಡಿಗ ಬಿ.ಆರ್.ಪಂತುಲು

ಬಿ.ಆರ್.ಪಂತುಲು

ಕನ್ನಡ ಚಿತ್ರರಂಗದ ಸುವರ್ಣ ಯುಗದ ಹರಿಕಾರ ಮತ್ತು ಬೆಳ್ಳಿ ತೆರೆಯ ಗಾರುಡಿಗ ಬಿ.ಆರ್.ಪಂತುಲು

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ನಿರ್ಮಾಪಕ, ನಿರ್ದೆಶಕರಾಗಿ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಮಾಡಿದ ಮಹಾನ್ ಸಾಧಕ ಶ್ರೀ ಬಿ.ಆರ್ ಪಂತುಲು ಅವರ ಬಗ್ಗೆ ಇಂದಿನ ತಲೆಮಾರಿನ ವ್ಯಕ್ತಿಗಳಿಗೆ ಕೆಲವು ಮಹತ್ವ ಪೂರ್ಣ ವಿಷಯಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.
   ಶ್ರೀ.ಬಿ.ಆರ್.ಪಂತಲು ಕರ್ನಾಟಕ- ಆಂದ್ರ ಪ್ರದೇಶದ ಗಡಿಯಲ್ಲಿನ ಬಂಗಾರ ಪೇಟೆಯ ಬಳಿ ಇರುವ ಕುಪ್ಪನಿಂದ ಹನ್ನೊಂದು ಕಿಲೋ ಮೀಟರ್ ದೂರದ ಗಡಿಪ್ರದೇಶದಲ್ಲಿರುವ  ಕುಗ್ರಾಮ ಬಡಗೂರಿನಲ್ಲಿ ೧೯೧೧ ಜುಲೈ ೨೬ ರಂದು ಜನಿಸಿದರು. ಇವರ ಪೂರ್ಣ ಹೆಸರು ಬಡಗೂರು ರಾಮಕೃಷ್ಣ ಪಂತುಲು. ಇವರ ತಂದೆಯ ಹೆಸರು ವೆಂಕಟಾಚಲಯ್ಯ ಸಂಗೀತ, ಸಾಹಿತ್ಯ ಮತ್ತು ನೃತ್ಯದಲ್ಲಿ ಪಾಂಡಿತ್ಯವನ್ನು ಪಡೆದಿದ್ದು ಪಂತುಲು ಸೇರಿದಂತೆ ೩ ಗಂಡು,೨ ಹೆಣ್ಣು ಮಕ್ಕಳ ತುಂಬು ಕುಟುಂಬವನ್ನು ಹೊಂದಿದ್ದರು. ಗಡಿ ಪ್ರದೇಶಕ್ಕೆ ಹೊಂದಿಕೊಂಡಿದ್ದ ಈ ಊರಿನಲ್ಲಿ ಕನ್ನಡದಂತೆ ತಮಿಳು, ತೆಲುಗು  ಕೂಡ ಮುಖ್ಯ ಭಾಷೆಗಳಾಗಿದ್ದರಿಂದ ಪಂತುಲು ಅವರಿಗೆ ಸಹಜವಾಗಿ ಬಾಲ್ಯದಲ್ಲಿಯೇ ಮೂರು ಭಾಷೆ ಮಾತನಾಡುವ ವ್ಯಕ್ತಿಗಳ ಜೊತೆ ಒಡನಾಟ ಬೆಳೆಸುವ ಅವಕಾಶ ದೊರಕಿತು. ಇವರ ತಂದೆ ವೆಂಕಟಾಚಲಯ್ಯ ಊರಿನಲ್ಲಿ ಆಗಾಗ ನಾಟಕಗಳನ್ನು ಆಡಿಸುತ್ತಿದ್ದರಿಂದ ಅವರ ಜೊತೆ ಮಗ ಪಂತುಲು ಕೂಡ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದರು. ತಂದೆಯೇ ತಮ್ಮ ನಾಟಕದಲ್ಲಿ ಮಗನಿಗೆ ಚಂದ್ರಹಾಸನ ಪಾತ್ರ ನಿರ್ವಹಿಸಲು ಅವಕಾಶ ಕಲ್ಪಿಸುವುದುರೊಂದಿಗೆ ಅಧಿಕೃತವಾಗಿ ರಂಗ ಪ್ರವೇಶ ಮಾಡಿದರು. ಪಂತುಲು ಅವರ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲಿ ನಡೆದರೂ ಅಲ್ಲಿ ಮುಂದಿನ ಶಿಕ್ಷಣಕ್ಕೆ ಅನುಕೂಲ ಇಲ್ಲದೇ ಇದ್ದುದರಿಂದ ಕೋಲಾರದಲ್ಲಿ ಅವರ ತಾತನ ಮನೆಯಲ್ಲಿದ್ದು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದರು. ಆದರೂ ಪರಿಸ್ಥಿತಿಯ ನಿರ್ವಹಣೆಗೆ ಒಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಅಪ್ಪಟ ಕಲಾವಿದರಾಗಿದ್ದ ಇವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ  ಪಾಠ ಮಾಡಿದ್ದಕ್ಕಿಂತ ನಾಟಕಗಳನ್ನು ಹೆಚ್ಚು ಹೇಳಿಕೊಟ್ಟಿದ್ದರು. ಆದರೆ ವಿಧಿಯ ನಿರ್ಣಯವನ್ನು ತಿಳಿಯುವವರು ಯಾರು? ಅಲ್ಲವೇ? ಒಂದು ದಿನ ಶಾಲೆಯಲ್ಲಿ ಮಕ್ಕಳಿಗೆ ಪಾಠದ ಬದಲಿಗೆ ನಾಟಕವನ್ನು ಕಲಿಸುತ್ತಿದ್ದನ್ನು ಕಂಡ ವಿದ್ಯಾ ಇಲಾಖೆಯ ಇನ್ಸಪೆಕ್ಟರ್ ಕೋಪಗೊಂಡು ಇದು ಸರಿ ಅಲ್ಲವೆಂದು ಪುನಃ ಇದೇ ರೀತಿ ಮರುಕಳಿಸಿದರೆ ಕೆಲಸದಿಂದ ವಜಾಗೊಳಿಸುವುದಾಗಿ ನೋಟೀಸ್ ಜಾರಿ ಮಾಡಿದರು. ಈ ಘಟನೆಯಿಂದಾಗಿ ನೊಂದ ಪಂತುಲು ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ಕಲೆಯಲ್ಲಿಯೇ ಬದುಕನ್ನು ಹುಡುಕುತ್ತ ಬೆಂಗಳೂರಿಗೆ ಬಂದು ಮಹಮದ್ ಪೀರ್ ಅವರ ನಾಟಕ ಮಂಡಳಿಗೆ ಸೇರಿಸಿಕೊಂಡರು. ಇಲ್ಲಿ ಇವರಿಗೆ ಸಿಕ್ಕ ಎಚ್.ಎಲ್.ಎನ್‌.ಸಿಂಹ ಮತ್ತು ಮಹಮದ್ ಪೀರ್ ಗೆಳೆತನದಿಂದ ಬಣ್ಣದ ಲೋಕದ ಪರಿಚಯವಾಯಿತು. ಇವರ ಮಗ ರವಿಶಂಕರ್ ಕೆಲವು ವರ್ಷಗಳ ಕಾಲ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರಲ್ಲದೆ ಮಗಳು ಬಿ.ಆರ್.ಲಕ್ಷ್ಮಿ ಛಾಯಾಗ್ರಾಹಕಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ ಹೆಸರನ್ನು ಗಳಿಸಿದ್ದರು.

ಮುಂದುವರೆಯುವುದು…
ಲೇಖಕರು : ಶ್ರೀ ಸಂದೀಪ್ ಜೋಶಿ

ನನ್ನ ಹೆಸರು ಸಂದೀಪ ಜೋಶಿ, ಗಂಗಾವತಿ, ಜಿಲ್ಲೆ.ಕೊಪ್ಪಳ. ನಾನು ಮೂಲತಃ ಸ್ವ ಉದ್ಯೋಗಿಯಾಗಿದ್ದು ಹವ್ಯಾಸಿ ನಟ ಮತ್ತು ಬರಹಗಾರನಾಗಿದ್ದು ಇದುವರೆಗೂ ಹಲವಾರು ಲೇಖನಗಳನ್ನು ರಚಿಸಿದ್ದೇನೆ. ಇಂದಿನ ಮತ್ತು ಮುಂದೆ ಬರುವ ತಲೆಮಾರುಗಳಿಗೆ ನಮ್ಮ ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಹಳೆಯ ಕನ್ನಡ ಕಲಾವಿದರ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಕಲಾವಿದರ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ಅಧ್ಯಯನ ಮಾಡಿ ಕೆಲವು ಲೇಖನಗಳನ್ನು ರಚಿಸಿದ್ದೇನೆ. ಈ ಲೇಖನಗಳನ್ನು ಒಂದೆಡೆ ಸೇರಿಸಿ, ಚಿತ್ರೋದ್ಯಮ ವೆಬ್ಸೈಟ್ ನಲ್ಲಿ ಈ ಲೇಖನಗಳನ್ನು ಅಂಕಣಗಳ ರೂಪದಲ್ಲಿ ನಿಯಮಿತವಾಗಿ ಪ್ರಕಟಿಸಲಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ,
ಧನ್ಯವಾದಗಳು,
ಸಂದೀಪ್ ಜೋಶಿ, ಬರಹಗಾರರು

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply