ಈ 1965ರ ಚಿತ್ರ 1952ರಲ್ಲಿ ತಯಾರಾದ ಪೆಳ್ಳಿ ಚೇಸಿ ಚೂಡು ಚಿತ್ರದ ಅನುವಾದ. ಮಹಾನಟಿ ಸಾವಿತ್ರಿ ಒಂದು ಮುಖ್ಯಪಾತ್ರದಲ್ಲಿ ಮೊದಲ ಸಲ ನಟಿಸಿದ ಚಿತ್ರವಂತೆ ಪೆಳ್ಳಿ ಚೇಸಿ ಚೂಡು.
ಜಯಶ್ರೀಯ ಮಕ್ಕಳು ಲೀಲಾವತಿ, ನರಸಿಂಹರಾಜು. ರಾಮಚಂದ್ರಶಾಸ್ತ್ರಿ ರಮಾದೇವಿಯ ಮಗಳು ಆರ್‍ಟಿ ರಮಾಳನ್ನು ನರಸಿಂಹರಾಜು ಮದುವೆಯಾಗಲು ನಿರಾಕರಿಸುತ್ತಾನೆ. ಆರ್‍ಟಿ ರಮಾಳನ್ನು ಪೈಲ್ವಾನ್ ಉದಯಕುಮಾರ್ ಇಷ್ಟಪಟ್ಟಿರುತ್ತಾನೆ. ಅವಳೂ ಅವನನ್ನು ಪ್ರೀತಿಸುತ್ತಿರುತ್ತಾಳೆ.
ನರಸಿಂಹರಾಜು ಮತ್ತು ಅವನ ಚಿಕ್ಕಮ್ಮನ ಮಗ (ಒಬ್ಬ ತರಲೆ ಹುಡುಗ) ಎಕ್ಸ್ ಜಿಲ್ಲಾ ಪಂಚಾಯತ್ ಪ್ರೆಸಿಡೆಂಟ್ (ಕೆ.ಎಸ್.ಅಶ್ವತ್ಥ್) ಮನೆಗೆ ತಂಗಿಗೆ ಗಂಡು ಹುಡುಕಿಕೊಂಡು ಬಂದಾಗ ಅಶ್ವತ್ಥ್ ಮಗಳನ್ನೇ (ವಂದನಾ) ನರಸಿಂಹರಾಜು ಮದುವೆಯಾಗುತ್ತಾನೆ.
ನಾಗೇಂದ್ರರಾವ್ ಮಹಾ ದುರಾಸೆಯ ಮುದುಕ. ಆತನ ಮಗ ವಾಸು (ರಾಜ್‍ಕುಮಾರ್) ಲೀಲಾವತಿಯನ್ನು ಮದುವೆಯಾಗಲು ಬರುತ್ತಾನೆ. ಅಶ್ವತ್ಥ್ ಮದುವೆಯ ಸಮಯದಲ್ಲಿ ವರದಕ್ಷಿಣೆಯನ್ನು ನಾಗೇಂದ್ರರಾವ್‍ಗೆ ತಲುಪಿಸಲು ಒಪ್ಪಿ, ಇನ್ನೂ ಕೊಡುವ ಮುಂಚೆಯೇ, ತನ್ನ ಮಗಳನ್ನು ನರಸಿಂಹರಾಜು ಮದುವೆಯಾಗಲಿಲ್ಲವಲ್ಲಾ ಎಂಬ ಸಿಟ್ಟಿಗೆ ರಾಜ್‍ಕುಮಾರ್ ಮದುವೆ ಮುರಿಯಲು ನೋಡುತ್ತಾನೆ. ಅಷ್ಟರಲ್ಲಿ ರಾಜ್‍ಕುಮಾರ್ ಲೀಲಾವತಿಗೆ ತಾಳಿ ಕಟ್ಟಿ ಆಗಿರುತ್ತದೆ. ಆದರೂ ವಾಸು ತಂದೆಯ ಹಿಂದೆ ಹೊರಟುಹೋಗುತ್ತಾನೆ.
ನರಸಿಂಹರಾಜು ಬಂದು ಬೇಡಿಕೊಂಡಾಗ ಮನ ಕರಗಿದ ವಾಸು ಹೆಂಡತಿಯ ಬಳಿಗೆ ಬರುತ್ತಾನೆ.
ದ್ವಾರಕೀಶ್ ನಾಗೇಂದ್ರರಾವ್ ಮನೆಯ ಆಳು. ಪ್ರತಿ ಮಾತಿಗೂ ಉತ್ತರವಾಗಿ ಆ ಮಾತು ನಾ ಹೇಳ್ಬೇಕೇ ಧಣೀ ಅಂತಿರ್ತಾನೆ.
ಪರಿಸ್ಥಿತಿ ಬಿಗಡಾಯಿಸಿದಾಗ ವಾಸು ಹುಚ್ಚನಂತೆಯೂ, ನರಸಿಂಹರಾಜು ಡಾಕ್ಟರಂತೆಯೂ, ಲೀಲಾವತಿ ನರ್ಸ್‍ಳಂತೆಯೂ ನಟಿಸುತ್ತಾರೆ.
ಮಗುವೂ ಆಗಿಬಿಡುತ್ತದೆ. ಆದರೂ ರಾಮಚಂದ್ರಶಾಸ್ತ್ರಿ ತನ್ನ ಮಗಳು ಆರ್ ಟಿ ರಮಾಳನ್ನು ವಾಸುವಿಗೆ ಮದುವೆ ಮಾಡಿಸಿ ಆಸ್ತಿ ಹೊಡೆಯಲು ಯತ್ನಿಸುತ್ತಾನೆ. ಆರ್ ಟಿ ರಮಾ… ಅಮ್ಮಾ ಮಾವ ಎಂದು ಸದಾ ಹೇಳುತ್ತಾ ಪೈಲ್ವಾನನನ್ನು ನೆನೆಸಿಕೊಳ್ಳುತ್ತಿರುತ್ತಾಳೆ.
ಅಶ್ವತ್ಥ್ ಮೂಗಿನಲ್ಲಿ ಸದ್ದು ಮಾಡುವ ಶೈಲಿ ಚೆನ್ನಾಗಿದೆ. ಮೂಲದಲ್ಲಿ ಎಸ್‍ವಿ ರಂಗಾರಾವು ನಟಿಸಿದ ಪಾತ್ರವದು.
ಉದಯಕುಮಾರ್ ಮುಗ್ಧ ಪ್ರೇಮಿಯಾಗಿ ಸುಂದರ ಅಭಿನಯ. ಅವರಿಗೆ ಎರಡು ಹಾಡು.
ಘಂಟಸಾಲ ಹಾಡುಗಳ ಸರಮಾಲೆಯೇ ಇದೆ. ಆದರೆ ನನ್ನ ಆಲ್‍ಟೈಮ್ ಫೇವರಿಟ್ ಲಾಲಿ ಹಾಡುಗಳಲ್ಲಿ ಒಂದಾದ ‘ವೆಂಕಟಾಚಲ ವಾಸ ಹೇ ಶ್ರೀನಿವಾಸ ಸದ್ದು ಮಾಡದೆ ನೀನು ನಿದುರೆ ಮಾಡಯ್ಯ’ ಬಲು ಬಲು ಚೆಂದ. ಎಷ್ಟು ಮಧುರವಾದ ಗೀತೆ! ಪಿ. ಸುಶೀಲ ಅವರ ಧ್ವನಿಯಲ್ಲಿ…
ರಾಜ್ ಎಂದಿನ ಲವಲವಿಕೆಯೊಂದಿಗೆ ನಟಿಸಿದ್ದಾರೆ. ಭಾಗ್ಯದ ಬಾಗಿಲು, ಭಲೇ ಹುಚ್ಚ ಮತ್ತು ಮದುವೆ ಮಾಡಿ ನೋಡು ಈ ಮೂರರಲ್ಲೂ ಹುಚ್ಚನ ನಟನೆ ಮಾಡಿದ್ದಾರೆ ರಾಜ್.
