ಭಾರತ ಚಿತ್ರರಂಗದ ಪಾಲಿಗೆ ಕರಾಳ ವರ್ಷ- ೨೦೨೦

R Nagesh

( ಮುಂದುವರೆದ ಭಾಗ )

ಈಗ ಕೆಲವು ಕಠಿಣ ಶರತ್ತುಗಳೊಂದಿಗೆ ಹಿರಿ ಮತ್ತು ಕಿರಿ ತೆರೆಯ ಅರ್ಧಕ್ಕೆ ನಿಂತಿದ್ದ ಚಿತ್ರಗಳ,ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿಯನ್ನು ನೀಡಿದೆಯಾದರೂ ಎಲ್ಲ ಶರತ್ತುಗಳನ್ನು ಪಾಲಿಸಿಕೊಂಡು ಚಿತ್ರೀಕರಣ ಮಾಡುವುದು ಅಷ್ಟೊಂದು ಸುಲಭವಲ್ಲ. ಜನರ ನಿಯಂತ್ರಣ, ಚಿತ್ರೀಕರಣ ಮಾಡುವ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ, ತಮ್ಮ ತಂಡದ ಪ್ರತಿಯೊಬ್ಬ ಸದಸ್ಯನ ಆರೋಗ್ಯದ ಕ್ಷೇಮ ಈ ರೀತಿಯಾಗಿ ಹಲವಾರು ಕೆಲಸಗಳಿರುತ್ತವೆ.

 ಅದರಲ್ಲೂ ಇದು ಹರಡುವಿಕೆ ವೈರಸ್  ಆಗಿದ್ದರಿಂದ ಯಾರಿಗೆ ಯಾವ ಕ್ಷಣದಲ್ಲಿ ತಗಲುತ್ತದೆ ಎನ್ನುವ ಆತಂಕ, ಇಷ್ಟೆಲ್ಲ ಅಡ್ಡಿ ಆತಂಕಗಳ ಮಧ್ಯದಲ್ಲಿ ನಿರ್ಮಾಪಕರಿಗೆ ತಮ್ಮ ಚಿತ್ರಗಳನ್ನು ಪೂರ್ಣಗೊಳಿಸುವ ಪರಿಸ್ಥಿತಿ ಎದುರಾಗಿದೆ. ಆದರೆ ನಮ್ಮ ದೇಶದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು ಈಗಾಗಲೇ ಸೋಂಕಿತರ ಸಂಖ್ಯೆ ಐದು ಲಕ್ಷ ದಾಟಿದ್ದು ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಆದರೂ ಚಿತ್ರ ರಂಗದಲ್ಲಿ ಕಲಾವಿದರು, ಕಾರ್ಮಿಕರು ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರೂ ಯಾವಾಗ ಏನು ಆಗುತ್ತೋ ಎನ್ನುವ ಆತಂಕ ಇರುವುದು ಕೂಡ ಅಷ್ಟೇ ಸತ್ಯವಾಗಿದೆ.

ನಮ್ಮ ದೇಶದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದು ಬಂದ್ ಆದ ದಿನದಿಂದ ಪ್ರತಿ ಚಿತ್ರ ಮಂದಿರವು ಒಂದು ವಾರಕ್ಕೆರೂ ೬೦,೦೦೦ ದಿಂದ ಒಂದು  ಲಕ್ಷ ರೂಪಾಯಿವರೆಗಿನ ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಪೂರ್ತಿ ಭಾರತ ಚಿತ್ರರಂಗದ ಸ್ಥಗಿತದಿಂದ ಚಿತ್ರರಂಗವು ಪ್ರತಿ ವಾರ ೪೦೦ ಕೋಟಿ ರೂಪಾಯಿ ನಷ್ಟವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಈ ವೈರಸ್ ನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸಾಹಸವಾಗಿದೆ. ಒಂದು ವೇಳೆ ದೇವರ ದಯೆಯಿಂದಲೋ ಅಥವಾ ಅದೃಷ್ಟದ ಫಲವೋ ಈ ವೈರಸ್ ಭೀತಿಯಿಂದ ಪಾರಾದರೂ ನಷ್ಟಕ್ಕೊಳಗಾಗಿರುವ ಚಿತ್ರರಂಗವು ಸಹಜ ಸ್ಥಿತಿಗೆ ಬರಲು ಕನಿಷ್ಠವೆಂದರೂ ಎರಡರಿಂದ ಮೂರು ವರ್ಷಗಳಾದರು ಬೇಕಾಗಬಹುದು. ಆಗಲೇ ನಷ್ಟದಿಂದ ತತ್ತರಿಸಿದ್ದ ನಮ್ಮ ಚಿತ್ರರಂಗಕ್ಕೆ ಹಲವು ಪ್ರಸಿದ್ಧ ನಟರ ಅಕಾಲಿಕ ಮರಣ ಅನಿರೀಕ್ಷಿತ ಆಘಾತವನ್ನು ನೀಡಿತು.

ಜೀವನದಲ್ಲಿ ಎದುರಾದ ಕಷ್ಟಗಳನ್ನು ಮೆಟ್ಟಿ ನಿಂತು ತಮ್ಮ ನೋವಿನ ಸಮಯದಲ್ಲಿ ಅಭಿನಯಿಸಿದ ಚಿತ್ರಗಳಲ್ಲಿ ನಿರ್ವಹಿಸಿದ ಹಾಸ್ಯ ಪಾತ್ರಗಳಿಂದ ಎಷ್ಟೋ ಪ್ರೇಕ್ಷಕರ ದುಃಖವನ್ನು ನಿವಾರಿಸಿದ ನಮ್ಮ ಹೆಮ್ಮೆಯ ಕನ್ನಡಿಗ, ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇವರನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇವರ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಅಭಿಮಾನಿಗಳಿಗೆ ದುರಾದೃಷ್ಟವಶಾತ್ ತಮ್ಮ ಮೆಚ್ಚಿನ ನಟನ ಅಂತಿಮ ದರ್ಶನದ ಅವಕಾಶ ಸಿಗಲಿಲ್ಲ. ಇದೇ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದ ಜನಪ್ರಿಯ ನಟರಾದ ರಿಷಿಕಪೂರ್, ಇರ್ಫಾನ್ ಖಾನ್ ಕೂಡ  ಮರಣಕ್ಕೆ ತುತ್ತಾದರು.

 ಅದರಲ್ಲೂ ನಮ್ಮ ಕನ್ನಡ ಚಿತ್ರ ರಂಗಕ್ಕೆ ಊಹಿಸಲು ಆಗದ ನಷ್ಟ, ಅಘಾತವೆಂದರೆ ಎಷ್ಟೋ ಕನಸುಗಳೊಂದಿಗೆ, ನಿರೀಕ್ಷೆಯೊಂದಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರವಾದ ಬುನಾದಿಯನ್ನು ಕಟ್ಟಿಕೊಂಡಿದ್ದ ಕೇವಲ ೩೯ ವರ್ಷ ವಯಸ್ಸಿನ ನಟ ಮತ್ತು ಸ್ನೇಹ ಜೀವಿ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಸಮಸ್ತ ಕರುನಾಡಿಗೆ ನಿರೀಕ್ಷಿಸದ ಅಘಾತ ಉಂಟು ಮಾಡಿತು. ಇವರ ಅಂತಿಮ ದರ್ಶನದ ಅವಕಾಶವು ಹಲವು ಅಭಿಮಾನಿಗಳಿಗೆ ಮಾತ್ರ ಲಭ್ಯವಾಯಿತು. ಈ ಘಟನೆ ನಡೆದ ಒಂದು ವಾರದ ನಂತರ ಕೇವಲ ೩೪ ವರ್ಷ ವಯಸ್ಸಿನ ಹಿಂದಿ ಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಅನಿರೀಕ್ಷಿತ ಮರಣ(ಆತ್ಮಹತ್ಯೆ) ಹೊಂದಿದ್ದರಿಂದ ಬಾಲಿವುಡ್  ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತ ದೇಶದಲ್ಲಿ ಒಂದು ಬಿರುಗಾಳಿಯನ್ನು ಸೃಷ್ಟಿಸಿತು.

ಈ ರೀತಿಯಾಗಿ ೨೦೨೦ ನೇ ಇಸ್ವಿಯು ಭಾರತ ಚಿತ್ರರಂಗದ ಪಾಲಿಗೆ ಕರಾಳ ವರ್ಷವಾಗಿದ್ದಲ್ಲದೆ ಹಲವು ಕಹಿ ಘಟನೆಗಳಿಗೆ ಸಾಕ್ಷಿ ಕೂಡ ಆಗಿದೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply