ಮಲೆಯಾಳಂ ಚಿತ್ರರಂಗ

ಸುಮಾರು ಎಂಬತ್ತು ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿರುವ ಮಲೆಯಾಳಂ ಚಿತ್ರರಂಗವು ಸಮಾನಾಂತರ ಮತ್ತು ಮುಖ್ಯ ವಾಹಿನಿಯ ಚಲನಚಿತ್ರಗಳ ನಡುವಿನ ಅಂತರವನ್ನು ಸರಿದೂಗಿಸುವ ಚಲನಚಿತ್ರಗಳಿಗೆ ಹೆಸರು ವಾಸಿಯಾಗಿದೆ. ಪ್ರಸ್ತುತ ದಕ್ಷಿಣ ಭಾಗದ ಕೇರಳ ರಾಜ್ಯದಲ್ಲಿರುವ ಈ ಚಿತ್ರರಂಗವನ್ನು ಮಾಲಿವುಡ್ ಎಂದು ಕೂಡ ಕರೆಯಲಾಗುತ್ತದೆ.


     ಕ್ರಿ.ಶ. ೧೯೨೮ ರಲ್ಲಿ ಜೆ.ಸಿ.ಡೇನಿಯಲ್ ನಿರ್ದೇಶನದ ವಿಗಧಕುಮಾರನ್ ಎಂಬ ಮೊದಲ ಮೂಕಿ ಚಿತ್ರವು ತೆರೆ ಕಾಣುವುದರೊಂದಿಗೆ ಮಲೆಯಾಳಂ ಚಿತ್ರರಂಗವು ಅಧಿಕೃತವಾಗಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು. ಅನಂತರ ೧೦ ವರ್ಷಗಳ ಕಾಲ ಅಲ್ಪ ಸಂಖ್ಯೆಯ ಮೂಕಿ ಚಿತ್ರಗಳು ತೆರೆ ಕಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಕಂಡಿರಲಿಲ್ಲ. ಆದರೆ ೧೦ ವರ್ಷಗಳ ನಂತರ ೧೯೩೮ ರಲ್ಲಿ ಬಾಲನ್ ಎಂಬ ಚಿತ್ರವು ತೆರೆ ಕಂಡಿತ್ತು. ಈ ಚಿತ್ರವು ಮಲೆಯಾಳಂ ಚಿತ್ರರಂಗದ ಮೊದಲ ವಾಕ್ಚಿತ್ರ ಕೂಡ ಆಗಿದೆ. ಈ ಚಿತ್ರರಂಗವು ಹಲವಾರು ಚಿತ್ರಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ಒಂದು ಸುಸಜ್ಜಿತವಾದ ಸ್ಟುಡಿಯೋ ಹೊಂದಿರಲಿಲ್ಲ. ಮೇಲಾಗಿ ತಮಿಳು ಭಾಷೆಯ ನಿರ್ಮಾಪಕರೇ ಇಲ್ಲಿನ ಚಿತ್ರಗಳನ್ನು ನಿರ್ಮಿಸುತ್ತಿದ್ದರು. ೧೯೪೭ ರಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಉದಯ್ ಎಂಬ ಚಲನಚಿತ್ರ ಸ್ಟುಡಿಯೋ ವನ್ನು ನಿರ್ಮಾಣ ಮಾಡಲಾಯಿತು.


   ೧೯೫೪ ರಲ್ಲಿ ಮಲೆಯಾಳಂ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಉರುಭ್ ರಚಿಸಿದ  ಚಿತ್ರ ಕಥೆ, ಪಿ. ಭಾಸ್ಕರನ್  ಮತ್ತು ರಾಮು ಕಾರೀಯಾಟ್ ಜಂಟಿಯಾಗಿ ನಿರ್ದೇಶಿಸಿದ್ದ ನಿಲಕ್ಕುಯಿಲ್ ಚಿತ್ರವು ತೆರೆ ಕಂಡ ನಂತರ ಈ ಚಿತ್ರವು ಚಿತ್ರ ಮಂದಿರಗಳಲ್ಲಿ ಯಶಸ್ವಿಯಾಗಿ ೧೦೦ ದಿನಗಳ ಪ್ರದರ್ಶನವನ್ನು ಕಂಡಿತ್ತು. ಅಲ್ಲದೇ ಈ ಚಿತ್ರವು ಮೊದಲ ಆಧಾರ ಪೂರ್ವಕ ಮಲೆಯಾಳಂ ಚಿತ್ರವೆಂದು ಮತ್ತು ರಾಷ್ಟ್ರಪತಿಗಳ ರಜಕ ಪದಕವನ್ನು ಪಡೆದ ಚಿತ್ರವು ಆಗಿದೆ. ೧೯೬೫ ರಲ್ಲಿ ತೆರೆ ಕಂಡ ತಕಳಿ ಶಿವ ಶಂಕರ ಪಿಳ್ಳೈ ಅವರ ಕಥೆಯನ್ನು ಆಧರಿಸಿದ ರಾಮು ಕಾರಿಯಟ್ ನಿರ್ದೇಶನದಲ್ಲಿ ಮೂಡಿ ಬಂದ ಚೆಮ್ಮೀನ್ ಚಿತ್ರವು ಆರಂಭದಲ್ಲಿಯೇ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಪಡೆದಿತ್ತಲ್ಲದೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರೇಮ್ ನಜೀರ್, ಸತ್ಯನ್,ಶೀಲಾ ಮತ್ತು ಶಾರದಾರಂತಹ ಅನೇಕ ಕಲಾವಿದರು ಆರಂಭದ ನಲವತ್ತು ವರ್ಷಗಳ ಕಾಲ ಮಲೆಯಾಳಂ ಚಿತ್ರರಂಗವನ್ನು ನಿಚ್ಚಳವಾಗಿ ಆಳಿದ್ದಾರೆ.


     ೭೦ ರ ದಶಕವು ಮಲೆಯಾಳಂ ಚಿತ್ರರಂಗದ ಹೊಸ ಅಲೆಯ ಉದಯಕ್ಕೆ ಕೂಡ ಕಾರಣವಾಗಿದೆ. ಇದೇ ದಶಕದಲ್ಲಿ ಹಲವಾರು ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಈ ಚಿತ್ರರಂಗವನ್ನು ಪ್ರವೇಶಿಸಿದ್ದರು. ೧೯೭೨ ರಲ್ಲಿ ತೆರೆ ಕಂಡ ಸ್ವಯಂವರಂ ಚಿತ್ರದ ಮೂಲಕ ಮಲೆಯಾಳಂ ಚಿತ್ರರಂಗ ಪ್ರವೇಶಿಸಿದ ಆಡೂರ್ ಗೋಪಾಲಕೃಷ್ಣನ್ ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದಿದ್ದರು. ಈ ಅವಧಿಯಲ್ಲಿ ಎಂ.ಟಿ.ವಾಸುದೇವನ್ ನಾಯರ್ ನಿರ್ದೇಶನದ ನಿರ್ಮಾಲ್ಯಂ, ಜಿ.ಅರವಿಂದನ್ ನಿರ್ದೇಶನದ ಉತ್ತರಾಯಣಂ, ಜಾನ್ ಅಬ್ರಹಾಂ ನಿರ್ದೇಶನದ ಚೆರಿಯಾಚಂತೆ, ಕ್ರೂರ ಕೃತ್ಯಂಗಳ್ ಮತ್ತು ಅಮ್ಮಾ ಅರಿಯಾನ್  ಅನೇಕ ಚಿತ್ರಗಳು ಸೇರಿವೆ.

ಅಲ್ಲದೇ  ೧೯೮೦ ರ ದಶಕದ ಅಂತ್ಯದಿಂದ ೧೯೯೦ ರ ದಶಕದ ಆರಂಭದವರೆಗಿನ ಅವಧಿಯನ್ನು ಮಲೆಯಾಳಂ ಚಿತ್ರರಂಗದ ಸುವರ್ಣ ಯುಗ ಎಂದೇ ಪರಿಗಣಿಸಲಾಗಿದೆ. ಕಾರಣ ಆಯ್.ವಿ.ಶಶಿ ಭರತನ್, ಪದ್ಮರಾಜನ್,ಸತ್ಯನ್ ಅಂತಿಕಾಡ್, ಪ್ರಿಯದರ್ಶನ್,ಏ.ಕೆ.ಲೋಹಿತ್ ದಾಸ್,ಸಿದ್ಧಿಕಿ ಲಾಲ್, ಶ್ರೀನಿವಾಸನ್ ರಂತಹ ಚಲನಚಿತ್ರ ತಯಾರಕರು ಮತ್ತು ಮಮ್ಮುಟ್ಟಿ, ಮೋಹನ್ ಲಾಲ್ ಇತರೇ ಅನೇಕ ಕಲಾವಿದರು ಇದೇ ಸಮಯದಲ್ಲಿ ಮಲೆಯಾಳಂ ಚಿತ್ರರಂಗವನ್ನು ಪ್ರವೇಶಿಸಿ ಅತೀ ಕಡಿಮೆ ಅವಧಿಯಲ್ಲಿ ಚಿತ್ರ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ನೈಜ ಘಟನೆ, ಸಾಮಾಜಿಕ ಮತ್ತು ವೈಯಕ್ತಿಕ ನೆಲೆಗಟ್ಟಿನ ಆಧಾರಿತ ಚಿತ್ರಗಳನ್ನು ನಿರ್ಮಿಸಿ ಜನಪ್ರಿಯತೆಯನ್ನು  ಪಡೆದಿದ್ದಾರೆ. ಉದಾಹರಣೆಗೆ ೧೯೮೮ ರಲ್ಲಿ ತೆರೆ ಕಂಡ  ನಾಡೋಡಿಕಟ್ಟು ಚಿತ್ರ. ಈ ಚಿತ್ರದಲ್ಲಿ ವೈಯಕ್ತಿಕ ಹೋರಾಟ ವಿಷಯಗಳನ್ನು ಸೃಜನಶೀಲ ಹಾಸ್ಯದೊಂದಿಗೆ ಚಿತ್ರಿಸಲಾಗಿತ್ತು. ೧೯೮೯ ರಲ್ಲಿ ತೆರೆ ಕಂಡ ಷಾಜಿ.ಎನ್.ಕರುಣ್ ನಿರ್ದೇಶನದ ಪಿರವಿ ಚಿತ್ರವು ಕ್ಯಾನೆಸ್ ಚಿತ್ರೋತ್ಸವದಲ್ಲಿ ಕ್ಯಾಮೆರಾ ಡಿ ಓರ್ ನಾಮ ನಿರ್ದೇಶನವನ್ನು ಗೆದ್ದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ವರ್ಷ ೧೯೮೯ ರಲ್ಲಿ ತೆರೆ ಕಂಡ ರಾಮ್ ಜಿ ರಾವ್ ಸ್ಪೀಕಿಂಗ್ ಚಿತ್ರವು ಮುಂದೆ ಬರುವ ಉತ್ತಮ ಗುಣಮಟ್ಟದ ಹಾಸ್ಯ ಚಿತ್ರಗಳ ನಾಂದಿಗೆ ಕಾರಣವಾಯಿತು.


    ೧೯೯೦ ರ ದಶಕದ ಅಂತ್ಯದಲ್ಲಿ ಹಾಗೂ ೨೦೦೦ ದಶಕದಲ್ಲಿ ಸೂತ್ರಾನುಸಾರಿಯಾದ ಚಿತ್ರಗಳು ಮತ್ತು ಕೋಡಂಗಿ ಆಟದ ಹಾಸ್ಯ ಚಿತ್ರಗಳ ಆಗಮನದ ಕಡೆಗಿನ ಒಂದು ಸ್ಥಿತ್ಯಂತರಕ್ಕೆ ಮಲೆಯಾಳಂ ಚಿತ್ರರಂಗವು ಸಾಕ್ಷಿಯಾಯಿತು. ಅಲ್ಲದೇ ಇದೇ ಸಮಯದಲ್ಲಿ ಆದ ದೂರದರ್ಶನದ ಉಗಮ ಮತ್ತು ಇತ್ತೀಚೆಗೆ ವ್ಯಾಪಕವಾಗಿ ಹಬ್ಬಿರುವ ಚಲನಚಿತ್ರದ ಪೈರಸಿಯ ಕಾರಣದಿಂದ ಮಲೆಯಾಳಂ ಚಿತ್ರರಂಗವು ತೊಂದರೆಗೆ ಒಳಗಾಗುತ್ತ ಬಂದಿದೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply