ಮರ್ದಾನಿ ಎಂದರೆ ಗಂಡಸುತನ. ಆದರೆ ಅದು ಗಂಡಿನಲ್ಲಿಯೇ ಇರಬೇಕೆಂದಿಲ್ಲ. ಹೆಣ್ಣಿನೊಳಗೂ ಇರಬಹುದು. ಹಾಗಾದರೆ ಮರ್ದಾನಿ ಎಂದರೆ ಧೈರ್ಯ ಎಂದಾಯ್ತು. ಈ ರೀತಿಯ ಧೈರ್ಯ ಇರುವ ಹೆಣ್ಣು ನಮ್ಮ ನಾಯಕಿ ಸಿನೆಮಾದಲ್ಲಿ ಉನ್ನತ ಪೊಲೀಸ್ ಅಧಿಕಾರಿ.
ಹೆಣ್ಣು ಗಂಡಿನಂತೆಯೇ ಸಾಹಸ ತೋರಿಸುತ್ತಿರುವ ಸಂದರ್ಭದಲ್ಲಿ ಅವನೊಬ್ಬನಿದ್ದಾನೆ… ಹೆಸರಿಗೆ ಗಂಡು. ಆದರೆ ಮಾಡುವುದೆಲ್ಲ ಹೇಡಿ ಕೆಲಸ. ಹೆಣ್ಣುಮಕ್ಕಳನ್ನು ಕಿಡ್ನಾಪ್ ಮಾಡಿ ತಂದು, ಅವರನ್ನು ಅಸಹಾಯಕ ಪರಿಸ್ಥಿತಿಯಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸುವವನು.
ಇದನ್ನು ಆತ ಯಾಕೆ ಮಾಡುತ್ತಿದ್ದ….?
ಊಹುಂ… ಕಾರಣವೇ ಇಲ್ಲ. ಏಕೆಂದರೆ ಆತನೊಬ್ಬ ಸೈಕೋಪಾತ್.. ಮನೋರೋಗಿ. ತನ್ನ ಬಲಹೀನತೆ ಬಚ್ಚಿಟ್ಟುಕೊಳ್ಳಲು ಅಸಹಾಯಕ ಹೆಣ್ಣುಮಕ್ಕಳ ಮೇಲೆ ಪ್ರತಾಪ ತೋರಿಸುವುದು. ಇಂಥವರು ನಮ್ಮ ನಡುವೆಯೂ ಇರುತ್ತಾರೆ. ಆದರೆ ಅವರಿಗೆ ಈ ಸಿನಿಮಾದ ಖಳನಷ್ಟು ಧೈರ್ಯ ಇರುವುದಿಲ್ಲ. ಅಷ್ಟೇ…
ಈ ರೀತಿ ಒಬ್ಬ ಅಮಾಯಕಿಯನ್ನು ಕೊಂದ ಕೇಸ್ ನಮ್ಮ ಸಿನೆಮಾದ ನಾಯಕಿಗೆ ಬರುತ್ತದೆ. ಆ ಯುವತಿಯನ್ನು ಆತ ಹಿಂಸಿಸಿರುವ ಬಗೆಯನ್ನು ನೋಡಿ ನಾಯಕಿಗೆ ಅವನನ್ನು ಬಲಿ ಕೊಡುವಷ್ಟು ಕೋಪ ಬರುತ್ತದೆ. ಅವನನ್ನು ಹಿಡಿದೇ ಹಿಡಿಯುತ್ತೇನೆ ಅಂತ ಪ್ರತಿಜ್ಞೆ ಮಾಡುತ್ತಾಳೆ.
ಈಗ ಈ ಸೈಕೋಪಾತ್ ಕಣ್ಣು ನಾಯಕಿಯತ್ತ ತಿರುಗುತ್ತದೆ. ಅವನಿಗೊಂದು ಹುಚ್ಚು ಅಮರಿಕೊಳ್ಳುತ್ತದೆ. ಏನೆಂದರೆ… ತಾನು ಹೆಣ್ಣುಮಕ್ಕಳನ್ನು ಅಪಹರಿಸಿ, ಸಾಯಿಸುತ್ತಲೇ ಇರಬೇಕು. ನಾಯಕಿ ತನ್ನನ್ನು ಹುಡುಕಿ ಹುಡುಕಿ ಸುಸ್ತಾಗಬೇಕು ಅನ್ನುವುದು.
ಕಡೆಗೆ ಈ ಮನೋರೋಗಿ ನಾಯಕಿಗೆ ಕೈಗೆ ಸಿಕ್ಕಿಹಾಕಿಕೊಂಡನಾ ಅಂತ ತಿಳಿಯಲು ಸಿನೆಮಾ ನೋಡಿ. ಹಿಂಸೆ-ಕ್ರೌರ್ಯ ಜಾಸ್ತಿ ಇದ್ದರೂ ಗಂಡಸುತನಕ್ಕೆ ಕೇವಲ ಗಂಡಸಾಗಿದ್ದರೆ ಸಾಲದು, ಗುಂಡಿಗೆಯಲ್ಲಿ ಧೈರ್ಯವೂ ಇರಬೇಕು ಅಂತ ಮಾರ್ಮಿಕವಾಗಿ ತೋರಿಸಿದ್ದಾರೆ.
ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ.