ಇದೊಂದು ಅಮೇರಿಕನ್ ನೆಟ್ ಫ್ಲಿಕ್ಸ್ ಮೂವಿ. ಹಿಂದಿಯಲ್ಲಿಯೂ ಡಬ್ಬಿಂಗ್ ಮಾಡಲಾಗಿದೆ.
ಕಾಮಿಡಿ ವಿತ್ ಸಸ್ಪೆನ್ಸ್ ಜಾನರ್ ಮೂವಿ.
‘ನಿಕ್’ ಅಮೇರಿಕನ್ ಪೋಲೀಸ್ ಡಿಪಾರ್ಟಮೆಂಟಿನಲ್ಲಿ ಕೆಲಸ ಮಾಡುತ್ತಿದ್ದು ಬಹಳ ಸಲ ಡಿಟೆಕ್ಟಿವ್ ಎಕ್ಸಾಮ್ ಬರೆದರೂ ಪಾಸ್ ಆಗಿರುವುದಿಲ್ಲ. ಆದರೆ ಇದನ್ನು ತನ್ನ ಪತ್ನಿಯಿಂದ ಮುಚ್ಚಿಟ್ಟು ತಾನೊಬ್ಬ ಡಿಟೆಕ್ಟಿವ್ ಎಂದು ಹೇಳಿಕೊಂಡಿರುತ್ತಾನೆ. ಆತನ ಪತ್ನಿ ‘ಆಡ್ರಿ’ ಒಬ್ಬ ಕೇಶವಿನ್ಯಾಸಕಿಯಾಗಿದ್ದು ತನ್ನ ಗಂಡ ಮದುವೆಯ ಹೊಸತರಲ್ಲಿ ಮಾತುಕೊಟ್ಟ ಹನಿಮೂನ್ ಟ್ರಿಪ್ ಯೂರೋಪ್ ಗೆ ಇನ್ನೂ ಕರೆದುಕೊಂಡು ಹೋಗಿಲ್ಲವೆಂದು ಅಸಮಾಧಾನಗೊಂಡಿರುತ್ತಾಳೆ.
ಅವರ ಹದಿನೈದನೇ ವಿವಾಹ ವಾರ್ಷಿಕೋತ್ಸವದಂದು ಇದನ್ನು ಪ್ರಸ್ತಾಪಿಸಿ ಗಂಡನ ಮೇಲೆ ಕೋಪಗೊಳ್ಳುವ ‘ಆಡ್ರಿ’ಯನ್ನು ಸಮಾಧಾನ ಮಾಡುವ ಭರದಲ್ಲಿ ನಾವು ನಾಳೆ ಯೂರೋಪ್ ಗೆ ಹನಿಮೂನ್ ಟ್ರಿಪ್ ಗೆ ಹೋಗುತ್ತಿರುವುದಾಗಿ, ನಿನಗೆ ಸರ್ಪ್ರೈಜ್ ನೀಡುವ ಸಲುವಾಗಿ ಹೇಳಿರಲಿಲ್ಲವೆಂದು ಬಿಡುತ್ತಾನೆ ‘ನಿಕ್’.
ಹೀಗೆ ಡಿಟೆಕ್ಟಿವ್ ಆಗಬೇಕೆಂದು ಬಹಳ ಸಲ ಪರೀಕ್ಷೆ ಬರೆದರೂ ಉತ್ತೀರ್ಣನಾಗದೇ ಅದನ್ನು ಹೆಂಡತಿಗೆ ಹೇಳುವ ಧೈರ್ಯವಿಲ್ಲದೇ ತಾನೊಬ್ಬ ಡಿಟೆಕ್ಟಿವ್ ಎಂದು ಹೇಳಿಕೊಳ್ಳುವ ‘ನಿಕ್’ ಹಾಗೂ ಡಿಟೆಕ್ಟಿವ್ ನಾವೆಲ್ ಗಳನ್ನು ಓದುವ ಹುಚ್ಚಿರುವ ‘ಆಡ್ರಿ’ ಈ ಮಧ್ಯಮ ವರ್ಗದ ದಂಪತಿಗಳ ಹನಿಮೂನ್ ಟ್ರಿಪ್ ವಿವಾಹದ ಹದಿನೈದನೆಯ ವರ್ಷದ ನಂತರ ಆರಂಭವಾಗುತ್ತದೆ.
ಪ್ರಯಾಣದಲ್ಲಿ ರೈಲಿನಲ್ಲಿ ಪರಿಚಯವಾಗುವ ಶ್ರೀಮಂತ ವ್ಯಕ್ತಿಯೊಬ್ಬ ಅವರನ್ನು ತನ್ನ ಚಿಕ್ಕಪ್ಪನ ಮದುವೆಯ ಪಾರ್ಟಿಗೆ ಆಮಂತ್ರಣ ನೀಡುತ್ತಾನೆ. ತಮ್ಮ ಮಧ್ಯಮ ವರ್ಗದ ಹನಿಮೂನ್ ಟ್ರಿಪ್ ಗಿಂತ ಶ್ರೀಮಂತ ಕುಟುಂಬದ ಐಷಾರಾಮಿ ಶಿಪ್ ನಲ್ಲಿ ನಡೆಯುವ ಸಮಾರಂಭವೇ ಹೆಚ್ಚು ಖುಶಿ ಕೊಡುವ ಆಸೆಯಲ್ಲಿ ಆತನ ಆಮಂತ್ರಣವನ್ನು ಸ್ವೀಕರಿಸಿ ಅವನೊಂದಿಗೆ ಹೊರಡುತ್ತಾರೆ. ಪಾರ್ಟಿ ನಡೆಯುವ ಶಿಪ್ ನ ರೂಮೊಂದರಲ್ಲಿ ಎಲ್ಲರೂ ಇದ್ದಾಗ ಒಬ್ಬರ ಕೊಲೆ ನಡೆದು ಹೋಗುತ್ತದೆ. ಅಲ್ಲಿಂದ ಸಿನೆಮಾದ ಅಸಲಿ ಕಥೆ ಶುರುವಾಗುತ್ತದೆ.
‘ನಿಕ್’ ಮತ್ತು ‘ಆಡ್ರಿ’ ಮೇಲೆ ಕೊಲೆ ಆಪಾದನೆಯು ಬಂದಾಗ ಅನಿವಾರ್ಯವಾಗಿ ಅವರು ಡಿಟೆಕ್ಟಿವ್ ಕೆಲಸ ಮಾಡಬೇಕಾಗುತ್ತದೆ. ಅವರಿಬ್ಬರೂ ನಿಜವಾದ ಕೊಲೆಗಾರನ್ನು ಪತ್ತೆ ಹಚ್ಚುತ್ತಾರೋ ಇಲ್ಲವೋ ಎನ್ನುವುದು ಸಿನೆಮಾದ ಒನ್ ಲೈನ್ ಸ್ಟೋರಿ.
‘ಫಸ್ಟ್ ಕ್ಲಾಸ್ ಪ್ರಾಬ್ಲಮ್ಸ್. ಸೆಕೆಂಡ್ ಕ್ಲಾಸ್ ಡಿಟೆಕ್ಟಿವ್ಸ್.’ ಈ ಸಬ್-ಟೈಟಲ್ಲಿನಲ್ಲಿಯೇ ತಿಳಿಯುತ್ತದೆ ಸಿನೆಮಾದಲ್ಲಿ ಹಾಸ್ಯವೆಲ್ಲಿದೆಯೆಂದು.
ಹಾಸ್ಯದ ಹಿನ್ನೆಲೆಯಲ್ಲಿಯೇ ಸಾಗುವ ಸಸ್ಪೆನ್ಸ್ ಕಥೆ ಎಲ್ಲಿಯೂ ಬೋರ್ ಹೊಡೆಯುವುದಿಲ್ಲ. ಚಿಕ್ಕಂದಿನಲ್ಲಿ ಓದಿರುವ ಮರ್ಡರ್ ಮಿಸ್ಟರಿಯನ್ನು ಭೇದಿಸುವ ಕಾದಂಬರಿಯಂತಿರುವ ಸಿನೆಮಾ ಪಕ್ಕಾ ಮನರಂಜನೆಯನ್ನು ನೀಡುತ್ತದೆ.
ನನ್ನ ಪ್ರಕಾರ ಇದೊಂದು ಮಸ್ಟ್ ವಾಚಬಲ್ ಕಾಮಿಡಿ ಮಿಸ್ಟರಿ ಮೂವಿ.
ಲೇಖಕರು : ಸಂತೋಷ್ ಖಾರ್ವಿ…ವೃತ್ತಿ – ಕಾಲೇಜಿನಲ್ಲಿ ಶಿಕ್ಷಕೇತರ ಸಿಬ್ಬಂದಿ…ಪ್ರವೃತ್ತಿ – ಹವ್ಯಾಸಿ ಬರಹಗಾರ…ಹವ್ಯಾಸಗಳು – ಓದುವುದು, ಸಿನೆಮಾ ವೀಕ್ಷಣೆ